ಧರ್ಮಸ್ಥಳ ಪ್ರಕರಣಕ್ಕೆ ಇ.ಡಿ ಪ್ರವೇಶ ?

KannadaprabhaNewsNetwork |  
Published : Sep 01, 2025, 01:04 AM IST
ಉತ್ಖನನ | Kannada Prabha

ಸಾರಾಂಶ

ಯೂಟ್ಯೂಬ್‌ ಸೇರಿದಂತೆ ಸಾಮಾಜಿಕ ಜಾಲತಾಣಗಳ ಮೂಲಕ ಧರ್ಮಸ್ಥಳ ಕ್ಷೇತ್ರವನ್ನು ತೇಜೋವಧೆ ಮಾಡಿದ ಪ್ರಕರಣಗಳಿಗೆ ಸಂಬಂಧಿಸಿ ಹಣದ ಮೂಲಗಳ ತನಿಖೆಗೆ ಇ.ಡಿ (ಜಾರಿ ನಿರ್ದೇಶನಾಲಯ) ಪ್ರವೇಶ ಮಾಡಿದೆ ಎಂದು ತಿಳಿದು ಬಂದಿದೆ.

 ಮಂಗಳೂರು :  ಯೂಟ್ಯೂಬ್‌ ಸೇರಿದಂತೆ ಸಾಮಾಜಿಕ ಜಾಲತಾಣಗಳ ಮೂಲಕ ಧರ್ಮಸ್ಥಳ ಕ್ಷೇತ್ರವನ್ನು ತೇಜೋವಧೆ ಮಾಡಿದ ಪ್ರಕರಣಗಳಿಗೆ ಸಂಬಂಧಿಸಿ ಹಣದ ಮೂಲಗಳ ತನಿಖೆಗೆ ಇ.ಡಿ (ಜಾರಿ ನಿರ್ದೇಶನಾಲಯ) ಪ್ರವೇಶ ಮಾಡಿದೆ ಎಂದು ತಿಳಿದು ಬಂದಿದೆ. ಇದರೊಂದಿಗೆ ಮುಂದಿನ ದಿನಗಳಲ್ಲಿ ಈ ಪ್ರಕರಣದಲ್ಲಿ ಎನ್‌ಐಎ ತನಿಖೆಯೂ ನಡೆಯುವ ಸಾಧ್ಯತೆ ದಟ್ಟವಾಗಿದೆ. ಇದು ಬುರುಡೆ ಟೀಂಗೆ ಮತ್ತಷ್ಟು ಸಂಕಷ್ಟ ತಂದೊಡ್ಡಲಿದೆ.

ಎಐ (ಕೃತಕ ಬುದ್ಧಿಮತ್ತೆ) ತಂತ್ರಜ್ಞಾನ ಬಳಸಿ ಧರ್ಮಸ್ಥಳ ಕ್ಷೇತ್ರವನ್ನು ತೇಜೋವಧೆ ಮಾಡಿ, ಭಕ್ತರ ಭಾವನೆಗಳಿಗೆ ಘಾಸಿ ಉಂಟು ಮಾಡಿದ ವಿಚಾರಕ್ಕೆ ಸಂಬಂಧಿಸಿ ಬೆಳ್ತಂಗಡಿ ಠಾಣೆಯಲ್ಲಿ ಎರಡು ಪ್ರತ್ಯೇಕ ಪ್ರಕರಣಗಳು ದಾಖಲಾಗಿದ್ದವು. ಈ ಸಂಬಂಧ ಯೂಟ್ಯೂಬರ್‌ ಹಾಗೂ ಇನ್ನಿತರ ವ್ಯಕ್ತಿಗಳ ವಿಚಾರಣೆಯನ್ನು ಎಸ್‌ಐಟಿ ಪೊಲೀಸರು ನಡೆಸಿದ್ದರು.

