ಮಾರುತಿ ಶಿಡ್ಲಾಪೂರ
ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು ಹಾಗೂ, ಕರ ವಸೂಲಿ ಸಿಬ್ಬಂದಿ ಕೊರತೆಯಿಂದ ತಾಲೂಕಿನಲ್ಲಿ
₹೧೬.೨೨ ಕೋಟಿ ಕರ ವಸೂಲಿ ಬಾಕಿ ಉಳಿದಿದೆ.೪೨ ಗ್ರಾಮ ಪಂಚಾಯಿತಿಗಳ ವ್ಯಾಪ್ತಿ ಹೊಂದಿರುವ ರಾಜ್ಯದ ಅತಿ ದೊಡ್ಡ ಹಾನಗಲ್ಲ ತಾಲೂಕಿನಲ್ಲಿ ಇಡೀ ಜಿಲ್ಲೆಯಲ್ಲಿಯೇ ಅತಿ ಕಡಿಮೆ ಅಭಿವೃದ್ಧಿ ಅಧಿಕಾರಿಗಳಿದ್ದಾರೆ. ಗ್ರಾಪಂನ ಲೆಕ್ಕ ಹಾಕಿದರೆ ೪೨ ಅಭಿವೃದ್ಧಿ ಅಧಿಕಾರಿಗಳಿರಬೇಕು. ಆದರೆ ೨೫ ಪಿಡಿಒಗಳಿದ್ದಾರೆ. ಇಬ್ಬರು ಹೊರ ತಾಲೂಕಿಗೆ ನಿಯೋಜನೆ ಮೇಲೆ, ಒಬ್ಬರು ಮೆಡಿಕಲ್ ರಜೆಯಲ್ಲಿದ್ದಾರೆ. ೪೨ ಪಂಚಾಯಿತಿಗಳಲ್ಲಿ ಕರ ವಸೂಲಿಗೆ ಇರುವ ಸಿಬ್ಬಂದಿ ೧೪ ಮಾತ್ರ. ಬೇಕಾಗಿದ್ದು ೪೨ ಸಿಬ್ಬಂದಿ. ಎಲ್ಲ ಗ್ರಾಪಂ ಸೇರಿ ಇರುವ ಎಸ್‌ಡಿಸಿ ಕೇವಲ ೩೧. ೪೬ ವಾಟರ್‌ಮನ್ ಕೊರತೆ, ೩೫ ಸ್ವಚ್ಛತಾ ಸಿಬ್ಬಂದಿ, ೧೦ ಸಿಪಾಯಿಗಳ ಕೊರತೆಯೂ ಇದೆ. ಗ್ರೇಡ್-೧, ಗ್ರೇಡ್-೨ ಕಾರ್ಯದರ್ಶಿಗಳು, ದ್ವಿತೀಯ ದರ್ಜೆ ಸಹಾಯಕರ ಕೊರತೆ ಇಲ್ಲ.
ಪ್ರತಿ ಗ್ರಾಮ ಪಂಚಾಯಿತಿಗಳಲ್ಲಿ ಅಂದಾಜು ₹೧ ಕೋಟಿ ವರೆಗೆ ನರೇಗಾ ಅಡಿಯಲ್ಲಿ ಕೆರೆ ಹೂಳೆತ್ತುವುದು, ಬದು ನಿರ್ಮಾಣ, ತೋಟಗಾರಿಕಾ ಸಸಿ ನೆಡುವುದು, ಕೊಟ್ಟಿಗೆ ನಿರ್ಮಾಣ ಸೇರಿದಂತೆ ವಿವಿಧ ಕಾಮಗಾರಿಗಳು ನಡೆಯುತ್ತವೆ. ಆದರೆ, ಸ್ವಚ್ಛತೆ, ಕುಡಿಯುವ ನೀರು, ವಿದ್ಯುತ್ ಬೀದಿದೀಪ, ಇಂಗು ಗುಂಡಿ, ಕೊಳವೆ ಬಾವಿ ನಿರ್ವಹಣೆಗೆ ಕರ ವಸೂಲಿಯೇ ಮೂಲ ಧನವಾಗಿದೆ. ಇಲ್ಲಿನ ಗುತ್ತಿಗೆ ಸೇರಿದಂತೆ ಇತರ ನೌಕರರ ಸಂಭಾವನೆಯೂ ಇದರಲ್ಲಿಯೇ ಬಟವಡೆಯಾಗಬೇಕು. ಆದರೆ, ಕರ ವಸೂಲಿ ಮಾತ್ರ ನಗಣ್ಯವಾಗಿದೆ. ಉತಾರ ಸೇರಿದಂತೆ ವಿವಿಧ ಪ್ರಮಾಣ ಪತ್ರದ ಬೇಡಿಕೆ ಬಂದಾಗ ಒಂದಷ್ಟು ಕರ ವಸೂಲಿ ಸಾಧ್ಯವಾಗುತ್ತದೆ. ಉಳಿದಂತೆ ಬರಗಾಲ, ಅತೀವೃಷ್ಟಿ ಸೇರಿದಂತೆ ಆರ್ಥಿಕ ಸಂಕಷ್ಟಗಳನ್ನು ಹೇಳಿಕೊಂಡು ಕರ ವಸೂಲಿ ಸಾಧ್ಯವಾಗುತ್ತಿಲ್ಲ ಎನ್ನುತ್ತಾರೆ ಅಭಿವೃದ್ಧಿ ಅಧಿಕಾರಿಗಳು.
