ಹಿಂದುಳಿದವರಿಗೆ ವಸತಿ ಯೋಜನೆ ಜಾರಿಗೊಳಿಸುವಂತೆ ಡಿಎಸ್‌ಎಸ್ ಆಗ್ರಹ

KannadaprabhaNewsNetwork | Published : Dec 28, 2023 1:45 AM

ಸಾರಾಂಶ

ಹಿಂದುಳಿದ ಮತ್ತು ಅಲ್ಪಸಂಖ್ಯಾತರಿಗೆ ವಸತಿ ಸೌಲಭ್ಯ ಕಲ್ಪಿಸಲು ಜಿಲ್ಲಾಡಳಿತಕ್ಕೆ ಮನವಿ.

ಹರಿಹರ: ತಾಲೂಕಿನ ಭಾನುವಳ್ಳಿ ಮತ್ತು ಕಡ್ಲೆಗೊಂದಿ ಗ್ರಾಮದಲ್ಲಿ ಮಾದಿಗ ಹಾಗೂ ಹಿಂದುಳಿದ ಜನಾಂಗದವರಿಗೆ ವಸತಿ ಯೋಜನೆ ಜಾರಿಗೊಳಿಸಲು ಆಗ್ರಹಿಸಿ ದಲಿತ ಸಂಘರ್ಷ ಸಮಿತಿ (ಪ್ರೊ.ಬಿ.ಕೃಷ್ಣಪ್ಪ ಸ್ಥಾಪಿತ) ನೇತೃತ್ವದಲ್ಲಿ ನಿರ್ವಸತಿಕರು ನಗರದ ತಾಲೂಕು ಕಚೇರಿ ಎದುರು ಅನಿರ್ದಿಷ್ಟಾವಧಿ ಧರಣಿ ಸತ್ಯಾಗ್ರಹ ಆರಂಭಿಸಿದರು.

ಫಕೀರಸ್ವಾಮಿ ಮಠದಿಂದ ಮೆರವಣಿಗೆ ಮೂಲಕ ತಾಲೂಕು ಕಚೇರಿಗೆ ಆಗಮಿಸಿದ ಪ್ರತಿಭಟನಾಕಾರರು ತಹಸೀಲ್ದಾರ್ ಗುರುಬಸವರಾಜ್ ಅವರಿಗೆ ಮನವಿ ನೀಡಿ ನಂತರ ನಡೆದ ಸಭೆಯಲ್ಲಿ ದಸಂಸ ತಾಲೂಕು ಸಂಚಾಲಕ ಪಿ.ಜೆ.ಮಹಾಂತೇಶ್ ಮಾತನಾಡಿ, ತಾಲೂಕಿನ ಭಾನುವಳ್ಳಿ ಗ್ರಾಮದಲ್ಲಿ ಅಂದಾಜು 260 ಮಾದಿಗ ಸಮಾಜದ ಕುಟುಂಬಸ್ಥರು ಅತ್ಯಂತ ಚಿಕ್ಕ ಗುಡಿಸಲು, ನೆರಿಕೆ ಮನೆಗಳಲ್ಲಿ ಅನಾರೋಗ್ಯಕರ ವಾತಾವರಣದಲ್ಲಿ ದಶಕಗಳಿಂದ ವಾಸ ಮಾಡುತ್ತಿದ್ದಾರೆ.

ಗ್ರಾಮದ ಸರ್ವೆ ನಂ.೨೩೯/೨೨ರಲ್ಲಿ ೨-೨೭ ಎಕರೆ ಎಕೆ ಸರ್ವೀಸ್ ಇನಾಂ ಜಮೀನಿನಲ್ಲಿ ಸದರಿ ಕುಟುಂಬಗಳಿಗೆ ವಸತಿ ಸೌಲಭ್ಯ ಒದಗಿಸಲು ಆಗ್ರಹಿಸಿ ಸಂಘಟನೆಯಿಂದ ಜೂನ್‌ನಲ್ಲಿ ಭಾನುವಳ್ಳಿಯಿಂದ ಹರಿಹರದವರೆಗೆ ಪಾದಯಾತ್ರೆ ಮಾಡಿ ತಾಲೂಕು ಆಡಳಿತಕ್ಕೆ ಮನವಿ ನೀಡಲಾಗಿತ್ತು. ಆಗಿನ ತಹಸೀಲ್ದಾರರು ತಿಂಗಳಲ್ಲಿ ಸಮಸ್ಯೆ ಪರಿಹರಿಸುವುದಾಗಿ ನೀಡಿದ ಭರವಸೆ ಈವರೆಗೂ ಈಡೇರಿಲ್ಲ.

