ಕೃಷ್ಣ ಎನ್. ಲಮಾಣಿ
ಕನ್ನಡಪ್ರಭ ವಾರ್ತೆ ಹೊಸಪೇಟೆವಿಜಯನಗರ ಆಳರಸರ ಕಾಲದ ದಸರಾ ಹಬ್ಬದ ಸಂಭ್ರಮ ಹೊಸಪೇಟೆ ನಗರದ ಏಳುಕೇರಿಯಲ್ಲಿ ಮರುಕಳಿಸಿದೆ. ಆಗಿನ ಕಾಲದ ದಸರಾ ವೈಭವವನ್ನು ಸಾಂಪ್ರದಾಯಿಕ ಶೈಲಿಯಲ್ಲಿ ಆಚರಣೆ ಮಾಡಲಾಗುತ್ತಿದ್ದು, ಇಡೀ ಕನ್ನಡ ನಾಡಿನ ಸಂಸ್ಕೃತಿಯ ಪ್ರತಿಬಿಂಬ ಅನಾವರಣಗೊಳ್ಳುತ್ತಿದೆ.
ನಗರದ ಏಳುಕೇರಿಗಳಲ್ಲಿ ವಿಜಯದಶಮಿ ಸಂಭ್ರಮ ಮನೆ ಮಾಡಿದ್ದು, ನಿತ್ಯ ಶಕ್ತಿದೇವತೆಗೆ ವಿಶೇಷ ಪೂಜೆಗಳು ನೆರವೇರುತ್ತಿವೆ. ಶಕ್ತಿ ದೇವತೆಗಳನ್ನು ಹೊತ್ತ ಪಲ್ಲಕ್ಕಿಗಳು ಕೇರಿಯಲ್ಲಿ ಸುತ್ತಾಡಿ, ಭಕ್ತರ ಮನೆಗೆ ತೆರಳುವುದು ವಿಜಯನಗರ ಅರಸರ ಕಾಲದ ಸಂಪ್ರದಾಯವಾಗಿದೆ. ಈ ಕಾರ್ಯವನ್ನು ಈಗಲೂ ನಿತ್ಯ ಮಾಡಲಾಗುತ್ತಿದೆ.ಏಳುಕೇರಿಗಳಲ್ಲಿ ಆರಾಧನೆ:
ನಗರದ ಮ್ಯಾಸಕೇರಿ, ತಳವಾರಕೇರಿ, ಚಿತ್ರಕೇರಿ, ಜಂಬಾನಹಳ್ಳಿಕೇರಿ, ಉಕ್ಕಡಕೇರಿ, ಬಾಣದಕೇರಿ ಹಾಗೂ ಬಂಡೆಕೇರಿಗಳಲ್ಲಿ ಶಕ್ತಿದೇವತೆಗಳ ದೇವಾಲಯಗಳಲ್ಲಿ ಪೂಜಾ ಕೈಂಕರ್ಯಗಳು ಗರಿಗೆದರಿವೆ.ಮ್ಯಾಸಕೇರಿಯ ಹುಲಿಗೆಮ್ಮ, ಕೆಂಗಮ್ಮ, ತಳವಾರಕೇರಿಯ ರಾಂಪುರ ದುರ್ಗಮ್ಮ, ಚಿತ್ರಕೇರಿಯ ಗ್ರಾಮದೇವತೆ ಊರಮ್ಮ ದೇವಿ, ಬಾಣದಕೇರಿಯ ನಿಜಲಿಂಗಮ್ಮ ಹಾಗೂ ಉಕ್ಕಡಕೇರಿಯ ಜಲದುರ್ಗಮ್ಮ ದೇವಿಯ ಪಲ್ಲಕ್ಕಿ ಮೆರವಣಿಗೆ ಮನೆ, ಮನೆಗೆ ತೆರಳಿ, ಭಕ್ತರಿಗೆ ಆಶೀರ್ವದಿಸುತ್ತವೆ. ಈ ವೇಳೆ ಭಕ್ತರು, ಮನೆಯಲ್ಲಿರುವ ದವಸ-ಧಾನ್ಯ, ಹೂವು, ಹಣ್ಣು ಹಾಗೂ ಕಾಣಿಕೆ ಸಲ್ಲಿಸಿ, ಭಕ್ತಿ ಸಮರ್ಪಣೆ ಮಾಡುತ್ತಾರೆ. ಈ ವೇಳೆ ಮಹಿಳೆಯರು ಸೋಬಾನ ಪದಗಳು ಹಾಡಿ, ಭಕ್ತಿಭಾವ ಮೆರೆಯುತ್ತಾರೆ.
