ಪವನಕುಮಾರ ಲಮಾಣಿ
ಎಲ್ಲೆಡೆ ಬಿಸಿಲಿನ ಜಳ ಹೆಚ್ಚುತ್ತಿದ್ದು, ಕುಡಿಯುವ ನೀರಿನ ಬವಣೆಯಿಂದ ಜನ ತತ್ತರಿಸುತ್ತಿದ್ದಾರೆ. ಪಟ್ಟಣದ ನಿವಾಸಿಗಳಿಗೆ 15 ದಿನಗಳಿಗೆ ಒಮ್ಮೆಯೂ ನೀರು ಸಿಗದಂತಾಗಿದ್ದು, ಗ್ರಾಮೀಣ ಭಾಗದ ಜನರು ನೀರಿಗಾಗಿ ಪರದಾಡುವಂತಾಗಿದೆ. ಇನ್ನು ಜಾನುವಾರುಗಳಿಗಂತೂ ನೀರಿಗಾಗಿ ಹುಡುಕಿಕೊಂಡು ಹೋಗುವ ಪರಿಸ್ಥಿತಿ ನಿರ್ಮಾಣವಾಗಿದೆ.
ತಾಲೂಕಿನಲ್ಲಿ ಕುಡಿಯುವ ನೀರಿನ ಬವಣೆ ಎಲ್ಲೆಡೆ ಕಾಣಿಸಿಕೊಂಡಿದೆ. ಆದರೆ, ಅಧಿಕಾರಿಗಳು ಯಾವುದೇ ರೀತಿ ಕ್ರಮಕ್ಕೆ ಮುಂದಾಗದೆ ಚುನಾವಣೆ ಕರ್ತವ್ಯದಲ್ಲೇ ನಿರತರಾಗಿದ್ದು, ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ. ನಗರ ಪ್ರದೇಶಗಳಲ್ಲಿ ೧೫ರಿಂದ ೨೦ ದಿನಗಳ ವರೆಗೂ ನೀರು ಸಿಗುವುದು ವಿರಳವಾಗಿದೆ ಎನ್ನುತ್ತಾರೆ ನಗರ ನಿವಾಸಿ ಮುಜಾಯಿದ್ ಖಾನ್ ಐರಾಣಿ.ವರದಾ ನದಿ ಬತ್ತಿ ಎರಡು ತಿಂಗಳಾಗಿದ್ದು, ಕೆರೆಕಟ್ಟೆಗಳು ಬರಡಾಗಿವೆ. ಪಟ್ಟಣದ ಪುರಾತನ ಮೋತಿ ತಲಾಬ್ ಕೂಡ ಬತ್ತುತ್ತಿದೆ. ಕೆರೆ ತುಂಬಿಸುವ ಯೋಜನೆ ಮಾಡಿದ್ದರೂ ಅಧಿಕಾರಿಗಳ ನಿರ್ಲಕ್ಷ್ಯದಿಂದ ಕೆರೆಗಳು ಬರಡಾಗಿವೆ. ಇದರಿಂದ ವೀಳ್ಯದೆಲೆ ತೋಟಗಳು ಕೆಂಪಗಾಗುತ್ತಿವೆ. ಹೀಗಾಗಿ, ಬಡ ಕೂಲಿ ಕಾರ್ಮಿಕರು ಗುಳೆ ಹೋಗುತ್ತಿದ್ದಾರೆ. ಗುಳೆ ತಡೆಯುವ ಯಾವ ಕಾರ್ಯವೂ ಆಗುತ್ತಿಲ್ಲ ಎಂದು ಅನೇಕರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಇನ್ನೂ ಎರಡು ತಿಂಗಳ ಕಾಲ ಬೇಸಿಗೆಯಲ್ಲಿ ಕುಡಿಯುವ ನೀರನ್ನು ಹೇಗೆ ಪೂರೈಸುತ್ತಾರೆ ಎಂಬುದು ಸಾರ್ವಜನಿಕರ ಪ್ರಶ್ನೆಯಾಗಿದೆ.
ಬೇಸಿಗೆಯಲ್ಲಿ ನೀರಿನ ಅಭಾವ ಅತಿ ಹೆಚ್ಚು ಕಂಡುಬಂದಿದೆ. ಪ್ರಾಣಿ ಪಕ್ಷಿಗಳಿಗೆ ನೈಸರ್ಗಿಕವಾಗಿ ನೀರು ಸಿಗುತ್ತಿಲ್ಲ. ತಾಲೂಕಿನ ಜನರು ಹಾಗೂ ಪ್ರಾಣಿ, ಪಕ್ಷಿಗಳು ಬಿಸಿಲಿನ ಜಳಕ್ಕೆ ತತ್ತರಿಸಿ ಹೋಗಿದ್ದಾರೆ. ತಾಲೂಕಿನಲ್ಲಿ ದಿನದಿಂದ ದಿನಕ್ಕೆ ಏರುತ್ತಿರುವ ತಾಪಮಾನದಿಂದ ನದಿ ಕೆರೆಗಳು ಬತ್ತಿ ಹೋಗಿವೆ. ೧೯ ಗ್ರಾಮ ಪಂಚಾಯಿತಿಗಳಲ್ಲಿ ಈಗಾಗಲೇ ನೀರಿನ ಬವಣೆ ಎದ್ದು ಕಾಣುತ್ತಿದೆ. ಕಿಮೀ ದೂರದ ರೈತರ ಬೋರ್‌ವೆಲ್‌ಗಳಿಂದ ನೀರನ್ನು ತರುವ ಸ್ಥಿತಿ ಎದುರಾಗಿದೆ. ಅಧಿಕಾರಿಗಳು ಕುಡಿಯುವ ನೀರು ಸರಿಯಾಗಿ ಪೂರೈಸಲು ಕ್ರಮ ಕೈಗೊಳ್ಳದ ಕಾರಣ ಇಚ್ಚಂಗಿ ಗ್ರಾಮ ಪಂಚಾಯತಿ ಕೆಲ ಸದಸ್ಯರು ರಾಜೀನಾಮೆ ನೀಡಲು ಮುಂದಾಗಿರುವ ಘಟನೆಯೂ ನಡೆದಿದೆ.
ಬಯಲು ಸೀಮೆಯಾದ ನಮ್ಮ ತಾಲೂಕಿನಲ್ಲಿ ಅನೇಕ ಕೆರೆಗಳು ಬತ್ತಿದ್ದು, ಅಂತರ್ಜಲ ಮಟ್ಟ ಬಹಳಷ್ಟು ಕೆಳಮಟ್ಟದಲ್ಲಿದೆ. ದನಕರುಗಳಿಗೆ ನೀರು ಸಿಗುತ್ತಿಲ್ಲ. ಹಾಗಾಗಿ ಜಿಲ್ಲಾಡಳಿತ ಹಾಗೂ ತಾಲೂಕು ಆಡಳಿತ ಕ್ರಮವಹಿಸಬೇಕು ಎಂದು ಶಿರಬಡಗಿ ಗ್ರಾಪಂ ಸದಸ್ಯರಾದ ತುಕಾರಾಮ ಮಹದೇವಪ್ಪ ನಾಯಕ್ ಹೇಳಿದರು.
ಮಹಮ್ಮದ್ ಖಿಜರ್, ಸವಣೂರು ಉಪವಿಭಾಗಾಧಿಕಾರಿ