ಬಡಿಗೆ ಬಡಿದಾಟವೇ ಇಲ್ಲಿ ದಸರಾ ಹಬ್ಬ

KannadaprabhaNewsNetwork | Published : Oct 26, 2023 1:00 AM

ಸಾರಾಂಶ

ಜಾತ್ರೆಯಲ್ಲಿ ನಾಲ್ಕೈದು ಗ್ರಾಮಗಳ ನಡುವಿನ ಕಾದಾಟ ಸಾಂಪ್ರದಾಯಿಕವಾಗಿ ಹಲವು ತಲೆಮಾರುಗಳಿಂದ ನಡೆದುಕೊಂಡು ಬಂದಿದೆ.

ಕೆ.ಎಂ. ಮಂಜುನಾಥ್

ಕನ್ನಡಪ್ರಭ ವಾರ್ತೆ ಬಳ್ಳಾರಿ

ಮಾಳ ಮಲ್ಲೇಶ್ವರನ (ಗುಡ್ಡದ ಮಲ್ಲಯ್ಯ) ಮೂರ್ತಿಯನ್ನು ಹೊತ್ತ ಪಲ್ಲಕ್ಕಿ ಗುಡ್ಡದ ಮೇಲಿರುವ ದೇವಸ್ಥಾನದಿಂದ ಕೆಳಗಿಳಿಯುತ್ತಿದ್ದಂತೆಯೇ ಬಡಿಗೆ ಬಡಿದಾಟ ಪರಾಕಾಷ್ಠೆ ಮುಟ್ಟುತ್ತದೆ. ಬಡಿಗೆಗಳನ್ನು ಝಳಪಿಸುತ್ತಾ ಓಡಿ ಬರುವ ಭಕ್ತರು ಪರಸ್ಪರ ಹೊಡೆದಾಡಿಕೊಳ್ಳುತ್ತಾರೆ. ರಕ್ತಸಿಕ್ತವಾದರೂ ಲೆಕ್ಕಿಸದೆ ಬಡಿದಾಟಕ್ಕೆ ಎದೆಯೊಡ್ಡಿ ನಿಲ್ಲುತ್ತಾರೆ!

ಬಳ್ಳಾರಿಗೆ ಅಂಟಿಕೊಂಡಂತಿರುವ ಆಂಧ್ರಪ್ರದೇಶದ ಗಡಿಗ್ರಾಮ ದೇವರಗುಡ್ಡ ಪ್ರದೇಶದಲ್ಲಿ ಪ್ರತಿವರ್ಷ ದಸರಾ ಹಬ್ಬದ ಪ್ರಯುಕ್ತ ಜರುಗುವ ಮಾಳ ಮಲ್ಲೇಶ್ವರ ಜಾತ್ರೆಯಲ್ಲಿ ಜರುಗುವ ವಿಶಿಷ್ಟ ಹಬ್ಬದ ಆಚರಣೆಯಿದು.

ಈ ಬಾರಿ ದಸರಾ ಪ್ರಯುಕ್ತ ನಡೆದ ಮಾಳ ಮಲ್ಲೇಶ್ವರ ಜಾತ್ರೆಯಲ್ಲಿ ಸಾವಿರಾರು ಭಕ್ತರು ಪಾಲ್ಗೊಂಡಿದ್ದರು. ಎಂದಿನಂತೆ ನೆರಣಿಕೆ ಗ್ರಾಮದ ಭಕ್ತರು ಮಾಳ ಮಲ್ಲೇಶ್ವರ ಉತ್ಸವ ಹೊತ್ತು ಸಾಗಿದರು. ಇದೇ ವೇಳೆ ಎಳ್ಳಾರ್ತಿ, ಅರಿಕೇರಿ, ಸುಳವಾಯಿ, ವಿರುಪಾಪುರ ಹಾಗೂ ಹೊಸತಾಂಡ ಗ್ರಾಮಗಳ ಭಕ್ತರು ತುದಿಗೆ ಕಬ್ಬಿಣದ ಕಂಬಿಯನ್ನು ಸುತ್ತಿದ ಬಡಿಗೆಗಳನ್ನು ಹಿಡಿದು ಕಾಳಗ ನಡೆಸಿದರು. ಪ್ರತಿವರ್ಷದಂತೆ ಬಳ್ಳಾರಿ ಜಿಲ್ಲೆಯ ನೂರಾರು ಜನರು ಮಾಳ ಮಲ್ಲೇಶ್ವರ ಜಾತ್ರೆಗೆ ತೆರಳಿ ಬಡಿದಾಟ ಹಬ್ಬವನ್ನು ಕಣ್ತುಂಬಿಕೊಂಡರಲ್ಲದೆ, ಮತ್ತೆ ಕೆಲವರು ತಾವೂ ಬಡಿದಾಟದಲ್ಲಿ ಪಾಲ್ಗೊಂಡು ಹೊಡೆದಾಟದ ಸಾಮರ್ಥ್ಯ ನಿರೂಪಿಸಿದರು.

