ಕುಡಿತ ಎಂಬುದು ಕೆಡುಕುಗಳಿಗೆ ಕಾರಣ: ಮರುಳಸಿದ್ಧ ಸ್ವಾಮೀಜಿ

KannadaprabhaNewsNetwork | Updated : Oct 11 2024, 11:47 PM IST

ಸಾರಾಂಶ

ಚಿಕ್ಕಮಗಳೂರು, ಮದ್ಯವರ್ಜನ ಶಿಬಿರದಿಂದ ಹಲವಾರು ಮಂದಿಯ ಬದುಕಿನ ಕತ್ತಲೆ ದೂರವಾಗಿದೆ. ಗಾಂಧೀಜಿಯವರ ತತ್ವಾದರ್ಶದಂತೆ ನಡೆದುಕೊಳ್ಳುತ್ತಿರುವ ಧರ್ಮಾಧಿಕಾರಿಯವರು ಮದ್ಯಮುಕ್ತ ಸಮಾಜದ ಕಲ್ಪನೆಗೆ ಒತ್ತು ಕೊಟ್ಟಿದ್ದಾರೆ ಎಂದು ಬಸವತತ್ವ ಪೀಠದ ಶ್ರೀ ಡಾ. ಬಸವ ಮರುಳಸಿದ್ಧ ಸ್ವಾಮೀಜಿ ನುಡಿದರು.

- ಗಾಂಧಿ ಸ್ಮೃತಿ ಮತ್ತು ನವ ಜೀವನ ಸಮಿತಿ ಸದಸ್ಯರ ಸಮಾವೇಶ

ಕನ್ನಡಪ್ರಭ ವಾರ್ತೆ, ಚಿಕ್ಕಮಗಳೂರು

ಮದ್ಯವರ್ಜನ ಶಿಬಿರದಿಂದ ಹಲವಾರು ಮಂದಿಯ ಬದುಕಿನ ಕತ್ತಲೆ ದೂರವಾಗಿದೆ. ಗಾಂಧೀಜಿಯವರ ತತ್ವಾದರ್ಶದಂತೆ ನಡೆದುಕೊಳ್ಳುತ್ತಿರುವ ಧರ್ಮಾಧಿಕಾರಿಯವರು ಮದ್ಯಮುಕ್ತ ಸಮಾಜದ ಕಲ್ಪನೆಗೆ ಒತ್ತು ಕೊಟ್ಟಿದ್ದಾರೆ ಎಂದು ಬಸವತತ್ವ ಪೀಠದ ಶ್ರೀ ಡಾ. ಬಸವ ಮರುಳಸಿದ್ಧ ಸ್ವಾಮೀಜಿ ನುಡಿದರು.

ನಗರದ ರಾಮನಹಳ್ಳಿ ಸಮೀಪ ಅಂಬೇಡ್ಕರ್ ಸಮುದಾಯ ಭವನದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಟ್ರಸ್ಟ್, ಜನ ಜಾಗೃತಿ ವೇದಿಕೆ ಟ್ರಸ್ಟ್ ಆಶ್ರಯದಲ್ಲಿ ಹಮ್ಮಿಕೊಂಡಿದ್ಧ ಗಾಂಧಿ ಸ್ಮೃತಿ ಮತ್ತು ನವ ಜೀವನ ಸಮಿತಿ ಸದಸ್ಯರ ಸಮಾವೇಶ ಕಾರ್ಯಕ್ರಮ ಉದ್ಘಾಟಿಸಿ ಶ್ರೀಗಳು ಆರ್ಶೀವಚನ ನೀಡಿದರು. ಕುಡಿತ ಎಂಬುದು ಎಲ್ಲಾ ಕೆಡುಕುಗಳಿಗೆ ಕಾರಣ. ಅಲ್ಲದೇ ಆರ್ಥಿಕ ನಷ್ಟಕ್ಕಿಂತ, ನೈತಿಕ ನಷ್ಟ ಬಹಳ ಅಪಾಯ ಕಾರಿ. ರೋಗದಿಂದ ವ್ಯಕ್ತಿ ಮಾತ್ರ ನೋವು ಅನುಭವಿಸಿದರೆ ಮದ್ಯಪಾನದಂತ ವ್ಯಸನದಿಂದ ಆತನ ಇಡೀ ಕುಟುಂಬ ಮತ್ತು ಸಮಾಜ ನೋವು ಅನುಭವಿಸಬೇಕಾಗುತ್ತದೆ ಎಂದು ತಿಳಿಸಿದರು.

ಒಳ್ಳೆಯ ಕೆಲಸಕ್ಕೆ ನಾಳೆ ಎಂದೆನ್ನದೇ ಇವತ್ತಿನಿಂದಲೇ ಪ್ರಾರಂಭಿಸೋಣ. ನಮ್ಮಲ್ಲಿ ಹಗೆತನ ಇಲ್ಲದೆ ಶಾಂತಿ ನೆಲೆಸಬೇಕು. ಅದಕ್ಕಾಗಿ ದುಶ್ಚಟ ಮುಕ್ತ ಸಮಾಜ ನಿರ್ಮಾಣ ಆಗಬೇಕು. ನಾವು ನವಜೀವನ ಆರಂಭಿಸಬೇಕಾದರೆ ಮೊದಲು ನಮ್ಮ ತಪ್ಪಿನ ಅರಿವು ನಮಗೆ ಆಗಬೇಕು ಎಂದರು.

