ಫೆಂಗಲ್ ಚಂಡಮಾರುತ ಪರಿಣಾಮ ಮೋಡ ಕವಿದ ವಾತಾವರಣ । ವಾಹನ ಸವಾರರ ಪರದಾಟ । ಚಾ.ನಗರಕ್ಕೆ ಆರೆಂಜ್ ಅಲರ್ಟ್ । ಭಾರಿ ಮಳೆ ಎಚ್ಚರಿಕೆ
ಕನ್ನಡಪ್ರಭ ವಾರ್ತೆ ಚಾಮರಾಜನಗರ/ಹನೂರುಫೆಂಗಲ್ ಚಂಡಮಾರುತದ ಹಿನ್ನೆಲೆ ಜಿಲ್ಲಾದ್ಯಂತ ಮಂಜು ಮುಸುಕಿದ ವಾತಾವರಣ ನಿರ್ಮಾಣವಾಗಿದ್ದು ಚುಮು ಚುಮು ಚಳಿ ನುಡುವೆ ಜನತೆ, ವಾಹನ ಸವಾರರು ಪರದಾಡುವಂತಹ ಪರಿಸ್ಧಿತಿ ನಿರ್ಮಾಣವಾಗಿದೆ.
ಚಾಮರಾಜನಗರ ಜಿಲ್ಲೆಗೆ ಹವಾಮಾನ ಇಲಾಖೆಯು ಯೆಲ್ಲೋ ಅಲರ್ಟ್ ಮತ್ತು ಸೋಮವಾರ ಆರೆಂಜ್ ಅಲರ್ಟ್ ನೀಡಿದೆ. ಚಾಮರಾಜನಗರ ಜಿಲ್ಲಾದ್ಯಂತ ಸದ್ಯ ಮೋಡ ಕವಿದ ವಾತಾವರಣವಿದ್ದು ಆಗಾಗ್ಗೆ ತುಂತುರು ಮಳೆಯಾಗುತ್ತಿದೆ. ಭಾನುವಾರ ಬಹುತೇಕ ಕಡೆ ತುಂತುರು ಮಳೆಯಿಂದ ಸಾಧಾರಣ ಮಳೆ ಆಗುವ ಸಾಧ್ಯತೆ ಇದ್ದು, ಅಲ್ಲಲ್ಲಿ ಬಿರುಗಾಳಿ ಸಹಿತ ಭಾರಿ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಎಚ್ಚರಿಕೆ ನೀಡಿದೆ.ಚಂಡಮಾರುತದ ಸಮಯದಲ್ಲಿ ಗಾಳಿ ವೇಗವು ಹೆಚ್ಚಾಗಿರುವುದರಿಂದ ಮರಗಳು, ದೂರವಾಣಿ ಅಥವಾ ವಿದ್ಯುತ್ ತಂತಿಗಳ ಕೆಳಗೆ ನಿಲ್ಲುವುದು ಅಪಾಯ. ತಗ್ಗು ಪ್ರದೇಶದಿಂದ ಎತ್ತರದ ಪ್ರದೇಶಕ್ಕೆ ಹೋಗುವುದು ಉತ್ತಮ, ಶಿಥಿಲಗೊಂಡಿರುವ ಕಟ್ಟಡಗಳಲ್ಲಿ ಇರುವುದು ಅಪಾಯ, ಜಾನುವಾರನ್ನು ಎತ್ತರದ ಮತ್ತು ಸುರಕ್ಷಿತ ಕಟ್ಟಡಗಳಲ್ಲಿ ಇರಿಸಬೇಕು ಎಂದು ಹೇಳಿದೆ.