ಏನಿದು ಬಡಿದಾಟದ ಆಚರಣೆ?:

ದೇವರ ಮೂರ್ತಿಯನ್ನು ತಮ್ಮೂರಿಗೆ ಒಯ್ಯಲು ಭಕ್ತರು ಬಡಿದಾಡಿಕೊಳ್ಳುವ ವಿಶಿಷ್ಟ ಆಚರಣೆಯಿದು. ವಿಜಯದಶಮಿ ದಿನದಂದು ಮಧ್ಯರಾತ್ರಿ (ಮಂಗಳವಾರ) ದೇವರಗುಡ್ಡದಲ್ಲಿ ಮಾಳಮ್ಮ ಹಾಗೂ ಮಲ್ಲೇಶ್ವರಸ್ವಾಮಿಯ ಕಲ್ಯಾಣೋತ್ಸವ ನಡೆಯುತ್ತದೆ. ಜಾತ್ರೆಯಲ್ಲಿ ನಾಲ್ಕೈದು ಗ್ರಾಮಗಳ ನಡುವಿನ ಕಾದಾಟ ಸಾಂಪ್ರದಾಯಿಕವಾಗಿ ಹಲವು ತಲೆಮಾರುಗಳಿಂದ ನಡೆದುಕೊಂಡು ಬಂದಿದೆ. ಮಧ್ಯರಾತ್ರಿ ನಡೆಯುವ ಮಾಳಮ್ಮ ಹಾಗೂ ಮಲ್ಲೇಶ್ವರಸ್ವಾಮಿ ಕಲ್ಯಾಣೋತ್ಸವದಲ್ಲಿ ಉತ್ಸವ ಮೂರ್ತಿ ಹಾಗೂ ಪಲ್ಲಕ್ಕಿಯನ್ನು ಹೊತ್ತು ನೆರಣಿಕೆ ಗ್ರಾಮದ ಭಕ್ತರು ದೇವರಗುಡ್ಡಕ್ಕೆ ಬರುತ್ತಾರೆ. ಮಾಳ ಮಲ್ಲೇಶ್ವರನಿಗೆ ಪ್ರಿಯವಾದ ಅರಿಶಿಣ ಭಂಡಾರ ಮೈಯೆಲ್ಲಾ ಬಳಿದುಕೊಂಡು ದೊಡ್ಡ ಪಂಜುಗಳ ಬೆಳಕಿನಲ್ಲಿ ತಮಟೆ- ತಾಳಕ್ಕೆ ಹೆಜ್ಜೆ ಹಾಕುತ್ತಾ ಬರುವ ಮತ್ತೊಂದು ಗುಂಪು ಉತ್ಸವ ಮೂರ್ತಿಯನ್ನು ತಮ್ಮ ವಶಕ್ಕೆ ತೆಗೆದುಕೊಳ್ಳಲು ಮುಂದಾದಾಗ ಎದುರು ಗುಂಪಿನ ನಡುವಿನ ಕಾಳಗ ತಾರಕಕ್ಕೇರುತ್ತದೆ.

