ವಿಳಂಬವಾಗುತ್ತಿದೆ ನರೇಗಾ ಕಾಮಗಾರಿಗಳ ಒಪ್ಪಿಗೆ
ತಾಂತ್ರಿಕ ಸಮಸ್ಯೆಗಳಿಂದ ನರೇಗಾ ಕಾಮಗಾರಿ ವಿಳಂಬಜಿಪಂ ಆಡಳಿತ ವ್ಯವಸ್ಥೆ ಬಗ್ಗೆ ಬೇಸರ ವ್ಯಕ್ತಪಡಿಸಿದ ಗ್ರಾಪಂ ಅಧ್ಯಕ್ಷ-ಉಪಾಧ್ಯಕ್ಷರು
ಜಿಪಂ ಸಿಇಒ ಸೇರಿ ಅಧಿಕಾರಿಗಳಿಗೆ ಆಡಳಿತದ ಪಾಠ ಹೇಳಿದ ಸಚಿವ ಲಾಡ್ಕನ್ನಡಪ್ರಭ ವಾರ್ತೆ ಧಾರವಾಡ
ಇಲ್ಲಿಯ ಕೃಷಿ ವಿವಿ ರೈತರ ಜ್ಞಾನಾಭಿವೃದ್ಧಿ ಕೇಂದ್ರದಲ್ಲಿ ಶುಕ್ರವಾರ ಸಚಿವ ಸಂತೋಷ ಲಾಡ್ ಅಧ್ಯಕ್ಷತೆಯಲ್ಲಿ ನಡೆದ ಬರಗಾಲ ಸಮರ್ಪಕ ನಿರ್ವಹಣೆ ಕುರಿತ ಪ್ರಗತಿ ಪರಿಶೀಲನಾ ಸಭೆಯಲ್ಲಿ ಬರಗಾಲ ನಿರ್ವಹಣೆಯ ಕ್ರಮಗಳಿಗಿಂತ ಜಿಪಂ ಸಿಇಒ ಸೇರಿದಂತೆ ಜಿಲ್ಲೆಯ ವಿವಿಧ ಇಲಾಖೆಗಳ ಅಧಿಕಾರಿಗಳ ಬೇಜವಾಬ್ದಾರಿತನ, ಆಡಳಿತಾತ್ಮಕ, ತಾಂತ್ರಿಕ ಸಮಸ್ಯೆಗಳೇ ಮುನ್ನಲೆಗೆ ಬಂದವು.ಸಭೆಗೆ ಆಗಮಿಸಿದ್ದ ಜಿಲ್ಲೆಯ ಬಹುತೇಕ ಗ್ರಾಪಂ ಅಧ್ಯಕ್ಷರು-ಉಪಾಧ್ಯಕ್ಷರು ನೇರೇಗಾ ಯೋಜನೆಯಲ್ಲಿ ಸಾಕಷ್ಟು ತಾಂತ್ರಿಕ, ಆಡಳಿತಾತ್ಮಕ ಸಮಸ್ಯೆಗಳಿವೆ. ಕೂಲಿ ಕಾರ್ಮಿಕರಿಗೆ ಬೇಗ ಕೆಲಸಗಳಿಗೆ ಅನುಮತಿ ಕೊಡುತ್ತಿಲ್ಲ. ಕಾಮಗಾರಿಗೆ 60x40 ಅನುಪಾತ ಇರುವ ಹಿನ್ನೆಲೆಯಲ್ಲಿ ರಸ್ತೆ, ಗಟಾರು ಕಾಮಗಾರಿಗಳಿಗೆ ಒಪ್ಪಿಗೆ ಸಿಗುತ್ತಿಲ್ಲ. ಕಾಮಗಾರಿಯ ಅಂದಾಜು ಪತ್ರಿಕೆಗೆ ಜಿಪಂದಿಂದ ಅನುಮತಿ ವಿಳಂಬವಾಗುತ್ತಿದೆ. ಕಾಮಗಾರಿಗೆ ಬಳಕೆಯಾದ ಸಿಮೆಂಟ್, ಮರಳು ಸೇರಿದಂತೆ ಇತರೆ ಕಚ್ಚಾ ವಸ್ತುಗಳ ಬಿಲ್ ಬಾಕಿ ಸೇರಿದಂತೆ ಹಲವು ಕಾರಣಗಳಿಂದ ಗ್ರಾಪಂಗಳಲ್ಲಿ ಕಾಮಗಾರಿ ಮಾಡುವುದು ದುಸ್ತರವಾಗಿದೆ. ನಮ್ಮನ್ನು ಆಯ್ಕೆ ಮಾಡಿದ ಜನರಿಗೆ ನಾವೇನು ಉತ್ತರ ಕೊಡೋಣ ಎಂದು ಪ್ರಶ್ನಿಸಿದರು.
