ವಿಜಯಪುರ: ರೈತರು ದ್ರಾಕ್ಷಿ, ದಾಳಿಂಬೆ, ರೇಷ್ಮೆ, ಹೂವು, ತರಕಾರಿ ಕೃಷಿ ಬೆಳೆಗಳಿಗೆ ತಂತ್ರಜ್ಞಾನ ಅಳವಡಿಸಿಕೊಳ್ಳಬೇಕು ಎಂದು ಪ್ರಗತಿಪರ ರೈತ ಹಾರೋಹಳ್ಳಿ ರಘು ಹೇಳಿದರು.
ಹೋಬಳಿಯ ದಿನ್ನೂರು ಗ್ರಾಮದಲ್ಲಿ ಸೀನಿಯರ್ ಛೇಂಬರ್ ಇಂಟರ್ ನ್ಯಾಷನಲ್ ವಿಜಯೋತ್ಸವ ಹಾಗೂ ರೈತ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ರಾಷ್ಟ್ರೀಯ ತೋಟಗಾರಿಕಾ ಮಿಷನ್ ಯೋಜನೆಯಡಿ ಸಿಗುವ ಎಲ್ಲಾ ಸೌಲಭ್ಯ, ಸಲಹೆ ಪಡೆದು ಕೃಷಿ ಉಪಕಸುಬುಗಳನ್ನು ರೂಢಿಸಿಕೊಂಡಾಗ ರೈತರು ಆರ್ಥಿಕ ಸುಧಾರಣೆ ಕಂಡುಕೊಳ್ಳಬಹುದು. ಸರ್ಕಾರ ಕೃಷಿ ಸಂಶೋಧನಾ ಕೇಂದ್ರ ಸ್ಥಾಪಿಸುವ ಮೂಲಕ ರೈತಸ್ನೇಹಿಯಾಗಬೇಕು ಎಂದು ಸಲಹೆ ನೀಡಿದರು.ವಿಜಯಪುರ ಘಟಕದ ಅಧ್ಯಕ್ಷ ಕೆ.ವೆಂಕಟೇಶ್ ಮಾತನಾಡಿ, ವಿಜಯಪುರ ಘಟಕ ಆರೋಗ್ಯ ತಪಾಸಣೆ, ಪರಿಸರ ದಿನಾಚರಣೆ, ಕೌಶಲ್ಯ ತರಬೇತಿ ಶಿಬಿರ ಮೊದಲಾದ ಸೇವಾ ಕಾರ್ಯಕ್ರಮಗಳನ್ನು ಮಾಡುತ್ತಿರುವುದು ಉತ್ತಮ ಬೆಳವಣಿಗೆ ಎಂದು ಹೇಳಿದರು.
ಕುರಿ ಮತ್ತು ಉಣ್ಣೆ ನಿಗಮದ ಅಧ್ಯಕ್ಷ ಸಿ.ವಿ.ಲೋಕೇಶ್ ಗೌಡ ಮಾತನಾಡಿ, ಕೇಂದ್ರ ಸರ್ಕಾರದಿಂದ ಕುರಿ ಸಾಕಾಣಿಕೆಗೆ ಅನೇಕ ಸೌಲಭ್ಯಗಳು ದೊರೆಯುತ್ತಿದೆ. ಅವುಗಳನ್ನು ರೈತರು ಸದ್ಬಳಕೆ ಮಾಡಿಕೊಳ್ಳಬೇಕು ಎಂದು ಹೇಳಿದರು. ಇದೇ ವೇಳೆ ರಾಜ್ಯ ಮಟ್ಟದ ಅತ್ಯುತ್ತಮ ತೋಟಗಾರಿಕೆ ರೈತ ಪ್ರಶಸ್ತಿ ಪುರಸ್ಕೃತರಾದ ಡಾ.ಎಚ್.ಎಂ.ಮರಿಗೌಡ, ರೈತ ಮಹಿಳೆ ರೂಪ ಹಾಗೂ ಕುರಿ ಮತ್ತು ಉಣ್ಣೆ ನಿಗಮದ ಅಧ್ಯಕ್ಷ ಬಳುವನಹಳ್ಳಿಯ ಸಿ.ವಿ.ಲೋಕೇಶ್‌ಗೌಡ ಅವರನ್ನು ಸೀನಿಯರ್ ಛೇಂಬರ್ ಇಂಟರ್ ನ್ಯಾಷನಲ್ ಬೆಂಗಳೂರು ಲೀಜನ್ ಪೂರ್ವ ವಲಯಾಧ್ಯಕ್ಷ ಬಸವರಾಜ ದಿಂಡೂರ್ ಅವರು ಸನ್ಮಾನಿಸಿದರು.
ರಾಷ್ಟ್ರೀಯ ಸಂಯೋಜಕ ಜಯರಾಮ್, ಜೆಸಿಐ ಮಾಜಿ ಅಧ್ಯಕ್ಷ ಕೋರಮಂಗಲ ಬೈರೇಗೌಡ, ಬೇಕರಿ ಮಂಜುನಾಥ್, ಬಲಮುರಿ ಶ್ರೀನಿವಾಸ್, ಎಸ್‌ಆರ್‌ಎಸ್.ಬಸವರಾಜು, ಮೇಲೂರು ಮುನಿಕೃಷ್ಣ, ಅನಿಸ್ ಉರ್ ರೆಹಮಾನ್, ಜೆ.ಆರ್.ಮುನಿವೀರಣ್ಣ, ಸುಬ್ರಹ್ಮಣ್ಯಶೆಟ್ಟಿ, ವೆಂಕಟೇಶ್, ಚಿದಾನಂದ, ವಸಂತ್ ಕುಮಾರ್ ಇತರರಿದ್ದರು.