ಮಾದಕ ವಸ್ತು ಸಾಗಾಟ, ಮಾರಾಟ: ವ್ಯಾಪಕ ತಪಾಸಣೆ

KannadaprabhaNewsNetwork |  
Published : Jun 30, 2026, 02:00 AM IST
ತಪಾಸಣೆ ನಡೆಸಲಾಯಿತು. | Kannada Prabha

ಸಾರಾಂಶ

ಕಾರವಾರದಿಂದ ಆಗಮಿಸಿದ ನಾರ್ಕೋಟಿಕ್ಸ್ ಪತ್ತೆ ಶ್ವಾನದಳವು ಸೋಮವಾರ ಭಟ್ಕಳ ನಗರದ ವಿವಿಧ ಕೋರಿಯರ್ ವಿತರಣಾ ಕೇಂದ್ರಗಳು ಹಾಗೂ ಅಂಚೆ ಕಚೇರಿಗಳಲ್ಲಿ ವ್ಯಾಪಕ ತಪಾಸಣೆ ನಡೆಸಿತು.

ಭಟ್ಕಳ:

ಜಿಲ್ಲೆಯಲ್ಲಿ ಹೆಚ್ಚುತ್ತಿರುವ ಮಾದಕ ವಸ್ತುಗಳ ಸಾಗಾಟ ಮತ್ತು ಮಾರಾಟವನ್ನು ಪರಿಣಾಮಕಾರಿಯಾಗಿ ನಿಯಂತ್ರಿಸುವ ಉದ್ದೇಶದಿಂದ ಕಾರವಾರದಿಂದ ಆಗಮಿಸಿದ ನಾರ್ಕೋಟಿಕ್ಸ್ ಪತ್ತೆ ಶ್ವಾನದಳವು ಸೋಮವಾರ ಭಟ್ಕಳ ನಗರದ ವಿವಿಧ ಕೋರಿಯರ್ ವಿತರಣಾ ಕೇಂದ್ರಗಳು ಹಾಗೂ ಅಂಚೆ ಕಚೇರಿಗಳಲ್ಲಿ ವ್ಯಾಪಕ ತಪಾಸಣೆ ನಡೆಸಿತು.

ಮಾದಕ ವಸ್ತುಗಳನ್ನು ಪತ್ತೆಹಚ್ಚಲು ವಿಶೇಷ ತರಬೇತಿ ಪಡೆದ ಡ್ರಗ್ ಡಿಟೆಕ್ಷನ್ ಡಾಗ್ಸ್‌ಗಳ ಸಹಾಯದಿಂದ ಕೋರಿಯರ್ ಪಾರ್ಸೆಲ್‌ಗಳು, ಅಂಚೆ ಮೂಲಕ ಸಾಗಿಸಲಾಗುತ್ತಿದ್ದ ವಸ್ತುಗಳು ಹಾಗೂ ಅನುಮಾನಾಸ್ಪದ ಪ್ಯಾಕೆಟ್‌ ಪರಿಶೀಲಿಸಲಾಯಿತು. ಯಾವುದೇ ಮಾದಕ ವಸ್ತುಗಳನ್ನು ಅಂಚೆ ಅಥವಾ ಕೋರಿಯರ್ ಸೇವೆಗಳ ಮೂಲಕ ಸಾಗಿಸದಂತೆ ತಡೆಯುವ ಉದ್ದೇಶದಿಂದ ಈ ಕಾರ್ಯಾಚರಣೆ ನಡೆಸಲಾಯಿತು.

ತಪಾಸಣೆ ವೇಳೆ ಶ್ವಾನದಳದ ಸಿಬ್ಬಂದಿ ಕಚೇರಿಯ ವಿವಿಧ ವಿಭಾಗಗಳಲ್ಲಿ ಸೂಕ್ಷ್ಮ ಪರಿಶೀಲನೆ ನಡೆಸಿ, ಪಾರ್ಸೆಲ್‌ಗಳ ಮೇಲೆ ಶ್ವಾನಗಳ ಮೂಲಕ ತಪಾಸಣೆ ನಡೆಸಿದರು. ಕೋರಿಯರ್ ಸಂಸ್ಥೆಗಳ ಸಿಬ್ಬಂದಿಗೆ ಅನುಮಾನಾಸ್ಪದ ಪಾರ್ಸೆಲ್‌ಗಳು ಕಂಡುಬಂದಲ್ಲಿ ತಕ್ಷಣವೇ ಪೊಲೀಸರಿಗೆ ಮಾಹಿತಿ ನೀಡುವಂತೆ ಅಧಿಕಾರಿಗಳು ಸೂಚನೆ ನೀಡಿದರು.

