ರಾಯಚೂರು: ರಕ್ತಹೀನತೆ ಸಮಸ್ಯೆ ಅತಿ ಹೆಚ್ಚಾಗಿ ಮಹಿಳೆಯರಲ್ಲಿ ಕಂಡುಬರುವುದರಿಂದ ಮಹಿಳೆಯರು ಹೆಚ್ಚಾಗಿ ಹಸಿ ತರಕಾರಿ, ಹಣ್ಣು ಹಾಗೂ ಪೌಷ್ಟಿಕಾಂಶಯುಕ್ತ ಆಹಾರ ಸೇವನೆ ಮಾಡುವ ಮೂಲಕ ರಕ್ತಹೀನತೆ ತಡೆಗಟ್ಟಬಹುದಾಗಿದೆ ಎಂದು ಜಿಲ್ಲಾಧಿಕಾರಿ ಎಲ್.ಚಂದ್ರಶೇಖರ ನಾಯಕ ಅವರು ಹೇಳಿದರು.
ಸ್ಥಳೀಯ ಬಾಲಕಿಯರ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಬುಧವಾರ ಜಿಲ್ಲಾಡಳಿತ, ಜಿಪಂ ಹಾಗೂ ಜಿಲ್ಲಾ ಅರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಪದವಿ ಪೂರ್ವ ಶಿಕ್ಷಣ ಇಲಾಖೆ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಅಭಿವೃದ್ಧಿ ಇಲಾಖೆ ಆಶ್ರಯದಲ್ಲಿ ಹಮ್ಮಿಕೊಂಡಿದ್ದ, ಅನೀಮಿಯಾ ಮುಕ್ತ ಪೌಷ್ಟಿಕ ಕರ್ನಾಟಕ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.ಕಲ್ಯಾಣ ಕರ್ನಾಟಕ ಭಾಗದಲ್ಲಿ ಮಹಿಳೆಯರಲ್ಲಿ ರಕ್ತಹೀನತೆ ಮತ್ತು ಅಪೌಷ್ಟಿಕತೆ ನಿವಾರಿಸಲು ಸಮಗ್ರ ಪರೀಕ್ಷೆ, ಚಿಕಿತ್ಸೆ, ಅರಿವು ಮೂಡಿಸುವಿಕೆ ಮತ್ತು ಆರೋಗ್ಯ ಕಾರ್ಯಕರ್ತರ ಸಾಮರ್ಥ್ಯ ಬಲವರ್ಧನೆಗಾಗಿ ಸರ್ಕಾರ ಅನೀಮಿಯಾ ಮುಕ್ತ ಪೌಷ್ಟಿಕ ಕರ್ನಾಟಕ ಯೋಜನೆಯನ್ನು ಅನುಷ್ಟಾನಗೊಳಿಸಿದೆ. ಈ ಕಾರ್ಯಕ್ರಮದಲ್ಲಿ ನೀಡಲಾಗುವ ಕ್ರಮಗಳನ್ನು ಅನುಸರಿಸುವ ಮೂಲಕ ಅನೀಮಿಯಾ ತಡೆಗಟ್ಟಬಹುದಾಗಿದೆ ಎಂದು ತಿಳಿಸಿದರು.
ಜಿಪಂ ಜಿಪಂ ಮುಖ್ಯಾಕಾರ್ಯನಿರ್ವಾಹಕ ಅಧಿಕಾರಿ ಪಾಂಡ್ವೆ ರಾಹುಲ್ ತುಕರಾಮ ಅವರು ಮಾತನಾಡಿ, ಹಿಮೊಗ್ಲೋಬಿನ್ ಕೊರತೆಯಿಂದ ಅನೀಮಿಯಾ ಕಂಡುಬರುತ್ತಿದ್ದು, ಅಂಥವರು ಚಿಕ್ಸಿತೆ ಮಾಡಿಸಿಕೊಳ್ಳಿ, ಸರಿಯಾದ ರೀತಿಯಲ್ಲಿ ಮಾತ್ರೆಗಳನ್ನು ತೆಗೆದುಕೊಳ್ಳಬೇಕು ಎಂದು ಸಲಹೆ ನೀಡಿದರು.ಹಿಮೊಗ್ಲೋಬಿನ್ ಕೊರತೆಯಿಂದಾಗಿ ಮಹಿಳೆಯರಲ್ಲಿ ಸುಸ್ತು, ಆಯಾಸ, ಇದರಿಂದ ಯಾವುದೇ ಕೆಲಸ ಮಾಡುವಲ್ಲಿ ಇಚ್ಛಾಶಕ್ತಿ ಕಡಿಮೆಯಾಗುತ್ತದೆ. ಈ ಬಗ್ಗೆ ವಿದ್ಯಾರ್ಥಿಗಳು ತಮ್ಮ ಕುಟುಂಬ ಸದಸ್ಯರ ಜೊತೆ ಮಾಹಿತಿ ಹಂಚಿಕೊಳ್ಳಿ ಎಂದು ವಿವರಿಸಿದರು.
ಕರ್ನಾಟಕ ಅನೀಮಿಯಾ ಕುರಿತು ಹೆಚ್ಚಿನ ಕಾಳಜಿ ಹೊಂದಿರುವ ರಾಜ್ಯವಾಗಿದೆ. ದೇಶದಲ್ಲಿ ಶೇ.56 ರಿಂದ 60 ಜನರು ಅನಿಮೀಯಾದಿಂದ ಬಳಲುತ್ತಿದ್ದು, ಇದನ್ನು ತಡೆಯಲು ಸರ್ಕಾರ ಈ ಕಾರ್ಯಕ್ರಮ ರೂಪಿಸಿದೆ. ರಾಜ್ಯ, ಜಿಲ್ಲೆ ಮತ್ತು ತಾಲೂಕು ಮಟ್ಟದಲ್ಲಿ ವೈದ್ಯರು ಮತ್ತು ಸಿಬ್ಬಂದಿಗೆ ಅನೀಮಿಯಾ ತಡೆ ಕುರಿತು ತರಬೇತಿ ನಡೆಸಲಾಗುತ್ತಿದೆ. ತರಬೇತಿ ಹೊಂದಿದ ವೈದ್ಯರು, ಸಿಬ್ಬಂದಿ ತರಬೇತಿ ನೀಡಬೇಕು ಎಂದು ಹೇಳಿದರು.ಪ್ರೊಬೇಷ್ನರಿ ಐಎಎಸ್ ಅಧಿಕಾರಿ ಸಾಹಿತ್ಯಾ ಆಲದಕಟ್ಟಿ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಅಧಿಕಾರಿ ಡಾ.ಸುರೇಂದ್ರಬಾಬು, ಜಿಲ್ಲಾ ಆರ್.ಸಿ.ಎಚ್ ಅಧಿಕಾರಿ ಡಾ.ನಂದಿತಾ, ಜಿಲ್ಲಾ ಸರ್ವೇಕ್ಷಣಾಧಿಕಾರಿ ಡಾ.ಗಣೇಶ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಶಕ ಚೇತನ್ ಕುಮಾರ, ಪದವಿಪೂರ್ವ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಸೋಮಶೇಖರಪ್ಪ ಹೊಕ್ರಾಣಿ, ಕಾಲೇಜಿನ ಪ್ರಾಂಶುಪಾಲ ಗೋಪಾಲ ನಾಯಕ ಹಾಗೂ ಮತ್ತಿತರರಿದ್ದರು.