ಕನ್ನಡಪ್ರಭ ವಾರ್ತೆ ವಿರಾಜಪೇಟೆ
ವಿರಾಜಪೇಟೆ ತಾಲೂಕಿನ ಆರ್ಜಿ ಗ್ರಾಮ ಪಂಚಾಯತಿ ವ್ಯಾಪ್ತಿಯ ತೆರ್ಮೆಕಾಡ್ ಪೈಸಾರಿ ಸರ್ವೆ ಸಂಖ್ಯೆ 315/1ಪಿ1 ರಸ್ತೆಯ ಅಂಚಿನಲ್ಲಿರುವ ಅಪಾಯಕ್ಕೆ ಕಾದಿರುವ ಒಣ ಮರ ತೆರವುಗೊಳಿಸುವಂತೆ ಗ್ರಾಮ ಪಂಚಾಯತಿ ಮನವಿ ಮಾಡಿದರು ಅರಣ್ಯ ಇಲಾಖೆ ಮೌನ ವಹಿಸಿದೆ.ಮರವು ಯಾವುದೇ ಕ್ಷಣದಲ್ಲಿ ಬೀಳುವ ಹಂತದಲ್ಲಿದೆ. ನೂರಾರು ಮಂದಿ ಸಾರ್ವಜನಿಕರು ದಿನನಿತ್ಯ ಈ ಮಾರ್ಗದಲ್ಲಿ ಸಂಚರಿಸುತ್ತಾರೆ. ಅಲ್ಲದೆ ೧೧ ಕೆ.ವಿ. ವಿದ್ಯುತ್ ಮಾರ್ಗ ಇದೇ ಭಾಗದಲ್ಲಿ ಸಾಗಿದೆ. ಸನಿಹದಲ್ಲಿ ಮೊರಾರ್ಜಿ ದೇಸಾಯಿ ವಸತಿ ಶಾಲೆ ಮತ್ತು ಎ.ಎನ್.ಎಫ್ ಸಂಸ್ಥೆಗಳು ಕಾರ್ಯ ನಿರ್ವಹಿಸುತ್ತಿದೆ.
ಸುಮಾರು ಎಂಟು ತಿಂಗಳ ಹಿಂದೆ ಗ್ರಾಮಸ್ಥರು ಒಣಕಲು ಮರವನ್ನು ತೆರವುಗೊಳಿಸುವಂತೆ ಆರ್ಜಿ ಗ್ರಾಮ ಪಂಚಾಯತಿ ಗೆ ಮನವಿ ಮಾಡಿದ್ದರು. ಅರಣ್ಯ ಇಲಾಖೆಯ ಸ್ವಾಧಿನದಲ್ಲಿ ಇರುವ ಅರಣ್ಯ ಪ್ರದೇಶದ ಅಂಚಿನಲ್ಲಿ ಇರುವ ಕಾರಣದಿಂದ ಅರಣ್ಯ ಇಲಾಖೆಗೆ ದಿನಾಂಕ ೦೬-೧೦-೨೦೨೩ ರಲ್ಲಿ ಗ್ರಾಮ ಪಂಚಾಯತಿ ಪತ್ರ ಬರೆದು ಮರ ತೆರುವುಗೊಳಿಸುವಂತೆ ಪತ್ರ ಕೋರಿತ್ತು.ಗ್ರಾಮ ಪಂಚಾಯತಿ ಮನವಿಗೆ ಅರಣ್ಯ ಇಲಾಖೆ ಸ್ಪಂದಿಸಲಿಲ್ಲ. ಕೆಲವು ತಿಂಗಳು ಕಳೆದ ನಂತರದಲ್ಲಿ ಗ್ರಾಮಸ್ಥರು ಅರಣ್ಯ ಇಲಾಖೆಗೆ ಮರ ತೆರುವುಗೊಳಿಸುವಂತೆ ಮನವಿ ಮಾಡಿದ್ದರು. ಒಣಕಲು ಮರ ಸಾರ್ವಜನಿಕ ಬಲಿಗಾಗಿ ಕಾಯುತಿರುವಂತಿದೆ.
ಈ ಕುರಿತು ಪ್ರತಿಕ್ರಿಯೆ ನೀಡಿರುವ ಆರ್ಜಿ ಗ್ರಾಮ ಪಂಚಾಯತಿ ಉಪಾಧ್ಯಕ್ಷೆ ಕವಿತ ಎಚ್.ಕೆ., ಈ ಮಾರ್ಗವಾಗಿ ಕಂಡಿಮಕ್ಕಿ ಮತ್ತು ತೆರ್ಮೆಕಾಡು ಪೈಸಾರಿಗೆ ತೆರಳುವ ನೂರಾರು ಸಂಖ್ಯೆಯಲ್ಲಿ ಗ್ರಾಮಸ್ಥರು ಇದ್ದಾರೆ. ಶಾಲಾ ಕಾಲೇಜುಗಳಿಗೆ ತೆರಳುವ ವಿದ್ಯಾರ್ಥಿಗಳಿದ್ದಾರೆ. ಅರಣ್ಯ ಪ್ರದೇಶದ ಅಂಚಿನಲ್ಲಿ ಒಣಕಲು ಮರಗಳಿವೆ. ಒಣಕಲು ಮರಗಳಿಂದ ಅಪಾಯವೇ ಹೆಚ್ಚು, ಸನಿಹದಲ್ಲಿ ವಿದ್ಯುತ್ ತಂತಿ ಹಾದುಹೋಗಿದೆ. ಗ್ರಾಮಸ್ಥರು ಮರ ತೆರವುಗೊಳಿಸಿ ಎಂದು ಪಂಚಾಯತಿಗೆ ಮನವಿ ಮಾಡಿದ್ದರು, ಅರಣ್ಯ ಇಲಾಖೆಯ ಗಮನಕ್ಕೆ ತರುತ್ತೆವೆ ಎಂದು ತಿಳಿಸಲಾಯಿತು. ನಂತರ ಇಲಾಖೆಗೆ ಮರ ತೆರುವುಗೊಳಿಸುವಂತೆ ಮನವಿ ಪತ್ರ ಸಲ್ಲಿಸಿ ಎಂಟು ತಿಂಗಳು ಕಳೆದರೂ ಇಂದಿನವರೆಗೂ ಇಲಾಖೆಯಿಂದ ಮರ ತೆರವುಗೊಳಿಸಿರುವುದಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.ಮಳೆಗಾಲದ ವೇಳೆ ಮರ ತೆರವುಗೊಳಿಸದೆ ಇದ್ದಲ್ಲಿ ಅನಾಹುತ ಎದುರಾಗಬಹುದು ಎಂದು ಅರಣ್ಯ ಇಲಾಖೆಯ ಕಾರ್ಯವೈಖರಿ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ.