ಮಕ್ಕಳಿಗೆ ಬಾಲ್ಯವಿವಾಹ ಮಾಡದೆ ಶಿಕ್ಷಣ ನೀಡಿ

KannadaprabhaNewsNetwork | Published : Nov 17, 2024 1:16 AM

ಸಾರಾಂಶ

ಇತ್ತೀಚೆಗೆ ಗುಡುಬಂಡೆ ಕ್ಷೇತ್ರ ವ್ಯಾಪ್ತಿಯಲ್ಲಿ ಬಾಲ್ಯ ವಿವಾಹ ಪ್ರಕರಣಗಳು ಹೆಚ್ಚಾಗಿ ನಡೆಯುತ್ತಿವೆ. ಸರ್ಕಾರದ ನಿಯಮಗಳಂತೆ ಮಕ್ಕಳಿಗೆ ಮದುವೆ ವಯಸ್ಸು ಬಂದ ಬಳಿಕ ಮದುವೆ ಮಾಡಬೇಕು. ನಮ್ಮ ಟ್ರಸ್ಟ್ ವತಿಯಿಂದ ಪ್ರತೀ ವರ್ಷ ಸಾಮೂಹಿಕ ವಿವಾಹಗಳನ್ನು ಆಯೋಜನೆ ಮಾಡುತ್ತಿದ್ದೇನೆ. ಈ ಮದುವೆಗಳಲ್ಲಿ ನಿಮ್ಮ ಮಕ್ಕಳಿಗೆ ಮದುವೆ ಮಾಡಿಸಿ ಎಂದು ಶಾಸಕ ಸುಬ್ಬಾರೆಡ್ಡಿ ಹೇಳಿದ್ದಾರೆ

ಕನ್ನಡಪ್ರಭ ವಾರ್ತೆ ಗುಡಿಬಂಡೆ

ಜನರ ಸಮಸ್ಯೆಗಳನ್ನು ಸ್ಥಳದಲ್ಲಿಯೇ ಬಗೆಹರಿಸುವ ನಿಟ್ಟಿನಲ್ಲಿ ಸರ್ಕಾರ ಜನಸ್ಪಂದನಾ ಕಾರ್ಯಕ್ರಮವನ್ನು ಆಯೋಜಿಸುತ್ತಿದೆ ಎಂದು ಶಾಸಕ ಸುಬ್ಬಾರೆಡ್ಡಿ ತಿಳಿಸಿದರು.

ತಾಲೂಕಿನ ಬೀಚಗಾನಹಳ್ಳಿ ಗ್ರಾಮದಲ್ಲಿ ಕಂದಾಯ ಇಲಾಖೆ ಹಾಗೂ ತಾಪಂ ಸಹಯೋಗದಲ್ಲಿ ಆಯೋಜಿಸಿದ್ದ ಜನಸ್ಪಂದನಾ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಜನರು ತಮ್ಮ ಸಮಸ್ಯೆಗಳನ್ನು ಬಗೆಹರಿಸಿಕೊಳ್ಳಲು ಸರ್ಕಾರ ಿಕಚೇರಿಗಳಿಗೆ ಅಲೆಯುವುದನ್ನು ತಪ್ಪಿಸುವುದೇ ಜನಸ್ಪಂದನ ಕಾರ್ಯಕ್ರಮದ ಉದ್ದೇಶ ಎಂದರು.

ಹೆಚ್ಚುತ್ತಿರುವ ಬಾಲ್ಯವಿವಾಹ

ವೃದ್ಧಾಪ್ಯ ವೇತನ, ಪಡಿತರ ಚೀಟಿ, ಪೌತಿ ಖಾತೆ ಸೇರಿ ಇತರೆ ಸಮಸ್ಯೆಗಳು ಇರುತ್ತವೆ. ಅಂತಹವರಿಗಾಗಿ ತಮ್ಮ ಮನೆ ಬಾಗಿಲಿಗೆ ಅಧಿಕಾರಿಗಳನ್ನು ಕರೆತಂದಿದ್ದು, ಸಮಸ್ಯೆಗಳನ್ನು ಸ್ಥಳದಲ್ಲೆ ಪರಿಹರಿಸಿಕೊಳ್ಳಬಹುದು. ಇತ್ತೀಚಿಗೆ ತಮ್ಮ ಕ್ಷೇತ್ರ ವ್ಯಾಪ್ತಿಯಲ್ಲಿ ಬಾಲ್ಯ ವಿವಾಹ ಪ್ರಕರಣಗಳು ಹೆಚ್ಚಾಗಿ ನಡೆಯುತ್ತಿವೆ. ಸರ್ಕಾರದ ನಿಯಮಗಳಂತೆ ಮಕ್ಕಳಿಗೆ ಮದುವೆ ವಯಸ್ಸು ಬಂದ ಬಳಿಕ ಮದುವೆ ಮಾಡಬೇಕು. ನಮ್ಮ ಟ್ರಸ್ಟ್ ವತಿಯಿಂದ ಪ್ರತೀ ವರ್ಷ ಸಾಮೂಹಿಕ ವಿವಾಹಗಳನ್ನು ಆಯೋಜನೆ ಮಾಡುತ್ತಿದ್ದೇನೆ. ಈ ಮದುವೆಗಳಲ್ಲಿ ನಿಮ್ಮ ಮಕ್ಕಳಿಗೆ ಮದುವೆ ಮಾಡಿಸುತ್ತೇನೆ ಎಂದರು.

