3ನೇ ದಿನವೂ ಮಳೆಯಬ್ಬರ: ಜನತೆ ಕಂಗಾಲು

KannadaprabhaNewsNetwork |  
Published : Oct 22, 2024, 12:36 AM IST
ಮಳೆ | Kannada Prabha

ಸಾರಾಂಶ

ಭಾನುವಾರ ರಾತ್ರಿ ಹಾಗೂ ಸೋಮವಾರ ಸುರಿದ ಗುಡುಗು ಸಹಿತ ಧಾರಾಕಾರವಾಗಿ ಮಳೆಗೆ ನಗರದಲ್ಲಿ ಹತ್ತಾರು ಅವಾಂತರಗಳು ಮುಂದುವರೆದಿದ್ದು, ಬೆಂಗಳೂರಿನ ಮಂದಿ ತತ್ತರಿಸಿ ಹೋಗಿದ್ದಾರೆ.

ಕನ್ನಡಪ್ರಭ ವಾರ್ತೆ ಬೆಂಗಳೂರು

ಭಾನುವಾರ ರಾತ್ರಿ ಹಾಗೂ ಸೋಮವಾರ ಸುರಿದ ಗುಡುಗು ಸಹಿತ ಧಾರಾಕಾರವಾಗಿ ಮಳೆಗೆ ನಗರದಲ್ಲಿ ಹತ್ತಾರು ಅವಾಂತರಗಳು ಮುಂದುವರೆದಿದ್ದು, ಬೆಂಗಳೂರಿನ ಮಂದಿ ತತ್ತರಿಸಿ ಹೋಗಿದ್ದಾರೆ. ತಗ್ಗು ಪ್ರದೇಶಗಳ ಜನರ ಬದುಕು ಹೆಚ್ಚು ಕಡಿಮೆ ಮೂರಾಬಟ್ಟೆಯಾಗಿದೆ. ಬೀದಿ ಬದಿ ವ್ಯಾಪಾರಿಗಳು ಸಂಕಟಕ್ಕೆ ಸಿಲುಕಿದ್ದಾರೆ.

ಮೆಜೆಸ್ಟಿಕ್‌ ಸಮೀಪದ ಅಷ್ಟಪಥ ಮಾರ್ಗದ ಓಕಳಿಪುರ ಅಂಡರ್ ಪಾಸ್ ಕೆರೆಯಂತೆ ಆಗಿದ್ದು, ಎರಡು ಅಡಿಯಷ್ಟು ನೀರು ನಿಂತು ವಾಹನ ಸವಾರರು ಪರದಾಡಿದ್ದಾರೆ. ಶಿವಾನಂದ ಅಂಡರ್‌ಪಾಸ್, ವಿಂಡ್ಸರ್ ಮ್ಯಾನರ್, ಸ್ಯಾಂಕಿ ಅಂಡರ್‌ಪಾಸ್ ರಸ್ತೆಗಳು ಕೆರೆಯಂತಾಗಿದ್ದು, ದ್ವಿಚಕ್ರ ವಾಹನ ಸವಾರರು, ಆಟೋಚಾಲಕರು ಪರದಾಡಿದರು. ನೀರಿನಲ್ಲೇ ವಾಹನ ಚಲಾಯಿಸಿದ್ದರಿಂದ ಎಂಜಿನ್ ಒಳಗೆ ನೀರು ಹೋಗಿ ವಾಹನಗಳು ಬಂದ್ ಆಗಿದ್ದು, ತಳ್ಳುತ್ತಾ ದಡ ಸೇರಲು ಕಷ್ಟಪಟ್ಟರು.

