ಕನ್ನಡಪ್ರಭ ವಾರ್ತೆ ಬೆಂಗಳೂರು
ಟಿಕೆಟ್ ಕೈತಪ್ಪಿರುವುದರಿಂದ ಮುನಿಸಿಕೊಂಡಿರುವ ಬೆಂಗಳೂರು ಉತ್ತರ ಲೋಕಸಭಾ ಕ್ಷೇತ್ರದ ಹಾಲಿ ಸಂಸದ, ಮಾಜಿ ಮುಖ್ಯಮಂತ್ರಿ ಡಿ.ವಿ.ಸದಾನಂದಗೌಡ ಅವರ ಮುಂದಿನ ನಡೆ ಇನ್ನೂ ನಿಗೂಢವಾಗಿದೆ.ತಮಗೆ ಬೆಂಗಳೂರು ಉತ್ತರ ಕ್ಷೇತ್ರದ ಟಿಕೆಟ್ ನೀಡಬೇಕು ಅಥವಾ ರಾಜ್ಯಪಾಲ ಹುದ್ದೆಯಂಥ ಪ್ರಮುಖ ಸ್ಥಾನಮಾನವನ್ನಾದರೂ ನೀಡಬೇಕು ಎಂಬ ಬೇಡಿಕೆ ಇಟ್ಟಿರುವ ಸದಾನಂದಗೌಡರು ಕಳೆದ ಎರಡು ದಿನಗಳಿಂದ ಪತ್ರಿಕಾಗೋಷ್ಠಿ ಕರೆದು ಮುಂದಿನ ನಿರ್ಧಾರ ಪ್ರಕಟಿಸುವುದಾಗಿ ಘೋಷಿಸಿದ್ದರೂ ಮುಂದೂಡುತ್ತಲೇ ಇದ್ದಾರೆ.ಈ ನಡುವೆ ಕಾಂಗ್ರೆಸ್ ಪಕ್ಷದಿಂದ ಅವರನ್ನು ಸೆಳೆಯುವ ಪ್ರಯತ್ನ ನಡೆದಿದ್ದರೂ ಅದು ಅಪೂರ್ಣವಾಗಿಯೇ ಇದೆ. ಕಾಂಗ್ರೆಸ್‌ಗೆ ವಲಸೆ ಹೋಗುವ ಬಗ್ಗೆ ಗೌಡರು ಅರೆಮನಸ್ಸಿನಲ್ಲಿದ್ದಾರೆ. ಸಂಘ ಪರಿವಾರದ ಮುಖಂಡರೂ ಅವರನ್ನು ಮನವೊಲಿಸುವ ಪ್ರಯತ್ನ ಮುಂದುವರೆಸಿದ್ದಾರೆ ಎನ್ನಲಾಗಿದೆ.ಇದೇ ವೇಳೆ ಗೌಡರು ಬೆಂಗಳೂರು ಉತ್ತರದ ಅಭ್ಯರ್ಥಿಯನ್ನು ಬದಲಿಸಿ ಟಿಕೆಟ್ ನೀಡದಿದ್ದರೆ ಚಿಕ್ಕಬಳ್ಳಾಪುರ ಕ್ಷೇತ್ರದಿಂದಲಾದರೂ ಸ್ಪರ್ಧಿಸಲು ಬಯಸಿದ್ದಾರೆ ಎನ್ನಲಾಗುತ್ತಿದೆ. ಆದರೆ, ಆ ಕ್ಷೇತ್ರದಲ್ಲಿ ಮಾಜಿ ಸಚಿವ ಡಾ.ಕೆ.ಸುಧಾಕರ್ ಮತ್ತು ಹಾಲಿ ಶಾಸಕ ಎಸ್.ಆರ್.ವಿಶ್ವನಾಥ್ ಪುತ್ರ ಅಲೋಕ್ ನಡುವೆ ತೀವ್ರ ಪೈಪೋಟಿ ಏರ್ಪಟ್ಟಿದೆ. ಈ ಪೈಕಿ ಸುಧಾಕರ್ ಅವರಿಗೆ ಅಂತಿಮವಾಗಿ ಟಿಕೆಟ್ ಸಿಗಬಹುದು ಎಂಬ ಮಾತು ಕೇಳಿಬರುತ್ತಿದೆ.ಡಿವಿಎಸ್ ನಡೆ ಹಿಂದೆ ಬಿಜೆಪಿ ಪ್ರಭಾವಿ ನಾಯಕರು?ಸದಾನಂದಗೌಡರು ಏಕಾಏಕಿ ಅಸಮಾಧಾನಗೊಂಡ ನಡೆ ಹಿಂದೆ ಬಿಜೆಪಿಯ ಬೆಂಗಳೂರಿನ ಪ್ರಭಾವಿ ಒಕ್ಕಲಿಗ ನಾಯಕರು ಇದ್ದಾರೆ ಎನ್ನಲಾಗುತ್ತಿದೆ.ಬೆಂಗಳೂರು ಉತ್ತರ ಕ್ಷೇತ್ರದ ಅಭ್ಯರ್ಥಿಯಾಗಿ ಘೋಷಣೆಯಾಗಿರುವ ಶೋಭಾ ಕರಂದ್ಲಾಜೆ ಅವರು ಕಣಕ್ಕಿಳಿಯುವುದನ್ನು ತಪ್ಪಿಸುವ ಸಲುವಾಗಿಯೇ ಸದಾನಂದಗೌಡರನ್ನು ಎತ್ತಿ ಕಟ್ಟಲಾಗಿದೆ. ಶೋಭಾ ಕರಂದ್ಲಾಜೆ ಅವರು ಬೆಂಗಳೂರಿನಲ್ಲಿ ನೆಲೆಯೂರಿದಲ್ಲಿ ತಮ್ಮ ನಾಯಕತ್ವಕ್ಕೆ ಧಕ್ಕೆ ಉಂಟಾಗುತ್ತದೆ ಎಂಬುದು ಬಿಜೆಪಿಯ ಒಕ್ಕಲಿಗ ಸಮುದಾಯದ ಪ್ರಭಾವಿ ನಾಯಕರ ಆತಂಕ ಎಂದು ಮೂಲಗಳು ತಿಳಿಸಿವೆ.