ಕನ್ನಡಪ್ರಭ ವಾರ್ತೆ ನಂಜನಗೂಡು ಎಐ ತಂತ್ರಜ್ಞಾನದ ಇಂದಿನ ದಿನಮಾನದಲ್ಲೂ ಸಾಹಿತ್ಯವನ್ನು ಇಷ್ಟು ಗೌರವಯುತವಾಗಿ ಸ್ವೀಕರಿಸುವ ನಮ್ಮ ಜನರ ಮನೋಭಾವಕ್ಕೆ ತಲೆಬಾಗಲೇಬೇಕು ಎಂದು ಉಪನ್ಯಾಸಕ ಜಿ.ಎಸ್.ನಟೇಶ್ ಹೇಳಿದರು.ನಗರದ ಭಾರತೀ ತೀರ್ಥ ಸಭಾಂಗಣದಲ್ಲಿ ಡಿ.ವಿ.ಜಿ ಬಳಗ ಆಯೋಜಿಸಿದ್ದ ಮಂಕುತಿಮ್ಮನ ಕಗ್ಗ ಉಪನ್ಯಾಸ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.ಯಾರು ಸಂಪತ್ತು, ಅಧಿಕಾರ ಬಂದಾಗಲೂ ಒಂದೇ ರೀತಿ ಇರುತ್ತಾರೋ ಅವರು ಜಿತೇಂದ್ರಿಯರು ಅನ್ನಿಸಿಕೊಳ್ತಾರೆ ,ನಮ್ಮ ದೇಶದ ರಾಷ್ಟ್ರಪತಿಗಳಾಗಿದ್ದ ಎ.ಪಿ.ಜೆ. ಅಬ್ದುಲ್ ಕಲಾಂ ಅಂತಹ ಮಹಾನುಭಾವ ರಾಗಿದ್ದರು, ಚಿಕ್ಕಮಕ್ಕಳು ಚಿಕ್ಕ ವಯಸ್ಸಿನಲ್ಲಿ ಇದ್ದ ಹಾಗೇ ಬೆಳೆದ ಮೇಲೂ ಇರುವುದಿಲ್ಲ. ಹಾಗಾಗಿ ಅವರನ್ನು ಬೇರೆಯವರ ಮುಂದೆ ಹಿಯಾಳಿಸಬಾರದು. ಡಿ.ವಿ. ಗುಂಡಪ್ಪನವರು ಕನ್ನಡದಲ್ಲೂ ಅನುತ್ತೀರ್ಣರಾದರು, ನಂತರ ಕಾಲೇಜು ಶಿಕ್ಷಣವನ್ನು ಮುಂದುವರೆಸಲಿಲ್ಲ. ಕಾಲೇಜು ವಿದ್ಯಾಭ್ಯಾಸವೇ ಎಲ್ಲವನ್ನೂ ಕೊಡುವುದಿಲ್ಲ, ವಿನಯ ಒಂದು ಗುಣವಿದ್ದರೆ ಎಲ್ಲಾ ಒಳ್ಳೆಯ ಗುಣಗಳು ತಾವೇ ಹತ್ತಿರಕ್ಕೆ ಬರುತ್ತವೆ. ಇಂತಹ ಗುಣಸಂಪನ್ನರಾದ ಅವರ ಕೃತಿಗಳು ಅತ್ಯಂತ ಯಶಸ್ವಿಯಾಗಿದೆ ಎಂದರು.ಡಿ.ವಿ.ಜಿ. ಬಳಗದ ತಗಡೂರು ಗೋಪಿನಾಥ್ ಮಾತನಾಡಿ, ಚಿಕ್ಕ ವಯಸ್ಸಿನಿಂದಲೂ ಕಗ್ಗದಿಂದ ಪ್ರೇರಿತನಾಗಿದ್ದೆ. ಇದಕ್ಕೆ ಒಂದು ವೇದಿಕೆಯನ್ನು ಕಲ್ಪಿಸಬೇಕು ಎಂದುಕೊಂಡಿದ್ದೆ. ಹಾಗಾಗಿ ಡಿ.ವಿ.ಜಿ ಬಳಗವನ್ನು ಸ್ಥಾಪಿಸಿ ಅದರ ಮೂಲಕ ಈ ಕಾರ್ಯಕ್ರಮಗಳನ್ನು ಆಯೋಜಿಸಲು ಸಾಧ್ಯವಾಯಿತು ಎಂದು ಹೇಳಿದರು.ಡಿ.ವಿ.ಜಿ. ಬಳಗದ ಕನಕರಾಜು ಮಾತನಾಡಿ, ಮೊದಲನೇ ಕಾರ್ಯಕ್ರಮದಲ್ಲೇ ಗೋಪಿನಾಥ್ ಹಾಗೂ ಡಿ.ವಿ.ಜಿ ಬಳಗ ಅಧ್ಬುತ ಯಶಸ್ಸನ್ನು ಸಾಧಿಸಿದ್ದಾರೆ, ಅವರಿಗೆ ಸಹಕಾರ ನೀಡಿದರೆ ಈ ರೀತಿಯ ಹೆಚ್ಚು ಹೆಚ್ಚು ಕಾರ್ಯಕ್ರಮಗಳನ್ನು ನೀಡಲು ಸಾಧ್ಯ , ಇದರಿಂದ ಆತ್ಮ ತೃಪ್ತಿ ಸಿಗುತ್ತದೆ , ಇಂತಹ ಕಾರ್ಯಕ್ರಮಗಳು ಮುಂದುವರೆಯುತ್ತಿರಲಿ ಎಂದು ಆಶಿಸಿದರು.ರಾಮಮೋಹನ್, ಸಾತ್ವಿಕ್ , ಸುಮನಾ, ಶೈಲಜಾ ನಾಗರಾಜ್, ರಂಜನಾ ಲಕ್ಷ್ಮೀಶ್ , ಅನನ್ಯ , ಇಂದಿರೇಶ್, ಶೋಭ ನಾಗಶಯನ ಇದ್ದರು.