ಕೆಂಗೇರಿ, ಆರ್.ಆರ್. ನಗರ, ದಾಸರಹಳ್ಳಿ ಭಾಗದ ತಗ್ಗು ಪ್ರದೇಶದ ಮನೆಗಳಿಗೆ ನೀರು ಜನರು ತೊಂದರೆಗೆ ಸಿಲುಕಿದರು. ಮೈಸೂರು ರಸ್ತೆಯ ಬ್ಯಾಟರಾಯನಪುರದಲ್ಲೂ ಮಳೆ ನೀರು ಮನೆಗಳಿಗೆ ನುಗ್ಗಿದೆ. ಇಡೀ ರಸ್ತೆ ಕೊಳಕು ನೀರಿನಿಂದ ತುಂಬಿದ್ದರಿಂದ ಮನೆಗೆ ಹೋಗಿ-ಬರಲು ಸಾಧ್ಯವಾಗಲಿಲ್ಲ. ಕೆಲವರು ಅನಿವಾರ್ಯವಾಗಿ ಕೊಳಕು ನೀರಿನಲ್ಲಿಯೇ ನಡೆದುಕೊಂಡು ಹೋದರು.

ತಪ್ಪಲಿಲ್ಲ ಗಾಳಿ ಆಂಜನೇಯನಿಗೂ ಕಂಟಕ:

ಮೈಸೂರು ರಸ್ತೆಯಲ್ಲಿರುವ ಪ್ರಸಿದ್ಧ ಗಾಳಿ ಆಂಜನೇಯ ದೇವಾಲಯಕ್ಕೂ ಜಲ ಕಂಟಕ ಶುರುವಾಗಿ ಅದೆಷ್ಟೋ ವರ್ಷಗಳೇ ಕಳೆದಿವೆ. ಮಳೆ ಬಂದರೆ ಸಾಕು ದೇವಾಲಯದ ಆವರಣಕ್ಕೂ ಮಳೆ ನೀರು ರಾಜಕಾಲುವೆ ನೀರು ಹರಿದು ಬರುತ್ತಿದೆ. ಭಾನುವಾರ ಸುರಿದ ಮಳೆಗೂ ದೇವಾಲಯ ಹೊರ ಭಾಗ ಜಲವೃತವಾಗಿತ್ತು. ಮಳೆ ನಿಂತರೂ ದೇವಾಲಯದ ಹೊರ ಭಾಗದ ಮುಖ್ಯ ರಸ್ತೆಯಲ್ಲಿ ಮಳೆ ನೀರು ನಿಂತು ವಾಹನ ಸವಾರರಿಗೂ ಸಮಸ್ಯೆ ಆಯಿತು.

ರಸ್ತೆ ತುಂಬಾ ನೀರು:

ಬೆಳ್ಳಂದೂರು ಕೆರೆ ಪಕ್ಕದಲ್ಲಿರೋ ಸಕ್ರ ಆಸ್ಪತ್ರೆಯ ರಸ್ತೆಯಲ್ಲಿ ಮಳೆ ನೀರು ನಿಂತು ವಾಹನ ಸಂಚಾರಕ್ಕೆ ಅಡಚಣೆಯಾಯಿತು. ವಿಲ್ಸನ್ ಗಾರ್ಡನ್ ಬಿಟಿಎಸ್ ಮುಖ್ಯ ರಸ್ತೆ ಜಲಾವೃತವಾಗಿದ್ದು, ವಾಹನ ಸವಾರರು ಪರದಾಡಿದರು. ಲ್ಯಾವೆಲ್ಲೆ ರಸ್ತೆಯ ಹುಲ್‌ಕುಲ್ ರೆಸಿಡೆನ್ಸಿ 26 ಫ್ಲಾಟ್ ಇರುವ ಅಪಾರ್ಟ್‌ಮೆಂಟ್ ಕೆಳಭಾಗ ಸಂಪೂರ್ಣ ನೀರು ತುಂಬಿತ್ತು. ಸಂಪಂಗಿರಾಮನಗರದಿಂದ ಡಬಲ್ ರಸ್ತೆಗೆ ತೆರಳುವ ಮೇಲ್ಸೇತುವೆ ಇಕ್ಕೆಲಗಳಲ್ಲಿ ನಿಂತ ನೀರಿನಲ್ಲಿ ಬಸ್ ಬಿಟ್ಟರೆ ಬೇರೆ ವಾಹನಗಳ ಸಂಚಾರ ಆಗದಂತಾ ಪರಿಸ್ಥಿತಿ ನಿರ್ಮಾಣಗೊಂಡಿತ್ತು. ಕೋರಮಂಗಲದ 80 ಅಡಿ ರಸ್ತೆಯಲ್ಲಿ ಭಾರೀ ಪ್ರಮಾಣ ನೀರು ನಿಂತುಕೊಂಡಿತ್ತು. ಸರ್ಜಾಪುರದ ಆರ್‌ಜಿಬಿ ಟೆಕ್ ಪಾರ್ಕ್‌ ಎದುರು ಮತ್ತೆ ಜಲಾವೃತವಾಗಿತ್ತು.

