ಡ್ರಗ್ಸ್ ದಂಧೆ: ಭೀಮ ನಟ ಸೇರಿ ಇಬ್ಬರು ಅರೆಸ್ಟ್‌

KannadaprabhaNewsNetwork |  
Published : Aug 20, 2025, 01:30 AM IST
 ಜೋಯಲ್, ಜೋಯ್‌  | Kannada Prabha

ಸಾರಾಂಶ

ರಾಜಧಾನಿಯ ಮಾದಕ ವಸ್ತು ಮಾರಾಟ ಜಾಲದ ಮೇಲೆ ಭರ್ಜರಿ ಕಾರ್ಯಾಚರಣೆ ನಡೆಸಿರುವ ಎಲೆಕ್ಟ್ರಾನಿಕ್ ಸಿಟಿ ಠಾಣೆ ಪೊಲೀಸರು, ದುನಿಯಾ ವಿಜಯ್ ನಟಿಸಿ ನಿರ್ದೇಶಿಸಿದ್ದ ಭೀಮ ಸಿನಿಮಾದ ಪೆಡ್ಲರ್ ಪಾತ್ರಧಾರಿ ಜೋಯಲ್ ಸೇರಿ ಇಬ್ಬರು ವಿದೇಶಿ ಪೆಡ್ಲರ್‌ಗಳನ್ನು ಬಂಧಿಸಿ ಐದು ಕೋಟಿ ರು. ಮೌಲ್ಯದ ಡ್ರಗ್ಸ್ ಜಪ್ತಿ ಮಾಡಿದ್ದಾರೆ.

ಕನ್ನಡಪ್ರಭ ವಾರ್ತೆ ಬೆಂಗಳೂರು

ರಾಜಧಾನಿಯ ಮಾದಕ ವಸ್ತು ಮಾರಾಟ ಜಾಲದ ಮೇಲೆ ಭರ್ಜರಿ ಕಾರ್ಯಾಚರಣೆ ನಡೆಸಿರುವ ಎಲೆಕ್ಟ್ರಾನಿಕ್ ಸಿಟಿ ಠಾಣೆ ಪೊಲೀಸರು, ದುನಿಯಾ ವಿಜಯ್ ನಟಿಸಿ ನಿರ್ದೇಶಿಸಿದ್ದ ಭೀಮ ಸಿನಿಮಾದ ಪೆಡ್ಲರ್ ಪಾತ್ರಧಾರಿ ಜೋಯಲ್ ಸೇರಿ ಇಬ್ಬರು ವಿದೇಶಿ ಪೆಡ್ಲರ್‌ಗಳನ್ನು ಬಂಧಿಸಿ ಐದು ಕೋಟಿ ರು. ಮೌಲ್ಯದ ಡ್ರಗ್ಸ್ ಜಪ್ತಿ ಮಾಡಿದ್ದಾರೆ.

ವಿದ್ಯಾರಣ್ಯಪುರದ ಜೋಯಲ್‌ ಕಬೋಂಗ್ ಹಾಗೂ ಜೋಯ್ ಸಂಡೇ ಬಂಧಿತರಾಗಿದ್ದು, ಆರೋಪಿಗಳಿಂದ ಐದು ಕೋಟಿ ರು. ಮೌಲ್ಯದ 2.15 ಕೆಜಿ ಎಂಡಿಎಂಎ ಜಪ್ತಿ ಮಾಡಲಾಗಿದೆ. ಮತ್ತಿಬ್ಬರು ತಲೆಮರೆಸಿಕೊಂಡಿದ್ದು ಶೋಧ ಕಾರ್ಯ ನಡೆದಿದೆ.

