ದುಗ್ಗಮ್ಮ, ಚೌಡೇಶ್ವರಿ ದೇವಿ ಜಾತ್ರೆಗೆ ಅದ್ಧೂರಿ ಚಾಲನೆ

KannadaprabhaNewsNetwork |  
Published : Feb 26, 2026, 01:30 AM IST
(ಸಾಂದರ್ಭಿಕ ಚಿತ್ರ) | Kannada Prabha

ಸಾರಾಂಶ

ದಾವಣಗೆರೆ ನಗರ ದೇವತೆ ಶ್ರೀ ದುರ್ಗಾಂಬಿಕಾ ದೇವಿ ಕೋಣ ಸೇರಿದಂತೆ ಗಾಂಧಿ ನಗರದ ದೇವಸ್ಥಾನ, ವಿನೋಬ ನಗರ ಶ್ರೀ ಚೌಡೇಶ್ವರಿ ದೇವಸ್ಥಾನ, ಮತ್ತಿತರ ಅನೇಕ ಕಡೆ ಕೋಣ ಬಲಿ ಕೊಡುವುದರೊಂದಿಗೆ ಜಿಲ್ಲಾ ಕೇಂದ್ರದ ದುಗ್ಗಮ್ಮನ ಹಬ್ಬ ರಂಗೇರಿತು.

- ಪುತ್ರನ ಜೊತೆ ಉರುಳು ಸೇವೆ ಮಾಡಿ ಭಕ್ತಿ ಸಮರ್ಪಿಸಿದ ಜಗಳೂರು ಮಾಜಿ ಶಾಸಕ ಎಸ್.ವಿ.ರಾಮಚಂದ್ರ - ಹರಕೆ, ಜಾತ್ರೆ ಹೆಸರಿನಲ್ಲಿ ಭಕ್ತರಿಂದ ಸಾವಿರಾರು ಕೋಣ, ಲಕ್ಷದಷ್ಟು ಕುರಿ, ಅಸಂಖ್ಯಾತ ಕೋಳಿಗಳ ವಧೆ

- - -

ಕನ್ನಡಪ್ರಭ ವಾರ್ತೆ ದಾವಣಗೆರೆ

ದಾವಣಗೆರೆ ನಗರ ದೇವತೆ ಶ್ರೀ ದುರ್ಗಾಂಬಿಕಾ ದೇವಿ ಕೋಣ ಸೇರಿದಂತೆ ಗಾಂಧಿ ನಗರದ ದೇವಸ್ಥಾನ, ವಿನೋಬ ನಗರ ಶ್ರೀ ಚೌಡೇಶ್ವರಿ ದೇವಸ್ಥಾನ, ಮತ್ತಿತರ ಅನೇಕ ಕಡೆ ಕೋಣ ಬಲಿ ಕೊಡುವುದರೊಂದಿಗೆ ಜಿಲ್ಲಾ ಕೇಂದ್ರದ ದುಗ್ಗಮ್ಮನ ಹಬ್ಬ ರಂಗೇರಿತು.

ಪ್ರತಿ 2 ವರ್ಷಕ್ಕೊಮ್ಮೆ ನಡೆಯುವ ಜಾತ್ರೆಗೆ ಬುಧವಾರ ನಸುಕಿನ 2.45ಕ್ಕೆ ವಿಧ್ಯುಕ್ತ ಚಾಲನೆ ಸಿಕ್ಕಿದ್ದು, ಚರಗ ಚೆಲ್ಲುವ ಕಾರ್ಯದೊಂದಿಗೆ ದುಗ್ಗಮ್ಮ ಜಾತ್ರೆಯು ವೈಭವ ಪಡೆಯಿತು. ಕೋಣ ಬಲಿಯಾದ ಸುದ್ದಿ ತಿಳಿಯುತ್ತಿದ್ದಂತೆ ದೇವಸ್ಥಾನ ಬಳಿ ಜಮಾಯಿಸಿದ್ದ ಜನರು ಜಯಘೋಷ ಮೊಳಗಿಸುತ್ತಾ ತಮ್ಮ ತಮ್ಮ ಮನೆಗಳಿಗೆ ಮರಳಿದರು.

