ಕ್ಷಯರೋಗ (ಟಿಬಿ) ನಿರ್ಮೂಲನೆಗಾಗಿ ಹಮ್ಮಿಕೊಳ್ಳಲಾಗಿರುವ ''ಟಿಬಿ ಮುಕ್ತ ಭಾರತ ಅಭಿಯಾನ''ದಡಿ ಜಿಲ್ಲಾ ಮತ್ತು ತಾಲೂಕು ಮಟ್ಟದಲ್ಲಿ ವೈದ್ಯರು ಹಾಗೂ ಅಧಿಕಾರಿಗಳು ತಪಾಸಣೆ ಹಾಗೂ ಚಿಕಿತ್ಸಾ ಕ್ರಮಗಳನ್ನು ತೀವ್ರಗೊಳಿಸಬೇಕು ಎಂದು ಉಪವಿಭಾಗಾಧಿಕಾರಿ ಹಾಗೂ ದಾವಣಗೆರೆ, ಜಗಳೂರು ಮತ್ತು ಹರಿಹರ ತಾಲೂಕು ನೋಡೆಲ್ ಅಧಿಕಾರಿ ಸಂತೋಷ್ ಕುಮಾರ್ ಸೂಚನೆ ನೀಡಿದ್ದಾರೆ.
- ದಾವಣಗೆರೆ ಉಪವಿಭಾಗಾಧಿಕಾರಿ ಕಚೇರಿ ಸಭಾಂಗಣದಲ್ಲಿ ''''ಟಿಬಿ ಮುಕ್ತ ಭಾರತ ಅಭಿಯಾನ''''ದ ಜಿಲ್ಲಾಮಟ್ಟದ ಪರಿಶೀಲನಾ ಸಭೆ
- ಜನರಲ್ಲಿ ಅರಿವು ಮೂಡಿಸಲು ವಿವಿಧ ಜಾಗೃತಿ ಕಾರ್ಯಕ್ರಮ ಆಯೋಜನೆಗೆ ಸೂಚನೆ
- - -
ಕನ್ನಡಪ್ರಭ ವಾರ್ತೆ ದಾವಣಗೆರೆ
ಕ್ಷಯರೋಗ (ಟಿಬಿ) ನಿರ್ಮೂಲನೆಗಾಗಿ ಹಮ್ಮಿಕೊಳ್ಳಲಾಗಿರುವ ''''ಟಿಬಿ ಮುಕ್ತ ಭಾರತ ಅಭಿಯಾನ''''ದಡಿ ಜಿಲ್ಲಾ ಮತ್ತು ತಾಲೂಕು ಮಟ್ಟದಲ್ಲಿ ವೈದ್ಯರು ಹಾಗೂ ಅಧಿಕಾರಿಗಳು ತಪಾಸಣೆ ಹಾಗೂ ಚಿಕಿತ್ಸಾ ಕ್ರಮಗಳನ್ನು ತೀವ್ರಗೊಳಿಸಬೇಕು ಎಂದು ಉಪವಿಭಾಗಾಧಿಕಾರಿ ಹಾಗೂ ದಾವಣಗೆರೆ, ಜಗಳೂರು ಮತ್ತು ಹರಿಹರ ತಾಲೂಕು ನೋಡೆಲ್ ಅಧಿಕಾರಿ ಸಂತೋಷ್ ಕುಮಾರ್ ಸೂಚನೆ ನೀಡಿದರು.
ಉಪವಿಭಾಗಾಧಿಕಾರಿ ಕಚೇರಿ ಸಭಾಂಗಣದಲ್ಲಿ ಇತ್ತೀಚೆಗೆ ನಡೆದ ''''ಟಿಬಿ ಮುಕ್ತ ಭಾರತ ಅಭಿಯಾನ''''ದ ಜಿಲ್ಲಾಮಟ್ಟದ ಪರಿಶೀಲನಾ ಸಭೆ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಸಮಾಜದಲ್ಲಿ ಕ್ಷಯರೋಗ ಮುಕ್ತ ವಾತಾವರಣ ನಿರ್ಮಿಸಲು ರೋಗವನ್ನು ಆರಂಭಿಕ ಹಂತದಲ್ಲೇ ಪತ್ತೆಹಚ್ಚುವುದು ಅತ್ಯಂತ ಅಗತ್ಯವಾಗಿದೆ. ಇದರಿಂದ ರೋಗಿಯು ಇತರರಿಗೆ ಸೋಂಕು ಹರಡುವುದು ತಡೆಯಬಹುದು. ಸಾವಿನ ಪ್ರಮಾಣ ಕಡಿಮೆಯಾಗಿ ರೋಗಿ ಗುಣಮುಖನಾಗಲು ಸಹಕಾರಿಯಾಗುತ್ತದೆ ಎಂದರು.