ಈಗಿರುವ ಗ್ರಾಪಂ ಅಭಿವೃದ್ಧಿ ಅಧಿಕಾರಿಗಳಿಗೆ ಎರಡು ಪಂಚಾಯಿತಿಗಳ ಜವಾಬ್ದಾರಿ ನೀಡಲಾಗಿದೆ. ಇದರಿಂದ ಪಂಚಾಯಿತಿಗಳ ನಿರ್ವಹಣೆಯಲ್ಲಿ ಬಹಳಷ್ಟು ಒತ್ತಡ ನಿರ್ಮಾಣವಾಗಿದೆ. ಪಿಡಿಒ ಅವರ ಥಂಬ್ ಇಂಪ್ರೆಸ್ಸೆನ್ ಇಲ್ಲದೇ ಬಹುತೇಕ ಕಾರ್ಯಗಳು ನಡೆಯುವುದೇ ಇಲ್ಲ. ಸಾವಿರಾರು ನರೇಗಾ ಕಾರ್ಮಿಕರ ಹಣ ಬಿಡುಗಡೆಯ ಕಾರ್ಯವಿದೆ. ಇತ್ತೀಚಿನ ದಿನಗಳಲ್ಲಿ ಪಿಡಿಒಗಳಿಗೆ ಒತ್ತಡದ ಕೆಲಸ ಇರುವುದರಿಂದ ಎರಡೆರಡು ಪಂಚಾಯಿತಿಗಳ ಕಾರ್ಯಭಾರ ಹೆಚ್ಚಿಸಿದೆ.ಗ್ರಾಪಂಗಳಲ್ಲಿ ಕರ ವಸೂಲಿ ಸಮಾಧಾನಕರವಾಗಿಲ್ಲ. ಅಲ್ಲಿನ ಪಂಚಾಯಿತಿ ನೌಕರರ ಪ್ರಯತ್ನಕ್ಕೆ ಫಲ ಸಿಗುತ್ತಿಲ್ಲ. ಇರುವುದರಲ್ಲೇ ಸಂಬಾಳಿಸಿಕೊಂಡು ಕೆಲಸ ಕಾರ್ಯಗಳನ್ನು ನಿರ್ವಹಿಸಬೇಕಾಗಿದೆ. ಕರ ವಸೂಲಿ ಇಲ್ಲದಿರುವುದರಿಂದ ಹಲವು ಅಭಿವೃದ್ಧಿ ಕೆಲಸಗಳು ನನೆಗುದಿಗೆ ಬೀಳುತ್ತವೆ. ಸರಿಯಾಗಿ ಕರ ವಸೂಲಿ ಆದರೆ ಗ್ರಾಮಗಳ ಉತ್ತಮ ಅಭಿವೃದ್ಧಿ ಸಾಧ್ಯ ಹಾನಗಲ್ಲ ತಾಪಂ ಇಒ ಪರಶುರಾಮ ಪೂಜಾರ ಹೇಳಿದರು.
ಫಕ್ಕೀರೇಶ ಸಾತೇನಹಳ್ಳಿ ಹೇಳಿದರು.