ವ್ಯಾಪಾರಿಗಳ ಪರದಾಟ:

ಬಿಟ್ಟೂಬಿಡದ ಮಳೆಯಿಂದಾಗಿ ಕೆ.ಆರ್.ಮಾರುಕಟ್ಟೆಯಲ್ಲಿ ಭಾರಿ ಅವಾಂತರವನ್ನೆ ಸೃಷ್ಟಿಸಿದ್ದು, ಮೊಣಕಾಲುದ್ದ ನೀರು ನಿಂತಿದ್ದು, ನೀರಿನಲ್ಲಿ ನಿಂತು ವ್ಯಾಪಾರಿಗಳು ವ್ಯಾಪಾರ ಮಾಡುತ್ತಿದ್ದ ದೃಶ್ಯ ಕಂಡು ಬಂದವು. ಮತ್ತೊಂದೆಡೆ ವ್ಯಾಪಾರವೇ ಬೇಡ ಮನೆ ಸೇರಿದರೆ ಸಾಕು ಉದಾಹರಣೆ ಕಂಡು ಬಂದವು. ನಾಗದೇವನಹಳ್ಳಿಯಲ್ಲಿ ಮುಂದುವರೆದ ಮಳೆಯಿಂದ ಕೆರೆ ನೀರು ಹಳ್ಳಿಗೆ ನುಗ್ಗಿ ತೊಂದರೆ ಉಂಟಾಯಿತು. ಹೆಬ್ಬಾಳ ಸುತ್ತಮುತ್ತ ಸಂಚಾರ ದಟ್ಟಣೆಯಾಗಿದ್ದು, ಕೆಲಸ ಕಾರ್ಯಕ್ಕೆ ಹೋಗುವ ವಾಹನ ಸವಾರರು ಟ್ರಾಫಿಕ್ ಜಾಮ್‌ನಲ್ಲಿ ಸಿಲುಕಿದ್ದರು. ಬನ್ನೇರುಘಟ್ಟ ರಸ್ತೆಯ ವಿಜಯಶ್ರೀ ಲೇಔಟ್ ಹಾಗೂ ಹುಳಿಮಾವು ಮೆಟ್ರೋ ಸ್ಟೇಷನ್ ಬಳಿಯ ರಸ್ತೆಗಳು ಜಲಾವೃತವಾಗಿತ್ತು.

50ಕ್ಕೂ ಅಧಿಕ ಮನೆಗಳಿಗೆ ಕೊಳಕು ನೀರು:

ಧಾರಾಕಾರ ಮಳೆಯಿಂದ ಆಸ್ಟೀನ್ ಟೌನ್ ಜನರಿಗೆ ಜಲದಿಗ್ಬಂಧನ ಎದುರಾಗಿದೆ. 3 ಪ್ರದೇಶಗಳು ಜಲಾವೃತವಾಗಿದೆ. 10ಕ್ಕೂ ಹೆಚ್ಚು ಮನೆಗಳಿಗೆ ನೀರು ನುಗ್ಗಿದ್ದು, ಹೊರ ಬರಲು ಸ್ಥಳೀಯ ನಿವಾಸಿಗಳು ಪರದಾಡಿದರು. ಮಳೆ ನೀರಿನಿಂದ ರಸ್ತೆಯಲ್ಲಿಯೇ ವಾಹನಗಳು ಮುಳುಗಿ ಹೋಗಿವೆ.ಮಳೆಯಿಂದಾಗಿ ಭಾನುವಾರ ರಾತ್ರಿಯಿಂದಲೇ ನಿದ್ರೆ ಇಲ್ಲ ಎಂದು ಜನರು ಆಕ್ರೋಶ ಹೊರ ಹಾಕಿದ್ದಾರೆ.

