ಮಹದೇವಪ್ಪ ಎಂ. ಸ್ವಾಮಿ ಶಿರಹಟ್ಟಿ
ವಿಶ್ವದಲ್ಲೇ ಅತಿ ದೊಡ್ಡ ಉದ್ಯೋಗ ಯೋಜನೆ ಎಂಬ ಹೆಗ್ಗಳಿಕೆಗೆ ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ (ನರೇಗಾ) ಯೋಜನೆ ಪಾತ್ರವಾಗಿದೆ. ಗುಳೆ ತಪ್ಪಿಸಿ ಗ್ರಾಮದಲ್ಲಿಯೇ ಎಲ್ಲ ವಯಸ್ಕ ಜನರಿಗೆ ಉದ್ಯೋಗ ಒದಗಿಸುವುದು ಈ ಯೋಜನೆಯ ಗುರಿಯಾಗಿದ್ದು, ಅಧಿಕಾರಿಗಳ ಅಸಡ್ಡೆತನದಿಂದ ಮಾಗಡಿ ಗ್ರಾಪಂನಲ್ಲಿ ದುಡಿಯುವ ಕೈಗಳಿಗೆ ಕೆಲಸವಿಲ್ಲದಂತಾಗಿದೆ.
ಈ ಯೋಜನೆಯಡಿ ಒಂದು ಕುಟುಂಬದ ವಯಸ್ಕ ಸದಸ್ಯರು ಸ್ವಯಂ ಪ್ರೇರಿತರಾಗಿ ನೋಂದಣಿಯಾದರೆ ಅಂತಹವರಿಗೆ ಆರ್ಥಿಕ ವರ್ಷವೊಂದಕ್ಕೆ ನೂರು ದಿನಗಳ ಉದ್ಯೋಗ ನೀಡಲಾಗುತ್ತದೆ. ಈ ಯೋಜನೆಯು ಬಡ ಕುಟುಂಬಗಳ ಆರ್ಥಿಕ ಸ್ಥಿತಿ ಸುಧಾರಿಸುವಲ್ಲಿ ಮಹತ್ವದ್ದಾಗಿದೆ. ಆದರೆ ಈ ಪಂಚಾಯತಿಯಲ್ಲಿ ನರೇಗಾ ಯೋಜನೆಯ ಜಾಗೃತಿ ಕಾರ್ಯವೇ ನಡೆದಿಲ್ಲ ಎಂದರೆ ಬಡ ಕುಟುಂಬಗಳ ಆರ್ಥಿಕ ಸ್ಥಿತಿ ಸುಧಾರಣೆ ಹೇಗೆ ಆಗಲು ಸಾಧ್ಯ ಎಂಬ ಪ್ರಶ್ನೆ ಜನರಲ್ಲಿ ಕಾಡುತ್ತಿದೆ.ಮಾಗಡಿ ಗ್ರಾಪಂ ವ್ಯಾಪ್ತಿ ಹೊಳಲಾಪುರ, ಪರಸಾಪುರ, ಚೆನ್ನಪಟ್ಟಣ ಗ್ರಾಮಗಳು ಬರುತ್ತಿದ್ದು, ಒಟ್ಟು ೬.೯೬೯ ಜನಸಂಖ್ಯೆ ಇದ್ದು, ೧೬ ಜನ ಸದಸ್ಯರನ್ನು ಹೊಂದಿದೆ. ಮಾಗಡಿ ಗ್ರಾಮದಲ್ಲಿ ೨ ಶುದ್ದ ನೀರಿನ ಘಟಕಗಳಿದ್ದು, ಜೆಜೆಎಂ ಕಾಮಗಾರಿ ಸಂಪೂರ್ಣ ಹಳ್ಳ ಹಿಡಿದಿದೆ. ಕಾಮಗಾರಿ ಅಪೂರ್ಣವಾಗಿದ್ದು, ಜನ ನೀರಿಗೆ ಪರದಾಡುವಂತಾಗಿದೆ.
ಜಿಪಂ ಸಿಇಒ ಭೇಟಿ:
ಶಿರಹಟ್ಟಿ ತಾಪಂ ಐಇಸಿ ಸಂಯೋಜಕ ಮಂಜುನಾಥ ಸ್ವಾಮಿ ನರೇಗಾ ಬಗ್ಗೆ ಸಾರ್ವಜನಿಕ ಜಾಗೃತಿ ಮೂಡಿಸಿ ಯೋಜನೆಯ ಯಶಸ್ಸಿಗೆ ಕ್ರಮ ವಹಿಸಬೇಕಿದ್ದು, ತಿರುಗಿ ನೋಡಿಲ್ಲ ಎಂಬ ದೂರುಗಳಿವೆ. ಪ್ರಸಕ್ತ ವರ್ಷದಲ್ಲಿ ೯ ತಿಂಗಳು ಕಳೆದರೂ ನರೇಗಾ ಕಾಮಗಾರಿ ಆರಂಭಗೊಂಡಿಲ್ಲ. ದುಡಿಯುವ ಕೈಗಳಿಗೆ ಕೆಲಸ ನೀಡಿಲ್ಲ. ಸಂಪೂರ್ಣ ಮೂಲಭೂತ ಸೌಲಭ್ಯಗಳಿಂದ ಗ್ರಾಮದ ಜನತೆ ವಂಚಿತರಾಗಿದ್ದು, ಅಧಿಕಾರಿಗಳ ಕಾರ್ಯವೈಖರಿಗೆ ಹಿಡಿಶಾಪ ಹಾಕುತ್ತಿದ್ದಾರೆ.
ಗ್ರಾಮದ ಎಸ್ಸಿ, ಎಸ್ಟಿ ಕಾಲನಿಯಲ್ಲಿ ಕುಡಿಯುವ ನೀರಿನ ತೀವ್ರ ಸಮಸ್ಯೆ ಇದೆ. ಜೆಜೆಎಂ ಕಾಮಗಾರಿ ಅಪೂರ್ಣವಾಗಿದ್ದು ಕುಡಿಯುವ ನೀರಿನ ಸಮಸ್ಯೆಗೆ ಕಾರಣವಾಗಿದೆ. ಸಿಸಿ ರಸ್ತೆ, ಚರಂಡಿ ಕಾಮಗಾರಿಗಳ ಅವಶ್ಯವಿದ್ದು, ಸರ್ಕಾರ ಅನುದಾನ ಬಿಡುಗಡೆ ಮಾಡಿ ಗ್ರಾಮದ ಅಭಿವೃದ್ಧಿಗೆ ಸಹಕರಿಸಬೇಕು ಎಂದು ಗ್ರಾಪಂ ಸದಸ್ಯ ಹಾಗೂ ಪಂಚ ಗ್ಯಾರಂಟಿ ಸಮಿತಿ ತಾಲೂಕಾಧ್ಯಕ್ಷ ವೀರಯ್ಯ ಮಠಪತಿ ತಿಳಿಸಿದ್ದಾರೆ.