ಮುಸ್ಲಿಂ ಸಮುದಾಯದ ಹೆಣ್ಣುಮಕ್ಕಳಿಗೆ ಶಿಕ್ಷಣ ಕೊಡಿಸಿ: ಮಾವಿನಮರದ

KannadaprabhaNewsNetwork | Published : May 17, 2024 12:38 AM

ಸಾರಾಂಶ

ಮುಸ್ಲಿಂ ಸಮುದಾಯಕ್ಕೆ ಹೆಣ್ಣು ಮಕ್ಕಳಿಗೆ ಉನ್ನತ ಶಿಕ್ಷಣ ಕೊಡಿಸುವ ಜವಾಬ್ದಾರಿ ಎಲ್ಲರ ಮೇಲಿದೆ ಎಂದು ಜೆಡಿಎಸ್ ಜಿಲ್ಲಾಧ್ಯಕ್ಷ ಹನುಮಂತ ಮಾವಿನಮರದ ಹೇಳಿದರು.

ಕನ್ನಡಪ್ರಭವಾರ್ತೆ ಗುಳೇದಗುಡ್ಡ

ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ ರಾಜ್ಯಕ್ಕೆ 4ನೇ ರ್‍ಯಾಂಕ್ ಪಡೆದು ಜಿಲ್ಲೆ ಹಾಗೂ ತಾಲೂಕಿನ ಗೌರವ ಹೆಚ್ಚಿಸಿದ ವಿದ್ಯಾರ್ಥಿನಿ ಮಿನಾಜ್ ಮೆಹಬೂಬಸಾಬ್ ಕುರಡಗಿ ಇವಳ ಸಾಧನೆ ಮೆಚ್ಚುವಂತಹದ್ದು. ಅವಳ ಮುಂದಿನ ಭವಿಷ್ಯ ಉಜ್ವಲವಾಗಿದ್ದು, ಅವಳ ಶಿಕ್ಷಣಕ್ಕೆ ಕುಟುಂಬ ಹಾಗೂ ಸಮಾಜದ ಪ್ರೋತ್ಸಾಹ ತುಂಬಾ ಅಗತ್ಯವಿದೆ. ಮುಸ್ಲಿಂ ಸಮುದಾಯಕ್ಕೆ ಹೆಣ್ಣು ಮಕ್ಕಳಿಗೆ ಉನ್ನತ ಶಿಕ್ಷಣ ಕೊಡಿಸುವ ಜವಾಬ್ದಾರಿ ಎಲ್ಲರ ಮೇಲಿದೆ ಎಂದು ಜೆಡಿಎಸ್ ಜಿಲ್ಲಾಧ್ಯಕ್ಷ ಹನುಮಂತ ಮಾವಿನಮರದ ಹೇಳಿದರು.

ಗುರುವಾರ ಪಟ್ಟಣದ ಅವರ ನಿವಾಸದಲ್ಲಿ ವಿದ್ಯಾರ್ಥಿನಿ ಹಾಗೂ ಪಾಲಕರನ್ನು ಸನ್ಮಾನಿಸಿ ಮಾತನಾಡಿ, ಇಂದು ಹೆಣ್ಣುಮಕ್ಕಳ ಶಿಕ್ಷಣಕ್ಕೆ ಹೆಚ್ಚಿನ ಮಹತ್ವ ನೀಡುವ ಜವಾಬ್ದಾರಿ ಪ್ರತಿಯೊಬ್ಬ ಪಾಲಕರದ್ದಾಗಿದೆ. ಸರ್ಕಾರ ಸಹ ಸಾಕಷ್ಟು ಅವಕಾಶ ಹಾಗೂ ಸೌಲಭ್ಯಗಳನ್ನು ಹೆಣ್ಣುಮಕ್ಕಳ ಶಿಕ್ಷಣ ಹಾಗೂ ಉದ್ಯೋಗಾವಕಾಶಕ್ಕೆ ನೀಡುತ್ತಿದೆ. ಕುಟುಂಬದ ಒಂದು ಹೆಣ್ಣುಮಗು ಉನ್ನತ ಪಡೆದರೆ ಒಂದು ಶಾಲೆ ತೆರೆದಂತೆ. ಅವಳಿಂದ ಅವಳ ಕುಟುಂಬ, ಸಮಾಜಕ್ಕೂ ಹೆಸರು ಬರುತ್ತದೆ. ಮುಸ್ಲಿಂ ಸಮುದಾಯದಲ್ಲಿ ಹೆಣ್ಣು ಮಕ್ಕಳ ಉನ್ನತ ಶಿಕ್ಷಣಕ್ಕೆ ಹೆಚ್ಚಿನ ಅವಕಾಶಗಳನ್ನು ನೀಡಿದರೆ ಅವರೂ ಸಮಾಜದ ಉನ್ನತ ಹುದ್ದೆ, ಗೌರವ ಪಡೆಯುತ್ತಾರೆ. ಅವಳ ಕನಸು ನನಸಾಗುತ್ತದೆ. ವಿದ್ಯಾರ್ಥಿನಿಯ ಈ ಸಾಧನೆಯ ಹಿಂದೆ ತಂದೆ-ತಾಯಿಯ ತ್ಯಾಗವಿದೆ. ಇದು ಇತರ ಪಾಲಕರಿಗೂ ಮಾದರಿಯಾಗಿದೆ ಎಂದು ಹೇಳಿದರು.

