ಉಳ್ಳಾಲ: ಸಮಾಜಕ್ಕೆ ಏನಾದರೊಂದು ಕೊಡುಗೆ ನೀಡಬೇಕೆಂಬ ಮನೋಭಾವ ನಮ್ಮಲ್ಲಿದ್ದು, ಅದಕ್ಕೆ ತಕ್ಕ ಪ್ರಯತ್ನವನ್ನು ಮಾಡಿದರೆ ಎಸ್. ಜಾನಕಿ ಅವರಂತೆ ಸಮಾಜಕ್ಕೆ ಒಳ್ಳೆಯ ಹೆಸರು ತಂದುಕೊಡಲು ಸಾಧ್ಯ. ನಮ್ಮ ತುಳುನಾಡಿನ ಪ್ರಸಿದ್ಧ ಎಕ್ಕಸಕ ಹಾಡೂ ಸೇರಿದಂತೆ ಹಲವಾರು ಪ್ರಸಿದ್ಧ ಗೀತೆಗಳಿಂದ ಮನೆಮಾತಾಗಿರುವ ಅವರ ಸಾಧನೆಯೇ ನಮಗೆಲ್ಲರಿಗೂ ಪ್ರೇರಣೆ ಎಂದುಕುರ್ನಾಡು ಮುಡಿಪು ಸರಕಾರಿ ಪದವಿ ಪೂರ್ವ ಕಾಲೇಜಿನ ಅಭಿವೃದ್ಧಿ ಸಮಿತಿ ಅಧ್ಯಕ್ಷ ಚಂದ್ರಹಾಸ ಕರ್ಕೇರ ಅಭಿಪ್ರಾಯಪಟ್ಟರು. ದ.ಕ. ಜಿಲ್ಲಾ ಕಸಾಪ, ಉಳ್ಳಾಲ ತಾಲೂಕು, ಸರಕಾರಿ ಪದವಿ ಪೂರ್ವ ಕಾಲೇಜು, ಕುರ್ನಾಡು, ಮುಡಿಪು, ತೋನ್ಸೆ ಸಾಂಸ್ಕೃತಿಕ ತರಬೇತಿ ಕೇಂದ್ರ ಕೊಲ್ಯ, ಸೋಮೇಶ್ವರ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಮಂಗಳೂರು ಆಶ್ರಯದಲ್ಲಿ ಮುಡಿಪು ಗೋಪಾಲಕೃಷ್ಣ ಸಭಾಭವನದಲ್ಲಿ ನಡೆದ ‘ಪೂಜಿಸಲೆಂದೇ ಹೂಗಳ ತಂದೆ’ - ಗಾನಲೀನರಾದ ಎಸ್. ಜಾನಕಿ ಅವರಿಗೆ ನುಡಿನಮನ ಹಾಗೂ ಸ್ವರನಮನ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಉಳ್ಖಾಲ ಕಸಾಪ ಕಾರ್ಯದರ್ಶಿ ರವೀಂದ್ರ ರೈ ಕಲ್ಲಿಮಾರು ಸ್ವಾಗತಿಸಿದರು. ಕುರ್ನಾಡು ಸರ್ಕಾರಿ ಪದವಿ ಪೂರ್ವ ಕಾಲೇಜಿನ ಉಪನ್ಯಾಸಕ ಡಾ. ಲೋಕೇಶ್ ನಿರೂಪಿಸಿದರು. ರವೀಂದ್ರ ಶೆಟ್ಟಿ ಉಳಿದೊಟ್ಟು, ವಿಜಯಲಕ್ಷ್ಮಿ ಪ್ರಸಾದ್ ರೈ ಕಲ್ಲಿಮಾರ್, ಆನಂದ ಅಸೈಗೋಳಿ, ಅಚ್ಯುತ ಗಟ್ಟಿ, ಎಡ್ವರ್ಡ್ ಲೋಬೋ ಮತ್ತು ಕಸಾಪ ಉಳ್ಳಾಲ ತಾಲೂಕಿನ ಪದಾಧಿಕಾರಿಗಳು, ಕಾಲೇಜಿನ ಅಧ್ಯಾಪಕರು ಉಪಸ್ಥಿತರಿದ್ದರು. ಸಭಾ ಕಾರ್ಯಕ್ರಮದ ನಂತರ ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ದ.ಕ. ಮಂಗಳೂರು ಪ್ರೋತ್ಸಾಹದೊಂದಿಗೆ ತೋನ್ಸೆ ಪುಷ್ಕಳ್ ಕುಮಾರ್, ಮಾಲಿನಿ ಕೆ. ಪ್ರಸಾದ್, ರಮೇಶ್ ಸಾಲ್ಯಾನ್ ಅವರಿಂದ ಎಸ್. ಜಾನಕಿಯವರಿಗೆ ಸ್ವರ ನಮನ ಕಾರ್ಯಕ್ರಮ ನಡೆಯಿತು.