ಅಧಿಕಾರಿಗಳ ಸ್ಪಂದನೆ ಇಲ್ಲ:ಜಲಜೀವನ ಮಿಶನ್ ಯೋಜನೆ ಅಡಿ ಎಲ್ಲೆಡೆ ನಳ ಜೋಡಣೆ ಮಾಡಲಾಗಿದೆ. ಪೈಪಲೈನ್ ಸರಿಯಾಗಿಲ್ಲದ ಕಾರಣ ಆಗಾಗ ರಿಪೇರಿ ಬರುತ್ತಿದೆ. ಯೋಜನೆ ಶುರುವಾದ ನಂತರ ಒಂದು ವರ್ಷ ನಿರ್ವಹಣೆ ಗುತ್ತಿಗೆದಾರರಿಗೆ ಇದ್ದರೂ ಅವರು ಸ್ಪಂದನೆ ಮಾಡುತ್ತಿಲ್ಲ. ಗ್ರಾಪಂನಲ್ಲಿ ತುರ್ತು ಕಾಮಗಾರಿಗೆ ನಯಾಪೈಸಾ ಇಲ್ಲ. ಹೀಗಾಗಿ ತುರ್ತು ಪರಿಸ್ಥಿತಿಯಲ್ಲಿ ಸಣ್ಣ ಪುಟ್ಟ ರಿಪೇರಿ ಸೇರಿದಂತೆ ಕಾಮಗಾರಿಗಳಿಗೆ ತೀವ್ರ ತೊಂದರೆಯಾಗುತ್ತಿದೆ. ಕೊಳವೆ ಬಾವಿ ಕೊರೆಯಿಸುತ್ತಾರೆ. ಅದಕ್ಕೆ ವಿದ್ಯುತ್ ಸಂಪರ್ಕ ಇರೋದಿಲ್ಲ. ವಿದ್ಯುತ್ ಸಂಪರ್ಕ ಸಿಕ್ಕ ನಂತರ ಮೋಟಾರ್ ಇಲ್ಲದೇ ಮತ್ತೊಂದು ಸಮಸ್ಯೆ ಎಂದು ಆರೋಪಿಸಿದ ಗ್ರಾಪಂ ಅಧ್ಯಕ್ಷ-ಉಪಾಧ್ಯಕ್ಷರು ಧಾರವಾಡ ತಾಲೂಕು ತಡಕೋಡ, ನವಲಗುಂದ ಸೇರಿದಂತೆ ಹಲವು ಕಡೆಗಳಲ್ಲಿ ಶುದ್ಧ ಕುಡಿಯುವ ನೀರಿನ ಘಟಕಗಳು ದುರಸ್ತಿಯಲ್ಲಿವೆ. ಅವು ಸರಿಯಾಗಿವೆ ಎಂದು ತಿಂಗಳಿಗೆ ₹3 ಸಾವಿರ ಹಣ ಪಡೆಯುವ ಅಧಿಕಾರಿಗಳು ಅವುಗಳನ್ನು ದುರಸ್ತಿ ಮಾಡಿಸುತ್ತಿಲ್ಲ ಎಂದೂ ಸಚಿವರ ಎದುರು ತಮ್ಮ ಸಮಸ್ಯೆಗಳನ್ನು ಧಾರವಾಡ ತಾಲೂಕಿನ ಮುಮ್ಮಿಗಟ್ಟಿ,ತಡಕೋಡ, ಅಳ್ನಾವರದ ಅರವಟಗಿ, ಅಣ್ಣಿಗೇರಿ, ನವಲಗುಂದ, ಕಲಘಟಗಿ, ಕುಂದಗೋಳ ತಾಲೂಕು ಗ್ರಾಪಂಗಳ ಅಧ್ಯಕ್ಷ-ಉಪಾಧ್ಯಕ್ಷರು ಹೇಳಿಕೊಂಡರು.
