ತಿಪಟೂರು: ಪ್ರತಿಯೊಬ್ಬರು ಪೌಷ್ಟಿಕ ಆಹಾರ ಸೇವನೆ ಮಾಡುವ ಮೂಲಕ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸಿಕೊಳ್ಳಬೇಕು ಎಂದು ಶಿಶು ಅಭಿವೃದ್ಧಿ ಯೋಜನಾಧಿಕಾರಿ ಲೋಕೇಶ್ ಹೇಳಿದರು.ತಾಲೂಕಿನ ಕೊನೇಹಳ್ಳಿ ಕೃಷಿ ವಿಜ್ಞಾನ ಕೇಂದ್ರದಲ್ಲಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಹಯೋಗದಲ್ಲಿ ಆಯೋಜಿಸಿದ್ದ ರಾಷ್ಟ್ರೀಯ ಪೋಷಣ್ ಮಾಸಾಚರಣೆ ಹಾಗೂ ಅಣಬೆ ಕೃಷಿ ಕುರಿತು ಕೌಶಲ್ಯಾಭಿವೃದ್ಧಿ ತರಬೇತಿಯನ್ನು ಉದ್ಘಾಟಿಸಿ ಮಾತನಾಡಿದರು.
ಪ್ರಸ್ತುತ ವರ್ಷ ರಾಷ್ಟ್ರೀಯ ಪೋಷಣ್ ಮಾಸವನ್ನು ತಾಯಿಯ ಹೆಸರಲ್ಲಿ ಒಂದು ಗಿಡ ಎಂಬ ರಾಷ್ಟ್ರ ವ್ಯಾಪಿ ಪ್ಲಾಂಟೇಷನ್ ಡ್ರೈವ್‌ನೊಂದಿಗೆ ಆಚರಿಸಲಾಗುತ್ತಿದೆ. ಪ್ರತಿಯೊಬ್ಬರು ಪೌಷ್ಟಿಕಾಂಶಯುಕ್ತ ಆಹಾರ ಸೇವಿಸುವ ಮೂಲಕ ಉತ್ತಮ ಆರೋಗ್ಯವನ್ನು ಕಾಪಾಡಿಕೊಳ್ಳಬೇಕು ಎಂದರು.ಹಿರಿಯ ವಿಜ್ಞಾನಿ ಡಾ.ವಿ.ಗೋವಿಂದಗೌಡ ಮಾತನಾಡಿ, ಭಾರತದಲ್ಲಿ ಪೌಷ್ಟಿಕಾಂಶ ಸಂಬಂಧಿತ ಸಮಸ್ಯೆಗಳನ್ನು ಪರಿಹರಿಸುವ ಅಗತ್ಯವಿದೆ. ಹಾಲುಣಿಸುವ ತಾಯಂದಿರು ಮತ್ತು ಆರು ವರ್ಷದೊಳಗಿನ ಮಕ್ಕಳ ಪೌಷ್ಟಿಕಾಂಶದ ಅಗತ್ಯಗಳನ್ನು ಕೇಂದ್ರೀಕರಿಸುವ ಮೂಲಕ ಅಪೌಷ್ಟಿಕತೆಯನ್ನು ಹೋಗಲಾಡಿಸಲು ರಾಷ್ಟ್ರೀಯ ಪೋಷಣ ಮಾಸಾಚರಣೆಯನ್ನು ಪ್ರಾರಂಭಿಸಲಾಯಿತು ಎಂದು ತಿಳಿಸಿದರು.
ಕೆವಿಕೆ ವಿಜ್ಞಾನಿ ಡಾ.ಪಿ.ಬಿ.ಸಿಂಧು ಮಾತನಾಡಿ, ಅಣಬೆ ಸಾಮಾನ್ಯವಾಗಿ ನೆಲದ ಮೇಲೆ ಬೆಳೆಯುವ ಒಂದು ವಿಧದ ಶಿಲೀಂದ್ರ. ಇದು ಉತ್ತಮ ಪೌಷ್ಟಿಕಾಂಶಗಳುಳ್ಳ ಆಹಾರವಾಗಿದ್ದು, ಇದರಲ್ಲಿ ಕೊಬ್ಬು ಹಾಗೂ ಕ್ಯಾಲೋರಿ ಕಡಿಮೆ ಇರುವುದರಿಂದ ತೂಕ ನಿರ್ವಹಣೆಗೆ ಸಹಕಾರಿ. ಹೃದಯ, ರಕ್ತನಾಳಗಳ ಆರೋಗ್ಯ, ಮೆದುಳು, ರಕ್ತದಲ್ಲಿನ ಸಕ್ಕರೆ ಪ್ರಮಾಣದ ನಿಯಂತ್ರಣ, ಜೀರ್ಣಾಂಗದ ವ್ಯವಸ್ಥೆ ಹಾಗೂ ಕ್ಯಾನ್ಸರ್ ತಡೆಗಟ್ಟಲು ಸಹಕಾರಿಯಾಗಿದೆ ಎಂದು ಮಾಹಿತಿ ನೀಡಿದರು. ಅಂಗನವಾಡಿ ಕಾರ್ಯಕರ್ತೆಯರು ರಾಷ್ಟ್ರೀಯ ಪೋಷಣ್ ಮಾಸಾಚರಣೆ ಪ್ರಯುಕ್ತ ಬೆಂಕಿಯಿಂದ ಬೇಯಿಸದೆ ಇರುವ ಆಹಾರ ಪದಾರ್ಥಗಳ ಬಳಕೆ ಬಗ್ಗೆ ಪ್ರಾತ್ಯಕ್ಷಿಕೆ ತೊರಿಸಿಕೊಟ್ಟರು.ಮೇಲ್ವಿಚಾರಕಿ ಬಿ.ಎನ್.ಪ್ರೇಮಾ, ಜನ ಜಾಗೃತಿ ವೇದಿಕೆ ತರಕಾರಿ ಗಂಗಾಧರ್, ಆರೋಗ್ಯ ಅಧಿಕಾರಿಗಳಾದ ಬಿಂದು, ನಾಗರತ್ನ, ಸೊಗಡು ಹೆಜ್ಜೆಯ ಸಿರಿಗಂಧ ಗುರು, ಅಖಿಲಾ, ಪ್ರಗತಿಪರ ರೈತ ಯೋಗಾನಂದ ಮೂರ್ತಿ, ವಿಜ್ಞಾನಿಗಳಾದ ಡಾ.ಕೀರ್ತಿಶಂಕರ್, ಡಾ.ತಸ್ಮೀಯಾ ಕೌಸರ್, ಎಂ.ಇ.ಡಾ.ದರ್ಶನ್, ಅಣಬೆ ಬೆಳೆಗಾರರಾದ ಗಂಗಲಕ್ಷ್ಮೀ, ಯೋಗೇಶ್ ರಾವ್ ಇದ್ದರು.