ಇಡಿ ದಾಳಿ ರಾಜಕೀಯ ಪ್ರೇರಿತ ಎನ್ನಲು ಸಾಧ್ಯವಿಲ್ಲ

KannadaprabhaNewsNetwork |  
Published : Jun 27, 2026, 01:30 AM IST
ಸಚಿವ ಸತೀಶ ಜಾರಕಿಹೊಳಿ ಬೆಳಗಾವಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದರು | Kannada Prabha

ಸಾರಾಂಶ

ಬೆಳಗಾವಿ ವಿಭಾಗದ ಅಬಕಾರಿ ಹೆಚ್ಚುವರಿ ಆಯುಕ್ತ ಡಾ.ವೈ.ಮಂಜುನಾಥ್ ನಿವಾಸದ ಮೇಲೆ ಜಾರಿ ನಿರ್ದೇಶನಾಲಯ (ಇಡಿ) ನಡೆಸಿರುವ ದಾಳಿಯನ್ನು ಸದ್ಯಕ್ಕೆ ರಾಜಕೀಯ ಪ್ರೇರಿತ ಎಂದು ಹೇಳಲು ಸಾಧ್ಯವಿಲ್ಲ. ಈ ದಾಳಿಯ ಹಿಂದಿನ ನಿಜವಾದ ಉದ್ದೇಶ ಹಾಗೂ ಪರಿಣಾಮ ತಿಳಿಯಲು ಕನಿಷ್ಠ 6 ತಿಂಗಳು ಕಾಯಬೇಕಾಗುತ್ತದೆ ಎಂದು ಲೋಕೋಪಯೋಗಿ ಸಚಿವ ಸತೀಶ ಜಾರಕಿಹೊಳಿ ಹೇಳಿದರು.

ಕನ್ನಡಪ್ರಭ ವಾರ್ತೆ ಬೆಳಗಾವಿ

ಬೆಳಗಾವಿ ವಿಭಾಗದ ಅಬಕಾರಿ ಹೆಚ್ಚುವರಿ ಆಯುಕ್ತ ಡಾ.ವೈ.ಮಂಜುನಾಥ್ ನಿವಾಸದ ಮೇಲೆ ಜಾರಿ ನಿರ್ದೇಶನಾಲಯ (ಇಡಿ) ನಡೆಸಿರುವ ದಾಳಿಯನ್ನು ಸದ್ಯಕ್ಕೆ ರಾಜಕೀಯ ಪ್ರೇರಿತ ಎಂದು ಹೇಳಲು ಸಾಧ್ಯವಿಲ್ಲ. ಈ ದಾಳಿಯ ಹಿಂದಿನ ನಿಜವಾದ ಉದ್ದೇಶ ಹಾಗೂ ಪರಿಣಾಮ ತಿಳಿಯಲು ಕನಿಷ್ಠ 6 ತಿಂಗಳು ಕಾಯಬೇಕಾಗುತ್ತದೆ ಎಂದು ಲೋಕೋಪಯೋಗಿ ಸಚಿವ ಸತೀಶ ಜಾರಕಿಹೊಳಿ ಹೇಳಿದರು.

