ಹವಾಮಾನ ವೈಪರೀತ್ಯದಿಂದ ಮಾವು ಇಳುವರಿ ಕುಂಠಿತ

KannadaprabhaNewsNetwork | Published : Apr 1, 2024 12:48 AM

ಸಾರಾಂಶ

ಯಶವಂತನಗರ (ಕಣವಿಹಳ್ಳಿ) ಮಾವಿನ ತೋಪುಗಳಿಗೆ ಹೆಸರಾಗಿದೆ. ಈಗಲೂ ಹೆಚ್ಚಿನ ಮಾವಿನ ತೋಟಗಳಿರುವುದು ಈ ಗ್ರಾಮದಲ್ಲಿಯೇ. ಅಲ್ಲದೆ, ಅಂಕಮನಾಳ್, ಬಂಡ್ರಿ, ಸಂಡೂರು, ಸುಶೀಲಾನಗರ ಮುಂತಾದೆಡೆ ಮಾವಿನ ತೋಪುಗಳಿವೆ.

ವಿ.ಎಂ. ನಾಗಭೂಷಣ

ಸಂಡೂರು: ಹವಾಮಾನ ವೈಪರೀತ್ಯ, ಬಿಸಿಲಿನ ತಾಪ, ಮಳೆ ಕೊರತೆಯಿಂದ ಈ ವರ್ಷ ತಾಲೂಕಿನಲ್ಲಿ ಹಣ್ಣುಗಳ ರಾಜನೆಂದೇ ಹೆಸರಾದ ಮಾವಿನ ಇಳುವರಿಯಲ್ಲಿ ಅಂದಾಜು ಶೇ.೭೫ರಷ್ಟು ಕುಂಠಿತವಾಗಿದೆ.

ತಾಲೂಕಿನ ಯಶವಂತನಗರ (ಕಣವಿಹಳ್ಳಿ) ಮಾವಿನ ತೋಪುಗಳಿಗೆ ಹೆಸರಾಗಿದೆ. ಈಗಲೂ ಹೆಚ್ಚಿನ ಮಾವಿನ ತೋಟಗಳಿರುವುದು ಈ ಗ್ರಾಮದಲ್ಲಿಯೇ. ಅಲ್ಲದೆ, ಅಂಕಮನಾಳ್, ಬಂಡ್ರಿ, ಸಂಡೂರು, ಸುಶೀಲಾನಗರ ಮುಂತಾದೆಡೆ ಮಾವಿನ ತೋಪುಗಳಿವೆ. ಇಲ್ಲಿ ಪ್ರಮುಖವಾಗಿ ರಸಪುರಿ, ಮಲಗೋವ, ಲಾಂಗ್ರಾ, ತೋತಾಪುರಿ, ಸುಂದರಸ, ಬೇವಿನಿಸ (ಬೆನೆಸಾನ್), ಬೆಳ್ಳಿಗುಂಡು, ಕುಂಕುಮಕೇಸರಿ ಮುಂತಾದ ತಳಿಯ ಮಾವಿನ ಹಣ್ಣುಗಳನ್ನು ಬೆಳೆಯಲಾಗುತ್ತಿದೆ. ಮಕರ ಸಂಕ್ರಮಣ ಸಂದರ್ಭದಲ್ಲಿ ಮಾವಿನ ಮರಗಳಲ್ಲಿ ಹೂ ಬಿಟ್ಟಿದ್ದನ್ನು ನೋಡಿದರೆ, ಈ ವರ್ಷ ಉತ್ತಮ ಇಳುವರಿ ಬರಬಹುದೆಂದು ಅಂದಾಜಿಸಲಾಗಿತ್ತು. ಆದರೆ, ನಂತರದ ದಿನಗಳಲ್ಲಿ ಹವಾಮಾನದಲ್ಲಾದ ಬದಲಾವಣೆ, ನೀರಿನ ಕೊರತೆ ಹಾಗೂ ಬಿಸಿಲಿನ ತಾಪದಿಂದಾಗಿ ಹೂಗಳು ಉದುರಿದವು. ಕಾಯಿ ಕಟ್ಟಲಿಲ್ಲ. ಗಿಡದಲ್ಲಿ ಅಲ್ಲೊಂದು ಇಲ್ಲೊಂದು ಕಾಯಿಗಳಿವೆ ಎಂಬ ಮಾತು ಬಹುತೇಕ ಮಾವು ಬೆಳೆಗಾರರಿಂದ ಕೇಳಿ ಬರುತ್ತಿದೆ.

