ಸ್ವ ಉದ್ಯೋಗದಿಂದ ಆರ್ಥಿಕ ಸಬಲತೆ: ಮೋಹನ್ ಕುಮಾರ್

KannadaprabhaNewsNetwork |  
Published : Aug 06, 2026, 01:15 AM IST
5ಕೆಆರ್ ಎಂಎನ್ 1.ಜೆಪಿಜಿಹಾರೋಹಳ್ಳಿಯ ಕೆನರಾಬ್ಯಾಂಕ್ ಗ್ರಾಮೀಣ ಸ್ವ ಉದ್ಯೋಗ ತರಬೇತಿ ಸಂಸ್ಥೆ, ಜಿಲ್ಲಾ ಕಾರಾಗೃಹ ಹಾಗೂ ಆರೋಗ್ಯ ಇಲಾಖೆ ಸಹಯೋಗದಲ್ಲಿ ನಗರದ ಜಿಲ್ಲಾ ಕಾರಾಗೃಹದಲ್ಲಿ ಬಂಧಿ ನಿವಾಸಿಗಳಿಗಾಗಿ ಆಯೋಜಿಸಲಾಗಿದ್ದ 10 ದಿನಗಳ ಅಣಬೆ ತರಬೇತಿ ಶಿಬಿರಕ್ಕೆ ಅತಿಥಿಗಳು ಚಾಲನೆ ನೀಡಿದರು. | Kannada Prabha

ಸಾರಾಂಶ

ರಾಮನಗರ: ಸ್ವ-ಉದ್ಯೋಗ ಕೈಗೊಂಡು ಆರ್ಥಿಕವಾಗಿ ಸಬಲರಾಗಲು ಅಣಬೆ ಬೇಸಾಯದಂತಹ ತರಬೇತಿ ಶಿಬಿರಗಳು ಉತ್ತಮ, ಬಂಧಿ ನಿವಾಸಿಗಳು ಇದರ ಪ್ರಯೋಜನ ಪಡೆದು ಮುಂದಿನ ಜೀವನವನ್ನು ಉತ್ತಮವಾಗಿ ನಡೆಸಬಹುದು ಎಂದು ಜಿಲ್ಲಾ ಲೀಡ್ ಬ್ಯಾಂಕ್ ಮ್ಯಾನೇಜರ್ ಮೋಹನ್ ಕುಮಾರ್ ಹೇಳಿದರು

ರಾಮನಗರ: ಸ್ವ-ಉದ್ಯೋಗ ಕೈಗೊಂಡು ಆರ್ಥಿಕವಾಗಿ ಸಬಲರಾಗಲು ಅಣಬೆ ಬೇಸಾಯದಂತಹ ತರಬೇತಿ ಶಿಬಿರಗಳು ಉತ್ತಮ, ಬಂಧಿ ನಿವಾಸಿಗಳು ಇದರ ಪ್ರಯೋಜನ ಪಡೆದು ಮುಂದಿನ ಜೀವನವನ್ನು ಉತ್ತಮವಾಗಿ ನಡೆಸಬಹುದು ಎಂದು ಜಿಲ್ಲಾ ಲೀಡ್ ಬ್ಯಾಂಕ್ ಮ್ಯಾನೇಜರ್ ಮೋಹನ್ ಕುಮಾರ್ ಹೇಳಿದರು.

ಹಾರೋಹಳ್ಳಿಯ ಕೆನರಾಬ್ಯಾಂಕ್ ಗ್ರಾಮೀಣ ಸ್ವ ಉದ್ಯೋಗ ತರಬೇತಿ ಸಂಸ್ಥೆ, ಜಿಲ್ಲಾ ಕಾರಾಗೃಹ ಹಾಗೂ ಆರೋಗ್ಯ ಇಲಾಖೆ ಸಹಯೋಗದಲ್ಲಿ ನಗರದ ಜಿಲ್ಲಾ ಕಾರಾಗೃಹದಲ್ಲಿ ಬಂಧಿಗಳಿಗಾಗಿ ಆಯೋಜಿಸಿದ್ದ 10 ದಿನಗಳ ಅಣಬೆ ತರಬೇತಿ ಶಿಬಿರಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಶಿಕ್ಷೆ ಮುಗಿಸಿ, ಜೈಲಿನಿಂದ ಹೊರಬರುವ ಬಂಧಿಗಳ ಮುಂದಿನ ಉದ್ಯೋಗಕ್ಕೆ ಈ ರೀತಿಯ ತರಬೇತಿ ಶಿಬಿರಗಳು ಅತ್ಯುತ್ತಮವಾಗಿವೆ. ಇದರಿಂದ ಸ್ವ ಉದ್ಯೋಗ ಸ್ಥಾಪಿಸಿಕೊಂಡು ಇತರೆ ಹಾದಿ ತುಳಿಯದಂತೆ ತಮ್ಮ ಕುಟುಂಬವನ್ನು ಅವರು ಪೋಷಿಸಬಹುದಾಗಿದೆ. ಇದೇ ರೀತಿಯ ವಿವಿಧ ತರಬೇತಿ ಶಿಬಿರಗಳಿದ್ದು ಅವುಗಳು ಸಹ ಸ್ವ ಉದ್ಯೋಗ ಕೈಗೊಳ್ಳಲು ಅನುಕೂಲವಾಗಲಿದೆ ಎಂದರು.

