ಹುಬ್ಬಳ್ಳಿ ಗುರುಕುಲ ಮಾದರಿ ಶಿಕ್ಷಣ ಕೇಂದ್ರಕ್ಕೆ ಗ್ರಹಣ

KannadaprabhaNewsNetwork | Published : Aug 7, 2024 1:03 AM

ಸಾರಾಂಶ

ಸದ್ಯ ಗುರುಕುಲ ಮಾದರಿಯಲ್ಲಿ 4 ವರ್ಷದ ಭಾರತೀಯ ಶಾಸ್ತ್ರೀಯ ಸಂಗೀತ ಕಲಿಯುತ್ತಿದ್ದ ವಿದ್ಯಾರ್ಥಿಗಳ ಭವಿಷ್ಯ ಡೋಲಾಯಮಾನವಾಗಿದೆ. ಗುರುಕುಲ ಶಿಕ್ಷಣ ಕೇಂದ್ರ ಕಳೆದ ಫೆ. 28ರ ವರೆಗೂ ಜಿಲ್ಲಾಧಿಕಾರಿಯ ನಿರ್ವಹಣೆಯಲ್ಲೇ ಇತ್ತು. ಬಳಿಕ ವಿವಿಗೆ ಹಸ್ತಾಂತರಿಸಲಾಗಿದ್ದು, ಮೇ ತಿಂಗಳಲ್ಲಿ ವಿವಿಯ ಕುಲಪತಿ ಮತ್ತು ಕುಲಸಚಿವರು ಆಗಮಿಸಿ ಪತ್ರವನ್ನು ಜಿಲ್ಲಾಧಿಕಾರಿಯಿಂದ ಪಡೆದುಕೊಂಡಿದ್ದಾರೆ.

ಶಿವಾನಂದ ಅಂಗಡಿ

ಹುಬ್ಬಳ್ಳಿ:

ಇಲ್ಲಿಯ ಉಣಕಲ್‌ ಬಳಿ ಇರುವ ಭಾರತೀಯ ಶಾಸ್ತ್ರೀಯ ಸಂಗೀತ ಗುರುಕುಲ ಮಾದರಿಯ ಶಿಕ್ಷಣ ಕೇಂದ್ರವನ್ನು ಮೈಸೂರಿನ ಕರ್ನಾಟಕ ರಾಜ್ಯ ಡಾ. ಗಂಗೂಬಾಯಿ ಹಾನಗಲ್ಲ ಸಂಗೀತ ಮತ್ತು ಪ್ರದರ್ಶಕ ಕಲೆಗಳ ವಿಶ್ವವಿದ್ಯಾಲಯಕ್ಕೆ ಸರ್ಕಾರ ಹಸ್ತಾಂತರಿಸಿದ್ದು, ಗುರುಕುಲದ ವಿದ್ಯಾರ್ಥಿಗಳ ಸಂಗೀತ ಶಿಕ್ಷಣ ಮುಂದುವರಿಕೆ ಕುರಿತಂತೆ ಅನಿಶ್ಚಿತತೆ ತಲೆದೋರಿದೆ.

ದಶಕದ ಹಿಂದೆ ಡಾ. ಗಂಗೂಬಾಯಿ ಹಾನಗಲ್ಲ ಗುರುಕುಲ ಟ್ರಸ್ಟ್‌ ಹೆಸರಿನಲ್ಲಿ ಹುಬ್ಬಳ್ಳಿಯಲ್ಲಿ ಭಾರತೀಯ ಶಾಸ್ತ್ರೀಯ ಸಂಗೀತ ಗುರುಕುಲ ಮಾದರಿಯ ಶಿಕ್ಷಣ ಕೇಂದ್ರ ತಲೆ ಎತ್ತಿದೆ. ನಾಡಿನ ಶಾಸ್ತ್ರೀಯ ಸಂಗೀತ ದಿಗ್ಗಜರು ಇಲ್ಲಿಗೆ ಆಗಮಿಸಿ ವಿದ್ಯಾರ್ಥಿಗಳಿಗೆ ಸಂಗೀತ ಕಲಿಸಿದ್ದಾರೆ. ಎರಡ್ಮೂರು ಬ್ಯಾಚ್‌ಗಳು ಮುಗಿದಿರಬೇಕು ಆಗಲೇ ಇದರ ಖರ್ಚು ವೆಚ್ಚಗಳನ್ನು ಭರಿಸಲಾಗದೇ ಸರ್ಕಾರ ಮೈಸೂರಿನ ಸಂಗೀತ ಮತ್ತು ಪ್ರದರ್ಶಕ ಕಲೆಗಳ ವಿಶ್ವವಿದ್ಯಾಲಯಕ್ಕೆ ಗುರುಕುಲವನ್ನು ಹಸ್ತಾಂತರಿಸಿದ್ದು, ಇದೀಗ ಇದು ವಿವಿಯ ಹುಬ್ಬಳ್ಳಿಯ ಪ್ರಾದೇಶಿಕ ಕೇಂದ್ರವಾಗಿ ಪರಿವರ್ತನೆಯಾಗಿದೆ.