ಯಶವಂತನಗರದ ಮಾವು ಬೆಳೆಗಾರರಾದ ಕುಮಾರಸ್ವಾಮಿ ಅಂಜಿಯವರು ಕನ್ನಡಪ್ರಭದೊಂದಿಗೆ ಮಾತನಾಡಿ, ನಮ್ಮ ೨ ಎಕರೆ ತೋಟದಲ್ಲಿ ಹಿಂದೆ ವಿವಿಧ ತಳಿಯ ೬೦ ಮಾವಿನ ಮರಗಳಿದ್ದವು. ಈಗ ಕೇವಲ ೧೫ ಉಳಿದುಕೊಂಡಿವೆ. ಈ ವರ್ಷ ಇನ್ನೊಂದೆರಡು ಮರಗಳು ಒಣಗಿ ಹೋಗಿವೆ. ಕೆಲವು ಮರಗಳಲ್ಲಿ ಅಂಟು ಸೋರುತ್ತಿದೆ. ಇದು ಮರ ಹಾಳಾಗುವ ಮುನ್ಸೂಚನೆಯಾಗಿದೆ.

ಹಿಂದಿನ ವರ್ಷ ೨ ಮರಗಳಿಂದ ದೊರೆತ ಹಣ್ಣುಗಳನ್ನು ಮಾರಾಟ ಮಾಡಿ ಸುಮಾರು ೫೦ ಸಾವಿರ ಹಣ ಗಳಿಸಿದ್ದೆ. ನಾವೇ ನೈಸರ್ಗಿಕವಾಗಿ ಬಲಿತ ಕಾಯಿಯನ್ನು ಹಣ್ಣಾಗಿಸಿ ಮಾರಾಟ ಮಾಡುವುದರಿಂದ, ಗ್ರಾಹಕರು ತೋಟಕ್ಕೆ ಬಂದು ಹಣ್ಣನ್ನು ಖರೀದಿಸಿ ತೆಗೆದುಕೊಂಡು ಹೋಗುತ್ತಾರೆ. ಈ ವರ್ಷ ನಮ್ಮ ತೋಟದಲ್ಲಿ ಶೇ.೫೦-೬೦ರಷ್ಟು ಮಾವಿನ ಇಳುವರಿ ಕಡಿಮೆಯಾಗಿದೆ ಎಂದು ಅಳಲು ತೋಡಿಕೊಂಡರು.

ಅಲ್ಲೊಂದು ಇಲ್ಲೊಂದು ಕಾಯಿ:

ನಮ್ಮ ಮಾವಿನ ತೋಟದಲ್ಲಿ ಈ ವರ್ಷ ಶೇ.೯೦ರಷ್ಟು ಮಾವಿನ ಇಳುವರಿ ಕಡಿಮೆಯಾಗಿದೆ. ಹೂ ಬಿಡುವ ಸಮಯದಲ್ಲಿ ಚಿಗುರೊಡೆಯಿತು. ಇದರಿಂದ ಹೂವಿಗೆ ದೊರೆಯಬೇಕಿದ್ದ ಶಕ್ತಿ ಎಲೆಗಳಿಗೆ ದೊರೆತದ್ದು, ಬಿಸಿಲಿನ ತಾಪ ಮುಂತಾದ ಕಾರಣಗಳಿಂದ ಇಳುವರಿ ತುಂಬ ಕಡಿಮೆಯಾಗಿದೆ. ಮರಗಳಲ್ಲಿ ಅಲ್ಲೊಂದು ಇಲ್ಲೊಂದು ಕಾಯಿ ಕಾಣಿಸುತ್ತಿದೆ ಎನ್ನುತ್ತಾರೆ ಕೊಟ್ರೇಶ್ ಅಂಕಮನಾಳ್.

ತಾಲೂಕಿನಲ್ಲಿ ೩೫೦ ಎಕರೆಯಲ್ಲಿ ಮಾವು ಬೆಳೆಯಲಾಗುತ್ತಿದೆ. ಈ ವರ್ಷ ಮಳೆ ಕೊರತೆ, ಉಷ್ಣಾಂಶ ಹೆಚ್ಚಳದಿಂದ ಮಾವಿನ ಹೂ ಉದುರಿದ್ದರಿಂದ ಇಳುವರಿಯಲ್ಲಿ ಶೇ.೭೫ ಕಡಿಮೆಯಾಗಿದೆ. ಮಾವಿನ ಗಿಡಗಳಲ್ಲಿ ಅಂಟು ಸೋರುವುದನ್ನು ತಡೆಯಲು ಹಳೆ ಮರಗಳನ್ನು ಪುನಶ್ಚೇತನಗೊಳಿಸಬೇಕು ಎನ್ನುತ್ತಾರೆ ತಾಲೂಕು ಹಿರಿಯ ಸಹಾಯಕ ತೋಟಗಾರಿಕ ನಿರ್ದೇಶಕ ಹನುಮಪ್ಪ ನಾಯಕ್.

Share this article