ಬಳ್ಳಾರಿ: ನಗರದ ಕಾಂಗ್ರೆಸ್ ಶಾಸಕ ನಾರಾ ಭರತ್ ರೆಡ್ಡಿ ನಿವಾಸ ಹಾಗೂ ಕಚೇರಿ ಸೇರಿದಂತೆ 6 ಕಡೆಗಳಲ್ಲಿ ಜಾರಿ ನಿರ್ದೇಶನಾಲಯ (ಇಡಿ) ಅಧಿಕಾರಿಗಳು ಶನಿವಾರ ದಾಳಿ ನಡೆಸಿ, ಪರಿಶೀಲನೆ ನಡೆಸಿದರು.
ಇದೇ ವೇಳೆ ಶಾಸಕ ಭರತ್ ರೆಡ್ಡಿ ತಂದೆ ಮಾಜಿ ಶಾಸಕ ನಾರಾ ಸೂರ್ಯನಾರಾಯಣ ರೆಡ್ಡಿ ಹಾಗೂ ಚಿಕ್ಕಪ್ಪ ನಾರಾ ಪ್ರತಾಪ ರೆಡ್ಡಿ ಸೇರಿದಂತೆ ಶಾಸಕರ ಆಪ್ತರು, ಸಹೋದರ ಸಂಬಂಧಿಗಳ ಮನೆಗಳ ಮೇಲೂ ಇಡಿ ಅಧಿಕಾರಿಗಳು ದಾಳಿ ನಡೆಸಿ, ಶೋಧ ಕಾರ್ಯ ಕೈಗೊಂಡಿದ್ದಾರೆ.ಬಳ್ಳಾರಿ, ಕೊಪ್ಪಳ, ಬೆಂಗಳೂರು, ಚೆನ್ನೈ, ಆಂಧ್ರಪ್ರದೇಶದ ವೊಂಗಲ್ ಸೇರಿದಂತೆ ಒಟ್ಟು 13 ಕಡೆ ಇಡಿ ಅಧಿಕಾರಿಗಳು ಶನಿವಾರ ಬೆಳ್ಳಂಬೆಳಗ್ಗೆ ಏಕಕಾಲಕ್ಕೆ ದಾಳಿ ನಡೆಸಿದ್ದಾರೆ ಎಂದು ತಿಳಿದು ಬಂದಿದೆ.
ಬೆಳಗ್ಗೆ 6 ಗಂಟೆಗೆ ಕೇಂದ್ರೀಯ ಭದ್ರತಾ ಸಿಬ್ಬಂದಿಯೊಂದಿಗೆ (ಸಿಆರ್‌ಪಿಎಫ್) 7 ಖಾಸಗಿ ಟ್ರಾವೆಲ್ಸ್‌ನ ವಾಹನಗಳೊಂದಿಗೆ ಇಲ್ಲಿನ ನೆಹರು ಕಾಲನಿಯಲ್ಲಿರುವ ಶಾಸಕ ನಾರಾ ಭರತ್ ರೆಡ್ಡಿ ಅವರ ನಿವಾಸಕ್ಕೆ ಆಗಮಿಸಿದ 20ಕ್ಕೂ ಹೆಚ್ಚು ಜನರಿದ್ದ ಇಡಿ ಅಧಿಕಾರಿಗಳು, ಏಕಕಾಲದಲ್ಲಿ ಗಾಂಧಿನಗರದಲ್ಲಿರುವ (ಮೋಕಾ ರಸ್ತೆ) ಶಾಸಕರ ಕಚೇರಿ, ಶಾಸಕರ ತಂದೆ ನಾರಾ ಸೂರ್ಯನಾರಾಯಣ ರೆಡ್ಡಿ ಅವರ ಕಚೇರಿ ಹಾಗೂ ಚಿಕ್ಕಪ್ಪ ಪ್ರತಾಪ ರೆಡ್ಡಿ ಅವರ ಕಚೇರಿ ಹಾಗೂ ನಿವಾಸ, ಶಾಸಕ ಆಪ್ತ ರತ್ನಬಾಬು, ಸತೀಶ್ ರೆಡ್ಡಿ ಅವರ ನಿವಾಸಗಳ ಮೇಲೆ ಮೇಲೆ ದಾಳಿ ನಡೆಸಿ, ದಾಖಲೆಗಳನ್ನು ಪರಿಶೀಲಿಸಿದ್ದಾರೆ. ಕಂಪ್ಯೂಟರ್‌ಗಳನ್ನು ಜಾಲಾಡಿದ್ದು, ಮನೆಯಲ್ಲಿದ್ದ ವಾಹನಗಳಲ್ಲಿ ಸಹ ಶೋಧ ನಡೆಸಿದ್ದಾರೆ. ದಾಳಿಯ ಮಾಹಿತಿ ಸೋರಿಕೆಯಾಗಬಾರದು ಎಂಬ ಕಾರಣಕ್ಕೆ ಸ್ಥಳೀಯ ಪೊಲೀಸರಿಗೂ ಮಾಹಿತಿ ನೀಡದೆ ಇಡಿ ಅಧಿಕಾರಿಗಳು ದಾಳಿ ಕಾರ್ಯದಲ್ಲಿ ತೊಡಗಿದ್ದರು. ದಾಳಿ ವೇಳೆ ಶಾಸಕ ಭರತ್ ರೆಡ್ಡಿ ಹಾಗೂ ತಂದೆ ಸೂರ್ಯನಾರಾಯಣ ರೆಡ್ಡಿ ಮನೆಯಲ್ಲಿದ್ದರು. ಚಿಕ್ಕಪ್ಪ ಪ್ರತಾಪ ರೆಡ್ಡಿ ಅವರು ಕಲಬುರಗಿಯಲ್ಲಿದ್ದರು ಎಂದು ಗೊತ್ತಾಗಿದೆ.