ಇದೆ ರೀತಿ ತಾಲೂಕಿನ ಕಡ್ಲೆಗೊಂದಿ ಗ್ರಾಮದಲ್ಲಿ ಮಾದಿಗ ಹಾಗೂ ಹಿಂದುಳಿದ ಸಮುದಾಯದ 120ಕ್ಕೂ ಹೆಚ್ಚು ಕುಟುಂಬಗಳು ಲಭ್ಯವಿರುವ ಕೇವಲ ೩೦ ಚಿಕ್ಕ ಗುಡಿಸಲು, ನೆರಿಕೆ ಮನೆಗಳಲ್ಲಿ ಅನಾಗರಿಕ ವಾತಾವರಣದಲ್ಲಿ ಬದುಕುತ್ತಿದ್ದಾರೆ.

ಗ್ರಾಮದ ಸರ್ವೆ ನಂ.೩೭ರಲ್ಲಿ ಎಂಟು ಎಕರೆ ಸರ್ಕಾರಿ ಜಮೀನು ಇದ್ದು, ಇದರಲ್ಲಿ ಕಸ ವಿಲೆವಾರಿಗೆ 2 ಎಕರೆ, ರುದ್ರ ಭೂಮಿಗೆ 2 ಎಕರೆ ಜಮೀನು ನೀಡಲಾಗಿದ್ದು, ಇನ್ನೂ 4 ಎಕರೆ ಸರ್ಕಾರಿ ಜಮೀನು ಲಭ್ಯವಿದ್ದು, ಆ ಜಮೀನಿನಲ್ಲಿ ನಿರ್ವಸತಿಕರಿಗೆ ವಸತಿ ಯೋಜನೆ ಜಾರಿ ಮಾಡಬಹುದಾಗಿದೆ.

ಎಲ್ಲರಿಗೂ ಸೂರು ಎಂಬ ಸರ್ಕಾರಗಳ ಘೋಷಣೆಯು ಪುಸ್ತಕಕ್ಕೆ ಸೀಮಿತವಾಗದೆ ಅದು ಜಾರಿಯಾಗಬೇಕು. ಈ ಎರಡೂ ಗ್ರಾಮಗಳ ನಿರ್ವಸತಿಕರಿಗೆ ವಸತಿ ಯೋಜನೆ ಘೋಷಣೆ ಮಾಡುವವರೆಗೆ ಧರಣಿ ಮುಂದುವರೆಸಲಾಗುವುದೆಂದರು.

ಭಾನುವಳ್ಳಿ ಗ್ರಾಮದ ಚೌಡಪ್ಪ ಸಿ., ಹಳದಪ್ಪ ಗುಣಾರಿ, ಲಕ್ಷ್ಮಣ್‌ ವಿ.ಎನ್., ಸುಶೀಲಮ್ಮ ತೆಲಗಿ, ಹನುಮಕ್ಕ ಮಾಗೋಡು, ಧೂಳೆಹೊಳೆ ಮಲ್ಲಮ್ಮ, ನೇತ್ರಮ್ಮ, ಶ್ಯಾಮಕ್ಕ, ಶೇಖರಮ್ಮ, ಕಡ್ಲೆಗೊಂದಿ ಗ್ರಾಮದ ಗ್ರಾಪಂ ಸದಸ್ಯ ತಿಮ್ಮಣ್ಣ, ಹನುಮಂತಪ್ಪ ಕೆ.ಎಲ್., ತಿಮ್ಮಪ್ಪ, ರಂಗಪ್ಪ, ಪರಮೇಶ್, ಬಸವರಾಜ್, ಕೆ.ಆರ್.ಉಮೇಶ್, ರೇಣುಕಮ್ಮ, ಸೀತಮ್ಮ, ಮಲ್ಲಮ್ಮ, ಮೈಲಮ್ಮ ಹಗೂ ಇತರರಿದ್ದರು.

Share this article