ಕ್ಷಯ ಕಡ್ಡಾಯವಾಗಿ ವರದಿ ಮಾಡಬೇಕಾದ ರೋಗವಾಗಿದ್ದು, ಸರ್ಕಾರಿ ಹಾಗೂ ಖಾಸಗಿ ವೈದ್ಯಕೀಯ ವಲಯದಲ್ಲಿ ಪತ್ತೆಯಾಗುವ ಪ್ರತಿ ಪ್ರಕರಣವನ್ನೂ ಕೇಂದ್ರ ಸರ್ಕಾರದ ''''ನಿಕ್ಷಯ್ ಪೋರ್ಟಲ್''''ನಲ್ಲಿ ಕಡ್ಡಾಯವಾಗಿ ನಮೂದಿಸಬೇಕು. ಯಾವುದೇ ಖಾಸಗಿ ಆಸ್ಪತ್ರೆ ಅಥವಾ ವೈದ್ಯರು ರೋಗದ ವಿವರವನ್ನು ಮುಚ್ಚಿಡುವಂತಿಲ್ಲ ಎಂದು ತಿಳಿಸಿದರು.
ಕ್ಷಯರೋಗದ ಬಗ್ಗೆ ಸಾರ್ವಜನಿಕರಲ್ಲಿ ಹೆಚ್ಚಿನ ಅರಿವು ಮೂಡಿಸಲು ವಿವಿಧ ಜಾಗೃತಿ ಕಾರ್ಯಕ್ರಮಗಳನ್ನು ಸಂಘಟಿಸಬೇಕು. ಸಾರ್ವಜನಿಕರು ಹಾಗೂ ಖಾಸಗಿ ವೈದ್ಯಕೀಯ ಸಂಸ್ಥೆಗಳು ಆರೋಗ್ಯ ಇಲಾಖೆಯೊಂದಿಗೆ ಪೂರ್ಣ ಪ್ರಮಾಣದಲ್ಲಿ ಸಹಕರಿಸಿ, ಸಮಾಜದಲ್ಲಿ ಯಾವುದೇ ರೋಗಿಯೂ ಉಚಿತ ಚಿಕಿತ್ಸೆಯಿಂದ ವಂಚಿತರಾಗದಂತೆ ಜಾಗ್ರತೆ ವಹಿಸಬೇಕು ಎಂದು ಸೂಚಿಸಿದರು.
‘ನ್ಯಾಟ್’ ತಂತ್ರಜ್ಞಾನ:
ಜಿಲ್ಲಾ ಕ್ಷಯರೋಗ ನಿರ್ಮೂಲನಾಧಿಕಾರಿ ಡಾ.ಮುರಳಿಧರ್ ಮಾಹಿತಿ ನೀಡಿ, ಕ್ಷಯರೋಗಿಗಳನ್ನು ಆರಂಭಿಕ ಹಂತದಲ್ಲೇ ನಿಖರವಾಗಿ ಪತ್ತೆಹಚ್ಚಲು ಸಾಂಪ್ರದಾಯಿಕ ಸೂಕ್ಷ್ಮದರ್ಶಕ ಪದ್ಧತಿಯ ಬದಲಾಗಿ ಶೇ.100ರಷ್ಟು ಆಧುನಿಕ ‘ನ್ಯಾಟ್’ ತಂತ್ರಜ್ಞಾನ ಆಧಾರಿತ ಯಂತ್ರಗಳ ಮೂಲಕ ಪರೀಕ್ಷೆ ನಡೆಸಲಾಗುತ್ತಿದೆ. ಪ್ರಸ್ತುತ ರಾಷ್ಟ್ರೀಯ ಸರಾಸರಿಗೆ ಹೋಲಿಸಿದರೆ ರಾಜ್ಯ ಹಾಗೂ ಜಿಲ್ಲಾ ಮಟ್ಟದಲ್ಲಿ ಪ್ರಕರಣಗಳ ನಿರ್ವಹಣೆ ಉತ್ತಮವಾಗಿದೆ. ಕರ್ನಾಟಕದಲ್ಲಿ ಪ್ರತಿ ಲಕ್ಷ ಜನಸಂಖ್ಯೆಗೆ 147 ಹಾಗೂ ದಾವಣಗೆರೆ ಜಿಲ್ಲೆಯಲ್ಲಿ ಪ್ರತಿ ಲಕ್ಷಕ್ಕೆ 120 ಪ್ರಕರಣಗಳು ದಾಖಲಾಗಿವೆ. ಜಿಲ್ಲೆಯಲ್ಲಿ ಪ್ರತಿ ತಿಂಗಳು ಸರಾಸರಿ 3,000 ಕಫ/ಲೋಳೆಯ ಮಾದರಿಗಳ ಉಚಿತ ತಪಾಸಣೆ ನಡೆಯುತ್ತಿದೆ ಎಂದರು.
