ಸೋಮರಡ್ಡಿ ಅಳವಂಡಿ
ಇದು, ಕೇವಲ ಎರಡು ದೀಪ ಅಳವಡಿಕೆಯಲ್ಲ, ಸಮವಸ್ತ್ರದೊಳಗೆ ಮಿಡಿದ ಮಾನವೀಯತೆಯ ಕಥೆ.
ಯಲಬುರ್ಗಾ ತಾಲೂಕಿನ ಬೇವೂರು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಅಪ್ರಾಪ್ತ ಬಾಲಕಿಯೊಬ್ಬಳ ಮೇಲಿನ ಲೈಂಗಿಕ ದೌರ್ಜನ್ಯಕ್ಕೆ ಸಂಬಂಧಿಸಿದ ಪ್ರಕರಣ ದಾಖಲಾಗಿತ್ತು. ಯುವಕನೊಬ್ಬ ಬಾಲಕಿಯೊಂದಿಗೆ ಸಂಪರ್ಕ ಬೆಳೆಸಿದ್ದು, ಆಕೆ ಗರ್ಭಿಣಿಯಾಗಿ ಮಗುವಿಗೆ ಜನ್ಮ ನೀಡಿದ ಬಳಿಕ ಪ್ರಕರಣ ಬೆಳಕಿಗೆ ಬಂದಿದೆ. ಹೆರಿಗೆಯ ನಂತರ ಬಾಲಕಿ ತನ್ನ ಪೋಷಕರಿಗೆ ವಿಷಯ ತಿಳಿಸಿದ್ದು, ಪೋಕ್ಸೊ ಹಾಗೂ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ ದೌರ್ಜನ್ಯ ತಡೆ ಕಾಯ್ದೆಯಡಿ ಪ್ರಕರಣ ದಾಖಲಾಗಿದೆ.ಪ್ರಕರಣದ ತನಿಖೆಯ ಭಾಗವಾಗಿ ಕೊಪ್ಪಳದ ನಾಗರಿಕ ಹಕ್ಕುಗಳ ಜಾರಿ ನಿರ್ದೇಶನಾಲಯ ಡಿವೈಎಸ್ಪಿ ವೆಂಕಟಪ್ಪ ನಾಯಕ್ ಅವರು ಸಂತ್ರಸ್ತೆಯ ಮನೆಗೆ ಭೇಟಿ ನೀಡಿದ್ದರು. ಪ್ರಕರಣದ ಕುರಿತು ಮಾಹಿತಿ ಕಲೆಹಾಕುವ ಸಂದರ್ಭದಲ್ಲಿ ಆ ಕುಟುಂಬದ ಬದುಕಿನ ಸ್ಥಿತಿಗತಿಗಳನ್ನು ಗಮನಿಸಿದ್ದಾರೆ. ತಂದೆ-ತಾಯಿ ಹಾಗೂ ಇಬ್ಬರು ಹೆಣ್ಣುಮಕ್ಕಳು ವಾಸಿಸುತ್ತಿದ್ದ ಪುಟ್ಟ ಜನತಾ ಮನೆಯಲ್ಲಿ ವಿದ್ಯುತ್ ಸಂಪರ್ಕವೇ ಇರಲಿಲ್ಲ. ಮನೆಯೊಳಗೆ ಕತ್ತಲು ಆವರಿಸಿತ್ತು. ದಿನದ ಬೆಳಕು ಮರೆಯಾದರೆ ಆ ಕುಟುಂಬಕ್ಕೆ ರಾತ್ರಿಯಿಡೀ ಕತ್ತಲೆಯೇ ಆಸರೆ!
ಈ ಉತ್ತರ ಕೇಳಿದ ಅಧಿಕಾರಿಯ ಮನಸ್ಸು ಮರುಗಿದೆ. ಕೂಡಲೇ ಸ್ವಂತ ಪ್ರಯತ್ನದಿಂದ ಸೋಲಾರ್ ವಿದ್ಯುತ್ ವ್ಯವಸ್ಥೆ ಖರೀದಿಸಿ, ಎರಡು ದೀಪಗಳನ್ನು ಅಳವಡಿಸುವ ವ್ಯವಸ್ಥೆ ಮಾಡಿದ್ದಾರೆ. ಆ ಮೂಲಕ ಬೆಳಕಿಗಾಗಿ ಕಾಯುತ್ತಿದ್ದ ಕುಟುಂಬದ ಮನೆಗೆ ಬೆಳಕಿನ ಆಸರೆ ನೀಡಿದ್ದಾರೆ.
ಈ ಘಟನೆಯನ್ನು ಡಿವೈಎಸ್ಪಿ ವೆಂಕಟಪ್ಪ ನಾಯಕ್ ''''ಕನ್ನಡಪ್ರಭ''''ದೊಂದಿಗೆ ಹಂಚಿಕೊಂಡಿದ್ದು, ಕುಟುಂಬಕ್ಕೆ ಬೆಳಕಿನ ವ್ಯವಸ್ಥೆ ಕಲ್ಪಿಸಿದ ಆ ಕ್ಷಣ ತಮ್ಮ ಜೀವನದ ಅತ್ಯಂತ ಸಂತೋಷದ ಕ್ಷಣಗಳಲ್ಲಿ ಒಂದಾಗಿದೆ ಎಂದು ಭಾವುಕರಾಗಿ ಹೇಳಿಕೊಂಡಿದ್ದಾರೆ.
ಕತ್ತಲಿನಲ್ಲಿದ್ದ ಮನೆಗೆ ಎರಡು ದೀಪಗಳು ಬೆಳಕು ನೀಡಿರಬಹುದು. ಆದರೆ, ಆ ಕುಟುಂಬದ ಮನಸ್ಸಿನಲ್ಲಿ ಮೂಡಿದ ಭರವಸೆಯ ಬೆಳಕು ಅದಕ್ಕಿಂತ ದೊಡ್ಡದು. ಅಧಿಕಾರದ ಸ್ಥಾನಕ್ಕಿಂತ ಮಾನವೀಯತೆಯ ಗುಣ ದೊಡ್ಡದು ಎಂಬುದನ್ನು ನಾಗರಿಕ ಹಕ್ಕುಗಳ ಜಾರಿ ನಿರ್ದೇಶನಾಲಯ ಕೊಪ್ಪಳ ಠಾಣೆಯ ಡಿವೈಎಸ್ಪಿ ವೆಂಕಟಪ್ಪ ನಾಯಕ್ ಅವರ ಈ ನಡೆ ಮತ್ತೊಮ್ಮೆ ಸಾಬೀತುಪಡಿಸಿದೆ.