ಗ್ರಾಪಂ ಅಧ್ಯಕ್ಷ-ಉಪಾಧ್ಯಕ್ಷರ ದೂರುಗಳಿಗೆ ಸ್ಪಂದಿಸಿದ ಸಚಿವ ಸಂತೋಷ ಲಾಡ್, ಆಡಳಿತದಲ್ಲಿ ಜವಾಬ್ದಾರಿ ತೋರಿದರೆ ಮಾತ್ರ ಅಭಿವೃದ್ಧಿ. ಜಿಪಂ ಸಿಇಓ ಅವರು ಅಧಿಕಾರಿಗಳನ್ನು ತಮ್ಮ ನಿಯಂತ್ರಣದಲ್ಲಿಟ್ಟುಕೊಂಡು ಅವರಿಂದ ನಿರ್ಧಿಷ್ಟವಾದ ಕೆಲಸ ತೆಗೆದುಕೊಳ್ಳಬೇಕು.ಇನ್ಮುಂದೆ ನಾಲ್ಕು ತಿಂಗಳಿಗೊಮ್ಮೆ ಗ್ರಾಪಂ ಮಟ್ಟದ ಸಭೆಯನ್ನು ಕಡ್ಡಾಯವಾಗಿ ಮಾಡಲು ಜಿಪಂ ಸಿಇಒ ಸ್ವರೂಪ ಟಿ.ಕೆ.ಅವರಿಗೆ ಸೂಚಿಸಿದರು. ಅಲ್ಲದೇ, ಎಲ್ಲವೂ ಅಧಿಕಾರಿಗಳು ಮಾಡಬೇಕು ಎನ್ನುವುದಕ್ಕಿಂತ ಜಿಪಂ ಅಧ್ಯಕ್ಷರು-ಉಪಾಧ್ಯಕ್ಷರು ಹಾಗೂ ಪಿಡಿಒಗಳು ಸಹ ಆಯಾ ಗ್ರಾಮಗಳ ಅಭಿವೃದ್ಧಿಗೆ ಜವಾಬ್ದಾರರು. ತುಸು ಎಚ್ಚರಿಕೆ, ಜವಾಬ್ದಾರಿಯಿಂದ ತಮ್ಮೂರು ಸುಧಾರಣೆಗೆ ಕೈಂಕರ್ಯ ತೊಡಿ ಎಂದು ಸಚಿವ ಲಾಡ್ ಸಲಹೆ ನೀಡಿದರು. ಜಿಲ್ಲಾಧಿಕಾರಿ ಗುರುದತ್ ಹೆಗಡೆ ಇದ್ದರು.ನಾಲ್ಕು ತಿಂಗಳಿಗೊಮ್ಮೆ ಸಭೆ:
ಗ್ರಾಪಂ ಮಟ್ಟದಲ್ಲಿ ಸಭೆ ಮಾಡಿದ್ದರಿಂದ ತಳ ಮಟ್ಟದ ಸಮಸ್ಯೆಗಳು ಮುನ್ನಲೆಗೆ ಬಂದಿವೆ. ಇಲ್ಲದೇ ಹೋದರೆ ಅವರ ಸಮಸ್ಯೆಗಳು ನಮ್ಮಹಂತಕ್ಕೆ ಯಾವಾಗ ಬರಬೇಕು. ಜಿಪಂ ಸಿಇಓ ಸೇರಿದಂತೆ ಜಿಲ್ಲಾ ಮಟ್ಟದ, ತಾಲೂಕು ಮಟ್ಟದ ಅಧಿಕಾರಿಗಳು ಆಗಾಗ ಗ್ರಾಮಗಳಿಗೆ ಭೇಟಿ ನೀಡಿ ಸಮಸ್ಯೆ ಆಲಿಸಿದರೆ, ಈ ಸಭೆಯಲ್ಲಿ ದೂರುಗಳು ಬರುತ್ತಿರಲಿಲ್ಲ. ಇನ್ನಾದರೂ ಗ್ರಾಮಗಳತ್ತ ಅಧಿಕಾರಿಗಳು ಹೋಗಲಿ.ಸಂತೋಷ ಲಾಡ್, ಸಚಿವರು
ಮುಖ ತೋರಿಸಲು ಬಂದೀರಾ?ಬರಗಾಲ ನಿರ್ವಹಣಾ ಪ್ರಗತಿ ಪರಿಶೀಲನಾ ಸಭೆ ಒಂದು ಹಂತದಲ್ಲಿ ವಿಷಯಾಂತರಗೊಂಡಾಗ ಗ್ರಾಪಂ ಉಪಾಧ್ಯಕ್ಷರೊಬ್ಬರು, ಸಚಿವರು ಬರಗಾಲ ಕ್ರಮಗಳ ಬಗ್ಗೆ ಪರಿಶೀಲನೆ ಮಾಡುವುದನ್ನು ಬಿಟ್ಟು ಬೇರೆನೋ ಮಾಡುತ್ತಿದ್ದೀರಿ. ನಿಮ್ಮ ಮುಖ ತೋರಿಸಲು ಇಲ್ಲಿ ಬಂದಿದ್ದೀರಾ? ಎಂದಾಗ ಗರಂ ಆದ ಸಚಿವ ಲಾಡ್, ನಿಮ್ಮೂರು ಅಭಿವೃದ್ಧಿಗಾಗಿಯೇ ಗಂಟಲು ಹರಿದುಕೊಳ್ಳುತ್ತಿದ್ದೇನೆ. ನಿನಗಿಂತ ಹೆಚ್ಚು ಕೆಲಸ ಮಾಡುತ್ತಿರುವ ನನಗೆ ಜಿಲ್ಲೆಯ ಜವಾಬ್ದಾರಿ ಇದೆ. ನಾನೇಕೆ ಮುಖ ತೋರಿಸಲು ಬರಲಿ ಎಂದು ತರಾಟೆಗೆ ತೆಗೆದುಕೊಂಡರು. ಕೂಡಲೇ ಸಚಿವರಲ್ಲಿ ಉಪಾಧ್ಯಕ್ಷರು ಕ್ಷಮೆ ಕೇಳಿದರು.