36 ಕೋಟಿ ಡ್ರಗ್ಸ್‌ ಜಪ್ತಿ : 16 ಮಂದಿ ಬಂಧನ

KannadaprabhaNewsNetwork |  
Published : Apr 30, 2026, 03:30 AM ISTUpdated : Apr 30, 2026, 05:34 AM IST
Home Minister G Parameshwar visit Comissioner office in Bangalore 5

ಸಾರಾಂಶ

ರಾಜಧಾನಿಯ ಡ್ರಗ್ಸ್ ಮಾಫಿಯಾ ವಿರುದ್ಧ ಪೊಲೀಸರ ಭರ್ಜರಿ ಕಾರ್ಯಾಚರಣೆ ಮುಂದುವರೆದಿದ್ದು, ನಾಲ್ವರು ವಿದೇಶಿಯರು ಸೇರಿ 16 ಮಂದಿಯನ್ನು ಪ್ರತ್ಯೇಕವಾಗಿ ಬಂಧಿಸಿ 36 ಕೋಟಿ ರು. ಮೌಲ್ಯ ಡ್ರಗ್ಸ್‌ ಅನ್ನು ಜಪ್ತಿ ಮಾಡಿದ್ದಾರೆ.

  ಬೆಂಗಳೂರು :  ರಾಜಧಾನಿಯ ಡ್ರಗ್ಸ್ ಮಾಫಿಯಾ ವಿರುದ್ಧ ಪೊಲೀಸರ ಭರ್ಜರಿ ಕಾರ್ಯಾಚರಣೆ ಮುಂದುವರೆದಿದ್ದು, ನಾಲ್ವರು ವಿದೇಶಿಯರು ಸೇರಿ 16 ಮಂದಿಯನ್ನು ಪ್ರತ್ಯೇಕವಾಗಿ ಬಂಧಿಸಿ 36 ಕೋಟಿ ರು. ಮೌಲ್ಯ ಡ್ರಗ್ಸ್‌ ಅನ್ನು ಜಪ್ತಿ ಮಾಡಿದ್ದಾರೆ.

ಸಿಸಿಬಿಯ ಮಾದಕ ದ್ರವ್ಯ ನಿಗ್ರಹ ದಳ, ಬಾಗಲೂರು, ಆಡುಗೋಡಿ, ಚಿಕ್ಕಜಾಲ, ಎಚ್ಎಸ್‌ಆರ್‌ ಲೇಔಟ್‌, ಯಶವಂತಪುರ, ಜಾಲಹಳ್ಳಿ ಹಾಗೂ ಜ್ಞಾನಭಾರತಿ ಠಾಣೆಗಳ ಪೊಲೀಸರು ಈ ಕಾರ್ಯಾಚರಣೆ ನಡೆಸಿದ್ದು, ಈ ದಾಳಿಯಲ್ಲಿ 9.64 ಗ್ರಾಂ ಎಂಡಿಎಂಎ, 5 ಕೆಜಿ ಹೈಡ್ರೋ ಗಾಂಜಾ, 19,755 ಎಲ್‌ಎಸ್‌ಡಿ ಸ್ಟ್ರಿಫ್ಸ್‌, 11.4 ಕೆ.ಜಿ ಗಾಂಜಾ, 156 ಗ್ರಾಂ ಹೆರಾಯಿನ್‌, 618 ಗ್ರಾಂ ಚರಸ್ ಹಾಗೂ 332 ಗ್ರಾಂ ಕೊಕೇನ್‌ ಸೇರಿದಂತೆ ಒಟ್ಟು 36.67 ಕೋಟಿ ರು ಮೌಲ್ಯದ ಡ್ರಗ್ಸ್ ಜಪ್ತಿಯಾಗಿದೆ.

ಈ ಬಂಧಿತರ ಪೈಕಿ ನಾಲ್ವರು ವಿದೇಶಿ ಪ್ರಜೆಗಳು, 8 ಮಂದಿ ಹೊರ ರಾಜ್ಯದವರು ಹಾಗೂ ನಾಲ್ವರು ಸ್ಥಳೀಯರು ಸೇರಿದ್ದಾರೆ. ಅಂತರ್‌ ರಾಜ್ಯ ಹಾಗೂ ಅಂತಾರಾಷ್ಟ್ರೀಯ ಡ್ರಗ್ಸ್ ಜಾಲದ ಜತೆ ಆರೋಪಿಗಳು ಸಂಪರ್ಕ ಹೊಂದಿದ್ದು ಡಾರ್ಕ್‌ನೆಟ್‌ ಮೂಲಕ ಡ್ರಗ್ಸ್ ಖರೀದಿಸಿದ್ದಾರೆ. ಕಾಲೇಜು ವಿದ್ಯಾರ್ಥಿಗಳು ಹಾಗೂ ಖಾಸಗಿ ಕಂಪನಿ ಉದ್ಯೋಗಿಗಳಿಗೆ ಮಾರುತ್ತಿದ್ದರು. ಈ ಡ್ರಗ್ಸ್‌ ಜಾಲದ ಬಗ್ಗೆ ಹೆಚ್ಚಿನ ಮಾಹಿತಿ ಸಂಗ್ರಹಿಸಲಾಗುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