ಸುಮಾರು 7 ಲಕ್ಷ ಜನಸಂಖ್ಯೆಯ ಜಿಲ್ಲಾ ಕೇಂದ್ರ ದಾವಣಗೆರೆಗೆ ಜಾತ್ರೆಗೆಂದೇ ಅದರ ದುಪ್ಪಟ್ಟು ಜನ ಬರುತ್ತಾರೆ. ಇಡೀ ಅಡುಗೆ, ಆಹಾರ, ಮಾಂಸದ ಮಾರಾಟ, ಚರ್ಮ ಮಾರಾಟ, ಮಸಾಲೆ, ಎಣ್ಣೆ, ಬಟ್ಟೆ ಮಾರಾಟ ಹೊರತುಪಡಿಸಿದರೆ ಎಲ್ಲವೂ ಸ್ತಬ್ಧವಾಗಿರುತ್ತದೆ. ಅದರಲ್ಲೂ ಮಾಂಸಾಹಾರಿ ಹೊಟೆಲ್‌ಗಳಿಗೆ ದುಗ್ಗಮ್ಮನ ಜಾತ್ರೆ ಬಂದರೆ 3-4 ದಿನ ರಜೆ ಇದ್ದಂತೆ. ಅಷ್ಟರಮಟ್ಟಿಗೆ ದುಗ್ಗಮ್ಮನ ಜಾತ್ರೆಯಲ್ಲಿ ಭಕ್ತಿಯ ಹವಾ ಇರುತ್ತದೆ.

ಸುಮಾರು 85 ಸಾವಿರಕ್ಕೂ ಅಧಿಕ ಕುರಿಗಳು, ಸಾವಿರಾರು ಕೋಣಗಳು, ಹಲವಾರು ಲಕ್ಷ ಕೋಳಿಗಳು ದುಗ್ಗಮ್ಮನ ಜಾತ್ರೆ ವೇಳೆ ವಧೆಯಾಗುತ್ತವೆ. ಬಂಧು-ಬಳಗ, ಸ್ನೇಹಿತರು, ಸಹೋದ್ಯೋಗಿಗಳಿಗೆ ಹಬ್ಬದೂಟಕ್ಕೆ ಆಹ್ವಾನಿಸುವುದು ದುಗ್ಗಮ್ಮನ ಜಾತ್ರೆ ವೇಳೆ ಒಂದು ರೀತಿ ಅಲಿಖಿತ ಸಂಪ್ರದಾಯ. ಅತ್ಯಂತ ಕಡು ಬಡವನೆಂದರೂ ಕುರಿ, ಕೋಳಿ, ಹೊಸ ಬಟ್ಟೆ, ಆಹಾರ ಧಾನ್ಯ ಹೀಗೆ ಎಲ್ಲದಕ್ಕೂ ಸೇರಿಸಿ, ಕನಿಷ್ಠ ₹1 ಲಕ್ಷ ಖರ್ಚು ಮಾಡುವ, ಮಾಡಿಸುವಂತಹ ದುಬಾರಿ ಹಬ್ಬ ಇದಾಗಿದೆ.

ದಾವಣಗೆರೆ ಹಳೆ ಭಾಗ, ಹೊಸ ಭಾಗ, ಗ್ರಾಮೀಣ ಪ್ರದೇಶದಲ್ಲಿ ತಮ್ಮ ಮನೆ ಮುಂದೆ, ಪಕ್ಕದ ಜಾಗದಲ್ಲಿ ಶಾಮಿಯಾನ ಹಾಕಿ, ಕಂಬಗಳನ್ನು ನೆಟ್ಟು ತಾಡುಪಾಲು ಅಥವಾ ಪ್ಲಾಸ್ಟಿಕ್ ಚೀಲ ಹಾಕಿ, ಮರೆ ಮಾಡಿ, ತಮ್ಮ ಮನೆಯ ಮೇಲೆ ಶಾಮಿಯಾನ ಹಾಕಿಸಿ, ಹಬ್ಬ ಮಾಡುತ್ತಿರುವುದು ಸಾಮಾನ್ಯವಾಗಿದೆ. ಇಡೀ ಊರು ಅದರಲ್ಲೂ ದಾವಣಗೆರೆ ಹಳೆ ಭಾಗದಲ್ಲಂತೂ ಮಾಂಸದ ಅಡುಗೆ ಸಿದ್ಧಗೊಳಿಸುವ ವಾಸನೆ ಹರಡಿತ್ತು. ಮನೆಯ ಹೆಣ್ಣುಮಕ್ಕಳು, ಊರಿನಿಂದ ಬಂಧ ಸಂಬಂಧಿಗಳಲ್ಲಿ ಯಾರಾದರೂ ಹೆಣ್ಣುಮಗಳು ಮಾಂಸದಡುಗೆ ಚನ್ನಾಗಿ ಮಾಡಿದರೆ ಅಂತಹವರೆ ಅಡುಗೆ ನೇತೃತ್ವ ವಹಿಸಿದ್ದರು. ಮತ್ತೆ ಕೆಲವು ಕಡೆ ಮಾಂಸಹಾರ ಜೊತೆಗೆ ತಮ್ಮ ಮನೆಗೆ ಬರುವ ಸಸ್ಯಹಾರದ ಸ್ನೇಹಿತರು, ಸಹೋದ್ಯೋಗಿಗಳಿಗೆಂದೇ ಅಡುಗೆ ಮಾಡುವವರಿಂದ ಪ್ರತ್ಯೇಕ ಊಟದ ವ್ಯವಸ್ಥೆ ಮಾಡಿಸಿ, ಹಬ್ಬದ ಔತಣ ನೀಡಿದರು.

