ಮೀಸಲಾತಿ ರಕ್ಷಣೆ, ಹಕ್ಕುಗಳಿಗೆ ಡಿಎಸ್ಸೆಸ್ ಪ್ರತಿಭಟನೆ

KannadaprabhaNewsNetwork |  
Published : Nov 07, 2026, 01:30 AM IST
6ಕೆಡಿವಿಜಿ2-ದಾವಣಗೆರೆ ಜಿಲ್ಲಾಡಳಿತ ಭವನದ ಬಳಿ ಡಿಎಸ್ಸೆಸ್‌ ಜಿಲ್ಲಾ ಘಟಕದಿಂದ ಪ್ರತಿಭಟನೆ ನಡೆಸಿ, ಜಿಲ್ಲಾಧಿಕಾರಿ ಜಿ.ಎಂ.ಗಂಗಾಧರಸ್ವಾಮಿ ಮುಖಾಂತರ ಮುಖ್ಯಮಂತ್ರಿಗಳಿಗೆ ಮನವಿ ಅರ್ಪಿಸಲಾಯಿತು. | Kannada Prabha

ಸಾರಾಂಶ

ಪರಿಶಿಷ್ಟ ಜಾತಿ-ಪಂಗಡಗಳ ಮೀಸಲಾತಿ ಹೆಚ್ಚಳದ ಅನುಮೋದನೆಗೆ ಒತ್ತಾಯಿಸಿ, ಮೀಸಲಾತಿ ರಕ್ಷಣೆ ಹಾಗೂ ಸಾಂವಿಧಾನಿಕ ಹಕ್ಕುಗಳಿಗಾಗಿ ಡಿಎಸ್ಸೆಸ್ ಜಿಲ್ಲಾ ಘಟಕದಿಂದ ನಗರದಲ್ಲಿ ಶುಕ್ರವಾರ ಪ್ರತಿಭಟನೆ ನಡೆಸಲಾಯಿತು.

ಕನ್ನಡಪ್ರಭ ವಾರ್ತೆ ದಾವಣಗೆರೆ

ಪರಿಶಿಷ್ಟ ಜಾತಿ-ಪಂಗಡಗಳ ಮೀಸಲಾತಿ ಹೆಚ್ಚಳದ ಅನುಮೋದನೆಗೆ ಒತ್ತಾಯಿಸಿ, ಮೀಸಲಾತಿ ರಕ್ಷಣೆ ಹಾಗೂ ಸಾಂವಿಧಾನಿಕ ಹಕ್ಕುಗಳಿಗಾಗಿ ಡಿಎಸ್ಸೆಸ್ ಜಿಲ್ಲಾ ಘಟಕದಿಂದ ನಗರದಲ್ಲಿ ಶುಕ್ರವಾರ ಪ್ರತಿಭಟನೆ ನಡೆಸಲಾಯಿತು.

ನಗರದ ಜಿಲ್ಲಾಡಳಿತ ಭವನದ ಬಳಿಯ ವೃತ್ತದಿಂದ ತಮ್ಮ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಡಿಎಸ್ಸೆಸ್ ಜಿಲ್ಲಾ ಸಂಚಾಲಕ ಕುಂದುವಾಡ ಮಂಜುನಾಥ ಇತರರ ನೇತೃತ್ವದಲ್ಲಿ ಪ್ರತಿಭಟನಾ ಮೆರವಣಿಗೆ ನಡೆಸಿದ ಮುಖಂಡರು, ಕಾರ್ಯಕರ್ತರು ನಂತರ ಜಿಲ್ಲಾಡಳಿತ ಭವನಕ್ಕೆ ತೆರಳಿ, ಜಿಲ್ಲಾಧಿಕಾರಿ ಜಿ.ಎಂ.ಗಂಗಾಧರಸ್ವಾಮಿ ಮುಖಾಂತರ ಮುಖ್ಯಮಂತ್ರಿಗೆ ಮನವಿ ಸಲ್ಲಿಸಿದರು.

