)
ಬಸವರಾಜ ಹಿರೇಮಠ
ಕರ್ನಾಟಕ ವಿಶ್ವವಿದ್ಯಾಲಯ ವ್ಯಾಪ್ತಿಯ ಧಾರವಾಡದ ಕರ್ನಾಟಕ ಕಾಲೇಜು ಐತಿಹಾಸಿಕ ಮಹತ್ವವುಳ್ಳ ಕಾಲೇಜು. ಈ ಕಾಲೇಜು ಪ್ರವೇಶಕ್ಕೆ ವಿದ್ಯಾರ್ಥಿಗಳು ನಾನಾ ರೀತಿಯ ಕಸರತ್ತು ನಡೆಸುವುದು ಗೊತ್ತಿರುವ ಸಂಗತಿ. ಇಂತಹ ಕಾಲೇಜಿನ ಅತ್ಯಂತ ಬೇಡಿಕೆಯ ಭೂಗೋಳಶಾಸ್ತ್ರ ವಿಭಾಗಕ್ಕೆ ಮಾತ್ರ ಗ್ರಹಣ ಹಿಡಿದಿದೆ.
ಬಿ.ಎ. ಪದವಿ ಹಂತದಲ್ಲಿ ಭೂಗೋಳಶಾಸ್ತ್ರ ಅಧ್ಯಯನಕ್ಕೆ ಎಲ್ಲಿಲ್ಲದ ಬೇಡಿಕೆ. ಹೀಗಿದ್ದರೂ ವಿಭಾಗದ ಪ್ರಾಧ್ಯಾಪಕರುಗಳೇ ವಿದ್ಯಾರ್ಥಿಗಳಿಗೆ ಶೈಕ್ಷಣಿಕವಾಗಿ ದ್ರೋಹ ಎಸಗುತ್ತಿದ್ದಾರೆ ಎಂಬ ಗಂಭೀರ ಆರೋಪ ಕೇಳಿ ಬಂದಿದೆ. ವಿಭಾಗದಲ್ಲಿನ ಪ್ರಾಧ್ಯಾಪಕರ ಅಸಡ್ಡೆ, ನಿರ್ಲಕ್ಷ್ಯದಿಂದ ಬಹುಸಂಖ್ಯಾತ ವಿದ್ಯಾರ್ಥಿಗಳ ಸಂಖ್ಯೆ ವರ್ಷದಿಂದ ವರ್ಷಕ್ಕೆ ಕುಸಿಯುತ್ತಿದೆ. ನುರಿತ ಪ್ರಾಧ್ಯಾಪಕರಿದ್ದು, ವಿಶಾಲ ತರಗತಿಗಳಿದ್ದರೂ ಕುಂಟು ನೆಪಗಳಿಂದ ವಿಭಾಗ ಮುಚ್ಚುವ ಹಂತಕ್ಕೆ ಬಂದು ನಿಂತಿರುವುದು ಅತೀವ ಬೇಸರದ ಸಂಗತಿ.ಹೆಚ್ಚುವ ಬದಲು ಕುಸಿತ..
ಈ ಬಾರಿಯ ಶೈಕ್ಷಣಿಕ ಸಾಲಿಗೆ ಭೂಗೋಳಶಾಸ್ತ್ರ ಅಧ್ಯಯನ ಪ್ರವೇಶಕ್ಕೆ 300ಕ್ಕೂ ಅಧಿಕ ವಿದ್ಯಾರ್ಥಿಗಳು ಅರ್ಜಿ ಸಲ್ಲಿಸಿದ್ದರು. ಪ್ರತಿ ವರ್ಷ 120-140ರ ವರೆಗೂ ಪ್ರವೇಶ ನೀಡಲಾಗಿದೆ. ಆದರೆ, ಈ ವರ್ಷ ಮಾತ್ರ ಬರೀ 63 ವಿದ್ಯಾರ್ಥಿಗಳಿಗೆ ಮಾತ್ರವೇ ಪ್ರವೇಶ ನೀಡಿ, ಉಳಿದ ವಿದ್ಯಾರ್ಥಿಗಳನ್ನು ಕೈ ಬಿಡಲಾಗಿದೆ. ಶೇ.50ರಷ್ಟು ಮಾತ್ರ ವಿದ್ಯಾರ್ಥಿಗಳಿಗೆ ಪ್ರವೇಶ ಏಕೆ? ಉಳಿದವರಿಗೆ ಏತಕ್ಕೆ ಪ್ರವೇಶ ನೀಡುತ್ತಿಲ್ಲ ಎಂದರೆ ಅದಕ್ಕೆ ಸರಿಯಾದ ಉತ್ತರವಿಲ್ಲ. ಇದರಿಂದ ಕವಿವಿ ಪಡೆಯುತ್ತಿದ್ದ ಆಂತರಿಕ ಆದಾಯಕ್ಕೂ ಕತ್ತರಿ ಬಿದ್ದಂತಾಗಿದೆ.
ಕರ್ನಾಟಕ ಕಾಲೇಜಿನ ಯಾವುದೇ ವಿಭಾಗದ ಮುಖ್ಯಸ್ಥರ ಬೇಡಿಕೆಗೆ ಅನುಗುಣವಾಗಿ ಪ್ರವೇಶ ನೀಡಲಾಗುತ್ತದೆ. ಆಯಾ ವಿಭಾಗದಲ್ಲಿನ ಮೂಲಭೂತ ಸೌಕರ್ಯ, ಪ್ರಾಧ್ಯಾಪಕರ ಸಂಖ್ಯೆಗೆ ಅನುಗುಣವಾಗಿ ಪ್ರವೇಶ ಪಡೆಯಲಾಗುತ್ತದೆ. ಹೆಚ್ಚಿನ ಸೌಕರ್ಯ ನೀಡಿದರೆ ಹೆಚ್ಚಿನ ಸಂಖ್ಯೆಯ ವಿದ್ಯಾರ್ಥಿಗಳ ಪ್ರವೇಶ ತೆಗೆದುಕೊಳ್ಳುತ್ತೇವೆ.