ದಸರಾ ಗಜಪಡೆ: ಕುಶಾಲು ತೋಪು ಸಿಡಿಸುವ ಮೊದಲ ತಾಲೀಮು ಯಶಸ್ವಿ

KannadaprabhaNewsNetwork | Published : Sep 27, 2024 1:16 AM

ಸಾರಾಂಶ

ಕುಶಾಲತೋಪು ಸಿಡಿಸಿದ ವೇಳೆ ಹೊರ ಹೊಮ್ಮಿದ ಶಬ್ದಕ್ಕೆ ಹೆದರದೇ ನಿಂತ ಗಜಪಡೆ, ಅಶ್ವರೋಹಿ ದಳ. ಯಾವುದೇ ಆನೆ ಶಬ್ದಕ್ಕೆ ಬೆಚ್ಚಿಲ್ಲ. ಏಕಲವ್ಯ ಮೊದಲ ಬಾರಿ ದಸರಾ ಮಹೋತ್ಸವದಲ್ಲಿ ಪಾಲ್ಗೊಂಡಿದ್ದರೂ ಬೆಚ್ಚಲಿಲ್ಲ. ಆ ಮೂಲಕ ಕುಶಾಲತೋಪು ಪ್ರಯೋಗ ಯಶಸ್ವಿಯಾಯಿತು.

ಕನ್ನಡಪ್ರಭ ವಾರ್ತೆ ಮೈಸೂರು

ಜಂಬೂ ಸವಾರಿಯಲ್ಲಿ ಭಾಗವಹಿಸುವ ದಸರಾ ಗಜಪಡೆ ಬೆದರದಿರಲಿ ಎಂದು ವಸ್ತು ಪ್ರದರ್ಶನ ಪ್ರಾಧಿಕಾರದ ಆವರಣದಲ್ಲಿ ಆನೆಗಳು ಮತ್ತು ಕುದುರೆಗಳಿಗೆ ಕುಶಾಲತೋಪು ಸಿಡಿಸಿ ಮೊದಲ ಹಂತದ ಪೂರ್ವಭಾವಿ ತಾಲೀಮು ನಡೆಸಲಾಯಿತು.

ವಸ್ತು ಪ್ರದರ್ಶನದ ವಾಹನ ನಿಲುಗಡೆ ಸ್ಥಳದಲ್ಲಿ ಈ ಪೂರ್ವಭಾವಿ ತಾಲೀಮು ನೆರವೇರಿತು. ಅಂಬಾರಿ ಆನೆ ಅಭಿಮನ್ಯು ನೇತೃತ್ವದ ಗಜಪಡೆಗೆ ಗುರುವಾರ 21 ಸುತ್ತು ಕುಶಾಲ ತೋಪು ಸಿಡಿಸುವ ಮೂಲಕ ಈ ತಾಲೀಮು ನಡೆಸಲಾಯಿತು.

ಮೈಸೂರು ದಸರಾದ ಆಕರ್ಷಣೆಯ ಕೇಂದ್ರವಾದ ಜಂಬುಸವಾರಿ ದಿನದಂದು ಅರಮನೆ ಆವರಣದಲ್ಲಿ ನಾಡ ಅದಿ ದೇವತೆ ಚಾಮುಂಡೇಶ್ವರಿ ದೇವಿಗೆ ಪೂಜೆ ಸಲ್ಲಿಸುವ ಮುನ್ನ 21 ಕುಶಾಲತೋಪನ್ನು ಸಿಡಸಲಾಗುತ್ತದೆ. ಆನೆಗಳು, ಕುದುರೆಗಳು ಈ ವೇಳೆ ಬೆದರಬಾರದು ಎಂಬ ಹಿನ್ನೆಲೆಯಲ್ಲಿ ಕುಶಾಲತೋಪು ಸಿಡಿಸಿ ತಾಲೀಮು ನಡೆಸಲಾಗುತ್ತದೆ. ಗುರುವಾರ ಮೊದಲ ಸುತ್ತಿನ ತಾಲೀಮು ನಡೆಸಲಾಗಿದೆ. ಇನ್ನು ಎರಡು ಬಾರಿ ಅಂದರೆ ಸೆ. 29 ಹಾಗೂ ಅ.1ರಂದು ತಾಲೀಮ ನಡೆಸಲಾಗುವುದು.

