)
ಕನ್ನಡಪ್ರಭ ವಾರ್ತೆ ಬೆಂಗಳೂರು
ಈ ಸೈಬರ್ ವಂಚನೆಗೆ ಬೆಂಗಳೂರು ಸೇರಿದಂತೆ ದೇಶಾದ್ಯಂತ ಸಾವಿರಾರು ಬ್ಯಾಂಕ್ ಖಾತೆಗಳು ಬಳಕೆಯಾಗಿದ್ದು, ಕಳೆದ ಎರಡು ವರ್ಷಗಳಲ್ಲಿ ಸುಮಾರು ಒಂದು ಸಾವಿರ ಕೋಟಿ ರು.ಗೂ ಅಧಿಕ ಹಣ ವಂಚಿಸಿರುವುದು ಬೆಳಕಿಗೆ ಬಂದಿದೆ.
ಈ ಹಿನ್ನೆಲೆಯಲ್ಲಿ ಇ.ಡಿ. ಅಕ್ರಮ ಹಣ ವರ್ಗಾವಣೆ ತಡೆ ಕಾಯ್ದೆ(ಇ.ಡಿ.) ಅಡಿ ಪ್ರಕರಣ ದಾಖಸಿಕೊಂಡು ತನಿಖೆಗೆ ಮುಂದಾಗಿದೆ. ಹುಳಿಮಾವು ಠಾಣೆ ಪೊಲೀಸರಿಂದ ಈ ಪ್ರಕರಣದ ಸಂಪೂರ್ಣ ಮಾಹಿತಿ ಪಡೆದಿದೆ ಎಂದು ಮೂಲಗಳು ತಿಳಿಸಿವೆ.ಇತ್ತೀಚೆಗೆ ಅಕ್ಷಯನಗರದ ನಿವಾಸಿಯೊಬ್ಬರು ಟೆಲಿಗ್ರಾಮ್ ಆ್ಯಪ್‌ಗೆ ಬಂದಿದ್ದ ಷೇರುಮಾರುಕಟ್ಟೆ ಮಾಹಿತಿ ನಂಬಿ ನಿಯೋ ಸಿಸ್ಟಮ್ ಆ್ಯಪ್ ಮುಖಾಂತರ ₹3.03 ಕೋಟಿ ಹೂಡಿಕೆ ಮಾಡಿ ವಂಚನೆಗೆ ಒಳಗಾಗಿದ್ದರು. ಈ ಸಂಬಂಧ ಹುಳಿಮಾವು ಠಾಣೆಗೆ ದೂರು ನೀಡಿದ್ದರು.
ಈ ಸಂಬಂಧ ಕಾರ್ಯಾಚರಣೆ ಕೈಗೊಂಡು ನಗರದ ತಾಯಿ-ಮಗ ಸೇರಿ ರಾಜಸ್ಥಾನ, ಜಾರ್ಖಂಡ್, ಉತ್ತರಪ್ರದೇಶ, ದೆಹಲಿ ಹಾಗೂ ಬಿಹಾರ ಮೂಲದ 12 ಮಂದಿ ಆರೋಪಿಗಳನ್ನು ಬಂಧಿಸಿದ್ದರು. ವಂಚನೆಗೆ ಬಳಸಿಕೊಂಡಿದ್ದ ಸುಮಾರು 4500 ಬ್ಯಾಂಕ್ ಖಾತೆಗಳಲ್ಲಿದ್ದ ₹240 ಕೋಟಿ ಫ್ರೀಜ್ ಮಾಡಿದ್ದರು. ಅರ್ಧ ಕೆ.ಜಿ.ಚಿನ್ನ, ದುಬಾರಿ ವಾಚ್‌ಗಳು, ಸ್ಯಾಟಲೆಟ್ ಫೋನ್‌ಗಳು, ₹4.89 ಲಕ್ಷ ನಗದು ಸೇರಿದಂತೆ ಇತರೆ ವಸ್ತುಗಳನ್ನು ಜಪ್ತಿ ಮಾಡಿದ್ದರು.ಹೂಡಿಕೆ ನೆಪದಲ್ಲಿ ಮೋಸ:
ಈ ಸೈಬರ್ ವಂಚಕರ ಗ್ಯಾಂಗ್ ಷೇರು ಮಾರುಕಟ್ಟೆಯಲ್ಲಿ ಹೂಡಿಕೆ ನೆಪದಲ್ಲಿ ಅಮಾಯಕರನ್ನು ವಾಟ್ಸಾಪ್, ಇನ್ಸ್‌ಸ್ಟಾಗ್ರಾಮ್‌ನಲ್ಲಿ ಸಂಪರ್ಕಿಸಿ ಅಧಿಕ ಲಾಭದ ಆಮಿಷವೊಡ್ಡುತ್ತಿತ್ತು. ಬಳಿಕ ಸ್ವಾಮೀಜಿ ಡಾಟ್ ಕಾಮ್ ಮತ್ತು ನಿಯೋ ಸಿಸ್ಟಂ ಎಂಬ ಆ್ಯಪ್ ಲಿಂಕ್ ಕಳುಹಿಸಿ ಇನ್ಸ್‌ಸ್ಟಾಲ್ ಮಾಡಿಸುತ್ತಿತ್ತು. ಬಳಿಕ ಹೂಡಿಕೆ ನೆಪದಲ್ಲಿ ಹಣ ವರ್ಗಾಯಿಸಿಕೊಂಡು ವಂಚಿಸುತ್ತಿತ್ತು.ಈ ಸೈಬರ್ ವಂಚಕರ ಗ್ಯಾಂಗ್ ದೆಹಲಿಯಲ್ಲಿ ಕುಳಿತು ವಂಚನೆ ಮಾಡುತ್ತಿತ್ತು. ಈ ಪ್ರಕರಣದ ಪ್ರಮುಖ ಕಿಂಗ್ ಪಿನ್ ಪ್ರೇಮ್ ತನೇಜಾ ಎಂಬಾತ ದುಬೈನಲ್ಲಿ ತಲೆಮರೆಸಿಕೊಂಡಿದ್ದಾನೆ. ಈ ವಂಚಕರ ಗ್ಯಾಂಗ್ ಕಳೆದ ಎರಡು ವರ್ಷಗಳಲ್ಲಿ ಹೂಡಿಕೆ ನೆಪದಲ್ಲಿ ಅಮಾಯಕರ ಸುಮಾರು ಒಂದು ಸಾವಿರ ಕೋಟಿ ರು.ಗೂ ಅಧಿಕ ಹಣ ವಂಚಿಸಿರುವುದು ಮೇಲ್ನೋಟಕ್ಕೆ ಕಂಡು ಬಂದಿದೆ. ಈ ಹಿನ್ನೆಲೆಯಲ್ಲಿ ಇ.ಡಿ. ತನಿಖೆಗೆ ಇಳಿದಿದೆ.