11 ಕೋಟಿ ರು. ಮೌಲ್ಯದ ಎಲ್‌ಎಸ್‌ಡಿ ಜಪ್ತಿ

ನಗರದಲ್ಲಿ ಡ್ರಗ್ಸ್ ಮಾರಾಟಕ್ಕೆ ಯತ್ನಿಸಿದ್ದ ಇಬ್ಬರು ಕೇರಳ ಪ್ರಜೆಗಳನ್ನು ಬಂಧಿಸಿ ದಾಖಲೆ ಪ್ರಮಾಣದ ಎಲ್‌ಎಸ್‌ಡಿ ಸ್ಟ್ರಿಫ್ಸ್‌ಗಳನ್ನು ಬಾಗಲೂರು ಪೊಲೀಸರು ಬಂಧಿಸಿದ್ದಾರೆ. ಕೇರಳ ಮೂಲದ ಮಹಮ್ಮದ್ ರಫಿ ಹಾಗೂ ಅಜ್ಮಲ್ ಬಂಧಿತರಾಗಿದ್ದು, ಆರೋಪಿಗಳಿಂದ 11.87 ಕೋಟಿ ರು ಮೌಲ್ಯದ 19,755 ಎಲ್‌ಎಸ್‌ಡಿ ಸ್ಟ್ರಿಪ್ಸ್ ಹಾಗೂ 315 ಗ್ರಾಂ ಚರಸ್ ಜಪ್ತಿಯಾಗಿದೆ. ಇದೇ ಮೊದಲ ಬಾರಿಗೆ ದೊಡ್ಡ ಪ್ರಮಾಣದಲ್ಲಿ ಎಲ್‌ಎಸ್‌ಡಿ ವಶಪಡಿಸಿಕೊಂಡು ಬಾಗಲೂರು ಠಾಣೆ ಇನ್ಸ್‌ಪೆಕ್ಟರ್ ಬಿ.ಎಸ್‌.ಅಶೋಕ್ ತಂಡ ದಾಖಲೆ ನಿರ್ಮಿಸಿದೆ. ರಫಿ ವೃತ್ತಿಪರ ಡ್ರಗ್ಸ್ ಪೆಡ್ಲರ್ ಆಗಿದ್ದು, ಆತನ ವಿರುದ್ಧ ಪ್ರಕರಣಗಳಿವೆ. ಬಟ್ಟೆ ವ್ಯಾಪಾರದ ಸೋಗಿನಲ್ಲಿ ಆತ ಡ್ರಗ್ಸ್ ದಂಧೆ ನಡೆಸುತ್ತಿದ್ದ. ಥೈಲ್ಯಾಂಡ್‌ಗೆ ಬ್ಯುಸಿನೆಸ್ ನೆಪದಲ್ಲಿ ತೆರಳಿ ಅಲ್ಲಿಂದ ಡ್ರಗ್ಸ್ ತಂದು ನಗರದಲ್ಲಿ ಆತ ಮಾರಾಟ ಮಾಡುತ್ತಿದ್ದ. ಈ ದಂಧೆಗೆ ಹಣದಾಸೆ ತೋರಿಸಿ ಅಜ್ಮಲ್‌ನನ್ನು ರಫಿ ಬಳಸಿದ್ದ. ಈತನ ಬಗ್ಗೆ ಖಚಿತ ಮಾಹಿತಿ ಪಡೆದು ದಾಳಿ ನಡೆದಿದೆ.

