ಹುಬ್ಬಳ್ಳಿ: ಕೇವಲ ರಾಜಕೀಯ ಲಾಭಕ್ಕಾಗಿ ಇಡಿಯಂತಹ ಸಂಸ್ಥೆಗಳನ್ನು ದುರ್ಬಳಕೆ ಮಾಡಿಕೊಂಡು ಈ ರೀತಿಯ ದಾಳಿ ನಡೆಸುವುದು ಸರಿಯಲ್ಲ ಎಂದು ಸಚಿವ ಸಂತೋಷ ಲಾಡ್ ಕಿಡಿಕಾರಿದ್ದಾರೆ.
ಚುನಾವಣೆಗೆ ಹಣ ಬಳಕೆ ಬಗ್ಗೆ ಸುದ್ದಿಗಾರರು ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಲಾಡ್, ಹಣ ಬಳಕೆ ಬಗ್ಗೆ ಎಲ್ಲಿಯೂ ಸಾಬೀತಾಗಿಲ್ಲ. ಆರೋಪ ಇದೆಯಾದರೂ ತನಿಖೆ ನಡೆಯುತ್ತಿದೆ. ಆದರೆ, ಚುನಾವಣಾ ಬಾಂಡ್‌ಗಳ ಬಗ್ಗೆ ಏಕೆ ಪ್ರಶ್ನೆ ಬರುತ್ತಿಲ್ಲ. ಅವುಗಳಿಂದ ಬಂದಿರುವ ₹೮.೫೦೦ ಕೋಟಿ ಹಣ ಏನಾಗಿದೆ? ಇದೊಂದು ಹಗಲು ಭ್ರಷ್ಟಾಚಾರವಾಗಿದ್ದು, ಅಲ್ಲಿ ಇಡಿ ದಾಳಿ ಏಕಾಗಿಲ್ಲ? ಐಪಿಎಲ್ ಬೆಟ್ಟಿಂಗ್, ವಂಚನೆ ಮಾಡುವವರ, ಗೋವು ಮಾಂಸ ರಫ್ತು ಮಾಡುವ ಕಂಪನಿಗಳಿಂದ ಚಂದಾ ಪಡೆದು ಬಿಜೆಪಿ ಪಕ್ಷ ಕಟ್ಟಿದೆ. ಈ ಬಗ್ಗೆ ಚರ್ಚೆ ಆಗಬೇಕು ಎಂದು ಒತ್ತಾಯಿಸಿದರು.
ಅಹಮದಾಬಾದ್ ವಿಮಾನ ದುರಂತದಲ್ಲಿ ಮಡಿದವವರಿಗೆ ಸಂತಾಪ ಸೂಚಿಸಿ, ಅವರ ಕುಟುಂಬಕ್ಕೆ ದುಃಖ ಭರಿಸುವ ಶಕ್ತಿ ನೀಡಲೆಂದು ಪ್ರಾರ್ಥಿಸಿದರು. ಹೊಸ ವಿಮಾನವೇ ಈ ರೀತಿ ದುರಂತಕ್ಕೀಡಾಗೀರುವುದು ದುರಾದೃಷ್ಟಕರ ಎಂದರು.ಮಾಧ್ಯಮ ಪ್ರತಿನಿಧಿಗಳೊಂದಿಗೆ ಪ್ರಯಾಣಿಸಿದ ಸಚಿವ ಲಾಡ್: ಕುಂದಗೋಳ ತಾಲೂಕಿನ ವಿವಿಧ ಹಳ್ಳಿಗಳಲ್ಲಿ ಶುಕ್ರವಾರ ಮಳೆ ಹಾನಿ ಪ್ರದೇಶಗಳನ್ನು ವೀಕ್ಷಣೆ ಮಾಡಲು ಜಿಲ್ಲಾ ಉಸ್ತುವಾರಿ ಸಚಿವ ಸಂತೋಷ ಲಾಡ್ ಮಾಧ್ಯಮ ಪ್ರತಿನಿಗಳೊಂದಿಗೆ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ವಾಹನದಲ್ಲಿ ಸಂಚಾರ ಮಾಡಿ ಸರಳತೆ ಮೆರೆದರು. ಇಲ್ಲಿನ ಪ್ರವಾಸಿ ಮಂದಿರದಿಂದ ಕುಂದಗೋಳವರೆಗೆ ವಾರ್ತಾ ಇಲಾಖೆಯ ವಾಹನದಲ್ಲಿ ಸಂಚರಿಸಿದ ಅವರು, ವಾಹನದಲ್ಲಿ ಪತ್ರಕರ್ತರೊಂದಿಗೆ ಹಾನಿ ಪ್ರದೇಶದ ಬಗ್ಗೆ ವಿವರಿಸಿದರು.