ಕನ್ನಡಪ್ರಭ ವಾರ್ತೆ ಬೆಂಗಳೂರು
ಪೂರ್ವ ವಿಭಾಗದ ಸರಹದ್ದಿನ 45 ರಾಸಾಯನಿಕ (ಕೆಮಿಕಲ್) ತಯಾರಿಕಾ ಕಾರ್ಖಾನೆಗಳು, 165 ರಾಸಾಯನಿಕ ಮಾರಾಟ ಮಳಿಗೆಗಳು ಹಾಗೂ 116 ರಾಸಾಯನಿಕ ವಸ್ತುಗಳ ಗೋದಾಮುಗಳಿಗೆ ದಿಢೀರ್ ಭೇಟಿ ನೀಡಿ ಪೊಲೀಸರು ತಪಾಸಣೆ ನಡೆಸಿದ್ದಾರೆ. ಈ ವೇಳೆ ಅಕ್ರಮವಾಗಿ ಡ್ರಗ್ಸ್ ತಯಾರಿಕೆ ಅಥವಾ ಸಂಗ್ರಹ ಪತ್ತೆಯಾಗಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.
ಇತ್ತೀಚೆಗೆ ಬೆಂಗಳೂರು ಹಾಗೂ ಮೈಸೂರಿನಲ್ಲಿದ್ದ ಡ್ರಗ್ಸ್ ಫ್ಯಾಕ್ಟರಿಗಳ ಮೇಲೆ ಮಹಾರಾಷ್ಟ್ರ ಪೊಲೀಸರು ಹಾಗೂ ರಾಷ್ಟ್ರೀಯ ಮಾದಕ ವಸ್ತು ನಿಗ್ರಹ ವಿಭಾಗ (ಎನ್‌ಸಿಬಿ)ದ ಅಧಿಕಾರಿಗಳು ದಾಳಿ ನಡೆಸಿದ್ದರು. ಈ ದಾಳಿಗಳ ಹಿನ್ನೆಲೆಯಲ್ಲಿ ಡ್ರಗ್ಸ್ ದಂಧೆ ನಿಯಂತ್ರಿಸುವಲ್ಲಿ ರಾಜ್ಯ ಪೊಲೀಸರ ವೈಫಲ್ಯ ಬಗ್ಗೆ ಸಾರ್ವಜನಿಕ ವಲಯದಲ್ಲಿ ತೀವ್ರ ಟೀಕೆಗಳು ವ್ಯಕ್ತವಾಗಿದ್ದವು. ಈ ಹಿನ್ನೆಲೆಯಲ್ಲಿ ನಗರ ಪೊಲೀಸ್ ಆಯುಕ್ತ ಸೀಮಂತ್ ಕುಮಾರ್ ಸಿಂಗ್ ಅವರು, ರಾಜಧಾನಿ ವ್ಯಾಪ್ತಿಯಲ್ಲಿ ಕೆಮಿಕಲ್ ಫ್ಯಾಕ್ಟರಿಗಳು, ಮಾರಾಟ ಮಳಿಗೆಗಳು ಹಾಗೂ ಗೋದಾಮುಗಳ ಪರಿಶೀಲನೆಗೆ ಸುತ್ತೋಲೆ ಹೊರಡಿಸಿದ್ದರು.