ಬೆಂಗಳೂರಿನ ಎಚ್‌ಎಸ್‌ಆರ್ ಲೇಔಟ್‌ನಲ್ಲಿ ಭಾರೀ ಮಳೆಯಿಂದ ಸಾಕಷ್ಟು ಸಮಸ್ಯೆ ಉಂಟಾಯಿತು. ಬಿಬಿಎಂಪಿ ಮಾಡಲ್ ರೋಡ್ ಜಲಮಯವಾಗಿದ್ದು, ಎಚ್‌ಎಸ್‌ಆರ್ ಲೇಔಟ್ ಬಿಡಿಎ ಕಾಂಪ್ಲೆಕ್ಸ್ ರಸ್ತೆಯಲ್ಲಿ 2 ಅಡಿಯಷ್ಟು ನೀರು ನಿಂತಿದೆ. ನೀರು ತುಂಬಿದ ರಸ್ತೆಯಲ್ಲಿಯೇ ವಾಹನ ಸವಾರರು ಸಂಚಾರಕ್ಕೆ ಸರ್ಕಸ್ ನಡೆಸಿದರು. ಮೋಟರ್ ಬಳಸಿ ಅಗ್ನಿಶಾಮಕ ಸಿಬ್ಬಂದಿ ನೀರು ಹೊರ ಹಾಕಿದರು. ಎಚ್ಎಸ್ಆರ್ ಬಡಾವಣೆಯಲ್ಲಿನ‌ ಫ್ರೀಡಂ ಶಾಲೆಯ ಮೈದಾನ ತುಂಬಾ ನೀರು ತುಂಬಿಕೊಂಡ ಪರಿಣಾಮ ಶಾಲಾ ಬಸ್‌ ಹೊರ ಬರದ ಸ್ಥಿತಿ ನಿರ್ಮಾಣವಾಗಿತ್ತು. ಸಿಲ್ಕ್‌ಬೋರ್ಡ್ ಜಂಕ್ಷನ್‌ನಲ್ಲೂ ಸಾಲು ಸಾಲು ತಾಪತ್ರಯ ತಲೆದೋರಿತ್ತು. ಪ್ರಮುಖ ರಸ್ತೆಗಳು ನದಿಯಂತಾಗಿದ್ದು, ವಾಹನಗಳು ತೇಲಿಕೊಂಡು ಹೋಗುವಷ್ಟು ರಭಸವಾಗಿ ನೀರು ಹರಿದಿದೆ.ಒಳಾಂಗಣ ಕ್ರೀಡಾಂಗಣದಲ್ಲಿ ನೀರು

ಕೋರಮಂಗಲದ ಒಳಾಂಗಣ ಸ್ಟೇಡಿಯಂ ಆವರಣಕ್ಕೆ ನೀರು ನುಗ್ಗಿದ್ದು ಏಷ್ಯನ್ ನೆಟ್‌ಬಾಲ್ ಚಾಂಪಿಯನ್‌ಶಿಪ್‌ನಲ್ಲಿ ಸೋಮವಾರ ನಡೆಯಬೇಕಿದ್ದ ಎರಡು ಪಂದ್ಯಗಳು ಮುಂದೂಡಿಕೆಯಾಗಿದೆ. ರಾಜಕಾಲುವೆ ನೀರು ರಸ್ತೆ ಮೇಲೆ ಹರಿದು ಕ್ರೀಡಾಂಗಣದ ಆವರಣವನ್ನು ಪ್ರವೇಶಿಸಿದೆ. ನೀರು ನುಗ್ಗುವುದರ ಜತೆ ಬೆಳಗ್ಗೆ ವಿದ್ಯುತ್ ಸಮಸ್ಯೆ ಇದ್ದ ಕಾರಣ ಇಂದು ನಿಗದಿಯಾಗಿದ್ದ ಎರಡು ಪಂದ್ಯಗಳು ಗುರುವಾರಕ್ಕೆ ಮುಂದೂಡಿಕೆಯಾಗಿದೆ. ಗೇಟ್‌ನಿಂದ ಕ್ರೀಡಾಂಗಣದವರೆಗೂ ನೀರು ನಿಂತಿದ್ದರಿಂದ ಹೋಟೆಲಿನಲ್ಲಿ ತಂಗಿದ್ದ ಆಟಗಾರರನ್ನು ಬಸ್ಸಿನಲ್ಲಿ ಕರೆತರಲು ಸಮಸ್ಯೆಯೂ ಆಯಿತು. ಇದರಿಂದ ಪಂದ್ಯಗಳನ್ನು ಮುಂದಕ್ಕೆ ಹಾಕಲಾಗಿದೆ.