ಸರ್ಕಾರದ ಈ ನಿಲುವಿನಿಂದ ಸದ್ಯ ಗುರುಕುಲ ಮಾದರಿಯಲ್ಲಿ 4 ವರ್ಷದ ಭಾರತೀಯ ಶಾಸ್ತ್ರೀಯ ಸಂಗೀತ ಕಲಿಯುತ್ತಿದ್ದ ವಿದ್ಯಾರ್ಥಿಗಳ ಭವಿಷ್ಯ ಡೋಲಾಯಮಾನವಾಗಿದೆ. ಗುರುಕುಲ ಶಿಕ್ಷಣ ಕೇಂದ್ರ ಕಳೆದ ಫೆ. 28ರ ವರೆಗೂ ಜಿಲ್ಲಾಧಿಕಾರಿಯ ನಿರ್ವಹಣೆಯಲ್ಲೇ ಇತ್ತು. ಬಳಿಕ ವಿವಿಗೆ ಹಸ್ತಾಂತರಿಸಲಾಗಿದ್ದು, ಮೇ ತಿಂಗಳಲ್ಲಿ ವಿವಿಯ ಕುಲಪತಿ ಮತ್ತು ಕುಲಸಚಿವರು ಆಗಮಿಸಿ ಪತ್ರವನ್ನು ಜಿಲ್ಲಾಧಿಕಾರಿಯಿಂದ ಪಡೆದುಕೊಂಡಿದ್ದಾರೆ.

ಮೈಸೂರು ಸಂಗೀತ ವಿವಿ ಈಗ ಪ್ರಾದೇಶಿಕ ಕೇಂದ್ರವನ್ನು ನೋಡಿಕೊಳ್ಳಲು ಉಸ್ತುವಾರಿ ಅಧಿಕಾರಿಯನ್ನು ನೇಮಿಸಿದೆ. ಸಂಗೀತ ಮತ್ತು ಪ್ರದರ್ಶಕ ಕಲೆಗಳ ಪ್ರವೇಶಾತಿ ಪ್ರಕ್ರಿಯೆ ಆರಂಭವಾಗಿದ್ದು, ಅವರು ನೋಡಿಕೊಳ್ಳುತ್ತಿದ್ದಾರೆ.

ಈ ಮಧ್ಯೆ ಗುರುಕುಲ ಮುಂದುವರಿಸುತ್ತೇವೆ. ಸರ್ಕಾರ ಅನುದಾನ ನೀಡಬೇಕು ಎಂದು ಕುಲಪತಿ ಕೋರಿದ್ದಾರೆ.

ಆದರೆ ಅನುದಾನ ಬಾರದೇ ಇರುವುದರಿಂದ ಇಲ್ಲಿಯ ವಿದ್ಯಾರ್ಥಿಗಳು ಯಾವುದೇ ಸೌಕರ್ಯವಿಲ್ಲದೇ ತೀವ್ರ ಸಂಕಷ್ಟ ಎದುರಾಗಿದೆ.

ವಿದ್ಯಾರ್ಥಿಗಳು ಅತಂತ್ರ:

ಗುರುಕುಲ ಪದ್ಧತಿಯ ಪರಂಪರೆಯಲ್ಲಿ 10 ವಿದ್ಯಾರ್ಥಿನಿಯರು, 9 ವಿದ್ಯಾರ್ಥಿಗಳು ಸೇರಿ 19 ವಿದ್ಯಾರ್ಥಿಗಳು ಕಲಿಯುತ್ತಿದ್ದು, ಕಳೆದ ಮೇನಲ್ಲಿ ರಜೆಗೆಂದು ತೆರಳಿ ವಾಪಸ್‌ ಬಂದಾಗ ಸಂಗೀತ ವಿದ್ಯಾರ್ಥಿಗಳಿಗೆ ಅನುದಾನ ಬಂದರೆ ಮಾತ್ರ ಗುರುಕುಲ ಮುಂದುವರಿಯುತ್ತದೆ. ಇಲ್ಲವಾದರೆ ನೀವು ತೆರವು ಮಾಡಬೇಕು ಎಂದು ಅಧಿಕಾರಿಗಳು ಗಡುವು ನೀಡಿದ್ದಾರೆ. ಹೀಗಾಗಿ ಎರಡು ವರ್ಷ ಶಿಕ್ಷಣ ಪೂರೈಸಿರುವ ಈ ಸಂಗೀತ ವಿದ್ಯಾರ್ಥಿಗಳಿಗೆ ದಿಕ್ಕು ತೋಚದಂತಾಗಿದೆ.