ಉರುಳು ಸೇವೆ- ದೀಡು ನಮಸ್ಕಾರ ಹರಕೆ:

ಕೋಣ ಬಲಿಯಾದ ಬಳಿಕ ನಸುಕಿನಿಂದಲೇ ಭಕ್ತರು ದೇವಸ್ಥಾನ ಬಳಿ ಉರುಳು ಸೇವೆ, ದೀಡು ನಮಸ್ಕಾರ ಹರಕೆ ತೀರಿಸುವ ಭಕ್ತಿ ಮೆರೆದರು. ಮತ್ತೆ ಕೆಲವರು ತಮ್ಮ ಮನೆಯಿಂದಲೇ ಮಕ್ಕಳು, ಮಹಿಳೆಯರು, ಯುವಕ-ಯುವತಿಯರು, ಹಿರಿಯರು ಬೇವಿನ ಉಡುಗೆಯುಟ್ಟು ದುಗ್ಗಮ್ಮನ ದೇವಸ್ಥಾನಕ್ಕೆ ಬಂದು ಹರಕೆ ತೀರಿಸಿದರು. ಇನ್ನು ಜಗಳೂರು ಮಾಜಿ ಶಾಸಕ, ಬಿಜೆಪಿ ಹಿರಿಯ ಮುಖಂಡ ಎಸ್.ವಿ.ರಾಮಚಂದ್ರ, ಪುತ್ರ ಅಜಯೇಂದ್ರ ಸಿಂಹ್ ದುಗ್ಗಮ್ಮನ ದೇವಿ ದೇವಸ್ಥಾನದ ಸುತ್ತಲೂ ಕುಟುಂಬ ಸಮೇತ ತೆರಳಿ, ಉರುಳು ಸೇವೆ ಹರಕೆ ತೀರಿಸಿದರು. ಪ್ರತಿ ವರ್ಷ ಎಸ್.ವಿ.ರಾಮಚಂದ್ರ ದುಗ್ಗಮ್ಮನಿಗೆ ಹರಕೆ ತೀರಿಸುತ್ತಾರೆ. ಅದರಂತೆ ಈ ಸಲವೂ ತಮ್ಮ ಆರಾಧ್ಯ ದೈವಕ್ಕೆ ಸಾಮಾನ್ಯ ಭಕ್ತನಾಗಿ ಹರಕೆ ಒಪ್ಪಿಸಿದರು. ಸಾವಿರಾರು ಜನರು ಬೇವಿನುಡುಗೆ, ದೀಡು ನಮಸ್ಕಾರ, ಉರುಳು ಸೇವೆ ಮಾಡುತ್ತಿದ್ದಾರೆ.