6 ರಿಂದ 9 ತಿಂಗಳು:
ಪ್ರಸ್ತುತ ಚಿಕಿತ್ಸೆ ಪಡೆಯುತ್ತಿರುವ ಪ್ರತಿಯೊಬ್ಬ ಟಿಬಿ ರೋಗಿಯ ಆರೋಗ್ಯ ಸ್ಥಿತಿ ಪ್ರತಿ ತಿಂಗಳು ಕಡ್ಡಾಯವಾಗಿ ಮೌಲ್ಯಮಾಪನ ಮಾಡಲಾಗುತ್ತಿದೆ. ಚಿಕಿತ್ಸಾ ಅವಧಿಯು ಕನಿಷ್ಠ 6 ರಿಂದ 9 ತಿಂಗಳುಗಳವರೆಗೆ ಇರಲಿದೆ. ಸಾಮಾನ್ಯ ಔಷಧಗಳಿಗೆ ಸ್ಪಂದಿಸದ ''''''''ಡ್ರಗ್ ರೆಸಿಸ್ಟೆಂಟ್ ಟಿಬಿ'''''''' ರೋಗಿಗಳನ್ನು ಗುರುತಿಸಲು ನಾಲ್ಕು ಪ್ರಮುಖ ಟಿಬಿ ಔಷಧಗಳ ಸೂಕ್ಷ್ಮತೆ ಪರೀಕ್ಷಿಸಿ, ಅಗತ್ಯ ತಜ್ಞ ಚಿಕಿತ್ಸೆ ನೀಡಲಾಗುತ್ತಿದೆ. ಪ್ರತಿ 1,000 ಜನಸಂಖ್ಯೆಗೆ ಒಬ್ಬರಂತೆ ಕಾರ್ಯನಿರ್ವಹಿಸುತ್ತಿರುವ ಆಶಾ ಕಾರ್ಯಕರ್ತೆಯರಿಗೆ ತರಬೇತಿ ನೀಡಲಾಗಿದ್ದು, ಅವರು ತಿಂಗಳಿಗೆ ಕನಿಷ್ಠ 2 ಬಾರಿ ಮನೆ ಮನೆಗೆ ಭೇಟಿ ನೀಡಿ ಸುದೀರ್ಘ ಕೆಮ್ಮು, ಜ್ವರ ಮುಂತಾದ ರೋಗ ಲಕ್ಷಣವಿರುವವರನ್ನು ಗುರುತಿಸಿ ಉಚಿತ ಕಫ ಪರೀಕ್ಷೆಗೆ ಸರ್ಕಾರಿ ಆಸ್ಪತ್ರೆಗೆ ರವಾನಿಸುತ್ತಿದ್ದಾರೆ ಎಂದು ತಿಳಿಸಿದರು.