ಪ್ರಧಾನಮಂತ್ರಿ ಜೀವನ ಜ್ಯೋತಿ ಬೀಮಾ, ಪ್ರಧಾನ ಮಂತ್ರಿ ಸುರಕ್ಷಾ ಯೋಜನೆಯಲ್ಲಿ ವಿಮೆದಾರರಾಗಬೇಕು. ಪ್ರಧಾನಮಂತ್ರಿ ಜೀವನ ಜ್ಯೋತಿ ಬೀಮಾ ಯೋಜನೆಯಡಿ ಯಾವುದೇ ಕಾರಣದಿಂದ ಸಂಭವಿಸುವ ಮರಣಕ್ಕೆ 2 ಲಕ್ಷ ರು.ಗಳ ವಿಮಾ ರಕ್ಷಣೆ ಲಭಿಸುತ್ತದೆ, ವಾರ್ಷಿಕ ಪ್ರೀಮಿಯಂ 436 ರೂಪಾಯಿಗಳನ್ನು ಪಾವತಿಸುವ 18 ರಿಂದ 50 ವರ್ಷ ವಯಸ್ಸಿನವರಿಗೆ ಈ ಯೋಜನೆ ಅನ್ವಯಿಸುತ್ತದೆ. ಪಿಎಂ ಸುರಕ್ಷಾ ಯೋಜನೆಯಡಿ 18 ರಿಂದ 70 ವರ್ಷದ ವರೆಗೆ ವಿಮೆ ಮಾಡಿಬಹುದಾಗಿದ್ದು, ಅಪಘಾತದಿಂದ ಮರಣ ಅಥವಾ ಸಂಪೂರ್ಣ ಅಂಗವೈಕಲ್ಯಕ್ಕೆ 2 ಲಕ್ಷ ರೂ.ಗಳ ಪರಿಹಾರ ದೊರೆಯುತ್ತದೆ, ಈ ಯೋಜನೆಯಡಿ ಎಲ್ಲರೂ ವಿಮೆ ಮಾಡಿಸುವಂತೆ ಮೋಹನ್ ಕುಮಾರ್ ತಿಳಿಸಿದರು.

ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಮಾನಸಿಕ ಆರೋಗ್ಯ ವಿಭಾಗದ ಮನೋವೈದ್ಯಕೀಯ ಸಾಮಾಜಿಕ ಕಾರ್ಯಕರ್ತೆ ಪದ್ಮರೇಖಾ ಮಾತನಾಡಿ, ಕಾರಾಗೃಹದಲ್ಲಿ ಈ ರೀತಿಯ ತರಬೇತಿಗಳು ಅತ್ಯಂತ ಅಗತ್ಯವಾಗಿವೆ. ಯಾವುದೋ ಅಪರಾಧ ಮಾಡಿ ಇಲ್ಲಿಗೆ ಬರುವ ಬಂಧಿಗಳಿಗೆ ಇಲ್ಲಿ ಬಂದಾಗ ಪಾಪಪ್ರಜ್ಞೆ ಕಾಡುತ್ತಿರುತ್ತದೆ ಹಾಗೂ ಮುಂದೆ ಅವರಲ್ಲಿ ಒಳ್ಳೆಯವರಾಗಿ ಬದಲಾಗಬೇಕೆನ್ನುವ ಭಾವ ಮೂಡುತ್ತದೆ. ಅಂತಹ ಆಲೋಚನೆಗಳಿಗೆ ಇದು ಸಹಕಾರಿಯಾಗಲಿದೆ, ತರಬೇತಿಗೆ ನೋಂದಣಿಯಾಗಿ ಉತ್ತಮವಾಗಿ ಕಲಿತವರು ಮತ್ತಷ್ಟು ಬಂಧಿ ನಿವಾಸಿಗಳಿಗೆ ಅವರು ಪ್ರೇರಣೆಯಾಗಲಿದ್ದಾರೆ ಎಂದರು.