ಕುದುರಿದ ಬ್ಯುಸಿನೆಸ್‌:

ದಾವಣಗೆರೆಗೆ ನೆರೆ ಜಿಲ್ಲೆಗಳ ಜೊತೆಗೆ ರಾಜ್ಯದ ವಿವಿಧ ಜಿಲ್ಲೆ, ಮಹಾರಾಷ್ಟ್ರ, ತಮಿಳುನಾಡು, ಆಂಧ್ರ, ಕೇರಳ ಸೇರಿದಂತೆ ನಾನಾ ರಾಜ್ಯಗಳು, ವಿದೇಶಗಳಿಂದಲೂ ಭಕ್ತರು ದುಗ್ಗಮ್ಮನ ಜಾತ್ರೆಗೆ ಬಂದಿದ್ದಾರೆ. ದುಗ್ಗಮ್ಮನ ಜಾತ್ರೆಗೆ ವಧೆಯಾದ ಕುರಿಗಳ ಅಡುಗೆ ಒಂದು ಕಡೆ ಸಿದ್ಧವಾಗುತ್ತಿದ್ದರೆ, ದೇವರ ಮುಂದೆ ಕುರಿಗಳ ತಲೆ ಇಟ್ಟು ಪೂಜೆ ಮಾಡಲಾಗುತ್ತದೆ. ಇಡೀ ಊರಿನಲ್ಲಿ ಪ್ರಾಣಿಗಳ ವಧೆ ಮಾಡುವವರಿಗೆ ಭಾರಿ ಬೇಡಿಕೆ ಇತ್ತು. ಕುರಿ-ಕೋಳಿಗಳಿಗೆ ಚೂರಿ ಹಾಕುವವರು ಬಿಡುವಿಲ್ಲದೇ ತಮ್ಮ ಕಾಯಕದಲ್ಲಿ ತೊಡಗಿದ್ದರು. ಮಾಂಸದಿಂದ ಬೇರ್ಪಟ್ಟ ಕುರಿ ಚರ್ಮ ಖರೀದಿಯೂ ಭರ್ಜರಿಯಾಗಿ ನಡೆದಿತ್ತು. ನಗರದಾದ್ಯಂತ ಕುರಿ ತಲೆಯನ್ನು ಸುಟ್ಟು ಕೊಡುವ ಕೆಲಸಗಾರರ ಮುಂದೆ ಸಾಲುಗಟ್ಟಿ ಜನರು ನಿಂತಿದ್ದರು. ಕುರಿಯನ್ನು ತರಲಾಗದವರು, ಮನೆಯಲ್ಲಿ ಬೆರಳೆಣಿಕೆಯಷ್ಟು ಜನ ಇದ್ದವರು ಮಾಂಸದಂಗಡಿಗಳಿಂದ ಕುರಿ-ಕೋಳಿ ಮಾಂಸ ತಂದು, ಹಬ್ಬ ಆಚರಿಸಿದರು.

- - -

* ದುಗ್ಗಮ್ಮ ಉಘೇ.. ಉಘೇ... ಘೋಷಣೆ ಮೊಳಗಿಸಿದ ಭಕ್ತವೃಂದ ಕನ್ನಡಪ್ರಭ ವಾರ್ತೆ ದಾವಣಗೆರೆ

ನಾಡಿನ ಪ್ರಸಿದ್ಧ ಜಾತ್ರೆಗಳಲ್ಲೊಂದಾದ ದಾವಣಗೆರೆ ದುಗ್ಗಮ್ಮನ ಜಾತ್ರೆ ಅದ್ಧೂರಿಯಾಗಿ ಆರಂಭಗೊಂಡಿತು. ಭಕ್ತರು ನಸುಕಿನಿಂದಲೇ ಪೂಜೆ, ಹರಕೆ, ಸೇವೆಗಳನ್ನು ಸಲ್ಲಿಸಿದರು. ಮಂಗಳವಾರ ರಾತ್ರಿ ದೇವಸ್ಥಾನದ ಬಾಗಿಲು ಮುಚ್ಚಿ, ಬುಧವಾರ ಬೆಳಗಿನ ಜಾವ ಪೂಜೆ, ಅಲಂಕಾರದೊಂದಿಗೆ ದೇವಿ ದೇವಸ್ಥಾನದ ಬಾಗಿಲು ತೆರೆಯುತ್ತಿದ್ದಂತೆಯೇ ಸಾಲುಗಟ್ಟಿ ನಿಂತಿದ್ದ ಭಕ್ತರು ದುಗ್ಗಮ್ಮ ನಿನ್ನಾಲ್ಕು ಉಧೋ.. ಉಧೋ..., ದುಗ್ಗಮ್ಮ ಉಘೇ... ಉಘೇ... ಎಂಬ ಘೋಷಣೆ ಮೊಳಗಿದರು.

