ಮಾಲೂರು: ತಾಲೂಕಿನ ಜೋಡಿಪುರದ ಮೃತ್ಯುಂಜಯ ಅವರಿಗೆ ಸೇರಿದ ಮನೆ ಸೇರಿದಂತೆ ಅವರ ಆಸ್ತಿಗಳಿರುವ ಹೊಸಕೋಟೆ ಹಾಗೂ ಬೆಂಗಳೂರಿನಲ್ಲಿ ಇಡಿ (ಜಾರಿ ನಿರ್ದೇಶನಾಲಯ) ದಾಳಿ ನಡೆಸಲಾಗಿದೆ.
ಗುರುವಾರ ಸುಮಾರು ಏಳು ಗಂಟೆಗೆ ಇನ್ನೂವಾ ಕಾರಿನಲ್ಲಿ ಜೋಡಿಪುರಕ್ಕೆ ಆಗಮಿಸಿದ ಇಡಿ ಅಧಿಕಾರಿಗಳು ಸುಮಾರು ಐದು ಗಂಟೆಗೂ ಹೆಚ್ಚು ಕಾಲ ದಾಖಲೆ ಪರಿಶೀಲನೆ ನಡೆಸಿದ್ದಾರೆ. ಹೊಸಕೋಟೆ ತಾಲೂಕಿನ ಗಡಿ ಭಾಗದಲ್ಲಿರುವ ಜೋಡಿಪುರದಿಂದಲ್ಲೇ ಈ ಹಿಂದೆ ಅಕ್ರಮವಾಗಿ ಗಾಂಜಾ ಮಾರಾಟ ಮಾಡುತ್ತಿದ್ದ. ಬೆಂಗಳೂರು ಹಾಗೂ ಹತ್ತಿರದ ವೈದ್ಯಕೀಯ ಕಾಲೇಜಿನ ವಿದ್ಯಾರ್ಥಿಗಳು ಪ್ರಮುಖ ಗ್ರಾಹಕರಾಗಿದ್ದರು.
ದಾಳಿ ವೇಳೆ ಏನೇನು ದಾಖಲೆಗಳು ಅಥವಾ ವಸ್ತುಗಳು ಪತ್ತೆಯಾಗಿವೆ ಎಂಬುದರ ಬಗ್ಗೆ ಇಡಿ ಅಧಿಕಾರಿಗಳು ಅಧಿಕೃತವಾಗಿ ಮಾಹಿತಿ ನೀಡದಿದ್ದರೂ ದಾಳಿಯ ವೇಳೆಯ ಕಾಲವನ್ನು ಗಮನಿಸಿದರೆ ಮುಖ್ಯ ದಾಖಲೆಗಳನ್ನು ತೆಗೆದುಕೊಂಡು ಹೋಗಿದ್ದಾರೆ ಎನ್ನುವುದು ಸ್ಥಳೀಯರ ಅಭಿಪ್ರಾಯ. ದಾಳಿ ವೇಳೆ ಮೃತ್ಯುಂಜಯ ಮನೆಯಲ್ಲಿ ಇದ್ದ ಬಗ್ಗೆ ಮಾಹಿತಿ ಸಿಕ್ಕಿಲ್ಲ.