ಮಾದಪ್ಪನ ಬೆಟ್ಟದಲ್ಲಿ ಜೋರು ಮಳೆ:ಪ್ರಸಿದ್ಧ ಯಾತ್ರಸ್ಥಳವಾದ ಹನೂರು ತಾಲೂಕಿನ ಮಲೆ ಮಹದೇಶ್ವರ ಬೆಟ್ಟದಲ್ಲಿ ಜೋರು ಮಳೆಯಾಗಿದೆ. ಅಮಾವಾಸ್ಯೆ ಮತ್ತು ಭಾನುವಾರ ಹಿನ್ನೆಲೆ ಭಕ್ತಸಾಗರವೇ ದೇವಾಲಯಕ್ಕೆ ಹರಿದು ಬಂದಿದೆ. ಮಳೆ ನಡುವೆಯೂ ಅಮಾವಾಸ್ಯೆ ಪೂಜೆಗೆ ಸಹಸ್ರಾರು ಮಂದಿ ಭಕ್ತರು ಆಗಮಿಸಿದ್ದು ಮಳೆ ನಡುವೆ ಉರುಳುಸೇವೆ ಮಾಡಿ ಮಾದಪ್ಪನಿಗೆ ಭಕ್ತರು ಹರಕೆ ತೀರಿಸುತ್ತಿರುವುದು ಕಂಡು ಬಂದಿದೆ. ತಾಳುಬೆಟ್ಟದಿಂದ ಮಲೆ ಮಾದೇಶ್ವರ ಬೆಟ್ಟದ ವರೆಗೆ ಮಂಜು ಮುಸುಕಿದ ವಾತಾವರಣ ನಿರ್ಮಾಣ ವಾಹನ ಸವಾರರ ಪರದಾಡುಂತಹ ಪರಿಸ್ಧಿತಿ ನಿರ್ಮಾಣವಾಗಿದೆ.
ಹನೂರು ತಾಲೂಕಿನ ಮಲೆ ಮಾದೇಶ್ವರ ಬೆಟ್ಟ ಅಮಾವಾಸ್ಯೆ ಪೂಜೆಗೆ ರಾಜ್ಯದ ನಾನಾ ಭಾಗಗಳಿಂದ ಹಾಗೂ ಜಿಲ್ಲೆಯ ವಿವಿಧ ತಾಲೂಕುಗಳಿಂದ ಅಪಾರ ಸಂಖ್ಯೆಯ ಭಕ್ತಾದಿಗಳು ವಿವಿಧ ವಾಹನಗಳಲ್ಲಿ ಬೆಟ್ಟಕ್ಕೆ ಬಂದು ಅಮಾವಾಸ್ಯೆ ಪೂಜೆಗೆ ಬಂದ ವಾಹನ ಸವಾರರಿಗೆ ಭಾನುವಾರ ಬೆಳಿಗ್ಗೆ 10 ಗಂಟೆಯಾದರೂ ಮಂಜು ಮುಸುಕಿನ ತುಂತುರು ಮಳೆ ಅಡ್ಡಿಯಾಯಿತು. ಇದರ ನಡುವೆಯೂ ರಸ್ತೆ ಕಾಣದಂತೆ ಮಂಜು ಆವರಿಸಿದ ಕಾರಣ ವಾಹನ ಸವಾರರು ತೆರಳಲು ಪರದಾಡಿದರು.ಜಿಟಿ ಜಿಟಿ ಮಳೆ:
ಬೆಳಿಗ್ಗೆಯಿಂದಲೇ ಜಿಟಿ ಜಿಟಿ ಮಳೆಯಿಂದಾಗಿ ವಾಹನ ಸವಾರರ ಸಹ ಮಂಜು ಮುಸುಕಿದ ವಾತಾವರಣದಲ್ಲಿ ತಾಳುಬೆಟ್ಟದಿಂದ ಮಲೆ ಮಹದೇಶ್ವರ ಬೆಟ್ಟದವರೆಗೆ ವಾಹನ ಸವಾರರು ಜಿಟಿ ಜಿಟಿ ಮಳೆಯ ನಡುವೆಯೇ ಮಂಜು ಮುಸುಕಿದ ರಸ್ತೆಯಲ್ಲಿ ತೆರಳುವಂತೆ ಆಗಿತ್ತು.ರಸ್ತೆಗೆ ಅಡ್ಡಲಾಗಿ ಬಿದ್ದಿರುವ ಬಿದಿರು ಬುಡ: ತಾಳಬೆಟ್ಟದಿಂದ ಮಲೆ ಮಹದೇಶ್ವರ ಬೆಟ್ಟದ ವರೆಗೆ ಎರಡು ಕಡೆ ಬೃಹತ್ಕಾರದ ಬಿದಿರು ಬುಡಗಳು ರಸ್ತೆಗೆ ಅಡ್ಡಲಾಗಿ ಬಿದ್ದಿದ್ದು ಪದೇ ಪದೇ ರಸ್ತೆ ಸಹ ಜಾಮ್ ಆಗುವ ಮೂಲಕ ವಾಹನ ಸವಾರರು ಹೋಗಿಬರಲು ಹರಸಾಸ ಪಡುವಂತಾಯಿತು.