ಕುಶಾಲನಗರ: ದುಬಾರೆ ಆನೆ ಶಿಬಿರದಲ್ಲಿ ಸೋಮವಾರ ನಡೆದ ಘಟನೆಗೆ ಅರಣ್ಯ ಇಲಾಖೆ ಅಧಿಕಾರಿ ಸಿಬ್ಬಂದಿ ಹೊಣೆಗಾರರಾಗಿದ್ದು ಅವರ ಮೇಲೆ ಸೂಕ್ತ ಇಲಾಖೆ ಕ್ರಮ ಕೈಗೊಳ್ಳುವಂತೆ ಕರ್ನಾಟಕ ಕಾವಲು ಪಡೆ ಜಿಲ್ಲಾಧ್ಯಕ್ಷ ಎಂ ಕೃಷ್ಣ ಒತ್ತಾಯಿಸಿದ್ದಾರೆ.
ಪ್ರವಾಸಿ ತಾಣಗಳಿಗೆ ಆಗಮಿಸುವ ಪ್ರವಾಸಿಗರಿಗೆ ಸೂಕ್ತ ಭದ್ರತೆ ಒದಗಿಸಬೇಕಾಗಿದೆ ಪ್ರವಾಸೋದ್ಯಮ ಇಲಾಖೆ ಅಧಿಕಾರಿಗಳು ಕನಿಷ್ಠ ವಾರಕ್ಕೊಮ್ಮೆ ಜಿಲ್ಲೆಯ ಪ್ರಮುಖ ಪ್ರವಾಸಿ ತಾಣಗಳಿಗೆ ಭೇಟಿ ನೀಡಿ ಅಲ್ಲಿನ ಪರಿಸ್ಥಿತಿ ಬಗ್ಗೆ ಅವಲೋಕನ ಮಾಡಬೇಕು. ಇದರೊಂದಿಗೆ ಪ್ರವಾಸಿಗರು ಕೂಡ ದುಸ್ಸಾಹಸಕ್ಕೆ ಕೈ ಹಾಕಿ ತಮ್ಮ ಪ್ರಾಣ ಕಳೆದುಕೊಳ್ಳುವಂತಾಗ ಬಾರದು ಎಂದು ಕಿವಿಮಾತು ಹೇಳಿದರು.ಕುಶಾಲನಗರದ ದುಬಾರೆ ಕಾವೇರಿ ನಿಸರ್ಗಧಾಮ ಪ್ರವಾಸಿ ತಾಣಗಳ ಹಲವೆಡೆ, ನದಿ ತಟದಲ್ಲಿ ನಿಯಮಬಾಹಿರವಾಗಿ ಅಂಗಡಿ ಮಳಿಗೆಗಳನ್ನು ನಿರ್ಮಿಸಿರುವುದು ಕಂಡು ಬಂದಿದೆ. ಈ ಬಗ್ಗೆ ತಕ್ಷಣ ಜಿಲ್ಲಾಡಳಿತ ಕ್ರಮ ಕೈಗೊಳ್ಳಬೇಕು. ಪ್ರವಾಸಿ ಕೇಂದ್ರಗಳಲ್ಲಿ ಮುಂದಿನ ದಿನಗಳಲ್ಲಿ ಇಂತಹ ದುರ್ಘಟನೆ ಮರುಕಳಿಸದಂತೆ ಎಚ್ಚರ ವಹಿಸಬೇಕು ಎಂದು ಕೃಷ್ಣ ಹೇಳಿದರು. ಇದೇ ಸಂದರ್ಭ ಮಾತನಾಡಿದ ಕಾವಲು ಪಡೆ ತಾಲೂಕು ಅಧ್ಯಕ್ಷ ಸಮೀರ್ ಕುಶಾಲನಗರ ತಾಲೂಕು ಆಸ್ಪತ್ರೆಯಲ್ಲಿ ಮೂಲಭೂತ ಸೌಲಭ್ಯಗಳ ಕೊರತೆ ಕಂಡುಬರುತ್ತಿದೆ. ಆಸ್ಪತ್ರೆಗೆ ಬರುವ ರೋಗಿಗಳನ್ನು ಅಲ್ಲಿನ ವೈದ್ಯರು ಮಡಿಕೇರಿ ಅಥವಾ ಮೈಸೂರಿಗೆ ತೆರಳಲು ಸೂಚಿಸುತ್ತಿದ್ದು ಇದರಿಂದ ಬಡ ರೋಗಿಗಳಿಗೆ ಸಮಸ್ಯೆ ಉಂಟಾಗಿದೆ ಎಂದು ಹೇಳಿದರು. ಜಿಲ್ಲಾ ವೈದ್ಯಾಧಿಕಾರಿಗಳು ಈ ಬಗ್ಗೆ ಗಮನಹರಿಸಿ ಕ್ರಮ ಕೈಗೊಳ್ಳುವಂತೆ ಅವರು ಮನವಿ ಮಾಡಿದರು. ಸುದ್ದಿಗೋಷ್ಠಿಯಲ್ಲಿ ಕಾವಲು ಪಡೆಯ ಯುವ ಘಟಕದ ಅಧ್ಯಕ್ಷರಾದ ಸ್ವಾಮಿ ಕಾರ್ಯದರ್ಶಿ ಮಧು ಸದಸ್ಯರಾದ ಜಾಫರ್ ಇದ್ದರು.