ನಸುಕಿನಿಂದಲೇ ದೇವಿಗೆ ಹರಕೆ ತೀರಿಸಲು ಭಕ್ತರ ದಂಡು ದೇವಸ್ಥಾನದತ್ತ ಧಾವಿಸುತ್ತಿತ್ತು. ಬೇವಿನುಡಿಗೆ ತೊಟ್ಟವರು, ಉರುಳು ಸೇವೆ, ದೀಡು ನಮಸ್ಕಾರ ಮಾಡುವ ಸಣ್ಣ ಮಕ್ಕಳಿಂದ ಹಿರಿಯರು, ವಯೋವೃದ್ಧರವರೆಗೆ ತಮ್ಮ ಶಕ್ತ್ಯಾನುಸಾರ ಭಕ್ತಿ ಸಮರ್ಪಿಸಿದರು. ಕುಟುಂಬ ಸಮೇತರಾಗಿ ಬಂದು ಬಡವ-ಬಲ್ಲಿದ, ಅಕ್ಷರಸ್ಥ-ಅನಕ್ಷರಸ್ಥ ಎಂಬ ಯಾವುದೇ ಅಂತರವಿಲ್ಲದೇ, ಬೇವಿನುಡುಗೆ ಸೇವೆ, ಉರುಳು ಸೇವೆ, ದೀಡು ನಮಸ್ಕಾರದ ಸೇವೆ ಸಲ್ಲಿಸಿದರು. ದುಗ್ಗಮ್ಮನ ಮುಂದೆ ಎಲ್ಲರೂ ಒಂದಾಗಿ ತಮ್ಮ ಭಕ್ತಿ ಸಲ್ಲಿಸುವುದರಲ್ಲಿ ತಲ್ಲೀನರಾಗಿದ್ದರು.

ದಾವಣಗೆರೆ ಶಕ್ತಿ ದೇವತೆ ದುಗ್ಗಮ್ಮನಿಗೆ ಮಹಾಪೂಜೆ ಹೊತ್ತಿಗೆ ದೇವಸ್ಥಾನವು ಭಕ್ತಗಣದಿಂದ ತುಂಬಿ ತುಳುಕುತ್ತಿತ್ತು. ಬೇವಿನ ಸೀರೆ ಉಡುಗೆ ತೊಟ್ಟು ಹರಕೆ ತೀರಿಸಿದವರು ಬಟ್ಟೆ ಬದಲಿಸಲು, ಸ್ನಾನಕ್ಕೆ ಪಾಲಿಕೆ ನೀರಿನ ವ್ಯವಸ್ಥೆ, ತಾತ್ಕಾಲಿಕ ಸ್ನಾನ ಗೃಹಗಳ ವ್ಯವಸ್ಥೆ ಮಾಡಿತ್ತು. ಹರಕೆ ತೀರಿಸುವವರಿಗೆ ನೇರವಾಗಿ ದೇವಸ್ಥಾನ ಬಳಿ ಪ್ರವೇಶಾವಕಾಶ ಕಲ್ಪಿಸಲಾಗಿತ್ತು. ಮಹಿಳೆಯರು ಅರಿಷಿಣ, ಕುಂಕುಮ, ಸೀರೆಯೊಂದಿಗೆ ದೇವಿಗೆ ಉಡಿ ತುಂಬಿದರು. ಮಹಾಪೂಜೆಗೆ ಗುಡಿಯಲ್ಲಿ ಕಾಲಿಡಲೂ ಜಾಗವಿಲ್ಲದಷ್ಟು ಭಕ್ತರು ನೆರೆದಿದ್ದರು.

ಭಕ್ತರು ಕಾಯಿ, ಹಣ್ಣು ಸೇರಿದಂತೆ ದೇವಿಗೆ ಕಾಣಿಕೆ ಅರ್ಪಿಸಿದರು. ಮಂಗಳವಾದ್ಯಗಳ ಸಮೇತ ಅನೇಕರು ದೇವಿ ಪೂಜೆಗೆ ದೇವಸ್ಥಾನಕ್ಕೆ ಆಗಮಿಸಿದರು. ಕಳೆದ ರಾತ್ರಿಯಿಂದಲೇ ದೇವಸ್ಥಾನ ಬಳಿ ಉರುಳು ಸೇವೆ, ದೀಡು ನಮಸ್ಕಾರ, ಬೇವಿನುಡುಗೆ ಹರಕೆ ತೀರಿಸುತ್ತಿದ್ದುದು ಕಂಡುಬಂದಿತು. ಹರಕೆ ತೀರಿಸಿದವರು ತಮ್ಮ ಬಟ್ಟೆಗಳನ್ನು ಅಲ್ಲಿಯೇ ಬಿಸಾಡಿ ಹೋಗಿದ್ದರಿಂದ ಬಟ್ಟೆಗಳ ರಾಶಿಯೇ ಕಂಡುಬಂದಿತು.

