ಕನ್ನಡಪ್ರಭ ವಾರ್ತೆ ಚಾಮರಾಜನಗರ
ಕುತೂಹಲದ ಮೋಜಿನ ಜೀವನ, ಜಿಗುಪ್ಸೆ, ಕೆಲಸದ ಒತ್ತಡದಿಂದ ಮುಕ್ತರಾಗಲು ಆರಂಭಿಸುವ ಮದ್ಯ, ಮಾದಕ ಪದಾರ್ಥಗಳ ಸೇವನೆ, ಇತ್ತೀಚೆಗೆ ಮಾರುಕಟ್ಟೆಗೆ ಬಂದಿರುವ ಕೈಗೆ ಅಂಟಿಸಿಕೊಳ್ಳುವ ನಿಕೋಟಿನ್ ಪ್ಯಾಚ್‌ಗಳು ಆರೋಗ್ಯಕ್ಕೆ ಹಾನಿಕರ. ಮಾದಕ ಉತ್ಪನ್ನಗಳಲ್ಲಿರುವ ರಾಸಾಯನಿಕಗಳು ಬಾಯಿ, ಯಕೃತ್, ಮೆದುಳು, ಶ್ವಾಸಕೋಶ ಕ್ಯಾನ್ಸರ್‌ನಂತಹ ಮಾರಕ ರೋಗಗಳಿಗೂ ಕಾರಣವಾಗಿವೆ. ಇವೆಲ್ಲವೂ ಮನುಷ್ಯನ ಆರೋಗ್ಯದ ಮೇಲೆ ದುಷ್ಪರಿಣಾಮಗಳನ್ನು ಉಂಟುಮಾಡಲಿವೆ. ಮದ್ಯ, ಮಾದಕ ಪದಾರ್ಥಗಳ ಸೇವನೆಯ ಅಭ್ಯಾಸವಿರುವವರು ಅವುಗಳಿಂದ ದೂರವಿರಲು ದೃಢ ಮನಸ್ಸು ಮಾಡಬೇಕು ಎಂದರು.
ಮದ್ಯ, ಮಾದಕ ಪದಾರ್ಥ ಸೇವನೆಯಿಂದ ಕುಟುಂಬ ಆರ್ಥಿಕವಾಗಿ ದುಸ್ಥಿತಿಗೆ ತಲುಪಲಿದೆ. ರಸ್ತೆ ಅಪಘಾತಗಳು ಸಂಭವಿಸುತ್ತವೆ. ಮದ್ಯ, ಮಾದಕ ಪದಾರ್ಥಗಳ ಸೇವನೆ ಇತ್ತೀಚೆಗೆ ಮಹಿಳೆಯರಲ್ಲೂ ಕಂಡುಬರುತ್ತಿದೆ. ಇವುಗಳ ದುಷ್ಪರಿಣಾಮಗಳ ಬಗ್ಗೆ ಸಾರ್ವಜನಿಕರು, ಯುವಜನರು ಹಾಗೂ ಮಕ್ಕಳಿಗೆ ಬಾಲ್ಯದಿಂದಲೇ ಅರಿವು ಮೂಡಿಸಬೇಕಾಗಿದೆ. ತಂಬಾಕು ದೇಹಕ್ಕೂ, ದೇಶಕ್ಕೂ ಹಾನಿಕರವಾಗಿದ್ದು, ಅವುಗಳನ್ನು ತ್ಯಜಿಸಿ ಉತ್ತಮ ಆರೋಗ್ಯ ಕಾಪಾಡಿಕೊಳ್ಳಬೇಕು ಎಂದು ತಿಳಿಸಿದರು.ಅಧ್ಯಕ್ಷತೆ ವಹಿಸಿದ್ದ ಚಾಮರಾಜನಗರ ವಿವಿ ಕುಲಪತಿ ಪ್ರೊ.ಎಂ.ಆರ್.ಗಂಗಾಧರ್ ಮಾತನಾಡಿ, ಮನುಕುಲಕ್ಕೆ ಮಾರಕವಾಗಿರುವ ಮದ್ಯ, ಮಾದಕ ವಸ್ತುಗಳ ದುಷ್ಪರಿಣಾಮಗಳು ವಿಶ್ವದೆಲ್ಲೆಡೆ ಸರ್ವೇಸಾಮಾನ್ಯವಾಗಿದೆ. ಇವುಗಳ ಸೇವನೆಯಿಂದ ಕುಟುಂಬ ಅರ್ಥಿಕ ಸಂಕಷ್ಟಕ್ಕೀಡಾಗಲಿದೆ. ಹೆಣ್ಣುಮಕ್ಕಳು ಚಿಕ್ಕ ವಯಸ್ಸಿನಲ್ಲಿಯೇ ವಿಧವೆಯರಾಗುತ್ತಿದ್ದಾರೆ. ಇದು ತಪ್ಪಬೇಕು. ಈ ನಿಟ್ಟಿನಲ್ಲಿ ಮಾದಕ ವಸ್ತುಗಳ ಸೇವನೆಯಿಂದ ಹೊರಬರಲು ಪ್ರತಿಯೊಬ್ಬರು ಗಟ್ಟಿಮನಸ್ಸು ಮಾಡಬೇಕು. ವಿದ್ಯಾರ್ಥಿಗಳು ಇದನ್ನು ಗಂಭೀರವಾಗಿ ಪರಿಗಣಿಸಬೇಕು ಎಂದರು.
