ಕನ್ನಡಪ್ರಭ ವಾರ್ತೆ ಹುಬ್ಬಳ್ಳಿ
ಸೋಮವಾರ ರಾಜ್ಯಾದ್ಯಂತ ನವರಾತ್ರಿ, ಮಂಗಳವಾರ ವಿಜಯದಶಮಿ ಆಚರಣೆ ಹಿನ್ನೆಲೆಯಲ್ಲಿ ಮಹಾನಗರದಲ್ಲಿ ಭಾನುವಾರವೇ ಹಬ್ಬದ ಖರೀದಿ ಜೋರಾಗಿತ್ತು. ನಗರದ ಪ್ರಮುಖ ಮಾರುಕಟ್ಟೆ, ಬಟ್ಟೆ, ಕಿರಾಣಿ ಅಂಗಡಿಗಳು ಜನರಿಂದ ತುಂಬಿರುವುದು ಕಂಡುಬಂದಿತು.ರಜೆ ದಿನಗಳು ಸಾಲುಸಾಲಾಗಿ ಬಂದಿರುವ ಹಿನ್ನೆಲೆಯಲ್ಲಿ ಭಾನುವಾರವೇ ದಸರಾ ಹಬ್ಬದ ಸಿದ್ಧತೆ ಮಹಾನಗರದಲ್ಲಿ ಕಂಡುಬಂದಿತು. ಕಳೆದ 8 ದಿನಗಳಿಂದ ನವರಾತ್ರಿಯ ಸಿದ್ಧತೆ ನಡೆಸಿದ್ದ ಜನತೆ ಭಾನುವಾರವೇ ಹಬ್ಬದ ಕೊನೆಯ ದಿನದ ಸಿದ್ಧತೆ ನಡೆಸಿದರು. ಕಳೆದ 8 ದಿನಗಳಿಂದ ನಗರದ ದೇವಸ್ಥಾನಗಳು ವಿದ್ಯುತ್ ಅಲಂಕಾರಗಳಿಂದ ಕಂಗೊಳಿಸುತ್ತಿದ್ದು, ಭಕ್ತರಿಂದ ತುಂಬಿ ತುಳುಕುತ್ತಿವೆ. 9ನೇ ದಿನವಾದ ಸೋಮವಾರ ಹಾಗೂ ವಿಜಯದಶಮಿಗಾಗಿ ಮಾರುಕಟ್ಟೆಯಲ್ಲಿ ಜನತೆ ಖರೀದಿಯಲ್ಲಿ ತೊಡಗಿದ್ದರು. ಬೆಲೆಯಲ್ಲಿ ಕೊಂಚ ಏರಿಕೆ ಕಂಡುಬಂದರೂ ಹಬ್ಬದ ಖರೀದಿಯಲ್ಲಿ ತೊಡಗಿರುವುದು ಮಾತ್ರ ಕಳೆದ ವರ್ಷದಿಂದ ಕೊಂಚ ಹೆಚ್ಚಾಗಿರುವುದು ಕಂಡುಬಂದಿತು.
ಪೂಜಾ ಸಾಮಗ್ರಿಗಳ ಖರೀದಿ:ಪೂಜೆಗೆ ಬೇಕಾದ ಬಗೆಬಗೆಯ ಹೂ, ಬಿಲ್ವಪತ್ರೆ, ಬನ್ನಿ, ಬಾಳೆಗಿಡ, ಬಾಳೆ ಎಲೆ, ಮಾವಿನ ತೋರಣ, ಕಬ್ಬು, ಕುಂಬಳಕಾಯಿ, ಜೋಳದ ದಂಟು ಸೇರಿದಂತೆ ಅನೇಕ ಪೂಜಾ ಸಾಮಗ್ರಿ ಖರೀದಿ ಜೋರಾಗಿತ್ತು. ಕಳೆದ ವರ್ಷಕ್ಕೆ ಹೋಲಿಸಿದರೆ ಬೆಲೆಯಲ್ಲಿ ಕೊಂಚ ಹೆಚ್ಚಾಗಿರುವುದು ಕಂಡುಬಂದಿತು. ಪೂಜೆಗೆ ಬೇಕಾದ ಪ್ರಮುಖ ವಸ್ತು ಹೂ. ಇದರ ಬೆಲೆಯಲ್ಲೂ ಹೆಚ್ಚಿನ ಪ್ರಮಾಣದಲ್ಲಿ ಏರಿಕೆಯಾಗಿರುವುದು ಕಂಡುಬಂದಿತು. ಕಳೆದ ಬಾರಿ ಕೆಜಿ ಚೆಂಡು ಹೂಗೆ ₹100ರಿಂದ ₹120 ಇದ್ದರೆ, ಈ ಬಾರಿ ₹110ರಿಂದ ₹150ರ ವರೆಗೂ ಮಾರಾಟವಾಯಿತು. ಸೇವಂತಿ ಹೂ ಕೆಜಿಗೆ ₹180ರಿಂದ ₹200ರ ವರೆಗೂ ಮಾರಾಟವಾಯಿತು. ಮಲ್ಲಿಗೆ ಹೂ ಒಂದು ಮಾರಿಗೆ ₹50ರಿಂದ ₹70 ಕೊಟ್ಟು ಖರೀದಿಸುವಂತಾಯಿತು.