ಈ ಮಧ್ಯೆ, ಧರ್ಮಸ್ಥಳ ಕ್ಷೇತ್ರದ ತೇಜೋವಧೆ ಹಿಂದೆ ವಿದೇಶಿ ಫಂಡಿಂಗ್‌ ಇರುವ ಸಾಧ್ಯತೆಯಿದ್ದು, ಬಗ್ಗೆ ತನಿಖೆ ನಡೆಸುವಂತೆ ಕೋರಿ ಕೇಂದ್ರ ಗೃಹ ಇಲಾಖೆಗೆ ಉಡುಪಿ-ಚಿಕ್ಕಮಗಳೂರು ಸಂಸದ ಕೋಟ ಶ್ರೀನಿವಾಸ ಪೂಜಾರಿ ಅವರು ಪತ್ರ ಬರೆದು ಒತ್ತಾಯಿಸಿದ್ದರು. ಈ ಪತ್ರವನ್ನು ಗೃಹ ಸಚಿವಾಲಯ ಇ.ಡಿಗೆ ಕಳುಹಿಸಿತ್ತು. ಅಲ್ಲಿಂದ ತ್ವರಿತವಾಗಿ ಮಾಹಿತಿ ಕಲೆ ಹಾಕುವಂತೆ ನಿರ್ದೇಶನ ನೀಡಲಾಗಿದ್ದು, ಅದರಂತೆ ಧರ್ಮನಿಂದನೆ ಕುರಿತಂತೆ ಫಂಡಿಂಗ್‌ ಬಗ್ಗೆ ಇ.ಡಿಯಿಂದ ಮಾಹಿತಿ ಸಂಗ್ರಹ ಆರಂಭಗೊಂಡಿದೆ ಎಂದು ತಿಳಿದು ಬಂದಿದೆ.

ಈ ಮಧ್ಯೆ, ವಿದೇಶಿ ಹಣದ ಸಹಿತ ಅನಧಿಕೃತ ಫಂಡಿಂಗ್‌ ವ್ಯವಹಾರ ಸಾಬೀತುಗೊಂಡರೆ, ಬಳಿಕ, ನೇರವಾಗಿ ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್‌ಐಎ) ಕೂಡ ಈ ಪ್ರಕರಣದ ತನಿಖೆ ನಡೆಸುವ ಸಾಧ್ಯತೆಯಿದೆ.

ಬೆಂಗಳೂರು ಅಪಾರ್ಟ್‌ಮೆಂಟ್‌ನಲ್ಲಿ ಚಿನ್ನಯ್ಯ ಜತೆ ಎಸ್‌ಐಟಿ ಮಹಜರ್‌:

ಧರ್ಮಸ್ಥಳದಲ್ಲಿ ಅನಧಿಕೃತವಾಗಿ ಮೃತದೇಹಗಳ ಹೂತ ಪ್ರಕರಣ ಸಂಬಂಧ ರಾಜಧಾನಿಯಲ್ಲಿ ಎರಡು ದಿನಗಳು ಮಹಜರ್ ಪ್ರಕ್ರಿಯೆ ನಡೆಸಿ ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿಗೆ ಭಾನುವಾರ ವಿಶೇಷ ತನಿಖಾ ತಂಡ ಮರಳಿದೆ.ಮಲ್ಲಸಂದ್ರದಲ್ಲಿರುವ ಉಜಿರೆಯ ಸಾಮಾಜಿಕ ಕಾರ್ಯಕರ್ತ ಟಿ.ಜಯಂತ್ ಮನೆಯಲ್ಲಿ ಶನಿವಾರ ಪರಿಶೀಲಿಸಿದ್ದ ಎಸ್‌ಐಟಿ ಅಧಿಕಾರಿಗಳು, ಭಾನುವಾರ ನಸುಕಿನಲ್ಲಿ ವಿದ್ಯಾರಣ್ಯಪುರ ಸಮೀಪದ ಲಾಡ್ಜ್ ಹಾಗೂ ಸರ್ವಿಸ್ ಅಪಾರ್ಟ್‌ಮೆಂಟ್‌ನಲ್ಲಿ ಮಹಜರ್‌ ನಡೆಸಿದೆ ಎಂದು ತಿಳಿದು ಬಂದಿದೆ.

