ಕನ್ನಡಪ್ರಭ ವಾರ್ತೆ ಬೆಂಗಳೂರು
ಕಳೆದ ವರ್ಷ ರಾಜ್ಯದಲ್ಲಿ ಮಾದಕ ವಸ್ತು ಮಾರಾಟಗಾರರಿಂದ ವಶಪಡಿಸಿಕೊಂಡಿರುವ ಸುಮಾರು ₹59.16 ಕೋಟಿ ಮೌಲ್ಯದ ಡ್ರಗ್ಸ್ ನಾಶಗೊಳಿಸಲು ರಾಜ್ಯ ಪೊಲೀಸ್ ಇಲಾಖೆ ನಿರ್ಧರಿಸಿದೆ.
ಈ ಸಂಬಂಧ ಶುಕ್ರವಾರ ಹಾಗೂ ಶನಿವಾರ ಎಲ್ಲ ಕಮೀಷನರೇಟ್‌ಗಳು ಹಾಗೂ ಜಿಲ್ಲಾ ಪೊಲೀಸರು ಡ್ರಗ್ಸ್ ವಿಲೇವಾರಿ ಕಾರ್ಯಕ್ರಮ ಹಮ್ಮಿಕೊಂಡಿದ್ದಾರೆ. ರಾಜ್ಯದಲ್ಲಿ 2023ರಲ್ಲಿ ಒಟ್ಟು ₹59.17 ಕೋಟಿ ಮೌಲ್ಯದ ಡ್ರಗ್ಸನ್ನು ಆರೋಪಿಗಳಿಂದ ಪೊಲೀಸರು ಜಪ್ತಿ ಮಾಡಿದ್ದಾರೆ.
ಇದರಲ್ಲಿ ಗಾಂಜಾ, ಬ್ರೌನ್ ಶುಗರ್, ಎಂಡಿಎಂಎ ಹಾಗೂ ಚರಸ್ ಸೇರಿದಂತೆ ₹42.16 ಕೋಟಿಯ ವಿವಿಧ ಬಗೆಯ ಮಾದಕ ವಸ್ತುವನ್ನು ನಾಶಗೊಳಿಸಲಾಗುತ್ತಿದೆ.
ಇನ್ನುಳಿದ ₹17 ಕೋಟಿ ಮೌಲ್ಯದ ಅಫೀಮನ್ನು ಕಾರ್ಖಾನೆಗಳ ಮುಖ್ಯನಿಯಂತ್ರಕರಿಗೆ ಹಸ್ತಾಂತರಿಸಲಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.
ಗೃಹ ಸಚಿವರ ಸಮ್ಮುಖ: ನೆಲಮಂಗಲ ಸಮೀಪದ ಡಾಬಸಪೇಟೆ ಕೈಗಾರಿಕಾ ಪ್ರದೇಶದಲ್ಲಿ ಬೆಂಗಳೂರು ನಗರ, ಮೈಸೂರು ನಗರ, ರೈಲ್ವೆ, ಕೇಂದ್ರ ಮತ್ತು ದಕ್ಷಿಣ ವಲಯಗಳ ಪೊಲೀಸರು ಜಪ್ತಿ ಮಾಡಿದ್ದ ₹36.65 ಕೋಟಿ ಮೌಲ್ಯದ ಡ್ರಗ್ಸನ್ನು ರಾಜ್ಯ ಗೃಹ ಮಂತ್ರಿ ಡಾ। ಜಿ.ಪರಮೇಶ್ವರ್ ಸಮ್ಮುಖದಲ್ಲಿ ನಾಶಗೊಳಿಸಲಿದ್ದಾರೆ.
ಕಾರ್ಯಕ್ರಮದಲ್ಲಿ ರಾಜ್ಯ ಪೊಲೀಸ್ ಮಹಾನಿರ್ದೇಶಕ ಅಲೋಕ್ ಮೋಹನ್ ಹಾಗೂ ಆಯುಕ್ತ ಬಿ.ದಯಾನಂದ್, ಹಿರಿಯ ಅಧಿಕಾರಿಗಳು ಹಾಜರಿರಲಿದ್ದಾರೆ.