ತಾಲೂಕು ಕಚೇರಿಗೆ ಬರುವ ಸಾರ್ವಜನಿಕರ ಕೆಲಸ ಸುಗಮವಾಗಲಿ ಎನ್ನುವ ಸದುದ್ದೇಶವಿಟ್ಟುಕೊಂಡು ರಾಜ್ಯ ಸರ್ಕಾರ ಇ- ಆಫೀಸ್ ಜಾರಿಗೆ ತಂದಿದೆ ಎಂದು ಹೊಳಲ್ಕೆರೆ ಶಾಸಕ ಡಾ.ಎಂ.ಚಂದ್ರಪ್ಪ ಹೇಳಿದರು.
ಹೊಳಲ್ಕೆರೆ ತಹಸೀಲ್ದಾರ್ ಕಾರ್ಯಾಲಯದಲ್ಲಿ ಇ-ಆಫೀಸ್ ಗೆ ಚಾಲನೆ ಕನ್ನಡಪ್ರಭ ವಾರ್ತೆ ಹೊಳಲ್ಕೆರೆ ತಾಲೂಕು ಕಚೇರಿಗೆ ಬರುವ ಸಾರ್ವಜನಿಕರ ಕೆಲಸ ಸುಗಮವಾಗಲಿ ಎನ್ನುವ ಸದುದ್ದೇಶವಿಟ್ಟುಕೊಂಡು ರಾಜ್ಯ ಸರ್ಕಾರ ಇ- ಆಫೀಸ್ ಜಾರಿಗೆ ತಂದಿದೆ ಎಂದು ಹೊಳಲ್ಕೆರೆ ಶಾಸಕ ಡಾ.ಎಂ.ಚಂದ್ರಪ್ಪ ಹೇಳಿದರು. ತಹಸೀಲ್ದಾರ್ ಕಾರ್ಯಾಲಯದಲ್ಲಿ ಶನಿವಾರ ಇ-ಆಫೀಸ್ ಗೆ ಚಾಲನೆ ನೀಡಿ ಮಾತನಾಡಿದ ಅವರು, ಕೆಲಸದ ನಿಮಿತ್ತ ತಾಲೂಕು ಕಚೇರಿಗೆ ಬರುವ ಜನಸಾಮಾನ್ಯರು, ರೈತರು ನೀಡುವ ಅರ್ಜಿಗಳು ಈ ಯೋಜನೆಯಿಂದ ಗಣಕೀಕೃತಗೊಂಡು ಯಾವ ಹಂತದಲ್ಲಿ, ಯಾರ ಬಳಿ ಕಡತವಿದೆ ಎನ್ನುವುದು ಗೊತ್ತಾಗುತ್ತದೆಯಲ್ಲದೆ ಜರೂರಾಗಿ ಕೆಲಸವಾಗಲು ಸಹಕಾರಿಯಾಗಲಿದೆ. ಅರ್ಜಿ ಕೊಟ್ಟವರಿಗೆ ಜವಾಬು ಹೇಳಿ ಕಳುಹಿಸುವುದಲ್ಲ. ಯಾವುದೇ ಅಡೆತಡೆಗಳು ಎದುರಾದರೂ ಎಲ್ಲವನ್ನು ಸಮರ್ಥವಾಗಿ ನಿಭಾಯಿಸಿ ಸಾಮಾನ್ಯ ಮನುಷ್ಯನ ಕೆಲಸ ಸುಸೂತ್ರವಾಗಿ ನಡೆಯುವಂತೆ ನೋಡಿಕೊಳ್ಳಬೇಕು ಎಂದು ತಾಕೀತು ಮಾಡಿದರು. ಕೆಲವೊಮ್ಮೆ ಅರ್ಜಿಗಳು, ಕಡತಗಳು ಕಚೇರಿಗಳಲ್ಲಿ ನಾಪತ್ತೆಯಾಗುವುದನ್ನು ಸ್ವತಂತ್ರ್ಯ ಪೂರ್ವದಿಂದಲೂ ನೋಡುತ್ತಿದ್ದೇವೆ. ಸಾರ್ವಜನಿಕರು ಸಲ್ಲಿಸಿದ ಅರ್ಜಿಗಳು ತ್ವರಿತವಾಗಿ ವಿಲೇವಾರಿಯಾಗಲಿ ಎನ್ನುವ ಕಾರಣಕ್ಕಾಗಿ ಇ ಆಫೀಸ್ ಸಹಕಾರಿಯಾಗಲಿದೆ. ಮುಂದುವರೆದ ಅಮೆರಿಕಾದಲ್ಲಿ ಐವತ್ತು ವರ್ಷಗಳ ಹಿಂದೆಯೇ ಇ ಆಫೀಸ್ ಪದ್ದತಿ ಜಾರಿಗೆ ಬಂದಿತು. ಛಾಪ ಕಾಗದ ಹಗರಣದಲ್ಲಿ ಕರೀಂ ಲಾಲಾ ತೆಲಗಿ ಕೋಟ್ಯತರ ರು.ಗಳ ಹಗರಣವೆಸಗಿ ಸರ್ಕಾರದ ಬೊಕ್ಕಸಕ್ಕೆ ನಷ್ಟ ಉಂಟು ಮಾಡಿದ್ದನ್ನು ನೋಡಿದ್ದೇವೆ. ಅಂತಹ ಅಕ್ರಮಗಳಿಗೆ ಇ-ಆಫೀಸ್ ಕಡಿವಾಣ ಹಾಕುತ್ತದೆ ಎಂದರು. ಜಿಲ್ಲೆಗೆ ಇ-ಆಫೀಸ್ ಮಾದರಿಯಾಗಲಿ. ಹತ್ತೊಂಬತ್ತು ಕೋಟಿ ರು.ವೆಚ್ಚದಲ್ಲಿ ಕಂದಾಯ ಕಚೇರಿ ಕಟ್ಟಲಾಗುತ್ತಿದೆ. ರಾಜ್ಯದ ಮುಖ್ಯಮಂತ್ರಿ ಹಾಗೂ ಕಂದಾಯ ಮಂತ್ರಿಗಳು ಬಂದು ಉದ್ಘಾಟಿಸಲಿದ್ದಾರೆಂದರು. ತಹಸೀಲ್ದಾರ್ ಬೀಬಿ ಫಾತಿಮಾ, ತಾಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ರವಿಕುಮಾರ್, ಪುರಸಭೆ ಮುಖ್ಯಾಧಿಕಾರಿ ಎ.ವಾಸೀಂ, ಬಿಸಿಎಂ ಅಧಿಕಾರಿ ಪ್ರದಿಪ್ ಕುಮಾರ್.ಕಂದಾಯ ಇಲಾಖೆ ಸಿಬ್ಬಂದಿ ವಿವಿಧ ಇಲಾಖೆ ಅಧಿಕಾರಿಗಳು ಈ ಸಂದರ್ಭದಲ್ಲಿ ಹಾಜರಿದ್ದರು.