ಜಿಲ್ಲೆಯಲ್ಲಿ ಇತ್ತೀಚಿನ ದಿನಗಳಲ್ಲಿ ಮಾದಕ ವಸ್ತುಗಳ ಪ್ರಕರಣಗಳು ಹೆಚ್ಚುತ್ತಿರುವ ಹಿನ್ನೆಲೆ ಪೊಲೀಸ್ ಇಲಾಖೆ ಕಟ್ಟುನಿಟ್ಟಿನ ಕ್ರಮ ಕೈಗೊಂಡಿದ್ದು, ಶಾಲೆ-ಕಾಲೇಜುಗಳ ಸುತ್ತಮುತ್ತ, ಬಸ್ ನಿಲ್ದಾಣ, ರೈಲು ನಿಲ್ದಾಣ, ಕೋರಿಯರ್ ಕೇಂದ್ರಗಳು ಹಾಗೂ ಅಂಚೆ ಕಚೇರಿಗಳಲ್ಲಿ ನಿರಂತರ ತಪಾಸಣೆ ನಡೆಸಲಾಗುತ್ತಿದೆ. ಮಾದಕ ವಸ್ತುಗಳ ಸಾಗಾಟ, ಮಾರಾಟ ಮತ್ತು ಬಳಕೆಯನ್ನು ಸಂಪೂರ್ಣವಾಗಿ ತಡೆಗಟ್ಟಲು ಇಂತಹ ವಿಶೇಷ ಕಾರ್ಯಾಚರಣೆಗಳು ಮುಂದಿನ ದಿನಗಳಲ್ಲಿಯೂ ಮುಂದುವರಿಯಲಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.ಭಟ್ಕಳದ 60 ಜನರಿಗೆ ತಹಶೀಲ್ದಾರರಿಂದ ನೋಟಿಸ್

ಮುಂದಿನ ದಿನಗಳಲ್ಲಿ ಭಟ್ಕಳ ತಾಲೂಕಿನಲ್ಲಿ ಗಲಾಟೆಯನ್ನು ಹುಟ್ಟು ಹಾಕಲು ಕಾರಣರಾಗಬಹುದು ಎನ್ನುವ ಸಂಶಯದ ಮೇಲೆ ೬೦ ಜನರಿಗೆ ನೋಟೀಸ್ ಜಾರಿ ಮಾಡಿರುವ ಕುರಿತು ತಿಳಿದು ಬಂದಿದೆ.ಗುಪ್ತಚರ ಇಲಾಖೆಯವರು ನೀಡಿದ ವರದಿಯನ್ನಾದರಿಸಿ ಮುಂಜಾಗ್ರತಾ ಕ್ರಮ ಕೈಗೊಳ್ಳಲಾಗಿದೆ ಎಂದು ಹೇಳಲಾಗಿದ್ದು, ತಾಲೂಕಿನಲ್ಲಿ ಸಾಮಾಜಿಕ ಹೋರಾಟ, ಕೋಮು ದ್ವೇಷ, ಕ್ರಿಮಿನಲ್ ಪ್ರಕರಣಗಳಿರುವ ಸುಮಾರು ೬೦ ಜನರನ್ನು ಪ್ರಥಮ ಹಂತದಲ್ಲಿ ಗುರುತಿಸಿ ನೋಟೀಸ್ ನೀಡಲಾಗಿದೆ ಎನ್ನಲಾಗಿದೆ. ಮುಂದೆ ಯಾವುದೇ ರೀತಿಯ ದುರ್ವರ್ತನೆ ತೋರುವುದಿಲ್ಲ ಎಂದು ತಹಹೀಲ್ದಾರ್ ಎದುರು ₹೫೦ ಸಾವಿರ ಮುಚ್ಚಳಿಕೆಯನ್ನು ಬರೆದುಕೊಡುವ ಸಲುವಾಗಿ ನೋಟೀಸ್ ನೀಡಲಾಗಿದೆ ಎನ್ನಲಾಗಿದ್ದು, ಮುಂದೆ ಬರುವ ದಿನಗಳಲ್ಲಿ ಸಣ್ಣಪುಟ್ಟ ಗಲಾಟೆಯನ್ನು ಮಾಡಿ ಅದರಿಂದ ಕೋಮು ಸೌಹಾರ್ಧತೆಗೆ ಧಕ್ಕೆ ತರದ ರೀತಿಯಲ್ಲಿ ಈ ಕ್ರಮ ಎನ್ನಲಾಗಿದೆ. ಈ ಕುರಿತು ತಹಸೀಲ್ದಾರ್ ಅವರು ನೋಟೀಸು ಜಾರಿ ಮಾಡಿದ್ದು ಪ್ರತಿಯೊಬ್ಬರೂ ಕೂಡಾ ಹಾಜರಾಗುವಂತೆಯೂ ತಿಳಿಸಲಾಗಿದೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಹಾವೇರಿ ಜಿಲ್ಲಾ ನ್ಯಾಯಾಲಯಕ್ಕೆ ಮತ್ತೆ ಬಾಂಬ್ ಬೆದರಿಕೆ
ಯುವ ಜನತೆ ಹಿರಿಯರನ್ನು ಗೌರವದಿಂದ ನಡೆಸಿಕೊಳ್ಳಬೇಕು-ಶ್ರೀಶೈಲಜಾ