ಮೌಲ್ಯಮಾಪನ ಕುಲಸಚಿವ ಪ್ರೊ.ಜಿ.ವಿ.ವೆಂಕಟರಮಣ ಮಾತನಾಡಿ, ಮಾದಕ ಪದಾರ್ಥಗಳ ಸೇವನೆಯಿಂದ ಸಾಕಷ್ಟು ಕುಟುಂಬಗಳು ಬೀದಿಗೆ ಬಿದ್ದಿವೆ. ಯುವಜನಾಂಗ ಮದ್ಯ, ತಂಬಾಕು ಸೇವನೆ ತ್ಯಜಿಸಿ ಇತರರಿಗೆ ಮಾದರಿಯಾಗಬೇಕು. ಜಿಲ್ಲೆಯನ್ನು ಆಲ್ಕೋಹಾಲ್ ಮುಕ್ತ ಜಿಲ್ಲೆಯಾಗಿ ಪರಿವರ್ತಿಸಲು ಪಣತೊಡಬೇಕು ಎಂದರು. ಜಿಲ್ಲಾ ಮಾನಸಿಕ ಆರೋಗ್ಯ ಕಾರ್ಯಕ್ರಮದ ಮನೋರೋಗ ತಜ್ಞೆ ಡಾ.ಮೇರಿ ಅಂಜಲ ಹಾಗೂ ಮಹದೇಶ್ ಕಾರ್ಯಕ್ರಮದಲ್ಲಿ ಮದ್ಯ ಮತ್ತು ಮಾದಕ ವಸ್ತುಗಳ ಸೇವನೆ ದುಷ್ಪರಿಣಾಮಗಳ ಕುರಿತು ವಿಶೇಷ ಉಪನ್ಯಾಸ ನೀಡಿದರು.
ಕಾರ್ಯಕ್ರಮದಲ್ಲಿ ಯಳಂದೂರಿನ ರಂಗದೇಗುಲ ಕಲಾವೇದಿಕೆಯ ಶಾಂತರಾಜು ಮತ್ತು ತಂಡದವರು ಮದ್ಯ ಮತ್ತು ಮಾದಕ ವಸ್ತುಗಳ ಸೇವನೆ ದುಷ್ಪರಿಣಾಮಗಳ ಕುರಿತು ಜಾಗೃತಿ ಗೀತೆಗಳನ್ನು ಪ್ರಸ್ತುತಪಡಿಸುವ ಮೂಲಕ ವಿದ್ಯಾರ್ಥಿಗಳಿಗೆ ಅರಿವು ಮೂಡಿಸಿದರು. ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಹಿರಿಯ ಸಹಾಯಕ ನಿರ್ದೇಶಕ ಎ.ರಮೇಶ, ವಾರ್ತಾ ಸಹಾಯಕ ಸುರೇಶ್‌ಕುಮಾರ್, ವಿಶ್ವವಿದ್ಯಾಲಯದ ಉಪನ್ಯಾಸಕರಾದ ಗುರುರಾಜ್, ಇತರರು ಉಪಸ್ಥಿತರಿದ್ದರು.