ಅಭಿಮನ್ಯು ನೇತೃತ್ವದ 14 ಆನೆಗಳೂ ಈ ಪೂರ್ವಾಭ್ಯಾಸದಲ್ಲಿ ಪಾಲ್ಗೊಂಡಿದ್ದವು. ಕುಶಾಲತೋಪು ತಾಲೀಮಿನಲ್ಲಿ ಅಶ್ವರೋಹಿ ದಳದ ಕುದುರೆಗಳು ಭಾಗವಹಿಸಿದ್ದವು. ನಗರ ಸಶಸ್ತ್ರ ಮೀಸಲು ಪಡೆಯಿಂದ ಕುಶಾಲತೋಪು ಸಿಡಿಸಲಾಯಿತು. ಏಳು ಪಿರಂಗಿ ಗಾಡಿಗಳ ಮೂಲಕ ತಲಾ ಮೂರು ಭಾರಿಯಂತೆ ಒಟ್ಟು 21 ಭಾರಿ ಕುಶಾಲತೋಪನ್ನು ಸಿಡಿಸಿದರು.

ಕುಶಾಲತೋಪು ಸಿಡಿಸಿದ ವೇಳೆ ಹೊರ ಹೊಮ್ಮಿದ ಶಬ್ದಕ್ಕೆ ಹೆದರದೇ ನಿಂತ ಗಜಪಡೆ, ಅಶ್ವರೋಹಿ ದಳ. ಯಾವುದೇ ಆನೆ ಶಬ್ದಕ್ಕೆ ಬೆಚ್ಚಿಲ್ಲ. ಏಕಲವ್ಯ ಮೊದಲ ಬಾರಿ ದಸರಾ ಮಹೋತ್ಸವದಲ್ಲಿ ಪಾಲ್ಗೊಂಡಿದ್ದರೂ ಬೆಚ್ಚಲಿಲ್ಲ. ಆ ಮೂಲಕ ಕುಶಾಲತೋಪು ಪ್ರಯೋಗ ಯಶಸ್ವಿಯಾಯಿತು.

ಅಶ್ವಾರೋಹಿದಳದ 35 ಕುದುರೆಗಳು ಹಾಗು ಸಿಬ್ಬಂದಿ ಜೊತೆಗೆ ನಗರ ಸಶಸ್ತ್ರ ಮೀಸಲು ಪಡೆಯ 30 ಸಿಬ್ಬಂದಿ ಕುಶಾಲತೋಪು ಸಿಡಿಸುವ ತಾಲೀಮಿನಲ್ಲಿ ಭಾಗಿಯಾಗಿದ್ದಾರೆ.

ಎಲ್ಲಾ ಆನೆಗಳ ಆರೋಗ್ಯ ಕೂಡ ಚೆನ್ನಾಗಿದೆ. ಮತ್ತೆರಡು ಬಾರಿ ಕುಶಾಲತೋಪು ಸಿಡಿಸಲಾಗುವುದು. ಶ್ರೀರಂಗಪಟ್ಟಣ ದಸರಾಗೆ ಮಹೇಂದ್ರ, ಹಿರಣ್ಯ, ಲಕ್ಷ್ಮಿ ಆನೆಗಳನ್ನು ಆಯ್ಕೆ ಮಾಡಲು ಪ್ರಸ್ತಾವನೆ ಸಲ್ಲಿಸಲಾಗಿದೆ. ಎಲ್ಲಾ ಆನೆಗಳ ಸಾಮರ್ಥ್ಯ ಪರೀಕ್ಷೆ ಮಾಡಿ ಮೂರು ಆನೆಗಳ ಪ್ರಸ್ತಾವನೆ ಕಳುಹಿಸಿದ್ದೇವೆ. ದಸರಾ ಜಂಬುಸವಾರಿಯಲ್ಲಿನ ನೌಪತ್ ಆನೆ, ನಿಶಾನೆ ಆನೆಗಳನ್ನೂ ಸದ್ಯದಲ್ಲೇ ಅಂತಿಮಗೊಳಿಸಲಾಗುವುದು. ಇದನ್ನು ಹಿರಿಯ ಅಧಿಕಾರಿಗಳು ಅಂತಿಮಗೊಳಿಸಬೇಕು ಎಂದು ಡಿಸಿಎಫ್ ಡಾ.ಪ್ರಭುಗೌಡ ಹೇಳಿದರು.

ಮೈಸೂರು ಅರಮನೆಯ ಆವರಣದಲ್ಲಿ ಬೀಡು ಬಿಟ್ಟಿರುವ ಆನೆಗಳಿಗೆ ವಸ್ತು ಪ್ರದರ್ಶನ ಪ್ರಾಧಿಕಾರದ ವತಿಯಿಂದ ಸ್ವಾಗತ ಕೋರಲಾಯಿತು.

Share this article