ಗಗನಕ್ಕೇರಿದ ಹಣ್ಣಿನ ಬೆಲೆ:ಪೂಜೆಗೆ ಬೇಕಾದ ಹಣ್ಣಿನ ಬೆಲೆಯೂ ಏರಿಕೆಯಾಗಿದ್ದು, 1 ಕೆಜಿ ಸೇಬಿಗೆ ₹180, ಚಿಕ್ಕು ₹80ರಿಂದ ₹110, ಸೀತಾಫಲ ₹100ರಿಂದ ₹130, ದಾಳಿಂಬೆ ₹100-120 ಕಿತ್ತಳೆ ₹70ರಿಂದ ₹90, ದಾಳಿಂಬೆ ₹80-₹110ಕ್ಕೆ ಮಾರಾಟವಾದವು. ಪೂಜೆಗೆ ಬೇಕಾದ 5 ತರಹದ ಹಣ್ಣಿನ ಒಂದು ಸೆಟ್ ₹100ರಿಂದ ₹250ರ ವರೆಗೂ ಮಾರಾಟವಾಯಿತು. ಎರಡು ಕಬ್ಬಿಗೆ ₹60, 5 ಕಬ್ಬಿಗೆ ₹120ರಿಂದ ₹180ರ ವರೆಗೆ, ಎರಡು ಬಾಳೆಗಿಡಕ್ಕೆ ₹50ರಿಂದ 120, 7 ಕುಂಬಳಕಾಯಿ ₹70ರಿಂದ ₹150, 5 ಜೋಳದ ದಂಟಿನ ಕಟ್ಟಿಗೆ ₹30ರಿಂದ ₹50ರ ವರೆಗೆ ಮಾರಾಟವಾಯಿತು.
ನವರಾತ್ರಿ ಹಬ್ಬದಿಂದಾಗಿ ಕಳೆದ ಒಂದು ವಾರದಿಂದ ಹೂವಿನ ಮಾರಾಟ ಹೆಚ್ಚಾಗಿದೆ. ಮೊದಲು ಒಂದು ದಿನಕ್ಕೆ 20ರಿಂದ 30 ಮಾರು ಹೂ ಮಾರುತ್ತಿದ್ದೆ, ಒಂದು ವಾರದಿಂದ ನಿತ್ಯ 100 ಮಾರಿಗೂ ಅಧಿಕ ಮಲ್ಲಿಗೆ ಹೂ ಮಾರುತ್ತಿದ್ದೇನೆ ಎಂದು ಹೂವಿನ ವ್ಯಾಪಾರಿ ಲಕ್ಷ್ಮವ್ವ ಹಡಪದ ಹೇಳುತ್ತಾರೆ.ಪ್ರತಿವರ್ಷ ಕಬ್ಬು, ಚೆಂಡು ಹೂ, ಬಾಳೆಗಿಡ, ಮಾವಿನ ತೋರಣ ಮಾರಾಟ ಮಾಡುತ್ತಿದ್ದೇನೆ. ಕಳೆದ ವರ್ಷ ಹೊಲಿಸಿದರೆ ಈ ವರ್ಷ ಬೆಲೆ ಜಾಸ್ತಿಯಾಗಿದೆ. ಕಳೆದ ಬಾರಿಗಿಂತ ಈ ಬಾರಿ ಖರೀದಿ ಹೆಚ್ಚಾಗಿದೆ ಎಂದು ವ್ಯಾಪಾರಿ ಮೆಹಬೂಬ ನದಾಫ ತಿಳಿಸುತ್ತಾರೆ.