ಇದೇ ವೇಳೆ ಮಾತನಾಡಿದ ಕುಂದುವಾಡ ಮಂಜುನಾಥ, ಪರಿಶಿಷ್ಟರ ಮೀಸಲಾತಿಯನ್ನು ಶೇ.6ಕ್ಕೆ ಹೆಚ್ಚಿಸಿ ಹಿಂದಿನ ಬಸವರಾಜ ಬೊಮ್ಮಾಯಿ ನೇತೃತ್ವದ ಸರ್ಕಾರ ಹೊರಡಿಸಿದ್ದ ಅಧಿಸೂಚನೆಯನ್ನು ಹೈಕೋರ್ಟ್ ರದ್ಧುಪಡಿಸಿದೆ. ಆ ತೀರ್ಪನ್ನು ಪ್ರಶ್ನಿಸಿ, ರಾಜ್ಯ ಸರ್ಕಾರವು ಸುಪ್ರೀಂ ಕೋರ್ಟ್‌ಗೆ ಮೇಲ್ಮನವಿ ಸಲ್ಲಿಸಬೇಕು. ಪ್ರಧಾನಿ ನರೇಂದ್ರ ಮೋದಿ ಬಳಿ ಸರ್ವ ಪಕ್ಷಗಳ ನಿಯೋಗವನ್ನು ಕೊಂಡೊಯ್ಯಬೇಕು ಎಂದು ಒತ್ತಾಯಿಸಿದರು.

ಸಂವಿಧಾನಿಕ 9ನೇ ಶೆಡ್ಯೂಲ್‌ಗೆ ಸೇರ್ಪಡೆ ಮಾಡಿ, ಮೀಸಲಾತಿಗೆ ಕಾನೂನು ರಕ್ಷಣೆ ನೀಡುವಂತೆ ಪ್ರಧಾನಿ ಮೇಲೆ ಸರ್ವ ಪಕ್ಷಗಳ ನಿಯೋಗದ ಮೂಲಕ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಒತ್ತಡ ಹೇರಬೇಕು. ಎಸ್‌ಸಿ-ಎಸ್‌ಟಿ ಜನಸಂಖ್ಯೆಗೆ ಅನುಗುಣವಾಗಿ ಈಗಿರುವ ಮೀಸಲಾತಿ ಪ್ರಮಾಣ ಹೆಚ್ಚಿಸುವಂತೆ ಹಿಂದೆ ಬಸವರಾಜ ಬೊಮ್ಮಾಯಿ ಸಿಎಂ ಆಗಿದ್ದಾಗ ರಾಜನಹಳ್ಳಿ ಶ್ರೀ ವಾಲ್ಮೀಕಿ ಗುರುಪೀಠದ ಶ್ರೀ ಪ್ರಸನ್ನಾನಂದ ಪುರಿ ಸ್ವಾಮೀಜಿ ನೇತೃತ್ವದಲ್ಲಿ ದಲಿತ ಪರ ಸಂಘಟನೆಗಳು ಜಂಟಿಯಾಗಿ ಬೆಂಗಳೂರಿನಲ್ಲಿ ಸುಧೀರ್ಫ ಹೋರಾಟ ನಡೆಸಿದ್ದರು ಎಂದು ಅವರು ತಿಳಿಸಿದರು.