ಬೆಟ್ಟದಾಸಪುರದ ಕೇರಳ ಮಸೀದಿ ರಸ್ತೆಯಲ್ಲಿರುವ ಮಹಾಲಕ್ಷ್ಮೀ ಲೇಔಟ್‌ ನ ಖಾಲಿ ಪ್ರದೇಶದಲ್ಲಿ ಡ್ರಗ್ಸ್ ಮಾರಾಟಕ್ಕೆ ಬಂದಿದ್ದಾಗ ಪೆಡ್ಲರ್‌ಗಳನ್ನು ಇನ್ಸ್‌ಪೆಕ್ಟರ್ ಜಿ.ಎಂ. ನವೀನ್ ನೇತೃತ್ವ ತಂಡ ಖಚಿತ ಮಾಹಿತಿ ಪಡೆದು ಬಂಧಿಸಿದೆ ಎಂದು ನಗರ ಪೊಲೀಸ್ ಆಯುಕ್ತ ಸೀಮಂತ್ ಕುಮಾರ್ ಸಿಂಗ್ ಹೇಳಿದ್ದಾರೆ.

ವಿದ್ಯಾರ್ಥಿಗಳೇ ಇವರ ಟಾರ್ಗೆಟ್ ಭಾರತಕ್ಕೆ ಶೈಕ್ಷಣಿಕ ವೀಸಾದಡಿ 2013ರಲ್ಲಿ ಕಾಂಗೋ ದೇಶದ ಜೋಯಲ್ ಹಾಗೂ 2022ರಲ್ಲಿ ನೈಜೀರಿಯಾದ ಜೋಯ್‌ ಬಂದಿದ್ದರು. ಆನಂತರ ನಗರಕ್ಕೆ ಬಂದು ವಿದ್ಯಾರಣ್ಯಪುರದಲ್ಲಿ ಜೋಯಲ್ ಹಾಗೂ ಪುಟ್ಟೇನಹಳ್ಳಿ ಸಮೀಪ ಜೋಯ್‌ ನೆಲೆಸಿದ್ದಳು. ಆದರೆ ಯಾವ ಕಾಲೇಜಿಗೂ ಪ್ರವೇಶ ಪಡೆಯದೆ ಅಕ್ರಮವಾಗಿ ನೆಲೆ ನಿಂತ ಈ ಆಫ್ರಿಕಾ ಪ್ರಜೆಗಳು, ಸುಲಭವಾಗಿ ಹಣ ಸಂಪಾದನೆಗೆ ಡ್ರಗ್ಸ್ ದಂಧೆಗಿಳಿದಿದ್ದರು. ದೆಹಲಿಯ ಮಾದಕ ವಸ್ತು ಮಾರಾಟ ಜಾಲದ ಸಂಪರ್ಕದಲ್ಲಿದ್ದ ಜೋಯ್‌, ಅಲ್ಲಿಂದ ಕಡಿಮೆ ಬೆಲೆಗೆ ಎಂಡಿಎಂಎ ಖರೀದಿಸಿ ಬಳಿಕ ನಗರದಲ್ಲಿ ದುಬಾರಿ ಬೆಲೆಗೆ ಮಾರಾಟ ಮಾಡುತ್ತಿದ್ದ. ಗ್ರಾಹಕರಿಗೆ ಡ್ರಗ್ಸ್ ಪೂರೈಕೆಗೆ ಜೋಯಲ್‌ ಅನ್ನು ಆಕೆ ಬಳಸುತ್ತಿದ್ದಳು ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ಆನ್‌ಲೈನ್‌ ಮೂಲಕವೇ ಆಕೆ ವ್ಯವಹರಿಸುತ್ತಿದ್ದಳು. ಆಕೆ ಸೂಚಿಸಿದ ಸ್ಥಳಕ್ಕೆ ತೆರಳಿ ಜೋಯಲ್ ಡ್ರಗ್ಸ್ ಇಟ್ಟು ಬರುತ್ತಿದ್ದ. ಲೋಕೇಷನ್ ಕಳುಹಿಸಿದರೆ ಖಾಲಿ ಪ್ರದೇಶದಲ್ಲಿ ಡ್ರಗ್ಸ್ ಅಡಗಿಸಿ ಆತ ಬರುತ್ತಿದ್ದ. ನಂತರ ಆ ಜಾಗಕ್ಕೆ ಹೋಗಿ ಡ್ರಗ್ಸ್ ಅನ್ನು ಗ್ರಾಹಕ ಪಡೆಯುತ್ತಿದ್ದ. ಹೀಗಾಗಿ ಜೋಯಲ್‌ಗೆ ಗ್ರಾಹಕರ ನೇರ ಸಂಪರ್ಕವಿರಲಿಲ್ಲ. ಇನ್ನು ಪ್ರತಿಷ್ಠಿತ ಕಾಲೇಜಿನ ವಿದ್ಯಾರ್ಥಿಗಳನ್ನು ಗುರಿಯಾಗಿಸಿಕೊಂಡು ಈ ಇಬ್ಬರು ದಂಧೆ ನಡೆಸುತ್ತಿದ್ದರು ಎಂದು ಪೊಲೀಸರು ಹೇಳಿದ್ದಾರೆ.