ಧರ್ಮಸ್ಥಳ ಪ್ರಕರಣದಲ್ಲಿ ತಲೆಬರುಡೆ ಕತೆ ಹಿಂದಿನ ಸಂಚಿನ ರಹಸ್ಯ ಸಭೆಗಳು ನಗರದಲ್ಲಿ ನಡೆದಿದ್ದ ಸಂಗತಿ ಎಸ್‌ಐಟಿ ತನಿಖೆಯಲ್ಲಿ ಬೆಳಕಿಗೆ ಬಂದಿತ್ತು. ಈ ಮಾಹಿತಿ ಮೇರೆಗೆ ನಗರಕ್ಕೆ ಆರೋಪಿ ಚಿನ್ನಯ್ಯನನ್ನು ಕರೆತಂದು ಎಸ್‌ಐಟಿ ಮಹಜರ್ ನಡೆಸಿ ಮರಳಿದೆ. 

ಧರ್ಮಸ್ಥಳ ಅವಹೇಳನ ತಡೆಯಾಜ್ಞೆ ಮೀರಿದ ಅಹೋರಾತ್ರ ಜೈಲಿಗೆ: 

ಶ್ರೀ ಕ್ಷೇತ್ರ ಧರ್ಮಸ್ಥಳ ಹಾಗೂ ಧರ್ಮಾಧಿಕಾರಿ ಡಾ। ವೀರೇಂದ್ರ ಹೆಗ್ಗಡೆ ವಿರುದ್ಧ ಅವಹೇಳನ ಪದ ಬಳಕೆ ಮಾಡದಂತೆ ಕೋರ್ಟ್‌ ನೀಡಿದ್ದ ತಡೆಯಾಜ್ಞೆ ಉಲ್ಲಂಘಿಸಿದ್ದ ಆರೋಪಕ್ಕಾಗಿ ನಿತೇಶ್ ಕೃಷ್ಣ ಪ್ರಸಾದ್ ಪೊಲೆಪಳ್ಳಿ ಅಲಿಯಾಸ್ ಅಹೋರಾತ್ರ ಅಲಿಯಾಸ್ ನಟೇಶ್ ಪೊಲಿಪಳ್ಳಿ ಅವರಿಗೆ 15 ದಿನಗಳ ನ್ಯಾಯಾಂಗ ಬಂಧನ ವಿಧಿಸಲಾಗಿದೆ. ಬೆಂಗಳೂರು ನಗರ ಹೆಚ್ಚುವರಿ ನಗರ ಸಿವಿಲ್ ಮತ್ತು ಸೆಷನ್ಸ್ ನ್ಯಾಯಾಲಯ ತಡೆಯಾಜ್ಞೆ ಇದ್ದರೂ ಅಹೋರಾತ್ರ, ಧರ್ಮಸ್ಥಳ ಮತ್ತು ಹೆಗ್ಗಡೆ ಅವರನ್ನು ಪದೇಪದೆ ಅವಹೇಳನ ಮಾಡುತ್ತಿದ್ದರು ಎಂದು ಶೀನಪ್ಪ ಎಂಬವರು ದೂರು ದಾಖಲಿಸಿದ್ದರು. 

ವಿಚಾರಣೆ ನಡೆಸಿದ ಬೆಂಗಳೂರು ನಗರ ಹೆಚ್ಚುವರಿ ನಗರ ಸಿವಿಲ್ ಮತ್ತು ಸೆಷನ್ಸ್ ನ್ಯಾಯಾಲಯವು ಅಹೋರಾತ್ರ ನ್ಯಾಯಾಲಯದಿಂದ ಮೊದಲೇ ನೀಡಿದ್ದ ತಾತ್ಕಾಲಿಕ ತಡೆ ಆದೇಶವನ್ನು ಸೂಚಿತವಾಗಿ ಉಲ್ಲಂಘಿಸಿದ್ದಾರೆ ಎಂದು ನಾಗರಿಕ ಪ್ರಕ್ರಿಯಾ ಸಂಹಿತೆಯ ಆರ್ಡರ್‌ 39 ರೂಲ್‌ 2(ಎ) ಪ್ರಕಾರ ಪ್ರತಿವಾದಿಯನ್ನು ಅವಮಾನಕ್ಕೆ ದೋಷಿ ಎಂದು ತೀರ್ಮಾನಿಸಿ, ಅವರನ್ನು 15 ದಿನ ನಾಗರಿಕ ಕಾರಾಗೃಹದಲ್ಲಿ ಬಂಧಿಸಲು ಆದೇಶಿಸಿದೆ. 