ಜಾತ್ರೆಗೆ ಬಂದ ಮಕ್ಕಳಿಗೆ ಆಟಿಕೆಗಳು, ಬಣ್ಣ ಬಣ್ಣದ ಬಲೂನ್ ಗಳು, ಹೆಣ್ಣು ಮಕ್ಕಳಿಗೆ ಬಳೆ, ಅಲಂಕಾರಿಕ ವಸ್ತುಗಳು, ತಿನಿಸು ಪ್ರಿಯರಿಗಾಗಿ ಸಿಹಿ, ಕಾರ ಮಂಡಕ್ಕಿ, ಮೆಣಸಿನಕಾಯಿ ಹೀಗೆ ನಾನಾ ಬಗೆಯ ಮಾರಾಟದ ಶೆಡ್‌ಗಳ ಬಳಿ ಜನರು ಮುಗಿ ಬಿದ್ದಿದ್ದರು. ದುಗ್ಗಮ್ಮನ ಜಾತ್ರೆ ಅಂದರೆ ಬಂದ ಬೀಗರು, ಬಂಧು-ಬಳಗಕ್ಕೆ ಕುರಿ, ಕೋಳಿ, ಕೋಣಗಳ ಊಟ ಭರ್ಜರಿಯಾಗಿತ್ತು. ಮಧ್ಯಾಹ್ನದ ಹೊತ್ತಿಗೆ ಇಡೀ ಊರಿನಲ್ಲಿ ಅಡುಗೆಯ ವಾಸನೆ ಘಮಘಮಿಸುತ್ತಿತ್ತು. ರಸ್ತೆಗಳ ಬದಿಯಲ್ಲಿ ಕುರಿಗಳ ತಲೆ, ಕಾಲುಗಳನ್ನು ಸುಡುತ್ತಿದ್ದ ದೃಶ್ಯ ಸಾಮಾನ್ಯವಾಗಿತ್ತು. ಇಡೀ ಊರಿನ ರಸ್ತೆಗಳಲ್ಲಿ ಬಹುತೇಕ ಕಡೆ ರಕ್ತದೋಕುಳಿಯಾಗಿದ್ದು, ಚರಂಡಿ, ಒಳಚರಂಡಿಗಳಲ್ಲಿ ರಕ್ತದ ಕೋಡಿಯೇ ಹರಿದಿತ್ತು. ಇನ್ನೂ ಐದಾರು ದಿನಗಳ ಕಾಲ ದುಗ್ಗಮ್ಮನ ಜಾತ್ರೆ ಜೊತೆಗೆ ಬಂಧು ಬಳಗಕ್ಕೆ ಆತಿಥ್ಯವೂ ಮುಂದುವರಿಯಲಿದೆ. ನಗರ ದೇವತೆ ಶ್ರೀ ದುಗ್ಗಮ್ಮ ಸರ್ವರಿಗೂ ಒಳಿತು ಮಾಡಲು, ಕಾಲಕಾಲಕ್ಕೆ ಮಳೆ, ಬೆಳೆಯಾಗಿ ಸಮೃದ್ಧಿ ನೆಲೆಸಲಿ ಎಂಬ ಪ್ರಾರ್ಥನೆಯೂ ಮೊಳಗಿತು.

- - -

-(ಫೋಟೋಗಳಿವೆ).

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

೭೨ ರಾಸುಗಳ ಮಾಲೀಕರಿಗೆ ೧೬೮.೫ಗ್ರಾಂ ಚಿನ್ನ ಬಹುಮಾನ
ವಿಜ್ಞಾನದ ಬಗ್ಗೆ ಮಕ್ಕಳಲ್ಲಿ ಆಸಕ್ತಿ ಮೂಡಿಸಿ: ರಾಮಕೃಷ್ಣೇಗೌಡ