ಶಾಸಕ ಭರತ್ ರೆಡ್ಡಿ ಕುಟುಂಬ ಅನೇಕ ವರ್ಷಗಳಿಂದಲೂ ಗ್ರಾನೈಟ್ ವ್ಯವಹಾರದಲ್ಲಿ ತೊಡಗಿಸಿಕೊಂಡಿದೆ. ಬಳ್ಳಾರಿ, ಕೊಪ್ಪಳ, ಚೆನ್ನೈ, ಬೆಂಗಳೂರು, ಆಂಧ್ರಪ್ರದೇಶದ ವೊಂಗಲ್ ಸೇರಿದಂತೆ ಅನೇಕ ಕಡೆಗಳಲ್ಲಿ ಉದ್ಯಮದ ವ್ಯವಹಾರವಿದೆ. ಭಾರೀ ಪ್ರಮಾಣದ ಅಕ್ರಮ ಹಣ ವರ್ಗಾವಣೆ ಸುಳುವಿನ ಹಿನ್ನೆಲೆಯಲ್ಲಿ ದಾಳಿ ನಡೆದಿರಬಹುದು ಎಂದು ಹೇಳಲಾಗುತ್ತಿದೆ. ಒಂದು ವರ್ಷದ ಹಿಂದೆ ಶಾಸಕರ ತಂದೆ ಸೂರ್ಯನಾರಾಯಣ ರೆಡ್ಡಿ ಅವರ ಗಾಂಧಿನಗರದಲ್ಲಿನ ಕಚೇರಿಯ ಮೇಲೆ ಆದಾಯ ತೆರಿಗೆ ಅಧಿಕಾರಿಗಳು ದಾಳಿ ಮಾಡಿದ್ದರು. ಚುನಾವಣೆ ಮುನ್ನ ಹುಟ್ಟುಹಬ್ಬದ ಹಿನ್ನೆಲೆಯಲ್ಲಿ ಶಾಸಕ ಭರತ್ ರೆಡ್ಡಿ ಅವರು ನಗರದ ಎಲ್ಲ ವಾರ್ಡ್‌ಗಳಿಗೆ ತೆರಳಿ ಕುಕ್ಕರ್ ಹಂಚಿದ್ದರು. ರೆಡ್ಡಿ ಕುಕ್ಕರ್ ವಿತರಣೆ ಕಾರ್ಯ ರಾಜಕೀಯ ವಲಯದಲ್ಲಿ ಹೆಚ್ಚು ಚರ್ಚೆಯಾಗಿತ್ತು. ಇಡಿ ದಾಳಿ-ರಾಜಕೀಯ ತಳಕು:
ನಗರ ಶಾಸಕ ಸೇರಿದಂತೆ ಕುಟುಂಬ ಸದಸ್ಯರ ಮನೆಗಳ ಮೇಲೆ ಜಾರಿ ನಿರ್ದೇಶನಾಲಯದ ಅಧಿಕಾರಿಗಳು ನಡೆಸಿದ ದಾಳಿ ಪ್ರಕರಣ ನಾನಾ ರಾಜಕೀಯ ವಿಶ್ಲೇಷಣೆಗಳಿಗೆ ಆಸ್ಪದ ಮಾಡಿಕೊಟ್ಟಿದೆ.ಲೋಕಸಭಾ ಚುನಾವಣೆ ಸನಿಹಗೊಳ್ಳುತ್ತಿರುವ ಹಿನ್ನೆಲೆಯಲ್ಲಿ ಸ್ಥಳೀಯವಾಗಿ ನಿಯಂತ್ರಿಸಲು ದಾಳಿ ನಡೆದಿರಬಹುದು. ಈಚೆಗಷ್ಟೇ ವಿಧಾನಸೌಧ ಅಧಿವೇಶನದಲ್ಲಿ ಜನಾರ್ದನ ರೆಡ್ಡಿ ವಿರುದ್ಧ ಶಾಸಕ ಭರತ್ ರೆಡ್ಡಿ ತೀವ್ರ ವಾಗ್ದಾಳಿ ನಡೆಸಿದ್ದರು. ಜನಾರ್ದನ ರೆಡ್ಡಿ ಬಿಜೆಪಿಯತ್ತ ಹೆಜ್ಜೆ ಹಾಕುತ್ತಿದ್ದು, ಈ ಹಿಂದಿನ ಬೆಳವಣಿಗೆ ದಾಳಿಗೆ ನಂಟು ಹೊಂದಿರಬಹುದು ಎಂದು ಸಾರ್ವಜನಿಕರು ವಿಶ್ಲೇಷಣೆ ಮಾಡುತ್ತಿದ್ದಾರೆ.