ಬಿಜೆಪಿ ಮುಖಂಡ ಕಮಲಕಿಶೋರ ಮಾಲಪಾಣಿ ಮಾತನಾಡಿ, ಇಂತಹ ಪ್ರತಿಭಾವಂತ ಮಕ್ಕಳಿಗೆ ಕುಟುಂಬ ಹಾಗೂ ಸಮಾಜದ ಪ್ರೋತ್ಸಾಹ ಸಿಕ್ಕರೆ ಐಎಎಸ್ ಪರೀಕ್ಷೆಯಲ್ಲೂ ಸಾಧನೆ ಮಾಡಬಲ್ಲರು. ಈ ಹಂತದಿಂದಲೇ ವಿದ್ಯಾರ್ಥಿನಿಗೆ ಪ್ರೋತ್ಸಾಹ ಅಗತ್ಯ. ಮುಂದಿನ ಶಿಕ್ಷಣಕ್ಕೆ ಇಲ್ಲಿನ ಎಲ್ಲ ಸಮಾಜಗಳ ಹಿರಿಯರೂ ಬೆನ್ನೆಲುಬಾಗಿ ನಿಲ್ಲೋಣ ಎಂದು ಹೇಳಿದರು.

ಇದೇ ಸಂದರ್ಭದಲ್ಲಿ ವಿದ್ಯಾರ್ಥಿನಿಯ ಜೊತೆಗೆ ಅವಳ ತಂದೆ ಮತ್ತು ತಾಯಿಯನ್ನೂ ಸನ್ಮಾನಿಸಿ, ವಿದ್ಯಾರ್ಥಿನಿಯ ಮುಂದಿನ ಶಿಕ್ಷಣಕ್ಕೆ ಸಹಾಯವಾಗಲೆಂಬ ಸದುದ್ದೇಶದಿಂದ ಎರಡೂ ಪಕ್ಷಗಳ ವತಿಯಿಂದ ₹ 10 ಸಾವಿರ ಚೆಕ್ ನೀಡಲಾಯಿತು.

ನೇಕಾರ ಒಕ್ಕೂಟದ ಜಿಲ್ಲಾಧ್ಯಕ್ಷ ಚಂದ್ರಕಾಂತ ಶೇಖಾ, ಸೇವಾ ಭಾರತಿಯ ಅಧ್ಯಕ್ಷ ಸಂಜಯ ಕಾರಕೂನ, ಶಿವಾನಂದ ಎಣ್ಣಿ, ಪ್ರಕಾಶ ವಾಳದುಂಕಿ, ಅನ್ವರಖಾನ್ ಪಠಾಣ, ದೀಪಕ ನೇಮದಿ, ಶ್ರೀಕಾಂತ ಮಲಜಿ, ಸಂತೋಷ ನಾಯನೇಗಲಿ ಸೇರಿದಂತೆ ಬಿಜೆಪಿ ಹಾಗೂ ಜೆಡಿಎಸ್ ಪಕ್ಷಗಳ ಮುಖಂಡರು, ಕಾರ್ಯಕರ್ತರು ಇದ್ದರು.

Share this article