ಬೆಟ್ಟದ ತಪ್ಪಲಿನಿಂದ ಬಸವೇಶ್ವರ ದೇವಸ್ಥಾನದವರೆಗೆ ಮೂರ್ತಿ ಸಾಗುವ ಮಧ್ಯದಲ್ಲಿ ಭಕ್ತರ ಬಡಿದಾಟ ಮುಂದುವರಿಯುತ್ತದೆ. ಸುಮಾರು ಎರಡು ತಾಸಿಗೂ ಹೆಚ್ಚು ಹೊತ್ತು ನಡೆಯುವ ಕಾದಾಟದಲ್ಲಿ ನೂರಾರು ಜನರು ಗಾಯಗೊಳ್ಳುತ್ತಾರೆ. ಚಿಕಿತ್ಸೆ ನೀಡಲೆಂದೇ ಸ್ಥಳದಲ್ಲಿ ಅಲ್ಲಿನ ಆರೋಗ್ಯ ಇಲಾಖೆ ವೈದ್ಯ ಸಿಬ್ಬಂದಿಯನ್ನು ನಿಯೋಜಿಸಲಾಗಿರುತ್ತದೆ. ಗಾಯಕ್ಕೆ ಪಟ್ಟಿಕೊಳ್ಳುವ ಭಕ್ತರು, ಮತ್ತದೇ ಉತ್ಸಾಹದಿಂದ ಬಡಿದಾಟಕ್ಕೆ ನಿಲ್ಲುತ್ತಾರೆ!

ಜಾತ್ರೆಗೆ ನೂರಾರು ಜನ ಪೊಲೀಸರನ್ನು ನಿಯೋಜಿಸಲಾಗುತ್ತದೆಯಾದರೂ ಮೂಕಪ್ರೇಕ್ಷಕರಂತೆ ನಿಂತಿರುತ್ತಾರೆ. ಬೆಳಗಿನ ಜಾವದವರೆಗೆ ಜರುಗುವ ಬಡಿದಾಟ ಹಬ್ಬ ವೀಕ್ಷಿಸಲೆಂದೇ ಕರ್ನಾಟಕ, ಆಂಧ್ರಪ್ರದೇಶ ಹಾಗೂ ತೆಲಂಗಾಣ ಜಿಲ್ಲೆಗಳ ಸಾವಿರಾರು ಜನರು ಜಮಾಯಿಸುತ್ತಾರೆ.

ನಿಯಂತ್ರಣ ಸಾಧ್ಯವಾಗಲಿಲ್ಲ:

ಮಾಳ ಮಲ್ಲೇಶ್ವರ ಜಾತ್ರೆಯಲ್ಲಿ ಬಡಿದಾಟ ಕಾಳಗವನ್ನು ನಿಯಂತ್ರಿಸಬೇಕು ಎಂದು ಪೊಲೀಸ್ ಇಲಾಖೆ ಕೈಗೊಂಡ ಕ್ರಮಗಳು ಯಾವುದೇ ಪ್ರಯೋಜನವಾಗಲಿಲ್ಲ. ಜಾತ್ರೆಯಲ್ಲಿ ಬಡಿದಾಟದಲ್ಲಿ ಪಾಲ್ಗೊಳ್ಳುವ ಗ್ರಾಮಗಳಲ್ಲಿ ಬೀಡುಬಿಟ್ಟಿದ್ದ ಪೊಲೀಸರು, ಬಡಿಗೆ ಕಾಳಗದಲ್ಲಿ ಪಾಲ್ಗೊಳ್ಳದಂತೆ ಜಾಗೃತಿ ಮೂಡಿಸಿದರು. ಬಡಿಗೆಗಳನ್ನು ಸಾಗಿಸದಂತೆ ನಿಗಾ ಇಟ್ಟಿದ್ದರು. ಇಷ್ಟಾಗಿಯೂ ಜಾತ್ರೆಯಲ್ಲಿ ಪಾಲ್ಗೊಂಡಿದ್ದ ಸಾವಿರಾರು ಭಕ್ತರ ಕೈಯಲ್ಲಿ ಬಡಿಗೆಗಳು ಝಳಪಿಸಿದವು.

100 ಜನರಿಗೆ ಗಾಯ:

ವಿಜಯದಶಮಿ ದಿನದಂದು ಜರುಗಿದ ಬಡಿಗೆ ಬಡಿದಾಟದಲ್ಲಿ 100ಕ್ಕೂ ಹೆಚ್ಚು ಜನರಿಗೆ ಗಾಯಗಳಾಗಿದ್ದು, ಐವರ ಸ್ಥಿತಿ ಗಂಭೀರವಾಗಿದೆ ಎಂದು ತಿಳಿದುಬಂದಿದೆ. ಗಾಯಾಳುಗಳನ್ನು ಆಲೂರು ಸರ್ಕಾರಿ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.

Share this article