ಹೋರಾಟಕ್ಕೆ ಮಣಿದ ಬೊಮ್ಮಾಯಿ ಸರ್ಕಾರವು ನ್ಯಾ.ಎಚ್.ಎನ್.ನಾಗಮೋಹನ ದಾಸ್‌ ಆಯೋಗದ ಸಮೀಕ್ಷಾ ವರದಿ ಆದರಿಸಿ, ಹಿಂದುಳಿದ ವರ್ಗ ಒಳಗೊಂಡು ಕರ್ನಾಟಕ ಅನುಸೂಚಿತ ಜಾತಿಗಳು ಮತ್ತು ಅನುಸೂಚಿತ ಪಂಗಡಗಳು(ಶೈಕ್ಷಣಿಕ ಸಂಸ್ಥೆಗಳಲ್ಲಿನ ನೇಮಕಾತಿ ಅಥವಾ ರಾಜ್ಯಾಧೀನ ಸೇವೆಗಳಲ್ಲಿ ನೇಮಕಾತಿ) ಮೀಸಲಾತಿ ಆದೇಶ 2022ನ್ನು ಪ್ರಸ್ತುತ ಇದ್ದ ಪರಿಶಿಷ್ಟ ಜಾತಿಯ 101 ಜಾತಿಗಳ ಮೀಸಲಾತಿ ಪ್ರಮಾಣ ಶೇ.15+2=17 ಹಾಗೂ ಪರಿಶಿಷ್ಟ ಪಂಗಡಗಳ ಶೇ.3+3=6 ಒಟ್ಟು ಶೇ.6 ಹೆಚ್ಚಿಸಿ, ಪ್ರಸ್ತುತ ಇದ್ದ ಮೀಸಲಾತಿ ಪ್ರಮಾಣ 50+6=56ಕ್ಕೆ ಹೆಚ್ಚಿಸಿ, 12.1.2023ರಂದು ಜಾರಿಗೆ ತಂದು, ಗೆಜೆಟ್ ಅಧಿಸೂಚನೆ ಹೊರಡಿಸಿತ್ತು ಎಂದು ಅವರು ವಿವರಿಸಿದರು.

ಆದರೆ, ಶೇ.50ರಿಂದ ಶೇ.56ಕ್ಕೆ ಹೆಚ್ಚಿಸಿದ ಮೀಸಲಾತಿ ಸಂವಿಧಾನದ ಪರಿಚ್ಛೇದ 14 ಮತ್ತು 15ರ ಉಲ್ಲಂಘನೆಯಾಗಿದೆಯೆಂಬ ಕಾರಣ ನೀಡಿ, ಮೀಸಲಾತಿ ಹೆಚ್ಚಳ ಕಾಯ್ದೆ-2022ನ್ನು ರಾಜ್ಯ ಹೈಕೋರ್ಟ್ 12.10.2026ರಂದು ರದ್ಧುಪಡಿಸಿದೆ. ಕೆಲವರು ಹೈಕೋರ್ಟ್‌ನಲ್ಲಿ ಪಿಐಎಲ್‌ ಸಲ್ಲಿಸಿದ್ದರಿಂದ ಅರ್ಜಿ ವಿಚಾರಣೆ ನಡೆಸಿದ ಹೈಕೋರ್ಟ್‌ನ ವಿಭಾಗೀಯ ಪೀಠವು ಮೀಸಲಾತಿ ಪ್ರಮಾಣ ಶೇ.50ರಿಂದ ಶೇ.56ಕ್ಕೆ ಹೆಚ್ಚಿಸಿ ಹೊರಡಿಸಿದ್ದ ಆದೇಶ ರದ್ಧುಪಡಿಸಿದೆ. ಈ ಆದೇಶ ಪ್ರಶ್ನಿಸಿ, ಸುಪ್ರೀಂ ಕೋರ್ಟ್ ಗೆ ರಾಜ್ಯ ಸರ್ಕಾರ ವಿಶೇಷ ಮೇಲ್ಮನವಿ ಸಲ್ಲಿಸಬೇಕು.

ಸಂವಿಧಾನದ 9ನೇ ಶೆಡ್ಯೂಲ್ಗೆ ಸೇರಿಸಿ, ಕಾನೂನು ತಿದ್ದುಪಡಿ ತರಬೇಕು ಎಂದು ಅವರು ಮನವಿ ಮಾಡಿದರು.