ಗ್ರಾಮಾಭಿವೃದ್ಧಿ ಟ್ರಸ್ಟ್ ಜಿಲ್ಲಾ ನಿರ್ದೇಶಕ ಸದಾನಂದ ಬಂಗೇರ ಮಾತನಾಡಿ, ಧರ್ಮಸ್ಥಳದ ಕಾರ್ಯ ಸಮಾಜಮುಖಿ. ದುಶ್ಚಟಗಳಿಂದ ನರಳು ತ್ತಿರುವ ವ್ಯಸನಿಗಳು ಸಮಾಜದಲ್ಲಿ ಸಾತ್ವಿಕ ಜೀವನ ನಡೆಸಲು ಮದ್ಯ ವರ್ಜನ ಶಿಬಿರದಲ್ಲಿ ಪಾಲ್ಗೊಂಡರೆ ಮಾತ್ರ ನಾಗರಿಕ ಸಮಾಜದಲ್ಲಿ ಸತ್ಪ್ರಜೆ ಯಾಗಿ ಬದುಕಿ ಮಾದರಿ ಜೀವನ ನಡೆಸಬಹುದು ಎಂದು ತಿಳಿಸಿದರು.

ಬಸವನಹಳ್ಳಿ ಠಾಣೆ ಸಬ್‌ಇನ್ಸ್‌ಪೆಕ್ಟರ್ ಕೀರ್ತಿಕುಮಾರ್ ಮಾತನಾಡಿ, ದೇಶವನ್ನು ಶತ್ರುಗಳಿಂದ ಯೋಧರು ಕಾಪಾಡುತ್ತಾರೆ. ದುಶ್ಚಟಕ್ಕೆ ಬಲಿಯಾಗುವ ವ್ಯಸನಿಗಳನ್ನು ಯಾವುದೇ ಫಲಾಪೇಕ್ಷೆಯಿಲ್ಲದೇ ಧರ್ಮಸ್ಥಳ ಧರ್ಮಾಧಿಕಾರಿಗಳು ವಿಶೇಷ ಶಿಬಿರಗಳನ್ನು ಆಯೋಜಿಸಿ ಕಾಪಾಡು ತ್ತಿರುವುದಕ್ಕೆ ಚಿರಋಣಿ ಎಂದು ಹೇಳಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ನಗರಸಭಾ ಅಧ್ಯಕ್ಷೆ ಸುಜಾತಾ ಶಿವಕುಮಾರ್, ಇಂದಿನ ಸಮಾಜದಲ್ಲಿ ವ್ಯಸನ ಮುಕ್ತರಾಗಲು ಎಲ್ಲರೂ ದೃಢ ಸಂಕಲ್ಪ ಮಾಡಬೇಕು. ನಶೆ ಪದಾರ್ಥಗಳನ್ನು ಸ್ವೀಕರಿಸುವ ಮುನ್ನ ಅದರ ಬಗ್ಗೆ ಯೋಚಿಸಬೇಕು. ಒಂದು ಉತ್ತಮ ಸಮಾಜ ನಿರ್ಮಾಣಕ್ಕೆ ಈ ನಶೆ ಪದಾರ್ಥದಿಂದ ದೂರವಿರಬೇಕು ಎಂದು ಕಿವಿಮಾತು ಹೇಳಿದರು.

ಕಾರ್ಯಕ್ರಮದಲ್ಲಿ ಹಿರೇಕೊಳಲೆ ಸರ್ಕಾರಿ ಶಾಲೆ ಮುಖ್ಯೋಪಾಧ್ಯಾಯ ಅಣ್ಣಾನಾಯ್ಕ್, ಜಿಲ್ಲಾ ಜನ ಜಾಗೃತಿ ಸದಸ್ಯರಾದ ನಾಗರಾಜ್‌ ರಾವ್ ಕಲ್ಕಟ್ಟೆ, ಸಚ್ಚಿದಾನಂದ ನಾಯಕ್, ಜಯಚಂದ್ರ, ನಜ್ಮಾ ಆಲಿ, ಷಡಕ್ಷರಿ, ಅರವಿಂದ್ ದೀಕ್ಷಿತ್, ಮಂಜುನಾಥ್, ಪ್ರಾದೇಶಿಕ ವ್ಯಾಪ್ತಿಯ ಜನ ಜಾಗೃತಿ ಯೋಜನಾಧಿಕಾರಿ ನಾಗರಾಜ್ ಕುಲಾಲ್, ತಾಲೂಕು ಯೋಜನಾಧಿಕಾರಿ ಕೊರಗಪ್ಪ ಪೂಜಾರಿ, ರಮೇಶ್ ನಾಯ್ಕ ಉಪಸ್ಥಿತರಿದ್ದರು.

ಪೋಟೋ ಫೈಲ್‌ ನೇಮ್‌ 10 ಕೆಸಿಕೆಎಂ 2

ಚಿಕ್ಕಮಗಳೂರಿನ ರಾಮನಹಳ್ಳಿ ಸಮೀಪ ಅಂಬೇಡ್ಕರ್ ಸಮುದಾಯ ಭವನದಲ್ಲಿ ಹಮ್ಮಿಕೊಂಡಿದ್ಧ ಗಾಂಧಿಸ್ಮೃತಿ ಮತ್ತು ನವಜೀವನ ಸಮಿತಿ ಸದಸ್ಯರ ಸಮಾವೇಶವನ್ನು ಬಸವತತ್ವ ಪೀಠದ ಶ್ರೀ ಡಾ. ಬಸವ ಮರುಳಸಿದ್ಧ ಸ್ವಾಮೀಜಿ ಉದ್ಘಾಟಿಸಿದರು.

Share this article