ಮೀನು ಹಿಡಿಯಲು ಮುಗಿಬಿದ್ದ ಜನ

ಆರ್.ಆರ್.ನಗರದ ಗಟ್ಟಿಗೆರೆಯ ಮುಖ್ಯರಸ್ತೆಯಲ್ಲಿ ಮೀನು ಪ್ರತ್ಯಕ್ಷವಾಗಿದ್ದು, ಸ್ಥಳೀಯರು ಮೀನು ಹಿಡಿದು ಮನೆಗೆ ತೆಗೆದುಕೊಂಡು ಹೋದರು. ಕೆರೆ ಉಕ್ಕಿ ಹರಿದು ನೀರು ರಸ್ತೆಗೆ ಬಂದಿದ್ದರಿಂದ ಮೀನುಗಳು ಕೊಚ್ಚಿಕೊಂಡು ಬಂದಿವೆ.ಎಲ್ಲಿ ಎಷ್ಟು ಮಳೆ

ಸೋಮವಾರ ನಗರದಲ್ಲಿ ಚೌಡೇಶ್ವರಿಯಲ್ಲಿ ಅತಿ ಹೆಚ್ಚು 5.7 ಸೆಂ.ಮೀ ಮಳೆಯಾಗಿದೆ. ಉಳಿದಂತೆ ಜಕ್ಕೂರು 4.9, ಪೀಣ್ಯ 3.6, ಬಾಗಲಗುಂಟೆ 3.5, ವಿದ್ಯಾರಣ್ಯಪುರ 3.4, ಕೊಡಿಗೆಹಳ್ಳಿ 3.3, ಶೆಟ್ಟಿಹಳ್ಳಿ 3.2. ಚೊಕ್ಕಸಂದ್ರ 2.2, ಹೊರಮಾವು 1.8 ಹಾಗೂ ದೊಡ್ಡ ಬಿದರಕಲ್ಲಿನಲ್ಲಿ 1.2 ಸೆಂ.ಮೀ ಮಳೆಯಾದ ವರದಿಯಾಗಿದೆ. ಭಾನುವಾರ ನಗರದಲ್ಲಿ ಕೋರಮಂಗಲ ಹಾಗೂ ವನ್ನಾರ್‌ ಪೇಟೆಯಲ್ಲಿ ಅತಿ ಹೆಚ್ಚು ತಲಾ 7 ಸೆಂ.ಮೀ ಮಳೆಯಾಗಿದೆ. ನಾಗಪುರ 6.9, ಗಾಳಿ ಆಂಜನೇಯ ದೇವಸ್ಥಾನ ಹಾಗೂ ಹಂಪಿನಗರ 6.3, ಬಾಗಲಗುಂಟೆ 5.8, ಎಚ್‌ಎಂಟಿ, ನಂದಿನಿ ಲೇಔಟ್‌ ಹಾಗೂ ಮಾರಪ್ಪನಪಾಳ್ಯದಲ್ಲಿ ತಲಾ 5.4 ಸೆಂ.ಮೀ ಮಳೆಯಾದ ವರದಿಯಾಗಿದೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಹುಬ್ಬಳ್ಳಿಯಲ್ಲಿ ಬಿಜೆಪಿ ಕಾರ್ಯಕರ್ತೆ ವಿವಸ್ತ್ರ ವಿವಾದ
ಅಸ್ಸಾಂ ಚುನಾವಣೆ ವೀಕ್ಷಕರಾಗಿ ಡಿಕೇಶಿ ನೇಮಕ