
ಕಾರವಾರ: ಇಲ್ಲಿನ ಕೋಡಿಬಾಗದ ಸಾಂತ್ವನ ಜನಸೇವಾ ಕೇಂದ್ರದ ದಶಮಾನೋತ್ಸವದ ಅಂಗವಾಗಿ ‘ಔಷಧ ರಹಿತ ಆರೋಗ್ಯ ಚಿಕಿತ್ಸೆ ಜಾಗೃತಿ ಅಭಿಯಾನ–2026’ಕ್ಕೆ ಚಾಲನೆ ನೀಡಲಾಗಿದೆ ಎಂದು ರಂಗ ಕಲಾವಿದ ವಸಂತ ಬಾಂದೇಕರ ತಿಳಿಸಿದರು.
ಈ ಅಭಿಯಾನದಲ್ಲಿ ಬೆಂಗಳೂರಿನ ಡಾ. ಬಸವರಾಜ ಅಕ್ಕೂ ಅಕಾಡೆಮಿಯ ‘ಅಂಗೈಯಲ್ಲಿ ಬಣ್ಣ ಚಿಕಿತ್ಸೆ’ ಸಿದ್ಧಾಂತವನ್ನು ಪರಿಚಯಿಸಲಾಗುತ್ತಿದೆ. ಡಾ. ಬಸವರಾಜ ಅಕ್ಕೂ ಅವರ ಪ್ರಕಾರ, ಮಾನವನ ಅಂಗೈ ದೇಹದ ಪ್ರತಿಬಿಂಬವಾಗಿದ್ದು, ಕೈಬೆರಳುಗಳು ಹಾಗೂ ಅಂಗೈಗೆ ನಿರ್ದಿಷ್ಟ ಬಣ್ಣಗಳನ್ನು ಹಚ್ಚುವ ಮೂಲಕ ದೈಹಿಕ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಬಹುದು. ದಿನನಿತ್ಯ 4ರಿಂದ 5 ಗಂಟೆಗಳ ಕಾಲ ಸಂಬಂಧಿತ ಬಣ್ಣವನ್ನು ಹಚ್ಚಿಕೊಂಡು ಸೂರ್ಯನ ಕಿರಣಗಳಿಗೆ ಒಡ್ಡಿದರೆ, ಕಾಯಿಲೆಗಳು ವೇಗವಾಗಿ ಗುಣವಾಗುತ್ತವೆ ಎಂದು ಹೇಳಿದರು.
ಈ ಸರಳ ಹಾಗೂ ಔಷಧರಹಿತ ಚಿಕಿತ್ಸೆಯಿಂದ ತಲೆನೋವು, ಮಂಡಿನೋವು, ಕಿಡ್ನಿ ಸಮಸ್ಯೆ, ರಕ್ತದೊತ್ತಡ, ಸಕ್ಕರೆ ಕಾಯಿಲೆ, ಅಸ್ತಮಾ, ಮೂಲವ್ಯಾಧಿ, ಮಹಿಳೆಯರ ಮುಟ್ಟಿನ ಸಮಸ್ಯೆಗಳು ಸೇರಿದಂತೆ 65ಕ್ಕೂ ಹೆಚ್ಚು ದೈಹಿಕ ತೊಂದರೆಗಳಿಗೆ ಪರಿಹಾರ ಸಾಧ್ಯವೆಂದು ಹೇಳಲಾಗಿದೆ ಎಂದರು.ಅಭಿಯಾನದ ಮತ್ತೊಂದು ಭಾಗವಾಗಿ, ಡಾ. ವಿಶ್ವರೂಪ ಚೌಧರಿಯವರ ‘ಅರ್ಥಿಂಗ್ ಥೆರಪಿ’ ಕುರಿತು ಮಾಹಿತಿ ನೀಡಿದ ಅವರು, ಆಧುನಿಕ ಜೀವನಶೈಲಿಯಲ್ಲಿ ನಿರಂತರ ಬೂಟು-ಚಪ್ಪಲಿ ಬಳಕೆ ಹಾಗೂ ಎಲೆಕ್ಟ್ರಾನಿಕ್ ಸಾಧನಗಳ ನಡುವಿನ ಜೀವನದಿಂದ ಮನುಷ್ಯನು ಭೂಮಿಯ ನೈಸರ್ಗಿಕ ಸಂಪರ್ಕದಿಂದ ದೂರವಾಗುತ್ತಿದ್ದಾನೆ. ಇದರ ಪರಿಣಾಮವಾಗಿ ದೇಹದಲ್ಲಿ ಅನಗತ್ಯ ವಿದ್ಯುತ್ ಹಾಗೂ ರೇಡಿಯೇಷನ್ ಸಂಗ್ರಹವಾಗಿ ಹೃದಯಾಘಾತ, ಕೀಲುನೋವು ಸೇರಿದಂತೆ ಹಲವು ಸಮಸ್ಯೆಗಳು ಕಾಣಿಸಿಕೊಳ್ಳುತ್ತಿವೆ. ಪೂರ್ವಜರಂತೆ ಬರಿಗಾಲಿನಲ್ಲಿ ನಡೆಯುವುದು ಅಥವಾ ಅರ್ಥಿಂಗ್ ವಿಧಾನವನ್ನು ಅಳವಡಿಸಿಕೊಳ್ಳುವ ಮೂಲಕ ಆರೋಗ್ಯ ಕಾಪಾಡಿಕೊಳ್ಳುವ ಬಗ್ಗೆ ಪ್ರಾತ್ಯಕ್ಷಿಕೆ ಮೂಲಕ ವಿವರಿಸಲಾಯಿತು.
ಈ ಅಭಿಯಾನ ಸಂಪೂರ್ಣ ಉಚಿತವಾಗಿದ್ದು, ಆಸಕ್ತರು ರೋಗಗಳ ಮಾಹಿತಿ ಚಾರ್ಟ್ ಮತ್ತು ಕಲರ್ ಪೆನ್ ಸೆಟ್ ಒಳಗೊಂಡ ಕಿಟ್ ಅನ್ನು ₹200 ಸೇವಾ ಶುಲ್ಕ ನೀಡಿ ಪಡೆಯಬಹುದು ಎಂದು ತಿಳಿಸಿದರು. ಸಂಘ-ಸಂಸ್ಥೆಗಳು ಹಾಗೂ ಮಹಿಳಾ ಮಂಡಳಿಗಳು ಈ ಜಾಗೃತಿ ಅಭಿಯಾನವನ್ನು ಆಯೋಜಿಸಿ ಸಾರ್ವಜನಿಕರಿಗೆ ಇದರ ಲಾಭ ತಲುಪಿಸುವಂತೆ ಅವರು ಮನವಿ ಮಾಡಿದರು.ಸಾಂತ್ವನ ಜನಸೇವಾ ಕೇಂದ್ರದ ಅಧ್ಯಕ್ಷ ಶ್ರೀಕಾಂತ ನಾಯ್ಕ, ನಿವೃತ್ತ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಅಧಿಕಾರಿ ಯಶೋದಾ ಹೆಗಡೆ ಹಾಗೂ ಸಮಾಜಸೇವಕಿ ಖೈರುನ್ನೀಸಾ ಶೇಖ್ ಇದ್ದರು.