ಪೂಜಾ ಕಾರ್ಯ ಹೇಗೆ?ಮಹಾಲಯ ಅಮಾವಾಸ್ಯೆಯಂದು ಶಕ್ತಿದೇವತೆಗಳು ಪೂಜೆಗೆ (ತೊಟ್ಟಿಲು ಸೇವೆ) ಕೂಡಿಸಲಾಗುತ್ತದೆ. ನವರಾತ್ರಿ ಒಂಬತ್ತು ದಿನಗಳ ಕಾಲ ದೇವಿಯ ಪ್ರತಿಮೆಗಳಿಗೆ ದಿನ ನಿತ್ಯ ಒಂದು ಹೊಸ ರೇಷ್ಮೆ ಸೀರೆ ತೊಡಿಸಿ, ವಿವಿಧ ಪುಷ್ಪಗಳಿಂದ ಅಲಂಕಾರ ಮಾಡಿ, ವಿಶೇಷ ಪೂಜೆ ಸಲ್ಲಿಸಲಾಗುತ್ತದೆ. ಇಡೀ ರಾತ್ರಿ ದೇವಿಯ ಮುಂದೆ ಸೋಬಾನ ಪದಗಳು ಹಾಡಿ ದೇವಿಯನ್ನು ಆರಾಧಿಸುತ್ತಾರೆ.
ದೇವರ ಬನ್ನಿ ಮಹೋತ್ಸವ:ತಾಲೂಕಿನ ನಾಗೇನಹಳ್ಳಿ ಗ್ರಾಮದ ಹೊರವಲಯದ ಗುಡ್ಡದಲ್ಲಿ ವಿಜಯನಗರ ಅರಸರು ನಿರ್ಮಿಸಿರುವ ಎರಡು ಗುಹಾಂತರ ದೇವಾಲಯಗಳಲ್ಲಿ ಚನ್ನಬಸವಣ್ಣ ಹಾಗೂ ನಿಜಲಿಂಗಮ್ಮ ದೇವತೆಗಳು ನೆಲೆಸಿದ್ದಾರೆ. ಚೆನ್ನಬಸವಣ್ಣ ದೇಗುಲದಲ್ಲಿ ಗಣಪತಿ, ಪರಮೇಶ್ವರ, ವೀರಭದ್ರೇಶ್ವರ, ಆಂಜನೇಯ ದೇವರು ಇದ್ದರೆ, ಇನ್ನೊಂದು ದೇವಾಲಯದಲ್ಲಿ ನಿಜಲಿಂಗಮ್ಮ ದೇವಿ ಪ್ರತಿಮೆ ಭಕ್ತರನ್ನು ಸೆಳೆಯುತ್ತಿದೆ. ಆಯುಧ ಪೂಜೆ ದಿನ ಹೊಸಪೇಟೆ ಏಳುಕೇರಿ, ಕಮಲಾಪುರ ಸುತ್ತಮುತ್ತಲಿನ ಶಕ್ತಿದೇವತೆಗಳನ್ನು ಬೃಹತ್ ಮೆರವಣಿಗೆ ಮೂಲಕ ಕರೆ ತರಲಾಗುತ್ತಿದೆ. ದೇವಾಲಯದ ಬಳಿ ಇರುವ ಶಮಿವೃಕ್ಷಕ್ಕೆ ಪಲ್ಲಕ್ಕಿ ಹೊತ್ತ ಭಕ್ತರು, ಪ್ರದಕ್ಷಿಣೆ ಹಾಕಿ, ಬಳಿಕ ಚೆನ್ನಬಸವಣ್ಣ ಹಾಗೂ ನಿಜಲಿಂಗಮ್ಮ ದೇವಿಗೆ ಬನ್ನಿ ಅರ್ಪಿಸುತ್ತಾರೆ. ದೇವರ ಬನ್ನಿ ಎಂದು ಈ ಭಾಗದಲ್ಲಿ ಆಚರಣೆಯಲ್ಲಿದೆ.
