ಕನ್ನಡಪ್ರಭ ವಾರ್ತೆ, ತುಮಕೂರು
ಜಾತ್ಯತೀತ ಜನತಾದಳ ಸ್ಥಾಪನೆಯಾಗಿ 25 ವರ್ಷ ತುಂಬಿದ ಸಂದರ್ಭದಲ್ಲಿ ಪಕ್ಷದ ಕಚೇರಿ ಬೆಂಗಳೂರಿನ ಜೆ.ಪಿ. ಭವನದಲ್ಲಿ ಈ ತಿಂಗಳ 21 ಮತ್ತು 22ರಂದು ಬೆಳ್ಳಿಹಬ್ಬ ಆಚರಣಾ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ರಾಜ್ಯದಲ್ಲಿ ಪ್ರಾದೇಶಿಕ ಪಕ್ಷವೊಂದು ಬೆಳ್ಳಿಹಬ್ಬ ಆಚರಿಸುತ್ತಿರುವುದು ಇದೇ ಮೊದಲು. ಈ ಸಂದರ್ಭದಲ್ಲಿ ನಮ್ಮ ಜೆಡಿಎಸ್ ಪಕ್ಷವನ್ನು ಮತ್ತಷ್ಟು ಬಲಾಢ್ಯವಾಗಿ ಸಂಘಟಿಸಲು ಕಾರ್ಯಕರ್ತರು ಸಂಕಲ್ಪ ಮಾಡಬೇಕು ಎಂದು ಜಿಲ್ಲಾ ಜೆಡಿಎಸ್ ಅಧ್ಯಕ್ಷ ಆರ್.ಸಿ.ಆಂಜನಪ್ಪ ಮನವಿ ಮಾಡಿದರು.ನಗರದ ಪಕ್ಷದ ಕಚೇರಿಯಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಪಕ್ಷದ ಸಂಸ್ಥಾಪಕರು, ಮಾಜಿ ಪ್ರಧಾನಿಗಳೂ ಆದ ಎಚ್.ಡಿ.ದೇವೇಗೌಡರ ಅವಿರತ ಪರಿಶ್ರಮ ಮತ್ತು ದಣಿವರಿಯದ ನಾಯಕತ್ವವು ಜೆಡಿಎಸ್ 25 ವರ್ಷ ಪೂರೈಸಲು ಕಾರಣವಾಗಿದೆ. ಮಾಜಿ ಮುಖ್ಯಮಂತ್ರಿ, ಹಾಲಿ ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿಯವರ ನೇತೃತ್ವವು ಪಕ್ಷವು ಮತ್ತಷ್ಟು ಬೇರೂರುವಂತೆ ಮಾಡಿತು ಎಂದು ಹೇಳಿದರು.
ಕುಮಾರಸ್ವಾಮಿಯವರು ಜನಾನುರಾಗಿ ಮುಖ್ಯಮಂತ್ರಿಯಾಗಿ ರೈತರ, ಮಹಿಳೆಯರ ಹಾಗೂ ಯುವಕರ ಆಶಾಕಿರಣವಾಗಿ ಸೇವೆ ಸಲ್ಲಿಸಿದರು. ಅನೇಕ ಸವಾಲುಗಳನ್ನು ಎದುರಿಸಿ, ಅನೇಕ ರಾಜಕೀಯ ಕುತಂತ್ರಗಳನ್ನು ಮೆಟ್ಟಿನಿಂತು ಪಕ್ಷವನ್ನು ಮತ್ತಷ್ಟು ಬಲಪಡಿಸಿದರು ಎಂದರು.ಮಾಜಿ ಶಾಸಕ ಕೆ.ಎಂ. ತಿಮ್ಮರಾಯಪ್ಪ ಮಾತನಾಡಿ, ಜೆಡಿಎಸ್‌ನ ಬೆಳ್ಳಿಹಬ್ಬ ಆಚರಣೆ ಅಂಗವಾಗಿ ಡಿಸೆಂಬರ್ 1ರಿಂದ 15ರವರೆಗೆ ರಾಜ್ಯದ ಎಲ್ಲಾ ಜಿಲ್ಲಾ ಕೇಂದ್ರಗಳು ಮತ್ತು ವಿಧಾನಸಭಾ ಕ್ಷೇತ್ರಗಳಲ್ಲಿ ಪ್ರದರ್ಶಿನಿಗಳು ಹಾಗೂ ಕಾರ್ಯಕರ್ತರ ಸಭೆ ಹಮ್ಮಿಕೊಳ್ಳಲಾಗಿದೆ. ಮುಂದಿನ ದಿನದಲ್ಲಿ ಬೃಹತ್ ಕಾರ್ಯಕರ್ತರ ಬೃಹತ್ ಸಮಾವೇಶ ಏರ್ಪಡಿಸಲು ಉದ್ದೇಶಿಸಲಾಗಿದೆ ಎಂದರು.
ಗುಬ್ಬಿ ಮುಖಂಡ ನಾಗರಾಜು ಮಾತನಾಡಿ, ಪಕ್ಷದ ರಜತಮಹೋತ್ಸವವು 25 ವರ್ಷಗಳ ನಮ್ಮ ನಿರಂತರ ಹೋರಾಟ ಮತ್ತು ಆಡಳಿತ ಸಾಧನೆ ಸಂಭ್ರಮಿಸುವ ಸಮಯ. ಈ ಸಂಭ್ರಮದಲ್ಲಿ ನಾವೆಲ್ಲರೂ ಭಾಗವಹಿಸುವುದು ಹೆಮ್ಮೆಯ ವಿಷಯ. ಜಿಲ್ಲೆಯಿಂದ ಸಾವಿರಾರು ಕಾರ್ಯಕರ್ತರು ಬೆಳ್ಳಿಹಬ್ಬ ಆಚರಣೆ ಸಮಾರಂಭದಲ್ಲಿ ಭಾಗವಹಿಸುವರು ಎಂದು ಹೇಳಿದರು.ಜಿಲ್ಲಾ ಜೆಡಿಎಸ್ ಕಾರ್ಯಾಧ್ಯಕ್ಷ ಟಿ.ಆರ್.ನಾಗರಾಜು, ಮುಖಂಡರಾದ ಸೋಲಾರ್ ಕೃಷ್ಣಮೂರ್ತಿ, ಆರ್.ಉಗ್ರೇಶ್, ಮುದಿಮಡು ರಂಗಶಾಮಯ್ಯ, ಹೆಬ್ಬೂರು ರಾಮಣ್ಣ, ಯೋಗಾನಂದಕುಮಾರ್, ಗಂಗಣ್ಣ, ಭೈರೇಶ್, ಎಸ್.ಡಿ.ಕೃಷ್ಣಪ್ಪ, ಲೀಲಾವತಿ, ರಂಗನಾಥ್, ಸೊಗಡು ವೆಂಕಟೇಶ್, ಕೆಂಪರಾಜು, ಲಕ್ಷö್ಮಮ್ಮ, ಮಧುಗೌಡ, ಆಂಜನಪ್ಪ, ರಾಧಾ, ಯಶೋಧ ಮೊದಲಾದವರು ಭಾಗವಹಿಸಿದ್ದರು.