ಸೌಜನ್ಯ ಪ್ರಕರಣಕ್ಕೆ ನಾ ಪ್ರತ್ಯಕ್ಷ ಸಾಕ್ಷಿ: ಮಂಡ್ಯ ಮಹಿಳೆ 

ಧರ್ಮಸ್ಥಳ ಗ್ರಾಮದಲ್ಲಿ ಶವಗಳನ್ನು ಹೂತಿಟ್ಟ ಪ್ರಕರಣದ ತನಿಖೆ ಮುಂದುವರಿದಿದ್ದು, ಈ ಮಧ್ಯೆ, ‘ನಾನು ಸೌಜನ್ಯ ಪ್ರಕರಣದ‌ ಪ್ರತ್ಯಕ್ಷ ಸಾಕ್ಷಿ’ ಎಂದು ಹೇಳಿಕೊಂಡು ಮಹಿಳೆಯೊಬ್ಬಳು ಎಸ್‌ಐಟಿ (ವಿಶೇಷ ತನಿಖಾ ತಂಡ)ಗೆ ದೂರು ನೀಡಿದ್ದಾರೆ.ಮಂಡ್ಯ ಮೂಲದ ಚಿಕ್ಕಕೆಂಪಮ್ಮ ಎಂಬುವರು ಈ ಕುರಿತು ರಿಜಿಸ್ಟರ್ಡ್ ಪೋಸ್ಟ್ ಹಾಗೂ ಮೌಖಿಕವಾಗಿ ಎಸ್‌ಐಟಿಗೆ ದೂರು ದಾಖಲಿಸಿದ್ದಾರೆ. ‘ಅಂದು ನಾನು ಒಂದು‌ ಹುಡುಗಿಯನ್ನು ಕಿಡ್ನ್ಯಾಪ್ ಮಾಡಿದ್ದನ್ನು ಕಣ್ಣಾರೆ ಕಂಡಿದ್ದೇನೆ. ಅಂದು ನಾನು ಧರ್ಮಸ್ಥಳಕ್ಕೆ ಹೋಗಿದ್ದೆ. ಪೂಜೆ ಸಲ್ಲಿಸಿ, ಪ್ರಕೃತಿ ಚಿಕಿತ್ಸಾಲಯಕ್ಕೆ ತೆರಳಿದ್ದಾಗ ಈ ಘಟನೆ ನಡೆದಿದೆ. ನನ್ನ ಕಣ್ಣೆದುರಲ್ಲೇ ಕಾರಿನಲ್ಲಿ ಬಂದು ಹುಡುಗಿಯನ್ನು ಕಿಡ್ನ್ಯಾಪ್ ಮಾಡಿದ್ದಾರೆ’ ಎಂದು ಆಕೆ ದೂರಿನಲ್ಲಿ ತಿಳಿಸಿದ್ದಾರೆ ಎಂದು ತಿಳಿದು ಬಂದಿದೆ. 

