ಕನ್ನಡಪ್ರಭ ವಾರ್ತೆ ಮಳವಳ್ಳಿ
ಖಾಸಗಿ ಕಂಪನಿಗಳನ್ನು ಇಡಿ, ಸಿಬಿಐ ಮೂಲಕ ಹಣ ವಸೂಲಿ ಮಾಡಿದರೆ, ದೊಡ್ಡ ಮಟ್ಟದ ಸರ್ಕಾರದ ಕಾಮಗಾರಿಗಳನ್ನು ಗುತ್ತಿಗೆ ನೀಡಿ ಬಿಜೆಪಿ ಭ್ರಷ್ಟಾಚಾರ ನಡೆಸಿದೆ ಎಂದು ಸಿಪಿಐ(ಎಂ) ರಾಜ್ಯ ಘಟಕದ ಕಾರ್ಯದರ್ಶಿ ಯು.ಬಸವರಾಜು ಆರೋಪಿಸಿದರು.ಪಟ್ಟಣದ ಟಿಎಪಿಸಿಎಂಎಸ್ ರೈತ ಸಮುದಾಯ ಭವನದಲ್ಲಿ ಶನಿವಾರ ನಡೆದ ಸಿಪಿಐ(ಎಂ) ಪಕ್ಷದ ಸರ್ವಸದಸ್ಯರ ಸಭೆ ಮುನ್ನ ಪ್ರಧಾನಿ ನರೇಂದ್ರ ಮೋದಿ ಸರ್ಕಾರದ ಜನವಿರೋಧಿ ನೀತಿಗಳ ಕಿರುಹೊತ್ತಿಗೆ ಬಿಡುಗಡೆಗೊಳಿಸಿ ಮಾತನಾಡಿದ ಅವರು, ಚುನಾವಣೆ ಬಾಂಡ್ ಹೆಸರಲ್ಲಿ ನಡೆದಿರುವ ಭ್ರಷ್ಟಾಚಾರದ ಬಗ್ಗೆ ಸುಪ್ರೀಂಕೋರ್ಟ್ ನೇತೃತ್ವದಲ್ಲಿ ನ್ಯಾಯಾಂಗ ತನಿಖೆಯಾಗಬೇಕು ಎಂದು ಆಗ್ರಹಿಸಿದರು.
ಜಗತ್ತಿನ ಅತಿದೊಡ್ಡ ಭ್ರಷ್ಟಾಚಾರ ಪ್ರಕರಣ ಚುನಾವಣೆ ಬಾಂಡ್ ಹೆಸರಿನಲ್ಲಿ ನಡೆದಿದೆ. ಬಿಜೆಪಿಯು ಸುಮಾರು 8500 ಕೋಟಿ ರು.ಸುಲಿಗೆ ಮಾಡಿದೆ. ಕಳೆದ 10 ವರ್ಷಗಳಿಂದ ಆಡಳಿತ ನಡೆಸುತ್ತಿರುವ ನರೇಂದ್ರ ಮೋದಿ ಅವರ ಸರ್ಕಾರದ ನೀತಿಗಳಿಂದ ದೇಶದಲ್ಲಿ ಬಡವರು - ಶ್ರೀಮಂತರ ಅಂತರ ಹೆಚ್ಚಿದೆ. ಬಡವರಿಂದ ತೆರಿಗೆ ವಸೂಲಿ ಮಾಡಿ ಶ್ರೀಮಂತ ಉದ್ಯಮಿಗಳ ಸಾಲ ಮನ್ನಾ, ತೆರಿಗೆ ಮನ್ನಾದ ಹೆಸರಿನಲ್ಲಿ ಸಂಪತ್ತಿನ ವರ್ಗಾವಣೆ ಮಾಡಲಾಗಿದೆ ಎಂದು ಆರೋಪಿಸಿದರು.ದೆಹಲಿ ಮುಖ್ಯಮಂತ್ರಿ ಅರವಿಂದ್ ಕ್ರೇಜಿವಾಲ್ ರನ್ನು ರಾಜಕೀಯ ಉದ್ದೇಶದಿಂದ ಬಂಧನ ಮಾಡಿರುವುದು ಸರಿಯಲ್ಲ. ಕೂಡಲೇ ಅವರನ್ನು ಬಿಡುಗಡೆ ಮಾಡಬೇಕು. ಪ್ರಸ್ತುತ ಕೋಮುವಾದಿ ಬಿಜೆಪಿಯನ್ನು ಸೋಲಿಸಲು ಕಾಂಗ್ರೆಸ್ ಪಕ್ಷವನ್ನು ಬೆಂಬಲಿಸಲು ನಿರ್ಧರಿಸಿದ್ದೇವೆ ಎಂದು ಹೇಳಿದರು.
ಜಿಲ್ಲಾ ಘಟಕದ ಕಾರ್ಯದರ್ಶಿ ಟಿ.ಎಲ್.ಕೃಷ್ಣೇಗೌಡ ಮಾತನಾಡಿ, ರಾಜ್ಯದಲ್ಲಿ ಕೋಮುವಾದಿ ಬಿಜೆಪಿ ಮತ್ತು ಅವರ ಜೊತೆ ಕೈಜೋಡಿಸಿರುವ ಜೆಡಿಎಸ್ ಸೋಲಿಸಲು ಕರೆ ನೀಡಿದ್ದೇವೆ. ಮಂಡ್ಯದಲ್ಲಿ ಕೋಮುವಾದಿಗಳೊಂದಿಗೆ ಮೈತ್ರಿ ಮಾಡಿಕೊಂಡಿರುವ ಜೆಡಿಎಸ್ ಅಭ್ಯರ್ಥಿ ಎಚ್.ಡಿ.ಕುಮಾರಸ್ವಾಮಿ ಅವರನ್ನು ಸೋಲಿಸಲು ಕಾಂಗ್ರೆಸ್ ಅಭ್ಯರ್ಥಿ ವೆಂಕಟರಮಣೇಗೌಡ(ಸ್ಟಾರ್ ಚಂದ್ರು) ಪರ ಪ್ರಚಾರ ಮಾಡಿ ಗೆಲ್ಲಿಸಲು ರೈತರ, ಕಾರ್ಮಿಕರ, ಕೂಲಿಕಾರರ, ಮಹಿಳಾ ಸಂಘಟನೆಗಳೊಂದಿಗೆ ಸಿಪಿಐ(ಎಂ) ಸಹ ಕೆಲಸ ಮಾಡುತ್ತೇವೆ ಎಂದು ಹೇಳಿದರು.ಈ ವೇಳೆ ರಾಜ್ಯ ಸಮಿತಿ ಸದಸ್ಯರಾದ ದೇವಿ, ಎಂ.ಪುಟ್ಟಮಾಧು, ಜಿಲ್ಲಾ ಮಂಡಳಿ ಸದಸ್ಯರಾದ ಎನ್.ಎಲ್.ಭರತ್ ರಾಜ್, ತಾಲೂಕು ಘಟಕದ ಕಾರ್ಯದರ್ಶಿ ಸುಶೀಲಾ, ಜಿಲ್ಲಾ ಸಮಿತಿ ಸದಸ್ಯರಾದ ಎನ್.ಲಿಂಗರಾಜಮೂರ್ತಿ, ಬಸವರಾಜು ಇದ್ದರು.