ಕನ್ನಡಪ್ರಭ ವಾರ್ತೆ ತುರುವೇಕೆರೆ
ಚಿಕ್ಕೋನಹಳ್ಳಿಯ ಫಾರಂ ಹೌಸ್ ನಲ್ಲಿ ಪತ್ರಕರ್ತರೊಂದಿಗೆ ಮಾತನಾಡಿ, ಜಿಲ್ಲೆಯಲ್ಲಿ ಅದರಲ್ಲೂ ತುರುವೇಕೆರೆ ವಿಧಾನಸಭಾ ಕ್ಷೇತ್ರದಲ್ಲಿ ಮಾದಕ ವಸ್ತುಗಳ ಸೇವನೆ ಮತ್ತು ಸರಬರಾಜು ಹೆಚ್ಚುತ್ತಿದೆ. ರಾಜ್ಯದ ಗೃಹ ಸಚಿವರ ಕ್ಷೇತ್ರದಲ್ಲೇ ವ್ಯಾಪಕವಾಗಿ ಈ ಜಾಲ ಹರಡುತ್ತಿದ್ದು, ಬೇರೆ ಜಿಲ್ಲೆಗಳ ಗತಿ ಏನು ಎಂದು ಪ್ರಶ್ನಿಸಿದ್ದಾರೆ.
ತಮ್ಮ ಸ್ವಗ್ರಾಮ ಅಂಕಳಕೊಪ್ಪದಲ್ಲೇ ಮಾದಕ ವಸ್ತುಗಳ ಸೇವನೆ ಮತ್ತು ಸರಬರಾಜು ಹೆಚ್ಚಿದೆ. ಈ ಬಗ್ಗೆ ಕ್ರಮ ಕೈಗೊಳ್ಳಿ ಎಂದು ಪೊಲೀಸರಿಗೆ ತಿಳಿಸಿದರೆ, ಮಾರುವವರಿಗೇ ಪೊಲೀಸರು ಮಾಹಿತಿ ನೀಡಿ ಪರಾರಿಯಾಗುವಂತೆ ಮಾಡುತ್ತಿದ್ದಾರೆಂದು ಮಸಾಲಾ ಜಯರಾಮ್ ಆರೋಪಿಸಿದರು.ಇತ್ತೀಚೆಗೆ ತಮ್ಮ ಗ್ರಾಮದಲ್ಲಿ ಮಾದಕ ದ್ರವ್ಯಗಳ ವ್ಯಸನಿಯೋರ್ವ ತಮ್ಮ ಸಂಬಂಧಿಯೋರ್ವರನ್ನು ಕೊಚ್ಚಿ ಕೊಲೆ ಮಾಡಿದ. ಮಾದಕ ವಸ್ತು ಸೇವಿಸುವ ಯುವಕರು ವ್ಹೀಲಿಂಗ್ ಮಾಡುವ ಹುಚ್ಚಾಟ ನಡೆಸುತ್ತಿದ್ದಾರೆ. ಜಿಲ್ಲೆಯಲ್ಲಿ ಕಾನೂನು ಬಾಹಿರ ಚಟುವಟಿಕೆಗಳು ನಿರಾತಂಕವಾಗಿ ನಡೆಯುತ್ತಿವೆ. ಇದನ್ನು ನಿಯಂತ್ರಿಸಲು ಜಿಲ್ಲಾಡಳಿತ ವಿಫಲವಾಗಿದೆ ಎಂದು ಅವರು ದೂರಿದರು.
ಪ್ರತಿಭಟನೆ: ಜಿಲ್ಲೆಯಲ್ಲಿ ಕಾನೂನು ವ್ಯವಸ್ಥೆ ಹದಗೆಟ್ಟಿರುವುದನ್ನು ಶಾಸಕ ಎಂ.ಟಿ.ಕೃಷ್ಣಪ್ಪ ಹಾಗೂ ತಾವು ಜಿಲ್ಲಾಧಿಕಾರಿ ಮತ್ತು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಿಗೆ ತಿಳಿಸಿದ್ದರೂ ಸಹ ಏನೂ ಪ್ರಯೋಜನವಾಗಿಲ್ಲ. ಹಾಗಾಗಿ ಇನ್ನು ಕೆಲವು ದಿನ ಕಾಲ ನೋಡಿ ಎಸ್ಪಿ ಕಚೇರಿಯ ಮುಂದೆ ಪ್ರತಿಭಟನೆ ಹಮ್ಮಿಕೊಳ್ಳಲಾಗುವುದು ಎಂದು ಮಾಜಿ ಶಾಸಕ ಮಸಾಲಾ ಜಯರಾಮ್ ಎಚ್ಚರಿಕೆ ನೀಡಿದರು.