ಕನ್ನಡಪ್ರಭ ವಾರ್ತೆ ಶ್ರೀರಂಗಪಟ್ಟಣ
ಅಪೌಷ್ಟಿಕತೆ ನಿವಾರಣೆಗೆ ಪೌಷ್ಟಿಕಾಂಶವುಳ್ಳ ಆಹಾರ ಅವಶ್ಯಕ. ಪ್ರತಿಯೊಬ್ಬರೂ ಪೌಷ್ಟಿಕ ಆಹಾರ ಸೇವನೆ ಮಾಡುವ ಮೂಲಕ ರೋಗ ನಿರೋಧಕ ಶಕ್ತಿ ವೃದ್ಧಿಸಿಕೊಂಡು ಆರೋಗ್ಯವಂತ ಸಮಾಜ ನಿರ್ಮಿಸಬೇಕು ಎಂದು ಪ್ರಧಾನ ಸಿವಿಲ್ ನ್ಯಾಯಾಧೀಶ ಎಂ.ಹರೀಶ್ ಕುಮಾರ್ ಕರೆ ನೀಡಿದರು.ಪಟ್ಟಣದ ಅಂಬೇಡ್ಕರ್ ಭವನದಲ್ಲಿ ತಾಲೂಕು ಕಾನೂನು ಸೇವಾ ಸಮಿತಿ, ವಕೀಲರ ಸಂಘ ಹಾಗೂ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಹಾಗೂ ಆರೋಗ್ಯ ಇಲಾಖೆ ಆಶ್ರಯದಲ್ಲಿ ಪೌಷ್ಟಿಕಾಂಶ ದಿನಾಚರಣೆ ಹಾಗೂ ಪೋಷಣ್ ಮಾಸಾಚರಣೆ ಅಭಿಯಾನದ ಅಂಗವಾಗಿ ಆಯೋಜಿಸಿದ್ದ ಕಾನೂನು ಅರಿವು ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಪೌಷ್ಟಿಕ ಆಹಾರ ಪ್ರತಿಯೊಬ್ಬ ವ್ಯಕ್ತಿಯ ಸರ್ವತೋಮುಖ ಬೆಳವಣಿಗೆಗೆ ಅಗತ್ಯ. ದಿನನಿತ್ಯ ಸೇವಿಸುವ ಆಹಾರದಲ್ಲಿ ಸೊಪ್ಪು, ತರಕಾರಿ, ಮೊಳಕೆ ಕಾಳು, ಬೇಳೆ ಕಾಳು, ಹಣ್ಣು ಹಂಪಲು ಸೇವಿಸುವುದರಿಂದ ಉತ್ತಮ ಪೌಷ್ಟಿಕಾಂಶಗಳು ದೊರೆಯುವುರಿಂದ ಆರೋಗ್ಯವನ್ನು ಕಾಪಾಡಿಕೊಳ್ಳಲು ಸಹಕಾರಿಯಾಗಲಿದೆ ಎಂದರು.ನಂತರ ಅಪರ ಸಿವಿಲ್ ನ್ಯಾಯಾಧೀಶ ಹನುಮಂತಪ್ಪರಾಯಪ್ಪ ಬಿ.ಆರ್ ಮಾತನಾಡಿ, ಹೆಣ್ಣು ಮಕ್ಕಳು ಮತ್ತು ಮಹಿಳೆಯರು ದೇಶದ ಆಸ್ತಿ. ಪುರುಷರಿಗೆ ಸರಿ ಸಮಾನವಾದ ಎಲ್ಲಾ ಕ್ಷೇತ್ರಗಳಲ್ಲೂ ಕೆಲಸ ಮಾಡುತ್ತಿದ್ದಾರೆ. ಆದ್ದರಿಂದ ರಕ್ತ ಹೀನತೆ ಅಲಕ್ಷ ಮಾಡಬೇಡಿ ತಮ್ಮ ಆರೋಗ್ಯದ ಕಡೆ ಹೆಚ್ಚು ಗಮನ ಕೊಡಬೇಕು ಎಂದರು.
ಮಕ್ಕಳಿಗೆ ಪಾಸ್ಟ್ ಫುಡ್ ಕೊಡಿಸಬೇಡಿ, ಸ್ಥಳೀಯವಾಗಿ ಸಿಗುವ ಆಹಾರ ಪದಾರ್ಥಗಳನ್ನು ಬಳಸಿ ಮನೆಯಲ್ಲೇ ತಯಾರಿಸಿದ ತಿಂಡಿ ಪದಾರ್ಥಗಳನ್ನು ಕೊಡಬೇಕು ಎಂದರು.ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿ ಎಸ್.ಡಿ ಬೆನ್ನೂರು ಮಾತನಾಡಿದರು. ಕಾರ್ಯಕ್ರಮದಲ್ಲಿ ಶಿಶು ಅಭಿವೃದ್ಧಿ ಯೋಜನಾಧಿಕಾರಿ ಸಕಲೇಶ್ವರ್.ಎಸ್ ಅಧ್ಯಕ್ಷತೆ ವಹಿಸಿದ್ದರು. ಹಿರಿಯ ಅಂಗನವಾಡಿ ಮೇಲ್ವಿಚಾರಕಿ ಪುಷ್ಪ, ಮೇಲ್ವಿಚಾರಕಿ ಆಶಾ, ಸುಜಾತ, ಪ್ರಥಮ ದರ್ಜೆ ಸಹಾಯಕ ಕಿರಣರಾಜೆ ಹಾಗೂ ಗರ್ಭಿಣಿಯರು, ಅಂಗನವಾಡಿ ಕಾರ್ಯಕರ್ತೆಯರು ಸೇರಿದಂತೆ ಇತರರು ಇದ್ದರು.