ಸರ್ಕಾರದಿಂದ ಸಹಾಯಧನ ಹಾಗೂ ಒಂದು ಹಸುವನ್ನು ಸಹ ನೀಡುತ್ತೇನೆ. ಇನ್ನೂ ಕಾಂಗ್ರೆಸ್‌ ಐದು ಗ್ಯಾರಂಟಿಗಳನ್ನು ನೀಡಿದ್ದು, ಎಲ್ಲವನ್ನೂ ಜನರಿಗೆ ತಲುಪಿಸುತ್ತಿದ್ದೇವೆ. ಯಾರಿಗಾದರೂ ಗ್ಯಾರಂಟಿಗಳು ಸಿಗುತ್ತಿಲ್ಲವಾದರೆ ಅವುಗಳನ್ನು ಮಾಡಿಸುವ ಕೆಲಸ ಮಾಡುತ್ತೇನೆ ಎಂದರು.

ಪೌತಿ ಖಾತೆ ಮಾಡಿಸಿಕೊಳ್ಳಿ

ತಹಸೀಲ್ದಾರ್ ಸಿಗ್ಬತ್ತುಲ್ಲಾ ಮಾತನಾಡಿ, ಅಣ್ಣತಮ್ಮಂದಿರ ಗಲಾಟೆಗಳು ಸೇರಿ ಇತರೆ ಸಮಸ್ಯೆಗಳಿಂದ ಪೌತಿ ಖಾತೆ ಮಾಡಿಸಿಕೊಳ್ಳಲು ಸಾಧ್ಯವಾಗದಿದ್ದಲ್ಲಿ ಒಗ್ಗೂಡಿ ಪೌತಿ ಖಾತೆಗಳನ್ನು ಮಾಡಿಸಿಕೊಳ್ಳಿ, ಅತಿವೃಷ್ಟಿ ಮತ್ತು ಅನಾವೃಷ್ಟಿಗಳು ಆದಾಗ ಸರ್ಕಾರದಿಂದ ಪರಿಹಾರ ನೀಡುತ್ತಾರೆ. ಅಂತಹ ಸಮಯದಲ್ಲಿ ಪರಿಹಾರ ಪಡೆದುಕೊಳ್ಳಿ, ಈಗಾಗಲೇ ತಾಲೂಕನ್ನು ಪೋಡಿ ಮುಕ್ತ ಮಾಡಲಾಗಿದೆ ಎಂದರು.

ಸಭೆಯಲ್ಲಿ ಕೃಷಿ ಇಲಾಖೆ, ತೊಟಗಾರಿಕೆ ಇಲಾಖೆ, ಆರೋಗ್ಯ ಇಲಾಖೆ, ಸಿಡಿಪಿಒ ಇಲಾಖೆ, ಅರಣ್ಯ ಇಲಾಖೆ ಸೇರಿ ಇತರೆ ಇಲಾಖೆಗಳಿಂದ ಅಂಗಡಿ ಮಳಿಗೆಗಳನ್ನು ತೆರೆಯಲಾಗಿತ್ತು. ಕೃಷಿ ಮತ್ತು ತೋಟಗಾರಿಕೆ ಇಲಾಖೆಯಿಂದ ಅರ್ಹ ರೈತರಿಗೆ ಯಂತ್ರೋಪಕರಣಗಳನ್ನು, ಹೊಸ ಪಡಿತರ ಚೀಟಿ, ಮಾಶಾಸನ ಮಂಜೂರಾತಿ ಪತ್ರಗಳನ್ನು ವಿತರಣೆ ಮಾಡಲಾಯಿತು.

ಈ ವೇಳೆ ತಾ.ಪಂ.ಇಒ ಹೇಮಾತಿ, ಬೀಚಗಾನಹಳ್ಳಿ ಗ್ರಾ.ಪಂ. ಅಧ್ಯಕ್ಷೆ ಶಾಂತಮ್ಮಮಹದೇವಪ್ಪ, ಉಪಾಧ್ಯಕ್ಷ ರಮೇಶ್, ಕೃಷಿ ಇಲಾಖೆಯ ಸಹಾಯಕ ನಿರ್ದೇಶಕ ಕೇಶವರೆಡ್ಡಿ, ತೋಟಗಾರಿಕ ಸಹಾಯಕ ನಿರ್ದೇಶಕ ಕೃಷ್ಣಮೂರ್ತಿ, ಪಶು ಸಂಗೋಪನೆ ಇಲಾಖೆಯ ಸುಬ್ರಮಣಿ, ಸಮಾಜ ಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕ ಲಕ್ಷ್ಮೀಪತಿರೆಡ್ಡಿ ಮತ್ತಿತರರು ಇದ್ದರು.

Share this article