ಮಹಿಳಾ ಆಯೋಗಕ್ಕೂ ದೂರು:

ಇದೇ ವೇಳೆ, ಮಹಿಳೆ, ರಾಜ್ಯ ಮಹಿಳಾ ಆಯೋಗಕ್ಕೂ ಕರೆ ಮಾಡಿ‌, ಪ್ರಕರಣದ ಬಗ್ಗೆ ಮಾಹಿತಿ ನೀಡಿದ್ದಾರೆ ಎನ್ನಲಾಗಿದೆ. ಮಂಗಳೂರಲ್ಲಿರುವ ಎಸ್‌ಐಟಿ ಸಹಾಯವಾಣಿ ಮೂಲಕ ಈಕೆ ದೂರು ದಾಖಲಿಸಿದ್ದಾರೆ. ಈ ಹಿನ್ನೆಲೆಯಲ್ಲಿ ದೂರವಾಣಿ ಮೂಲಕವೂ ಪ್ರಕರಣ ಕುರಿತು ಎಸ್‌ಐಟಿ ಅಧಿಕಾರಿಗಳು ಆಕೆಯಿಂದ ವಿವರಣೆ ಪಡೆದಿಕೊಂಡಿದ್ದಾರೆ. ದೂರಿನ ಸಂಬಂಧ ಸುಮಾರು 45 ನಿಮಿಷ ದೂರವಾಣಿ ಮೂಲಕ ಎಸ್‌ಐಟಿ ತಂಡ ಆಕೆಯಿಂದ ವಿವರಣೆ ಪಡೆದಿದೆ. 

ಎಸ್‌ಐಟಿ ಕಸ್ಟಡಿ ಮುಕ್ತಾಯ: ಚಿನ್ನಯ್ಯ ಇಂದು ಕೋರ್ಟ್‌ಗೆ?

ಬುರುಡೆ ಪ್ರಕರಣದ ಕೇಸಿನಲ್ಲಿ 10 ದಿನ ಪೊಲೀಸ್‌ ಕಸ್ಟಡಿಯಲ್ಲಿ ಇರುವ ಚಿನ್ನಯ್ಯನನ್ನು ಸೋಮವಾರ ಬೆಳ್ತಂಗಡಿಯ ಕೋರ್ಟ್‌ಗೆ ಎಸ್ಐಟಿ ಅಧಿಕಾರಿಗಳು ಹಾಜರುಪಡಿಸುವ ನಿರೀಕ್ಷೆ ಇದೆ. ಆತನ 10 ದಿನಗಳ ಪೊಲೀಸ್‌ ಕಸ್ಟಡಿ ಸೋಮವಾರ ಮುಗಿಯಲಿದ್ದು, ಮತ್ತೆ ಆತನ ವಿಚಾರಣೆಗೆ ಪೊಲೀಸ್‌ ಕಸ್ಟಡಿ ಕೇಳುವ ಸಾಧ್ಯತೆ ಇದೆ. ಈ ಹಿನ್ನೆಲೆಯಲ್ಲಿ ಬೆಂಗಳೂರಿನಲ್ಲಿ ಚಿನ್ನಯ್ಯನ ಮಹಜರು ಪ್ರಕ್ರಿಯೆ ಮುಗಿಸಿ ಭಾನುವಾರ ರಾತ್ರಿಯೇ ಬೆಳ್ತಂಗಡಿಗೆ ಎಸ್‌ಐಟಿ ತಂಡ ಆತನೊಂದಿಗೆ ಮರಳಲಿದೆ. ಚಿನ್ನಯ್ಯನ ಊರು ಮಂಡ್ಯ ಮತ್ತು ತಮಿಳುನಾಡುಗಳಲ್ಲಿ ಮಹಜರು ಪ್ರಕ್ರಿಯೆ ಬಾಕಿ ಇದೆ. ಹಾಗಾಗಿ, ಮತ್ತೆ ಕಸ್ಟಡಿಗೆ ಕೇಳುವ ಅನಿವಾರ್ಯತೆಯಲ್ಲಿ ಎಸ್‌ಐಟಿ ಇದೆ.

PREV
Read more Articles on

Recommended Stories

.ಜಮಖಂಡಿಯಲ್ಲಿ ವಿನಾಕನಿಗೆ ಅದ್ಧೂರಿ ವಿದಾಯ
ರೈತರ ಹಿತ ಕಾಪಾಡುವುದು ಮುಖ್ಯ: ಹನಮಂತ ನಿರಾಣಿ