ಕನ್ನಡಪ್ರಭ ವಾರ್ತೆ, ತರೀಕೆರೆ
ಅತಿಯಾದ ಬಿಸಿಲಿನಿಂದ ದಿನದಿಂದ ದಿನಕ್ಕೆ ಏರುತ್ತಿರುವ ತಾಪಮಾನ ಮತ್ತು ಕಳೆದ ವರ್ಷ ಸರಿಯಾಗಿ ಬಾರದ ಮಳೆಯಿಂದಾಗಿ ತಾಲೂಕಿನ ಲಿಂಗದಹಳ್ಳಿ ಹೋಬಳಿಯಾದ್ಯಂತ ಇರುವ ಕೆರೆ ಕಟ್ಟೆಗಳು, ಹಳ್ಳ ಕೊಳ್ಳಗಳೆಲ್ಲವೂ ಬತ್ತಿ ಹೋಗಿವೆ. ಸಾಕು ಪ್ರಾಣಿಗಳು ಸೇರಿದಂತೆ ಭದ್ರ ಅಭಯಾರಣ್ಯದ ವನ್ಯ ಪ್ರಾಣಿ ಪಕ್ಷಿಗಳಿಗೆ ಕುಡಿಯುವ ನೀರಿನ ಬರ ಬಂದಿದ್ದು. ಅಭಯಾರಣ್ಯದ ಪ್ರಾಣಿಗಳು ನೀರು ಅರಸಿ ಸನಿಹದ ಗ್ರಾಮಗಳತ್ತ ಬರುತ್ತಿರುವುದು ಸಾಮಾನ್ಯವಾಗಿದೆ. ಇತ್ತೀಚೆಗಷ್ಟೆ ನೀರನ್ನರಸಿ ಬಂದಿದ್ದ ಕಾಡಾನೆ ದಾಳಿಯಿಂದ ವ್ಯಕ್ತಿಯೊಬ್ಬರು ಸಾವನ್ನಪ್ಪಿದ್ದು, ಈ ಘಟನೆಯಿಂದ ಭಯ ಭೀತರಾಗಿರುವ ಗ್ರಾಮಸ್ಥರೆಲ್ಲರೂ ಜೀವ ಭಯದಿಂದಲೇ ಜೀವನ ನಡೆಸುವಂತಾಗಿದೆ ಎಂದು ನಂದಿ ಬಟ್ಟಲು ಗ್ರಾಮಸ್ಥ ಎನ್.ಪಿ. ಕೃಷ್ಣೇಗೌಡ ತಿಳಿಸಿದ್ದಾರೆ. ಇದುವರೆಗೂ ಮಳೆ ಬಾರದಿರುವುದರಿಂದ ಹೋಬಳಿಯಲ್ಲಿರುವ ರೈತರ ಕೊಳವೆ ಬಾವಿಗಳು ಸೇರಿದಂತೆ ತೆರೆದ ಬಾವಿಗಳೆಲ್ಲವೂ ನೀರಿಲ್ಲದೇ ಬತ್ತಿ ಹೋಗಿದ್ದು ಇವುಗಳನ್ನೇ ನಂಬಿ ಅಡಕೆ, ತೆಂಗು, ಬಾಳೆ ಮುಂತಾದ ಬೆಳೆಗಳನ್ನು ಹತ್ತಾರು ವರ್ಷಗಳಿಂದ ಬೆಳೆದಿರುವ ತೋಟದ ಬೆಳೆಗಾರರು ಫಸಲನ್ನಿರಲಿ ಬೆಳೆಗಳನ್ನೇ ಉಳಿಸಿಕೊಳ್ಳಲಾಗದೇ ಕೈಚೆಲ್ಲಿ ಕೂರುವ ಪರಿಸ್ಥತಿ ತಲುಪಿದ್ದಾರೆ ಎಂದು ಹೇಳಿದ್ದಾರೆ.ಲಿಂಗದಹಳ್ಳಿ ಹೋಬಳಿಯಲ್ಲಿ ರೈತರು ಹೆಚ್ಚಾಗಿ ಅಡಕೆ ತೆಂಗು , ಬಾಳೆ ಬೆಳಗಳನ್ನೇ ಬೆಳೆದಿದ್ದು, ಜೋಪಾನ ಮಾಡಿ ಬೆಳೆಸಿರುವ ತೋಟದ ಬೆಳೆಗಳಲ್ಲವೂ ನೀರಿಲ್ಲದೇ ಒಣಗಿ ಹೋಗುತ್ತಿರುವುದರಿಂದ ತೋಟದ ಬೆಳೆಗಳನ್ನು ಬೆಳೆಯಲು ವಿವಿಧ ಬ್ಯಾಂಕುಗಳು ಹಾಗೂ ಸಹಕಾರ ಸಂಘಗಳಿಂದ ಪಡೆದಿರುವ ಲಕ್ಷಾಂತರ ರುಪಾಯಿಗಳಷ್ಟು ಸಾಲ ಮರು ಪಾವತಿಗೂ ತೊಂದರೆ ಎದುರಾಗಿದೆ.
ಜೊತೆಗೆ ಕಾಡಾನೆ ಸೇರಿದಂತೆ ಕಾಡು ಪ್ರಾಣಿಗಳು ನೀರನ್ನರಸಿ ಗ್ರಾಮಗಳತ್ತ ಬರುತ್ತಿದ್ದು ಅಡಕೆ , ತೆಂಗು , ಬಾಳೆ ತೋಟ ಹಾಗೂ ಅಲ್ಲಿ ಅಳವಡಿಸಲಾಗಿರುವ ಕೊಳವೆ ಬಾವಿಗಳ ಮೊಟಾರ್ ಪೈಪುಗಳನ್ನು ತುಳಿದು ಹಾಳು ಗೆಡವುತ್ತಿರುವುದರಿಂದ ರೈತರ ಸಂಕಷ್ಟ ಹೇಳತೀರದಾಗಿದೆ ಎಂದು ತಿಗಡ ಗ್ರಾಮ ಪಂಚಾಯಿತಿ ಸದಸ್ಯ ತಣಿಗೆ ಬೈಲು ರಮೇಶ್ ಗೋವಿಂದೇಗೌಡ ತಿಳಿಸಿದ್ದಾರೆ. ಇದುವರೆಗೂ ಬಾರದ ಮಳೆಯಿಂದಾಗಿ ಶ್ರೀ ಕ್ಷೇತ್ರ ಕಲ್ಲತ್ತಿಗಿರಿಯಲ್ಲಿರುವ ಕಲ್ಲತ್ತಿಗಿರಿ ಜಲಪಾತ ನೀರಿಲ್ಲದೆ ಒಣಗಿಹೋಗಿದೆ.15ಕೆಟಿಆರ್.ಕೆ.1ಃ ಲಿಂಗದಹಳ್ಳಿ ಹೋಬಳಿ ವ್ಯಾಪ್ತಿಯಲ್ಲಿ ನೀರಿಲ್ಲದೇ ಒಣಗಿ ಹೋಗುತ್ತಿರುವ ಅಡಕೆ ಮರಗಳು.