ಶಾಸಕ ಹಾಗೂ ಕುಟುಂಬ ಸದಸ್ಯರ ಮನೆ-ಕಚೇರಿ ಮೇಲಿನ ಇಡಿ ದಾಳಿಯನ್ನು ಕಾಂಗ್ರೆಸ್ ಪಾಲಿಕೆ ಸದಸ್ಯರು ಹಾಗೂ ಮುಖಂಡರು ಖಂಡಿಸಿದ್ದು, ಇದು ರಾಜಕೀಯ ಪ್ರೇರಿತ ಎಂದು ಆರೋಪಿಸಿದ್ದಾರೆ. ಶಾಸಕರ ಮನೆ ಮೇಲೆ ದಾಳಿ ವಿಷಯ ಗೊತ್ತಾಗುತ್ತಿದ್ದಂತೆಯೇ ನಗರದ ಮೋಕಾ ರಸ್ತೆಯಲ್ಲಿನ ಕಚೇರಿ ಬಳಿ ನೂರಾರು ಜನರು ಕುತೂಹಲದಿಂದ ಜಮಾಯಿಸಿದ್ದರು. ಹೀಗಾಗಿ ಭದ್ರತೆಗೆ ಹೆಚ್ಚಿನ ಪೊಲೀಸರನ್ನು ಕರೆಸಲಾಯಿತು.ಸಂಜೆವರೆಗೂ ಮುಂದುವರಿದ ದಾಳಿ ಪ್ರಕ್ರಿಯೆ:ನಗರ ಶಾಸಕ ನಾರಾ ಭರತ್ ರೆಡ್ಡಿ, ತಂದೆ ಹಾಗೂ ಚಿಕ್ಕಪ್ಪನ ಮನೆ-ಕಚೇರಿಗಳ ಮೇಲೆ ದಾಳಿ ನಡೆಸಿದ್ದ ಜಾರಿ ನಿರ್ದೇಶನಾಲಯ ಅಧಿಕಾರಿಗಳು ಸಂಜೆವರೆಗೂ ದಾಳಿ ಪ್ರಕ್ರಿಯೆಯಲ್ಲಿ ತೊಡಗಿದ್ದರು.
ಶಾಸಕರ ಮನೆ-ಕಚೇರಿ ಸೇರಿದಂತೆ ಆಪ್ತರ ನಿವಾಸಗಳಲ್ಲಿ ನಗದು ಸೇರಿದಂತೆ ಅನೇಕ ದಾಖಲೆಗಳನ್ನು ಅಧಿಕಾರಿಗಳು ಜಪ್ತಿ ಮಾಡಿದ್ದಾರೆ ಎಂದು ಹೇಳಲಾಗುತ್ತಿದೆ. ಆದರೆ, ಈ ಬಗ್ಗೆ ಇಡಿ ಅಧಿಕಾರಿಗಳು ಅಧಿಕೃತ ಮಾಹಿತಿಯನ್ನು ಮಾಧ್ಯಮಗಳಿಗೆ ತಿಳಿಸಿಲ್ಲ. ದಾಳಿ ನಡೆದ ಸ್ಥಳಗಳಲ್ಲಿ ಸ್ಥಳೀಯ ಪೊಲೀಸರು ಹೆಚ್ಚಿನ ಬಂದೋಬಸ್ತ್ ನೀಡಿದ್ದಾರೆ.