ನಗರದಲ್ಲಿ ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ವೈ.ಮಂಜುನಾಥ್ ನಮ್ಮ ಸಂಬಂಧಿಯೇ ಆಗಿದ್ದಾರೆ. ಅಬಕಾರಿ ಇಲಾಖೆಯ ಇಷ್ಟು ದೊಡ್ಡ ಅಧಿಕಾರಿಯೊಬ್ಬರ ಮೇಲೆ ಭ್ರಷ್ಟಾಚಾರ ಆರೋಪದಡಿ ಇಡಿ ದಾಳಿ ನಡೆಸಿರುವುದು ನಮಗೂ ಅಚ್ಚರಿ ಮತ್ತು ಆತಂಕ ಉಂಟುಮಾಡಿದೆ. ಮಂಜುನಾಥ್ ವಿರುದ್ಧ ಈ ಹಿಂದೆ ದಾಖಲಾಗಿದ್ದ ಪ್ರಕರಣವನ್ನು ಹೈಕೋರ್ಟ್ ಈಗಾಗಲೇ ರದ್ದುಪಡಿಸಿದೆ. ಲೋಕಾಯುಕ್ತದಲ್ಲಿ ಪ್ರಕರಣವಿದೆಯೇ ಎಂಬ ಬಗ್ಗೆ ನನಗೆ ಮಾಹಿತಿ ಇಲ್ಲ. ಇಡಿ ತನಿಖೆ ಯಾವ ದಿಕ್ಕಿನಲ್ಲಿ ಸಾಗುತ್ತದೆ ಎಂಬುವುದನ್ನು ಕಾದು ನೋಡಬೇಕಿದೆ ಎಂದರು.ಮಂಜುನಾಥ್ ಕುಟುಂಬ ಕಳೆದ 30 ವರ್ಷಗಳಿಂದ ರೆಸಾರ್ಟ್ ಹಾಗೂ ಮದ್ಯದ ಅಂಗಡಿ ವ್ಯವಹಾರದಲ್ಲಿ ತೊಡಗಿದೆ. ಮಾವಲಿ ಚೆಕ್‌ಪೋಸ್ಟ್ ಬಳಿಯಿರುವ ರೆಸಾರ್ಟ್ ಮಂಜುನಾಥ್ ಅವರದ್ದಲ್ಲ, ಅವರ ಸಹೋದರರ ಹೆಸರಿನಲ್ಲಿದೆ ಎಂದು ಸ್ಪಷ್ಟಪಡಿಸಿದರು. ಇಡಿ ದಾಳಿಯ ಹಿಂದೆ ರಾಜಕೀಯ ಉದ್ದೇಶವಿದೆಯೇ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ದಾಳಿ ನಡೆದ 3 ದಿನಗಳಲ್ಲೇ ನಿರ್ಧಾರಕ್ಕೆ ಬರಲು ಸಾಧ್ಯವಿಲ್ಲ. ಇಡಿ ಅಧಿಕಾರಿಗಳು ಯಾವ ಪ್ರಶ್ನೆಗಳನ್ನು ಕೇಳುತ್ತಾರೆ, ತನಿಖೆಯ ಸ್ವರೂಪ ಏನಾಗುತ್ತದೆ ಎಂಬುವುದರ ಮೇಲೆ ಎಲ್ಲವೂ ಅವಲಂಬಿತವಾಗಿದೆ. ಸಾಮಾನ್ಯವಾಗಿ 2028ರ ವಿಧಾನಸಭೆ ಚುನಾವಣೆ ಸಮೀಪಿಸುತ್ತಿದ್ದಂತೆ ಇಂತಹ ದಾಳಿಗಳು ಆರಂಭವಾಗುವುದು ಸಹಜ ಎಂದು ತಿಳಿಸಿದರು.ಕಾಂಗ್ರೆಸ್ ನಾಯಕರ ಮೇಲೆಯೇ ಇಡಿ ದಾಳಿ ನಡೆಯುತ್ತಿದೆಂಬ ಆರೋಪಕ್ಕೆ ಪ್ರತಿಕ್ರಿಯಿಸಿದ ಸಚಿವರು, ಭ್ರಷ್ಟಾಚಾರದ ಆರೋಪದ ಮೇಲೆ ದಾಳಿ ನಡೆಸಲಾಗಿದೆ. ಅದನ್ನು ಅವರು ಹೇಗೆ ಸಮರ್ಥಿಸಿಕೊಳ್ಳುತ್ತಾರೆ ಎಂಬುದು ಗೊತ್ತಿಲ್ಲ. ಭ್ರಷ್ಟಾಚಾರ ಒಂದೇ ಇಲಾಖೆಗೆ ಸೀಮಿತವಾಗಿಲ್ಲ. ಎಲ್ಲಿ ಸಿಗುತ್ತದೆಯೋ ಅಲ್ಲಿ ಅದು ಹೊರಬರುತ್ತದೆ ಎಂದರು.