ಈ ಆಫ್ರಿಕಾ ಪ್ರಜೆಗಳ ಡ್ರಗ್ಸ್ ದಂಧೆ ಬಗ್ಗೆ ಖಚಿತ ಮಾಹಿತಿ ಪಡೆದ ಇನ್ಸ್‌ಪೆಕ್ಟರ್‌ ನವೀನ್ ಅವರು, ಇತ್ತೀಚೆಗೆ ಬೆಟ್ಟದಾಸಪುರದ ಮಹಾಲಕ್ಷ್ಮೀ ಲೇಔಟ್‌ನಲ್ಲಿ ಡ್ರಗ್ಸ್ ಪೂರೈಕೆಗೆ ಬಂದಾಗ ಆರೋಪಿಗಳನ್ನು ಬಂಧಿಸಿದ್ದಾರೆ. ಈ ಬಗ್ಗೆ ತನಿಖೆ ಮುಂದುವರಿದಿದ್ದು, ಮತ್ತಷ್ಟು ಡ್ರಗ್ಸ್ ಸಿಗಬಹುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಸಿನಿಮಾದಲ್ಲೂ ವಿದೇಶಿ ಪೆಡ್ಲರ್‌ !!ಅಸಲಿ ಮಾತ್ರವಲ್ಲ ಕನ್ನಡ ಚಲನಚಿತ್ರವೊಂದರಲ್ಲಿ ಸಹ ಪೆಡ್ಲರ್ ಪಾತ್ರದಲ್ಲೇ ಕಾಂಗೋ ದೇಶದ ಜೋಯಲ್ ಕಾಬೊಂಗ್ ನಟಿಸಿದ್ದ ಕುತೂಹಲಕಾರಿ ಸಂಗತಿ ಬೆಳಕಿಗೆ ಬಂದಿದೆ. ದುನಿಯಾ ವಿಜಯ್ ನಟಿಸಿ ನಿರ್ದೇಶಿಸಿದ್ದ ಭೀಮ ಸಿನಿಮಾದಲ್ಲಿ ಜೋಯಲ್ ನಟಿಸಿದ್ದ. ಅದರಲ್ಲಿ ವಿದೇಶದ ಪೆಡ್ಲರ್ ಪಾತ್ರದಲ್ಲಿ. ಕೇವಲ ಒಂದೆರಡು ನಿಮಿಷದಲ್ಲಿ ಆತನ ಪಾತ್ರ ಬಂದು ಹೋಗುತ್ತದೆ. ಪೆಡ್ಲರ್‌ವೊಬ್ಬನನ್ನು ಬಂಧಿಸಿದ್ದ ಬಗ್ಗೆ ಶಾಸಕರಿಗೆ ಬಂದು ದೂರು ಹೇಳುವಾಗ ಖಳ ನಾಯಕ ಡ್ರ್ಯಾಗನ್ ಜತೆ ಜೋಯಲ್‌ ಕಾಣಿಸಿಕೊಂಡಿದ್ದಾನೆ ಎಂದು ಪೊಲೀಸರು ಹೇಳಿದ್ದಾರೆ.