ವಿದೇಶಿಯರ ಬಳಿ 17.50 ಕೋಟಿ ರು ಡ್ರಗ್ಸ್

ಸಿಸಿಬಿ ನಡೆಸಿದ ಮತ್ತೊಂದು ಕಾರ್ಯಾಚರಣೆಯಲ್ಲಿ ಇಬ್ಬರು ವಿದೇಶಿ ಪ್ರಜೆಗಳು ಸಿಕ್ಕಿಬಿದ್ದಿದ್ದಾರೆ. ನೈಜೀರಿಯಾ ಪ್ರಜೆಗಳಾದ ವಾಲೆಂಟಿನ್‌ ನಾಲ್ವಬ್ಲಿ ಹಾಗೂ ಅಬ್ರೊಸ್‌ ಬಂಧಿತರಾಗಿದ್ದು, ಆರೋಪಿಗಳಿಂದ 5.155 ಕೆಜಿ ಎಡಿಎಂಎ, 5.195 ಗ್ರಾಂ ಹೈಡ್ರೋ ಗಾಂಜಾ, 332 ಗ್ರಾಂ ಕೊಕೇನ್‌ ಹಾಗೂ 315 ಗ್ರಾಂ ಗಮ್ಮೀಸ್‌ ಸೇರಿದಂತೆ ಒಟ್ಟು 17.50 ಕೋಟಿ ರು ಮೌಲ್ಯದ ಡ್ರಗ್ಸ್ ಅನ್ನು ಸಿಸಿಬಿ ಪೊಲೀಸರು ವಶಪಡಿಸಿಕೊಂಡಿದ್ದಾರೆ. ಈ ದಂಧೆಕೋರರ ಬಗ್ಗೆ ನಿಖರ ಬಾತ್ಮಿ ಪಡೆದು ಸಿಸಿಬಿ ಡಿಸಿಪಿ-2 ರಾಜಾ ಇಮಾಮ್ ಕಾಸಿಂ ಮಾರ್ಗದರ್ಶನದಲ್ಲಿ ಎಸಿಪಿ ಎಂ.ಎನ್‌.ನಾಗರಾಜ್ ತಂಡ ಕಾರ್ಯಾಚರಣೆ ನಡೆಸಿದೆ.

ನಾಲ್ಕು ತಿಂಗಳಲ್ಲೇ 130 ಕೋಟಿ

ಡ್ರಗ್ಸ್ ಜಪ್ತಿ: 2600 ಮಂದಿ ಅಂದರ್‌

ಡ್ರಗ್ಸ್ ಮಾರಾಟ ಜಾಲದ ಬುಡಕತ್ತರಿಸಲು ನಿರಂತರವಾಗಿ ಯತ್ನಿಸುತ್ತಿರುವ ರಾಜಧಾನಿ ಪೊಲೀಸರು, ಕಳೆದ 4 ತಿಂಗಳ ಅ‍‍ವಧಿಯಲ್ಲಿ 130 ಕೋಟಿ ರು.ಮೌಲ್ಯದ ಡ್ರಗ್ಸ್ ಜಪ್ತಿ ಮಾಡಿದ್ದಾರೆ. ಅಲ್ಲದೆ ಇದೇ ವೇಳೆ ಪೆಡ್ಲರ್ಸ್‌ ಹಾಗೂ ವ್ಯಸನಿಗಳು ಸೇರಿ 2,600ಕ್ಕೂ ಹೆಚ್ಚು ಮಂದಿಯನ್ನು ಪ್ರತ್ಯೇಕವಾಗಿ ಬಂಧಿಸಿ ಪೊಲೀಸರು ಜೈಲಿಗೆ ಕಳುಹಿಸಿದ್ದಾರೆ. ಈ ಬಂಧಿತರ ಪೈಕಿ 256 ಮಂದಿ ಪೆಡ್ಲರ್‌ಗಳು ಹಾಗೂ 1,703 ಮಂದಿ ವ್ಯಸನಿಗಳು ಸೇರಿದ್ದಾರೆ. ಇನ್ನು 1,959 ಪ್ರಕರಣಗಳು ದಾಖಲಾಗಿವೆ. ಬಂಧಿತರ ಪೈಕಿ 2,591 ಮಂದಿ ಸ್ಥಳೀಯರು ಹಾಗೂ 21 ಮಂದಿ ವಿದೇಶಿಯರಿದ್ದಾರೆ.

ಡ್ರಗ್ಸ್ ದಂಧೆಕೋರರ ವಿರುದ್ಧ ಬೆಂಗಳೂರು ಪೊಲೀಸರ ಕಾರ್ಯಾಚರಣೆ ಪ್ರಶಂಸನೀಯವಾದ್ದು, ‘ಡ್ರಗ್ಸ್‌ ಮುಕ್ತ ಕರ್ನಾಟಕ’ವಾಗಿಸುವ ನಿಟ್ಟಿನಲ್ಲಿ ಪೊಲೀಸರ ಸಮರ ಮುಂದುವರೆಯಲಿದೆ. ಡ್ರಗ್ಸ್ ಮಾರಾಟದಲ್ಲಿ ಯಾರೇ ತೊಡಗಿದರೂ ಮುಲಾಜಿಲ್ಲದೆ ಕಠಿಣ ಕಾನೂನು ಕ್ರಮ ಜರುಗಿಸುವಂತೆ ಸೂಚಿಸಿದ್ದೇನೆ.

-ಡಾ.ಜಿ.ಪರಮೇಶ್ವರ್ ಗೃಹ ಸಚಿವ

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.
Read more Articles on

Recommended Stories

ಕಿಡಿಗೇಡಿತನಕ್ಕೆ ಕ್ಷಮೆ ಇಲ್ಲ: ಹೈಕೋರ್ಟ್‌ ಕಿಡಿ
112 ಎಐ ಬಹುಭಾಷ ಆಯ್ಕೆ ವ್ಯವಸ್ಥೆಗೆ ಡಾ.ಜಿ.ಪರಮೇಶ್ವರ್‌ ಚಾಲನೆ