ತಮ್ಮ ರಾಜಕೀಯ ಪ್ರಭಾವದಿಂದ ಮಂಜುನಾಥ ಅಪಾರ ಆಸ್ತಿ ಸಂಪಾದಿಸಿದ್ದಾರೆಂಬ ಚರ್ಚೆಯನ್ನು ತಳ್ಳಿ ಹಾಕಿದ ಸಚಿವರು, ಅವರು ಎಲ್ಲಿದ್ದರೂ ಅಧಿಕಾರಿಯಷ್ಟೇ. ಅದರಲ್ಲಿ ನಮ್ಮ ಯಾವುದೇ ಪ್ರಭಾವ ಇಲ್ಲ. ಅದು ಸೀಮಿತ ಅಧಿಕಾರದ ಹುದ್ದೆ ಎಂದರು.ಜಿಲ್ಲಾ ಉಸ್ತುವಾರಿ ಸಚಿವರ ನೇಮಕ ವಿಳಂಬದ ಕುರಿತು ಪ್ರತಿಕ್ರಿಯಿಸಿದ ಅವರು, ರಾಜ್ಯದಲ್ಲಿ ಇನ್ನೂ ಅಧಿಕೃತವಾಗಿ ಜಿಲ್ಲಾ ಉಸ್ತುವಾರಿ ಸಚಿವರನ್ನು ನೇಮಕ ಮಾಡಿಲ್ಲ. ಸಚಿವ ಸಂಪುಟ ವಿಸ್ತರಣೆ ವಿಳಂಬವಾಗಿರುವ ಕಾರಣಕ್ಕೆ ತಾತ್ಕಾಲಿಕವಾಗಿ ಬರಗಾಲ ಹಾಗೂ ಕುಡಿಯುವ ನೀರಿನ ಸಮಸ್ಯೆಗಳನ್ನು ಅವಲೋಕಿಸಲು ಕೆಲವು ಜಿಲ್ಲೆಗಳ ಜವಾಬ್ದಾರಿಯನ್ನು ಮಾತ್ರ ನೀಡಲಾಗಿದೆ ಎಂದರು.ಕೆಪಿಸಿಸಿ ಅಧ್ಯಕ್ಷ ಹುದ್ದೆ ವಿಚಾರವಾಗಿ ಪ್ರತಿಕ್ರಿಯಿಸಿದ ಅವರು, ಒಂದು ಹುದ್ದೆಗೆ ಒಬ್ಬ ವ್ಯಕ್ತಿ ಎಂಬ ನಿಲುವನ್ನು ನಾನು ಮೊದಲಿನಿಂದಲೂ ಹೇಳುತ್ತ ಬಂದಿದ್ದೇನೆ. ನನಗೆ ಕೆಪಿಸಿಸಿ ಅಧ್ಯಕ್ಷ ಸ್ಥಾನ ಮೊದಲೇ ಇತ್ತು. ಆಗ ಎರಡು ಹುದ್ದೆಗಳಲ್ಲಿ ಒಂದನ್ನು ಆಯ್ಕೆ ಮಾಡಿಕೊಳ್ಳುವಂತೆ ತಿಳಿಸಲಾಗಿತ್ತು. ಎರಡನ್ನೂ ನೀಡುವಂತೆ ನಾನು ಕೇಳಿದ್ದೆ. ಕೊನೆಗೆ ಸಚಿವ ಸ್ಥಾನ ನೀಡಲಾಗಿದೆ ಎಂದು ತಿಳಿಸಿದರು.ಬಿಡದಿ ಟೌನ್‌ಶಿಪ್ ಯೋಜನೆಗೆ ರೈತರ ವಿರೋಧ ವ್ಯಕ್ತವಾಗಿರುವ ಕುರಿತು ಪ್ರತಿಕ್ರಿಯಿಸಿದ ಅವರು, ಈ ವಿಷಯದಲ್ಲಿ ಮುಖ್ಯಮಂತ್ರಿ, ಪಕ್ಷದ ಅಧ್ಯಕ್ಷರು ಹಾಗೂ ವರಿಷ್ಠರು ಚರ್ಚಿಸಿ ಸೂಕ್ತ ನಿರ್ಧಾರ ಕೈಗೊಳ್ಳಲಿದ್ದಾರೆ ಎಂದು ತಿಳಿಸಿದರು.

ಆರ್‌ಎಸ್‌ಎಸ್ ಬಗ್ಗೆ ಪ್ರಿಯಾಂಕ್ ಖರ್ಗೆಗೆ ಹೆಚ್ಚಿನ ಮಾಹಿತಿ ಇದೆ. ಆ ವಿಷಯವನ್ನು ಅವರೇ ನಿರ್ವಹಿಸುತ್ತಿದ್ದಾರೆ. ಅನಗತ್ಯವಾಗಿ ಹಲವರು ಮಾತನಾಡಿ ಗೊಂದಲ ಸೃಷ್ಟಿಸುವ ಅಗತ್ಯವಿಲ್ಲ.

-ಸತೀಶ ಜಾರಕಿಹೊಳಿ, ಲೋಕೋಪಯೋಗಿ ಸಚಿವರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಜಾತಿ ಸಂಕೋಲೆಯಿಂದ ಸಮಾಜ ಬಿಡುಗಡೆಯಾಗಲಿ
ಭೋವಿ ಸಮಾಜದ ಸಮುದಾಯ ಭವನ ನಿರ್ಮಾಣಕ್ಕೆ ಸಹಕಾರ