ಈ ಮಧ್ಯೆ ಎಬಿವಿಪಿ ವಿದ್ಯಾರ್ಥಿಗಳ ಬೆನ್ನಿಗೆ ನಿಂತಿದ್ದು, ಹೋರಾಟಕ್ಕೆ ಸಾಥ್‌ ನೀಡಿದೆ. ಸೋಮವಾರ ಬೆಂಗಳೂರಿನಲ್ಲಿ ಎಬಿವಿಪಿ ನಿಯೋಗ ವಿಧಾನಪರಿಷತ್‌ ಸಭಾಪತಿ ಬಸವರಾಜ ಹೊರಟ್ಟಿಯವರನ್ನು ಭೇಟಿ ಮಾಡಿದ್ದು, ಅಹವಾಲು ಆಲಿಸಿರುವ ಸಭಾಪತಿ ಬಸವರಾಜ ಹೊರಟ್ಟಿ, ಮೈಸೂರಿನ ಸಂಗೀತ ಮತ್ತು ಪ್ರದರ್ಶಕ ಕಲೆಗಳ ವಿಶ್ವವಿದ್ಯಾಲಯದ ಕುಲಪತಿ ಪ್ರೊ. ನಾಗೇಶ ವಿ. ಬೆಟ್ಟಕೋಟೆ ಅವರಿಗೆ ಫೋನ್‌ ಮಾಡಿ, ಸರ್ಕಾರ ಗುರುಕುಲದ ಬಗ್ಗೆ ನಿರ್ಧಾರ ಕೈಗೊಳ್ಳುವವರೆಗೂ ಗುರುಕುಲದಿಂದ ವಿದ್ಯಾರ್ಥಿಗಳನ್ನು ಹೊರಗೆ ಹಾಕಬಾರದು ಎಂದು ತಾಕೀತು ಮಾಡಿದ್ದಾರೆ.

ಗುರುಕುಲ ಶಾಸ್ತ್ರೀಯ ಸಂಗೀತ ನಾಲ್ಕು ವರ್ಷದ ಅವಧಿಯದಾಗಿದ್ದು, ಎರಡು ವರ್ಷ ಪೂರೈಸಿದ್ದೇವೆ. ಮೇ ಬಳಿಕ ಗುರುಕುಲ ಬಂದ್‌ ಆಗಿದೆ. ಸಂಗೀತ ಹೇಳುವ ಗುರುಗಳು ಬಂದಿಲ್ಲ. ನಮ್ಮೆಲ್ಲ ಸೌಲಭ್ಯಗಳನ್ನು ಬಂದ್‌ ಮಾಡಲಾಗಿದೆ ಎಂದು ಗುರುಕುಲ ಶಿಕ್ಷಣ ಕೇಂದ್ರದ ವಿದ್ಯಾರ್ಥಿ ಶಿವಸ್ವಾಮಿ ಕಲಬುರಗಿ ಹೇಳಿದರು.

ಸೋಮವಾರ ಜಿಲ್ಲಾಧಿಕಾರಿ ಭೇಟಿ ಮಾಡಿ ಗುರುಕುಲ ವಿದ್ಯಾರ್ಥಿಗಳಿಗೆ ಊಟದ ವ್ಯವಸ್ಥೆ ಮಾಡಬೇಕು ಎಂದು ಮನವಿ ಮಾಡಿದ್ದೇವೆ. ಸರ್ಕಾರ ಮಧ್ಯ ಪ್ರವೇಶಿಸಿ ಬೇಗ ನಿರ್ಧಾರ ಮಾಡಬೇಕು. ಗುರುಕುಲ ಶಿಕ್ಷಣ ಕೇಂದ್ರ ಉಳಿಸಿಕೊಳ್ಳಲು ಆ. 9ರಂದು ಗುರುಕುಲದ ಎದುರು ಎಬಿವಿಪಿ ಹೋರಾಟ ಮಾಡಲಿದೆ ಎಬಿವಿಪಿ ವಿಭಾಗ ಸಂಘಟನಾ ಕಾರ್ಯದರ್ಶಿ ಮಣಿಕಂಠ ಕಳಸ ತಿಳಿಸಿದರು.

Share this article