ಕನ್ನಡಪ್ರಭ ವಾರ್ತೆ ಬೆಂಗಳೂರು
ವಿಶ್ವದಲ್ಲಿಯೇ ದುಬಾರಿ ಶ್ವಾನವೊಂದನ್ನು ₹50 ಕೋಟಿ ನೀಡಿ ಖರೀದಿಸಿರುವುದಾಗಿ ಹೇಳಿಕೊಂಡಿದ್ದ ನಗರದ ಶ್ವಾನಪ್ರೇಮಿ ಎಸ್.ಸತೀಶ್ ನಿವಾಸದ ಮೇಲೆ ಜಾರಿ ನಿರ್ದೇಶನಾಲಯ (ಇ.ಡಿ.) ಅಧಿಕಾರಿಗಳು ದಾಳಿ ನಡೆಸಿ ಪರಿಶೀಲನೆ ನಡೆಸಿದ್ದಾರೆ.ನಗರದ ಜೆ.ಪಿ.ನಗರ ಮೂರನೇ ಹಂತದಲ್ಲಿನ ಸತೀಶ್ ನಿವಾಸದಲ್ಲಿ ಪರಿಶೀಲನೆ ಕಾರ್ಯ ನಡೆಸಿ ಶ್ವಾನ ಖರೀದಿಯ ದಾಖಲೆಗಳನ್ನು ಶೋಧಿಸಿದ್ದಾರೆ. ಈ ಸಂದರ್ಭದಲ್ಲಿ ನಾಯಿಯ ಬೆಲೆ ₹50 ಕೋಟಿ ಎನ್ನುವುದು ಸುಳ್ಳು ಎಂಬುದಾಗಿ ತಿಳಿದು ಬಂದಿದ್ದು, ಸತೀಶ್‌ನನ್ನು ವಶಕ್ಕೆ ಪಡೆದು ಸುಳ್ಳು ಯಾವ ಕಾರಣಕ್ಕಾಗಿ ಹೇಳಲಾಗಿದೆ ಎಂಬುದರ ಕುರಿತು ವಿಚಾರಣೆಗೆ ಒಳಪಡಿಸಿದ್ದಾರೆ.
ಅತ್ಯಂತ ಅಪರೂಪದ ತೋಳ ನಾಯಿಯನ್ನು (ವುಲ್ಫ್ ಡಾಗ್) ₹50 ಕೋಟಿ ನೀಡಿ ಖರೀದಿಸಿರುವುದಾಗಿ ಹೇಳಿಕೊಂಡಿದ್ದ. ಕಾಡು ತೋಳ ಮತ್ತು ಕಾಕೇಶಿಯನ್ ಶೆಫರ್ಡ್ ತಳಿಗಳ ಮಿಶ್ರಣವಾಗಿದ್ದ ಕಡಬಾಮ್ ಒಕಾಮಿ ಎಂದು ಕರೆಯಲ್ಪಡುವ ಈ ಅಪರೂಪದ ನಾಯಿಯನ್ನು ಖರೀದಿಸಿರುವುದಾಗಿ ಹೇಳಿಕೊಂಡಿದ್ದ. ಈ ಹಿನ್ನೆಲೆಯಲ್ಲಿ ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ವೈರಲ್ ಆಗಿ ಭಾರೀ ಚರ್ಚೆಗೆ ಗ್ರಾಸವಾಗಿತ್ತು.ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಗಿರುವುದನ್ನು ಗಮನಿಸಿದ ಇ.ಡಿ. ಅಧಿಕಾರಿಗಳು ಪ್ರಕರಣವನ್ನು ದಾಖಲಿಸಿಕೊಂಡಿದ್ದರು. ಕೋಟ್ಯಂತರ ರು. ವಹಿವಾಟು ಆಗಿರುವುದರಿಂದ ಅಕ್ರಮ ಹಣ ವರ್ಗಾವಣೆಯಡಿ ಬರುವುದರಿಂದ ಪ್ರಕರಣ ದಾಖಲಿಸಿ ವಿಚಾರಣೆ ಕೈಗೊಂಡರು. ಸತೀಶ್ ಹೇಳಿಕೆ ಆಧರಿಸಿ ಇ.ಡಿ. ಅಧಿಕಾರಿಗಳು ದಾಳಿ ನಡೆಸಿ ಸತೀಶನ ಬಂಡವಾಳ ಬಟಾಬಯಲು ಮಾಡಿದೆ.
ಬೇರೆಯವರಿಂದ ನಾಯಿಗಳನ್ನು ಬಾಡಿಗೆ ಪಡೆದು ವಿಡಿಯೋ ಮಾಡಿಕೊಳ್ಳುತ್ತಿದ್ದ. ಕೋಟ್ಯಂತರ ರು.ಗೆ ವಿದೇಶಿ ನಾಯಿ ಖರೀದಿ ಎಂದು ಹೇಳಿಕೊಳ್ಳುತ್ತಿದ್ದ. ಈ ಬಗ್ಗೆ ವಿಚಾರಣೆ ನಡೆಸಲು ಮುಂದಾದ ಇ.ಡಿ. ಅಧಿಕಾರಿಗಳು ಆತನ ವ್ಯವಹಾರ, ಆದಾಯ ತೆರಿಗೆ ಮತ್ತು ಜಿಎಸ್‌ಟಿ ಬಗ್ಗೆ ಮಾಹಿತಿ ಪಡೆಯಲು ಕ್ರಮ ಕೈಗೊಂಡರು. ಈ ವೇಳೆ ಇಡೀ ವ್ಯವಹಾರ ಬಯಲಾಗಿದೆ.ಅಲ್ಲದೇ, ಹಲವು ವರ್ಷಗಳ ಹಿಂದೆಯೇ ನಾಯಿ ಸಾಕುವುದನ್ನು ಬಿಟ್ಟಿದ್ದರೂ ಆಗಾಗ್ಗೆ ಅಪರೂಪದ ನಾಯಿಗಳೊಂದಿಗೆ ಪ್ರದರ್ಶನದಲ್ಲಿ ಕಾಣಿಸಿಕೊಳ್ಳುತ್ತಿದ್ದ. ಯಾವುದೇ ಕಾರ್ಯಕ್ರಮಕ್ಕೆ ತಮ್ಮ ಅಪರೂಪದ ಶ್ವಾನದೊಂದಿಗೆ ಹೋದರೆ ಅದಕ್ಕೆ ನಿರ್ದಿಷ್ಟ ಮೊತ್ತವನ್ನು ಪಡೆಯುವುದಾಗಿ ಎಂದು ಹೇಳಿಕೊಂಡಿದ್ದ. ಇದೀಗ ಇ.ಡಿ. ಅಧಿಕಾರಿಗಳು ಆತನ ಮೋಸವನ್ನು ಬಯಲು ಮಾಡಿದ್ದಾರೆ. ಹೆಚ್ಚಿನ ವಿಚಾರಣೆ ಬಳಿಕ ಇನ್ನಷ್ಟು ಮಾಹಿತಿ ಬಯಲಾಗುವ ಸಾಧ್ಯತೆ ಇದೆ ಎಂದು ಮೂಲಗಳು ಹೇಳಿವೆ.