ನಿವೇಶನ ಇಲ್ಲದೆ ವಸತಿ ಸಮಸ್ಯೆ ಎದುರಿಸುತ್ತಿರುವ ಬಡವರಿಗೆ ಸರ್ಕಾರಿ ಭೂಮಿ ಅಥವಾ ಖಾಸಗಿ ಭೂಮಿ ಗುರುತಿಸಿ, ನಿವೇಶನ ಹಂಚಬೇಕು. ಸ್ವಂತ ನಿವೇಶನ ಹೊಂದಿರುವ ವಸತಿ ರಹಿತರಿಗೆ ಮನೆ ಮಂಜೂರು ಮಾಡಿ, ಎಲ್ಲರಿಗೂ ಸೂರು ಕಲ್ಪಿಸಬೇಕು. ಡಿಎಸ್ಸೆಸ್ ಸಂಸ್ಥಾಪಕ ದಿವಂಗತ ಪ್ರೊ.ಬಿ.ಕೃಷ್ಣಪ್ಪನವರಿಗೆ ಕರ್ನಾಟಕ ರತ್ನ ಪ್ರಶಸ್ತಿ ನೀಡಿ, ಕೃಷ್ಣಪ್ಪ ಜನ್ಮದಿನವಾದ ಜೂ.9ನ್ನು ರಜಾ ರಹಿತ ಸರ್ಕಾರಿ ಕಾರ್ಯಕ್ರಮವಾಗಿ ಘೋಷಿಸಲಿ. ಭೂ ಕಂದಾಯ ಕಾಯ್ದೆ ನಮೂನೆ-7ರಡಿ ಸಲ್ಲಿಸಿರುವ ಬಗರ್ ಹುಕುಂ ಸಾಗುವಳಿಗಾರರ ಅರ್ಜಿ ಸಕ್ರಮಗೊಳಿಸಿ, ಹಕ್ಕುಪತ್ರ ನೀಡಲಿ. ಸರ್ಕಾರಿ ಜಾಗದಲ್ಲಿ ನೆಲೆಸಿದ ಕುಟುಂಬಗಳ ಜಾಗವನ್ನು 94ಸಿ ಮತ್ತು 94ಸಿಸಿ ಅಡಿಯಲ್ಲಿ ಸಕ್ರಮಗೊಳಿಸಿ, ಹಕ್ಕುಪತ್ರ ನೀಡುವುದೂ ಸೇರಿದಂತೆ ವಿವಿಧ ಬೇಡಿಕೆ ಈಡೇರಿಸುವಂತೆ ಮನವಿ ಸಲ್ಲಿಸಲಾಯಿತು.

ಡಿಎಸ್ಸೆಸ್ ಮುಖಂಡರಾದ ಸಿ.ಬಸವರಾಜ, ಕೆ.ವಿಜಯಕುಮಾರಿ, ಟಿ.ನಾಗರಾಜ ಚಿತ್ತಾನಹಳ್ಳಿ, ಜಗಳೂರಿನ ಕುಬೇಂದ್ರಪ್ಪ, ಬಿ.ರಂಗಪ್ಪ, ಇ.ನಿಂಗರಾಜ, ಜೆ.ಎ.ನಿಂಗಪ್ಪ, ಚನ್ನಗಿರಿ ಚಿತ್ರಲಿಂಗಪ್ಪ, ಹಾಲೇಶ, ಎ.ಕೆ.ಹನುಮಂತಪ್ಪ, ಚಂದ್ರಪ್ಪ, ಹರಿಹರದ ಐ.ಜೆ.ಮಹಾಂತೇಶ, ಎಂ.ಲಿಂಗರಾಜ ಗಾಂಧಿ ನಗರ, ಟಿ.ಅಂಜಿನಪ್ಪ, ಎಂ.ಎಸ್.ಶಾಂತಪ್ಪ, ಎಂ.ಎಚ್.ಮಂಜಣ್ಣ ಇತರರು ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಕಬ್ಬಿಗೆ ಸ್ಥಳೀಯ ರಿಕವರಿ ಆಧಾರದಲ್ಲಿ ನ್ಯಾಯಯುತ ಬೆಲೆ ನೀಡಲು ಆಗ್ರಹ
ಕರ್ತವ್ಯ ನಿರ್ವಹಣೆಯಲ್ಲಿ ನಿರ್ಲಕ್ಷ್ಯ ವಹಿಸಿದ್ದರೆ ಸೂಕ್ತ ಕ್ರಮ