ಕೆನರಾಬ್ಯಾಂಕ್ ಗ್ರಾಮೀಣ ಸ್ವ-ಉದ್ಯೋಗ ತರಬೇತಿ ಸಂಸ್ಥೆಯ ನಿರ್ದೇಶಕ ಸಮ್ಮೇದ ಹಾರೋಗೇರಿ ಮಾತನಾಡಿ, 1990ರಿಂದಲೂ ಸಂಸ್ಥೆ ಸಾಕಷ್ಟು ರೀತಿಯ ತರಬೇತಿಗಳನ್ನು ನೀಡಿ ಸ್ವ ಉದ್ಯೋಗ ಕೈಗೊಳ್ಳಲು ನೆರವು ನೀಡಿದೆ. ಇಂದಿನ ಜೀವನಕ್ಕೆ ಅಗತ್ಯವಿರುವ ಕೌಶಲ್ಯಾಭಿವೃದ್ದಿ ತರಬೇತಿಗಳು ಸೇರಿದಂತೆ, ಆರ್ಥಿಕವಾಗಿ ಬಲ ನೀಡಲು ಬ್ಯಾಂಕ್‌ಗಳಿಂದ ಸಾಲ ಸೌಲಭ್ಯಗಳನ್ನು, ಕಚ್ಚಾ ಪದಾರ್ಥವನ್ನು ಒದಗಿಸಿಕೊಡಲು, ಉತ್ತಮ ಮಾರುಕಟ್ಟೆ ಕಲ್ಪಿಸಿಕೊಡಲು ನೆರವು ನೀಡುತ್ತದೆ ಎಂದು ಹೇಳಿದರು.

ಜಿಲ್ಲಾ ಕಾರಾಗೃಹದ ಪ್ರಭಾರ ಅಧೀಕ್ಷಕರಾದ ಇಮಾಮ್ ಖಾಸಿಂ ಮಾತನಾಡಿ, ಜೀವನದಲ್ಲಿ ನಿಷ್ಠೆ, ಶ್ರದ್ದೆ, ಶ್ರಮ ಹಾಗೂ ಶಿಸ್ತಿನಿಂದ ಕಾಯಕ ಮಾಡಬೇಕು, ಅದರಿಂದ ಮಾನವ ಉನ್ನತಿಗೇರಲು ಸಾಧ್ಯ, ಈ ಯೋಜನೆಯ ಸದುಪಯೋಗ ಪಡೆದುಕೊಳ್ಳಬೇಕು, 30*40 ಅಡಿ ಜಾಗದಲ್ಲಿ ಈ ಅಣಬೆ ಬೇಸಾಯ ಮಾಡಿದರೆ ತಿಂಗಳಿಗೆ ಕನಿಷ್ಠ 15 ರಿಂದ 20 ಸಾವಿರ ರೂಪಾಯಿಗಳನ್ನು ಗಳಿಸಬಹುದಾಗಿದೆ, ಇದರಿಂದ ಆರ್ಥಿಕ ಸ್ಥಿತಿ ಸುಧಾರಿಸಲಿದೆ, ಜ್ಞಾನ ಮತ್ತು ತಿಳುವಳಿಕೆಗೆ ಸಾಕಷ್ಟು ಅಂತರವಿದೆ ಅದನ್ನು ಅರ್ಥ ಮಾಡಿಕೊಂಡು ಉತ್ತಮ ಜೀವನ ರೂಪಿಸಿಕೊಳ್ಳುವಂತೆ ಕಿವಿ ಮಾತು ಹೇಳಿದರು.

ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಹಿರಿಯ ಸಹಾಯಕ ನಿರ್ದೇಶಕ ಎಚ್.ಜಿ.ರವಿರಾಜ್ ,ಜೈಲರ್ ಮಂಜುಳಾ ಮಾತನಾಡಿದರು. ಕೆನರಾಬ್ಯಾಂಕ್ ಗ್ರಾಮೀಣ ಸ್ವ ಉದ್ಯೋಗ ತರಬೇತಿ ಸಂಸ್ಥೆಯ ಉಪನ್ಯಾಸಕ ದೇವಿಂದ್ರ ಪ್ರಸಾದ್ ಉಪಸ್ಥಿತರಿದ್ದರು.

5ಕೆಆರ್ ಎಂಎನ್ 1.ಜೆಪಿಜಿ

ಹಾರೋಹಳ್ಳಿಯ ಕೆನರಾಬ್ಯಾಂಕ್ ಗ್ರಾಮೀಣ ಸ್ವ ಉದ್ಯೋಗ ತರಬೇತಿ ಸಂಸ್ಥೆ, ಜಿಲ್ಲಾ ಕಾರಾಗೃಹ ಹಾಗೂ ಆರೋಗ್ಯ ಇಲಾಖೆ ಸಹಯೋಗದಲ್ಲಿ ನಗರದ ಜಿಲ್ಲಾ ಕಾರಾಗೃಹದಲ್ಲಿ ಬಂಧಿ ನಿವಾಸಿಗಳಿಗಾಗಿ ಆಯೋಜಿಸಿದ್ದ 10 ದಿನಗಳ ಅಣಬೆ ತರಬೇತಿ ಶಿಬಿರಕ್ಕೆ ಅತಿಥಿಗಳು ಚಾಲನೆ ನೀಡಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ತೀವ್ರ ಬರ: ಪರಿಹಾರ ಕ್ರಮಕ್ಕೆ ಸಚಿವ ಬಿ.ಎಸ್.ಸುರೇಶ ಸೂಚನೆ
ದಾಂಪತ್ಯದಲ್ಲಿ ವಿಶ್ವಾಸ ವಿಟ್ಟಲ್ಲಿ ಆನಂದ ಪ್ರಾಪ್ತಿ