ದೇವರಬನ್ನಿ ಆಚರಣೆ ಬಳಿಕ ವಿಜಯದಶಮಿ ದಿನ ಉರಬನ್ನಿ ಎಂದು ಆಚರಿಸಲಾಗುತ್ತದೆ. ಅಂದು ಬಂಧು-ಮಿತ್ರರೊಂದಿಗೆ ಪರಸ್ಪರ ಬನ್ನಿ ವಿನಿಮಯ ಮಾಡಿಕೊಂಡು ಸಂಭ್ರಮಿಸುತ್ತಾರೆ.ಏಳುಕೇರಿಗಳಲ್ಲಿ ಸಂಭ್ರಮ:
ದಸರಾ ಹಬ್ಬವನ್ನು ಅತ್ಯಂತ ದೊಡ್ಡ ಹಬ್ಬವನ್ನಾಗಿ ಆಚರಿಸುತ್ತಾ ಬಂದಿರುವ ಏಳುಕೇರಿ ವಾಲ್ಮೀಕಿ ನಾಯಕ ಸಮುದಾಯದವರು, ಕೇರಿಗಳನ್ನು ಹಸಿರು ತೋರಣ ಹಾಗೂ ವಿದ್ಯುತ್ ದೀಪಾಲಂಕಾರದಿಂದ ಅಲಂಕರಿಸುತ್ತಾರೆ. ದೇವಾಲಯಗಳ ಪ್ರಾಂಗಣದಲ್ಲಿ ಭಜನೆ, ಕೋಲಾಟ, ಭಕ್ತಿಗೀತೆ, ಸೋಬಾನ ಪದಗಳನ್ನು ಹಾಡಿ ರಂಜಿಸುತ್ತಾರೆ. ಜಗತ್ತು ಎಷ್ಟೇ ಆಧುನಿಕತೆಯತ್ತ ಸಾಗಿದರೂ ಏಳುಕೇರಿಗಳಲ್ಲಿ ಬುಡಕಟ್ಟು ಸಂಸ್ಕೃತಿಯಂತೆ ವಿಜಯದಶಮಿ ದಿನಗಳಲ್ಲಿ ದೇವಿಯ ಆರಾಧನೆ ನಡೆಯುತ್ತಿರುವುದು ವಿಶೇಷ.ನಾಡಿನ ಹೆಮ್ಮೆ: ವಿಜಯನಗರ ಅರಸರ ಕಾಲದಿಂದಲೂ ನಗರದ ಬೇಡರ ಏಳುಕೇರಿಗಳಲ್ಲಿ ನಾಡಹಬ್ಬ ದಸರಾ ಹಬ್ಬವನ್ನು ಅತ್ಯಂತ ವಿಜೃಂಭಣೆಯಿಂದ ಆಚರಿಸಲಾಗುತ್ತಿದೆ. ಆಧುನಿಕತೆ ನಡುವೆಯೂ ದಸರಾ ಹಬ್ಬ ಸಾಂಸ್ಕೃತಿಕ ಮಹತ್ವ ಪಡೆದಿದೆ. ಬುಡಕಟ್ಟು ಸಂಪ್ರದಾಯ, ಆಚರಣೆಗಳು ಏಳುಕೇರಿಗಳಲ್ಲಿ ಇನ್ನೂ ಜೀವಂತವಾಗಿರುವುದು, ನಾಡಿನ ಹೆಮ್ಮೆಯಾಗಿದೆ ಎನ್ನುತ್ತಾರೆ ಹಂಪಿ ಕನ್ನಡ ವಿವಿಯ ಪ್ರಾಧ್ಯಾಪಕ ಡಾ. ತಾರಿಹಳ್ಳಿ ಹನುಮಂತಪ್ಪ ಅವರು.