ಮತ್ತೊಬ್ಬ ಸಿಸಿಬಿ ಬಲೆಗೆ

ಅವಹಲಹಳ್ಳಿ ಸಮೀಪ ಡ್ರಗ್ಸ್ ಮಾರಾಟಕ್ಕೆ ಯತ್ನಿಸಿದ್ದ ಮತ್ತೊಬ್ಬ ಆಫ್ರಿಕಾ ಪ್ರಜೆ ಸಿಸಿಬಿ ಬಲೆಗೆ ಬಿದ್ದಿದ್ದಾನೆ. ಸೆನಗಲ್‌ನ ಜಾನ್ ಬಂಧಿತನಾಗಿದ್ದು, ಆರೋಪಿಯಿಂದ 40 ಲಕ್ಷ ರು. ಮೌಲ್ಯದ 255 ಗ್ರಾಂ ಎಂಡಿಎಂಎ ಜಪ್ತಿಯಾಗಿದೆ. ಕಳೆದ ವರ್ಷದ ಪ್ರವಾಸಿ ವೀಸಾದಡಿ ನಗರಕ್ಕೆ ಬಂದಿದ್ದ ಆತ, ತನ್ನ ದೇಶದಿಂದ ಅಕ್ರಮವಾಗಿ ತಂದಿದ್ದ ಡ್ರಗ್ಸ್ ಮಾರಾಟಕ್ಕೆ ಮುಂದಾಗಿದ್ದ. ಈ ಬಗ್ಗೆ ಖಚಿತ ಮಾಹಿತಿ ಪಡೆದು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ ಎಂದು ಅಧಿಕಾರಿಗಳು ಹೇಳಿದ್ದಾರೆ.

31 ಲಕ್ಷ ರು. ಡ್ರಗ್ಸ್ ಜಪ್ತಿ

ಇನ್ನು ಸಂಪಿಗೆಹಳ್ಳಿ, ಯಲಹಂಕ ಹಾಗೂ ಎಚ್‌ಎಸ್‌ಆರ್ ಲೇಔಟ್ ಠಾಣೆಗಳ ಪೊಲೀಸರು ನಡೆಸಿದ ಪ್ರತ್ಯೇಕ ಕಾರ್ಯಾಚರಣೆಯಲ್ಲಿ ಮತ್ತೆ ಮೂವರು ಡ್ರಗ್ಸ್ ದಂಧೆಕೋರರು ಸಿಕ್ಕಿಬಿದ್ದಿದ್ದಾರೆ. ಆರೋಪಿಗಳಿಂದ 13.14 ಲಕ್ಷ ರು ಮೌಲ್ಯದ 22.18 ಕೆಜಿ ಗಾಂಜಾ, 3 ಲಕ್ಷ ರು. ಬೆಲೆಯ 30 ಗ್ರಾಂ ಎಂಡಿಎಂಎ, ಪಲ್ಸರ್ ಬೈಕ್‌, 117 ಗ್ರಾಂ ಎಂಡಿಎಂಎ ಹಾಗೂ 3 ಮೊಬೈಲ್‌ಗಳು ಸೇರಿ 31 ಲಕ್ಷ ರು. ಮೌಲ್ಯದ ವಸ್ತುಗಳು ಜಪ್ತಿಯಾಗಿವೆ ಎಂದು ಅಧಿಕಾರಿಗಳು ಹೇಳಿದ್ದಾರೆ.

PREV

Recommended Stories

ವೈದ್ಯರ ಕೊರತೆಗೆ ನಲುಗಿದ ಸಾರ್ವಜನಿಕ ಆಸ್ಪತ್ರೆ
ಸತ್ಯಕಾಮರ ಸುಮ್ಮನೆಯಲ್ಲಿ ಕಸಾಪ ವಾರ್ಷಿಕ ಸಭೆ: ಡಾ.ಮಹೇಶ ಜೋಷಿ