ಉಚಿತ ತಪಾಸಣೆ- ಔಷಧ:
ರಾಷ್ಟ್ರೀಯ ಕ್ಷಯರೋಗ ನಿರ್ಮೂಲನಾ ಕಾರ್ಯಕ್ರಮದ ಅಡಿಯಲ್ಲಿ ಸಿ.ಜಿ. ಆಸ್ಪತ್ರೆ, ಜೆ.ಜೆ.ಎಂ.ಸಿ., ಎಸ್.ಎಸ್.ಐ.ಎಂ.ಎಸ್.ಆರ್.ಸಿ. ಹಾಗೂ ಎಲ್ಲ ತಾಲೂಕು ಆಸ್ಪತ್ರೆಗಳಲ್ಲಿ ಉಚಿತ ತಪಾಸಣೆ ಮತ್ತು ಎಚ್‌ಆರ್‌ಝೆಡ್‌ಇ ನಂತಹ ಅಗತ್ಯ ಔಷಧಗಳನ್ನು ಸಂಪೂರ್ಣ ಉಚಿತವಾಗಿ ನೀಡಲಾಗುತ್ತಿದೆ. ನೆರೆ ಜಿಲ್ಲೆಗಳಾದ ಚಿತ್ರದುರ್ಗ, ಹಾವೇರಿ ಮೊದಲಾದ ಕಡೆಗಳಿಂದ ಬರುವ ರೋಗಿಗಳಿಗೂ ಸೂಕ್ತ ಚಿಕಿತ್ಸೆ ನೀಡಲಾಗುತ್ತಿದೆ ಎಂದರು.
ಸಭೆಯಲ್ಲಿ ತಾಲೂಕು ವೈದ್ಯಾಧಿಕಾರಿಗಳು, ಸಿಬ್ಬಂದಿ ಹಾಗೂ ಇತರರು ಉಪಸ್ಥಿತರಿದ್ದರು.
- - -
(ಬಾಕ್ಸ್)
* ಖಾಸಗಿ ಆಸ್ಪತ್ರೆಗಳು- ಫಾರ್ಮಸಿಗಳ ಸರಣಿ ಮೇಲ್ವಿಚಾರಣೆ
ಖಾಸಗಿ ಆಸ್ಪತ್ರೆಗಳೊಂದಿಗೆ ಶೇ.100 ರಷ್ಟು ಸಮನ್ವಯ ಸಾಧಿಸಲಾಗುತ್ತಿದ್ದು, ಕ್ಷಯರೋಗ ಲಕ್ಷಣ ಇರುವವರನ್ನು ಗುರುತಿಸಲು ''''ಸ್ಟೆಪ್ ಕೋ-ಆರ್ಡಿನೇಟರ್''''ಗಳನ್ನು ನಿಯೋಜಿಸಲಾಗಿದೆ. ಖಾಸಗಿ ಫಾರ್ಮಸಿಗಳಲ್ಲಿ ಟಿಬಿ ಔಷಧಗಳ ಮಾರಾಟದ ಮೇಲೆ ನಿಗಾ ಇಡಲು ವಾಟ್ಸಾಪ್ ಗ್ರೂಪ್‌ಗಳನ್ನು ರಚಿಸಲಾಗಿದ್ದು, ಔಷಧ ಖರೀದಿಸುವ ರೋಗಿಗಳ ''''ನಿಕ್ಷಯ್ ಐಡಿ'''', ಫೋನ್ ಸಂಖ್ಯೆ ಮತ್ತು ವಿಳಾಸ ಸಂಗ್ರಹಿಸಿ ರೋಗಿಗಳನ್ನು ಪತ್ತೆ ಹಚ್ಚುವ ಕಾರ್ಯವನ್ನು ಸತತವಾಗಿ ನಡೆಸಲಾಗುತ್ತಿದೆ ಎಂದು ಜಿಲ್ಲಾ ಕ್ಷಯರೋಗ ನಿರ್ಮೂಲನಾಧಿಕಾರಿ ಡಾ.ಮುರಳಿಧರ ವಿವರಣೆ ನೀಡಿದರು.
- - -
-28ಕೆಡಿವಿಜಿ38:
ದಾವಣಗೆರೆಯಲ್ಲಿ ಉಪವಿಭಾಗಾಧಿಕಾರಿ ಸಂತೋಷ್ ಕುಮಾರ್ ಅಧ್ಯಕ್ಷತೆಯಲ್ಲಿ ಟಿಬಿ ಮುಕ್ತ ಭಾರತ ಅಭಿಯಾನದ ಜಿಲ್ಲಾಮಟ್ಟದ ಪರಿಶೀಲನಾ ಸಭೆ ನಡೆಯಿತು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.